ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಮ್ಯೂಚುವಲ್ ಫಂಡ್ ಒಳ್ಳೆಯದೋ ಇಟಿಎಫ್ ಒಳ್ಳೆಯದೋ?

Last Updated 5 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಶ್ರೀರಾಮ ಪ್ರಭು, ಯಲಹಂಕ, ಬೆಂಗಳೂರು

l ಪ್ರಶ್ನೆ: ನಾನು ಬ್ಯಾಂಕ್ ಉದ್ಯೋಗಿ, ಮುಂದಿನ 6 ತಿಂಗಳಲ್ಲಿ ನಿವೃತ್ತಿಯಾಗಲಿದ್ದೇನೆ. ನನ್ನಲ್ಲಿ ಸುಮಾರು ₹ 50 ಲಕ್ಷ ಉಳಿತಾಯ ಇದೆ. ಮುಂದೆ ಸುಮಾರು ₹ 40,000 ಮಾಸಿಕ ಪಿಂಚಣಿ ಬರಬಹುದು. ನನ್ನ ಇಬ್ಬರು ಮಕ್ಕಳು ಉದ್ಯೋಗದಲ್ಲಿದ್ದಾರೆ. ನನ್ನ ಪತ್ನಿ ಗೃಹಿಣಿ ಹಾಗೂ ನನಗೆ ಸ್ವಂತ ಮನೆ ಇದೆ. ಯಾವುದೇ ಸಾಲವಿಲ್ಲ. ಆದರೆ ಮಕ್ಕಳ ಮದುವೆ ಬಾಕಿ ಇದೆ. ನಿವೃತ್ತಿಯ ನಂತರ ಬಹಳಷ್ಟು ಸಮಯ ಸಿಗಲಿದೆ. ಹೀಗಾಗಿ ನನ್ನ ಉಳಿತಾಯದ ಬಹುಪಾಲು ಮೊತ್ತವನ್ನು ಷೇರುಪೇಟೆಯಲ್ಲಿ ತೊಡಗಿಸಬೇಕೆಂದಿದ್ದೇನೆ. ಇಂದಿನ ಸನ್ನಿವೇಶದಲ್ಲಿ ಇದು ಸೂಕ್ತವೇ? ತಿಳಿಸಿ.

ಉತ್ತರ: ಯಾವುದೇ ಹೂಡಿಕೆ ಮಾಡಬೇಕಿದ್ದರೂ ಅದಕ್ಕೆ ಒಂದಿಷ್ಟು ಪೂರ್ವ ತಯಾರಿ ಹಾಗೂ ಹೂಡಿಕೆಗೆ ಅಗತ್ಯವಿರುವ ಒಂದಿಷ್ಟು ಕೌಶಲವನ್ನು ನಾವು ಪಡೆದಿರಬೇಕು. ಆಗ ಮಾತ್ರ ನಮಗೆ ಮಾರುಕಟ್ಟೆಯ ಏಳುಬೀಳುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಹಾಗೂ ಯಾವ ಸಂದರ್ಭದಲ್ಲಿ ಯಾವ ಕಂಪನಿಯ ಷೇರುಗಳು ಖರೀದಿಗೆ ಉತ್ತಮ ಎಂಬುದನ್ನು ಗ್ರಹಿಸಲು ಸಾಧ್ಯ.

ಜೀವನ ಪೂರ್ತಿ ದುಡಿದು ಸಂಗ್ರಹಿಸಿಟ್ಟ ಹಣವನ್ನು ಏಕಾಏಕಿ ಒಂದೇ ಬಾರಿಗೆ ಷೇರು ಪೇಟೆಯಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ. ನಿವೃತ್ತಿಯ ನಂತರ ಸಾಕಷ್ಟು ಸಮಯಾವಕಾಶ ಇದ್ದರೂ ಅಂತಹ ಹೂಡಿಕೆ ಅನಿವಾರ್ಯವಲ್ಲ. ಅದಕ್ಕೂ ಮೊದಲು ಉತ್ತಮ ಹೂಡಿಕೆದಾರನಲ್ಲಿ ಇರಬೇಕಾದ ಹಲವಾರು ಅಗತ್ಯ ಕೌಶಲ, ತಿಳಿವಳಿಕೆಗಳನ್ನು ಕರಗತ ಮಾಡಿಕೊಳ್ಳಿ. ಆ ಬಗೆಗಿನ ನಿಮ್ಮ ಅಧ್ಯಯನ ಹೆಚ್ಚಿಸಿ, ನೀವು ಹೂಡಿಕೆ ಮಾಡಬೇಕೆಂದಿರುವ ಕಂಪನಿಗಳ ಬಗ್ಗೆ ಮಾಹಿತಿ ಕಲೆಹಾಕಿ. ಷೇರುಪೇಟೆ ಕಂಡ ಏಳುಬೀಳುಗಳ ಹಾದಿಯನ್ನು ಗಮನಿಸಿ, ಕಾರಣಗಳನ್ನು ವಿಮರ್ಶಿಸಿ.

ನೀವು ಹೂಡಿಕೆ ಮಾಡಬೇಕೆಂದಿರುವ ಕಂಪನಿಗಳು ಮಾರುಕಟ್ಟೆಯ ಪ್ರತಿಕೂಲ ಸಮಯದಲ್ಲಿ ಹೇಗೆ ಸ್ಪಂದಿಸಿವೆ ಎಂಬುದನ್ನು ಗಮನಿಸಿ. ಒಂದೇ ಕ್ಷೇತ್ರದಲ್ಲಿ ಪೈಪೋಟಿ ನಡೆಸುವ ಹತ್ತಾರು ಕಂಪನಿಗಳ ಮಾರುಕಟ್ಟೆ ಮೌಲ್ಯ ಹೇಗೆ ಮತ್ತು ಏಕೆ ಭಿನ್ನವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಈ ಮೌಲ್ಯವು ಪ್ರತಿ ಕಂಪನಿಯ ಸೇವೆ ಅಥವಾ ಉತ್ಪನ್ನಗಳ ಗುಣಮಟ್ಟ, ಮಾರುಕಟ್ಟೆಯಲ್ಲಿ ಅವುಗಳಿಗೆ ಇರುವ ಬೇಡಿಕೆ ಇತ್ಯಾದಿ ಕೆಲವು ಸೂಕ್ಶ್ಮ ವಿಚಾರ ಆಧರಿಸಿ ನಿರ್ಣಯವಾಗುತ್ತದೆ ಎಂಬುದು ತಿಳಿದಿರಲಿ. ಹೀಗಾಗಿ ಉತ್ತಮ ಕಂಪನಿಗಳನ್ನೇ ಆಯ್ಕೆ ಮಾಡಿ ಮತ್ತು ನಿಮ್ಮ ವಿಮರ್ಶೆಗೆ ನಿಲುಕುವ ಕಂಪನಿಗಳ ಷೇರುಗಳನ್ನಷ್ಟೇ ಖರೀದಿಸಿ. ಹೂಡಿಕೆದಾರರ ದೃಷ್ಟಿ ಇವುಗಳ ಮೇಲೆ ಇದ್ದಾಗಲಷ್ಟೇ ಹೂಡಿಕೆಯ ನಿಜವಾದ ಸತ್ವ ತಿಳಿಯುವುದು. ಎಲ್ಲದಕ್ಕಿಂತ ಮುಖ್ಯವಾಗಿ ನಾವು ಲಾಭಗಳಿಸಬೇಕಾದರೆ ನಾವೇ ಅದರ ಬಗ್ಗೆ ಅರಿತವರಾಗಿರಬೇಕು. ಕಂಪನಿಗಳ ಆಗುಹೋಗುಗಳ ಸಮಗ್ರ ಮಾಹಿತಿ ಹೊಂದಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ. ಇತರರು ನೀಡುವ ಪುಕ್ಕಟೆ ಸಲಹೆಗಳು ನಮಗೆ ಮೊದಲ ಮಾಹಿತಿಯಾಗಬೇಕೆ ಹೊರತು ಅವು ಅಂತಿಮ ನಿರ್ಣಯಕ್ಕೆ ಆಧಾರವಾಗಬಾರದು. ಎಲ್ಲವನ್ನೂ ನಮ್ಮದೇ ದೃಷ್ಟಿಯಲ್ಲಿ ಪರಿಶೀಲಿಸುವುದು ಅನಿವಾರ್ಯ, ಅದಕ್ಕೂ ಮೊದಲು ನುರಿತವರಿಂದ ಅಗತ್ಯ ಪರಿಣತಿ ಪಡೆದುಕೊಳ್ಳಿ. ಷೇರುಪೇಟೆ ವಿಚಾರವೂ ಒಂದು ವ್ಯಾಪಾರ.

ನೀವು ಮಕ್ಕಳ ಮದುವೆ ಹೊರತುಪಡಿಸಿ ಇತರ ಯಾವುದೇ ಆರ್ಥಿಕ ಜವಾಬ್ದಾರಿ ಹೊಂದಿರದ ಕಾರಣ ಅದಕ್ಕೆ ಅಗತ್ಯವಾದ ಒಂದಿಷ್ಟು ಹಣ ಮೀಸಲಿಟ್ಟು ಹೂಡಿಕೆಗೆ ತೊಡಗಬಹುದು. ಸುಮಾರು ₹ 15 ಲಕ್ಷದಷ್ಟು ಮೊತ್ತವನ್ನು ಅಂಚೆ ಕಚೇರಿಯ ಹಿರಿಯ ನಾಗರಿಕರ ಖಾತೆಯಲ್ಲಿ ತೊಡಗಿಸಿ. ಇದರಲ್ಲಿ 5 ವರ್ಷ ಹೂಡಿಕೆ ಮಾಡಬೇಕಾಗುತ್ತದೆ, ತ್ರೈಮಾಸಿಕ ಅವಧಿಗೊಮ್ಮೆ ಬಡ್ಡಿ ಬರುತ್ತದೆ. ಉಳಿದ ಮೊತ್ತವನ್ನಷ್ಟೇ ಹಂತ ಹಂತವಾಗಿ ಉತ್ತಮ ಕಂಪನಿಗಳ ಷೇರುಗಳಲ್ಲಿ ತೊಡಗಿಸಿ.

ಅಂಕಿತ್, ತುಮಕೂರು

l ಪ್ರಶ್ನೆ: ಎಸ್ಐಪಿ ಹೂಡಿಕೆಯನ್ನು ಬ್ಯಾಂಕ್‌ ಮೂಲಕ ಮಾಡಿದರೆ ಸೂಕ್ತವೋ? ಮೊಬೈಲ್ ಆ್ಯಪ್‌ ಮೂಲಕ ಮಾಡಿದರೆ ಒಳ್ಳೆಯದೋ? ಮ್ಯೂಚುವಲ್ ಫಂಡ್ ಒಳ್ಳೆಯದೋ ಇಟಿಎಫ್ ಒಳ್ಳೆಯದೋ?

ಉತ್ತರ: ತಂತ್ರಜ್ಞಾನದ ಯುಗದಲ್ಲಿ ಯಾವುದೇ ಹೂಡಿಕೆ ಮಾಡಲು ಸರಳ ಮಾರ್ಗ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್. ಮ್ಯೂಚುವಲ್ ಫಂಡ್‌ಗಳಲ್ಲಿ ನಾವೇ ಹೂಡಿಕೆ ಮಾಡುವಾಗ ‘ಡೈರೆಕ್ಟ್ ಪ್ಲಾನ್’ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಫಂಡ್ ನಿರ್ವಹಣಾ ವೆಚ್ಚ ‘ರೆಗ್ಯುಲರ್ ಪ್ಲಾನ್’ಗಿಂತ ತುಸು ಕಡಿಮೆ. ಕಾರಣ ಇಲ್ಲಿ ಹೂಡಿಕೆದಾರ ನೇರವಾಗಿ ಫಂಡ್ ಹೌಸ್ ಮೂಲಕ ಹೂಡಿಕೆ ಮಾಡುತ್ತಾನೆ. ಆದರೆ ‘ರೆಗ್ಯುಲರ್ ಪ್ಲಾನ್’ಗಳಲ್ಲಿ ಏಜೆಂಟ್ ಅಥವಾ ಬ್ರೋಕರ್ ಶುಲ್ಕವನ್ನೂ ಸೇರಿಸಿ ಎನ್‌ಎವಿ ನಿರ್ಣಯಿಸಲಾಗುತ್ತದೆ. ಪಾವತಿ ಮಾಧ್ಯಮ ಯಾವುದಾದರೂ ಅದು ನಿಮ್ಮ ಖಾತೆಯಿಂದಲೇ ಪಾವತಿಸಲ್ಪಡುವ ಕಾರಣ ನಿಮ್ಮ ಅನುಕೂಲಕ್ಕೆ ಸರಿಯಾಗಿ ಮೇಲಿನ ಅಂಶ ಪರಿಗಣಿಸಿ ನಿರ್ಧಾರ ಕೈಗೊಳ್ಳಿ.

ಎಕ್ಸ್‌ಚೇಂಜ್ ಟ್ರೇಡೆಡ್‌ ಫಂಡ್ (ಇಟಿಎಫ್‌) ಷೇರುಪೇಟೆಯಲ್ಲಿ ವ್ಯವಹರಿಸುವ ಷೇರುಗಳಂತೆ ಮಾರುಕಟ್ಟೆ ಸಮಯದಲ್ಲಿ ಬದಲಾಗುತ್ತಿರುವ ಬೆಲೆಗನುಗುಣವಾಗಿ ಕೊಂಡುಕೊಳ್ಳಬಹುದು. ಆದರೆ ಮ್ಯೂಚುವಲ್ ಫಂಡ್ ಹೌಸ್‌ಗಳು ದಿನಕ್ಕೊಮ್ಮೆ ಮಾತ್ರ ಎನ್ಎವಿ ಮೌಲ್ಯ ಪ್ರಕಟಿಸುತ್ತವೆ. ದಿನಕ್ಕೆ ಒಮ್ಮೆ ಮಾತ್ರ ಅವುಗಳ ಬೆಲೆ ಬದಲಾವಣೆಯಾಗುತ್ತದೆ. ಇಟಿಎಫ್‌ ಪ್ರಮುಖ ಪ್ರಯೋಜನಗಳೆಂದರೆ ವ್ಯವಹಾರದ ಸರಳತೆ, ಹೂಡಿಕೆಯಲ್ಲಿ ವೈವಿಧ್ಯ ಸಾಧಿಸುವುದು, ಕಡಿಮೆ ವೆಚ್ಚ ಮತ್ತು ತೆರಿಗೆ ಪ್ರಯೋಜನಗಳು. ನೀವು ಹೂಡಿಕೆ ಮಾಡುವ ಮೊದಲು ತಜ್ಞರೊಂದಿಗೆ ಸಮಾಲೋಚಿಸಿ.

***

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT