ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯ ನಿಧಿ (ಪಿಎಫ್‌) ಹಣ ಎಷ್ಟಿದೆ ಎಂದು ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿವರ

ಅಕ್ಷರ ಗಾತ್ರ

ವೇತನ ಪಡೆಯುವ ಪ್ರತಿಯೊಬ್ಬರೂ ಭವಿಷ್ಯ ನಿಧಿ (ಪಿಎಫ್‌) ಉಳಿತಾಯವನ್ನು, ಮುಖ್ಯವಾಗಿ ಹಣಕಾಸು ವರ್ಷಾಂತ್ಯದಲ್ಲಿ ಪರಿಶೀಲಿಸುತ್ತಿರಬೇಕಾಗುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಜೀವನ ಮಹತ್ವದ ಹೂಡಿಕೆಯಾಗಿದೆ. ಜೀವನದ ಪ್ರಮುಖ ಘಟ್ಟದಲ್ಲಿ ಬಳಕೆಗೆ ಬರಬಹುದಾದ ಉಳಿತಾಯ ಖಾತೆ ಇದಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮೂಲಕ ಉದ್ಯೋಗಗಳು ಮಾಸಿಕ ವೇತನದ ಮೂಲ ಸಂಬಳದಲ್ಲಿ ಶೇಕಡಾ 12ರಷ್ಟನ್ನು ವಂತಿಕೆಯಾಗಿ ನೀಡುವುದೇ ಪಿಎಫ್‌ ಆಗಿದೆ. ಉದ್ಯೋಗದಾತರು ಈ ಖಾತೆಗೆ ಒಂದು ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ಸೇರಿಸುತ್ತಾರೆ. ಇಬ್ಬರ ವಂತಿಕೆ ಹಾಗೂ ಬಡ್ಡಿಯನ್ನು ಒಳಗೊಂಡ ಪಿಎಫ್‌ ಉಳಿತಾಯ ಖಾತೆಯ ವಿವರಗಳನ್ನು ಪರಿಶೀಲಿಸಲು ಹಲವಾರು ದಾರಿಗಳಿವೆ.

1. ಇಪಿಎಫ್‌ಒ ವೆಬ್‌ಸೈಟ್‌:
ಇಪಿಎಫ್‌ ವೆಬ್‌ಸೈಟ್‌ನಲ್ಲಿ ಉದ್ಯೋಗಿಗಳಿಗಿರುವ ವಿಭಾಗದಲ್ಲಿ 'ಮೆಂಬರ್‌ ಪಾಸ್‌ಬುಕ್‌' ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಯೂನಿವರ್ಸಲ್‌ ಅಕೌಂಟ್‌ ನಂಬರ್‌ (ಯುಎಎನ್‌) ಮತ್ತು ಪಾಸ್‌ವರ್ಡ್‌ ಹಾಕುವ ಮೂಲಕ ಪಿಎಫ್‌ ಉಳಿತಾಯ ಖಾತೆಯ ಪಾಸ್‌ಬುಕ್‌ಅನ್ನು ಪರಿಶೀಲಿಸಬಹುದು.

ಪಿಎಫ್‌ ಉಳಿತಾಯ ಖಾತೆಗೆ ಉದ್ಯೋಗಿ ಮತ್ತು ಉದ್ಯೋಗದಾತ ಹಾಕಿದ ಮೊತ್ತದ ವಿವರಗಳು ಲಭ್ಯವಿರುತ್ತವೆ. ಜೊತೆಗೆ ಪಿಎಫ್‌ ಬಡ್ಡಿ ಮತ್ತು ಪಿಎಫ್‌ ವರ್ಗಾವಣೆಯ ಮಾಹಿತಿಯೂ ಇರುತ್ತದೆ.

ನಿಮ್ಮ ಯುಎಎನ್‌ ನಂಬರ್‌ಗೆ ಒಂದಕ್ಕಿಂತ ಹೆಚ್ಚು ಪಿಎಫ್‌ ನಂಬರ್‌ಗಳು ಸೇರಿದ್ದರೆ ಎಲ್ಲವೂ ಒಂದೆಡೆ ಪ್ರತ್ಯೇಕ ವಿವರಗಳೊಂದಿಗೆ ಕಾಣಸಿಗುತ್ತದೆ.

2. ಯೂನಿಫೈಡ್‌ ಪೋರ್ಟಲ್‌:
ಯೂನಿಫೈಡ್‌ ಪೋರ್ಟಲ್‌ ಮೂಲಕ ನಿಮ್ಮ ಯುಎಎನ್‌ ಮತ್ತು ಪಾಸ್‌ವರ್ಡ್‌ ಮೂಲಕ ಪಾಸ್‌ಬುಕ್‌ ವೀಕ್ಷಿಸಬಹುದು. ಇದರಲ್ಲಿ ಬೇರೆ ಬೇರೆ ಹಣಕಾಸು ವರ್ಷಗಳಲ್ಲಿ ಎಷ್ಟೆಷ್ಟು ಪಿಎಫ್‌ ಖಾತೆಗೆ ವಂತಿಕೆ ಸೇರಿದೆ ಎಂಬುದನ್ನು ಪರಿಶೀಲಿಸಬಹುದು.

3. ಎಸ್‌ಎಂಎಸ್‌ ಮೂಲಕ:
ಎಸ್‌ಎಂಎಸ್‌ ಸೌಲಭ್ಯವೂ ಲಭ್ಯವಿದೆ. ಇದಕ್ಕೆ ಯುಎಎನ್‌ ನಂಬರ್‌ ಮತ್ತು ಪಾಸ್‌ವರ್ಡ್‌ ಬೇಕೆಂದಿಲ್ಲ. 7738299899 ದೂರವಾಣಿ ನಂಬರ್‌ಗೆ ನಿಮ್ಮ ನೋಂದಾಯಿತ ಮೊಬೈಲ್‌ನಿಂದ EPFOHO UAN ENG ಎಂದು ಸಂದೇಶ ಕಳುಹಿಸಿದರೆ ಸ್ವಲ್ಪ ಸಮಯದಲ್ಲಿ ಉಳಿತಾಯ ಹಣದ ವಿವರ ಎಸ್‌ಎಂಎಸ್‌ ಮೂಲಕ ಬರುತ್ತದೆ.

4. ಮಿಸ್ಡ್‌ ಕಾಲ್‌ ಮೂಲಕ:
ಮಿಸ್‌ ಕಾಲ್‌ ಕೊಡುವ ಮೂಲಕವೂ ಪಿಎಫ್‌ ಉಳಿತಾಯ ಖಾತೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದಕ್ಕೂ ಯುಎಎನ್‌ ನಂಬರ್‌ ಮತ್ತು ಪಾಸ್‌ವರ್ಡ್‌ ಬೇಕೆಂದಿಲ್ಲ. 011-22901406 ಈ ನಂಬರ್‌ಗೆ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ ಮಿಸ್‌ ಕಾಲ್‌ ಕೊಟ್ಟರೆ ಎಸ್‌ಎಂಎಸ್‌ ರೂಪದಲ್ಲಿ ಪಿಎಫ್‌ ಉಳಿತಾಯ ಖಾತೆಯ ಮಾಹಿತಿ ಸಿಗುತ್ತದೆ. ಸಂಪೂರ್ಣ ಉಚಿತ ಸೇವೆ ಇದಾಗಿದ್ದು, ಸ್ಮಾರ್ಟ್‌ ಫೋನ್‌ಗಳ ಹೊರತಾಗಿ ಇತರೆ ಸಾಮಾನ್ಯ ಮೊಬೈಲ್‌ಗಳಿಂದಲೂ ಈ ಸೇವೆಯನ್ನು ಪಡೆಯಬಹುದು. ಬ್ಯಾಂಕ್‌ ಖಾತೆ, ಆಧಾರ್‌ ನಂಬರ್‌, ಪಾನ್‌ ನಂಬರ್‌ ಹಾಗೂ ಮೊಬೈಲ್‌ ನಂಬರ್‌ಗಳು ಯುಎಎನ್‌ಗೆ ಲಿಂಕ್‌ ಆಗಿರಬೇಕು.

5. ಉಮಾಂಗ್‌ ಆ್ಯಪ್‌ ಮೂಲಕ:
ಯೂನಿಫೈಡ್‌ ಮೊಬೈಲ್‌ ಆ್ಯಪ್‌ ಮೂಲಕ ಉಮಂಗ್‌ (ಯುಎಂಎಎನ್‌ಜಿ) ಆ್ಯಪ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪಿಎಫ್‌ ಉಳಿತಾಯ ಹಣ, ಕೆವೈಸಿ ಮತ್ತಿತರ ಮಾಹಿತಿಯೂ ಇದರಲ್ಲಿ ಲಭ್ಯ.

ಪಿಎಫ್‌ ಹಣವನ್ನು ಹಿಂತೆಗೆದುಕೊಳ್ಳುವುದು ಹೇಗೆ?

ಪಿಎಫ್‌ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳುವ ಮೊದಲು ಕೆವೈಸಿ ಪ್ರಕ್ರಿಯೆಗಳನ್ನು ಮುಗಿಸಿಕೊಳ್ಳಬೇಕು. ಆನ್‌ಲೈನ್‌ ಮೂಲಕ ಸುಲಭವಾಗಿ ಪಿಎಫ್‌ ಹಣವನ್ನು ಹಿಂತೆಗೆದುಕೊಳ್ಳಬಹುದು. ನಿವೃತ್ತಿ ಹೊಂದಿದ ಬಳಿಕ ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಪಿಎಫ್‌ ಹಣವನ್ನು ತೆಗೆದುಕೊಳ್ಳಬಹುದು. ನಿರ್ದಿಷ್ಟ ಅಗತ್ಯತೆಗಷ್ಟೇ ಎಂದಿದ್ದರೆ ಒಂದಿಷ್ಟು ಹಣವನ್ನಷ್ಟೇ ಹಿಂತೆಗೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT