ಶುಕ್ರವಾರ, ಜನವರಿ 27, 2023
25 °C

ಪ್ರಶ್ನೋತ್ತರ: ಎನ್‌ಎಚ್‌ಐಎ–ಆರ್‌ಇಸಿ ಬಾಂಡ್‌ನಲ್ಲಿ ಮನೆ ಮಾರಾಟ ಮಾಡಿ ಬಂದ ಹಣ?

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

ಉಳಿತಾಯ ಮತ್ತು ಹೂಡಿಕೆ–ಪ್ರಾತಿನಿಧಿಕ ಚಿತ್ರ

* ಪ್ರಶ್ನೆ: ನಾನು ಸರ್ಕಾರಿ ನೌಕರ. ಸಂಬಳ ₹ 80 ಸಾವಿರ. ಎನ್‌ಪಿಎಸ್‌, ಪಿ.ಟಿ., ಇಪಿಎಫ್‌ ಕಡಿತದ ನಂತರ ₹ 62 ಸಾವಿರ ಬರುತ್ತದೆ. ನನಗೆ ಪಿಎಲ್‌ಐ–ಎಲ್‌ಐಸಿ ಇದೆ. ವೈಯಕ್ತಿಕ ಸಾಲದ ಕಂತು ₹ 26,181 ಇದೆ. ತಿಂಗಳ ಖರ್ಚು ₹ 10 ಸಾವಿರ. ಹಣಕಾಸು ನಿರ್ವಹಣೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿ.

–ಕುಮಾರ್‌, ಮೈಸೂರು

ಉತ್ತರ: ನೀವು ವೈಯಕ್ತಿಕ ಸಾಲ ಪಡೆದ ಉದ್ದೇಶ ತಿಳಿಯಲಿಲ್ಲ. ಮೊದಲು ಈ ಸಾಲ ತೀರಿಸಲು ಪ್ರಯತ್ನಿಸಿ. ವಿಮೆ ಹೊರತಗಿ ಬೇರಾವುದೇ ಉಳಿತಾಯ ಮಾಡಿದಂತಿಲ್ಲ. ಹೆಚ್ಚಿನ ಸಂಬಳ ಪಡೆಯುವ ನೀವು ನಿಮ್ಮ ಒಟ್ಟು ಸಂಬಳದ ಕನಿಷ್ಠ ಶೇಕಡ 25ರಷ್ಟನ್ನು  ಉಳಿತಾಯ ಮಾಡಿ. ಇದು ಕನಿಷ್ಠ ಐದು ವರ್ಷಗಳವರೆಗೆ ನಡೆಯಲಿ. ಸ್ವಲ್ಪ ಸಾಲ ಮಾಡಿಯಾದರೂ ಮೈಸೂರಿನಲ್ಲಿ ಒಂದು ನಿವೇಶನ ಕೊಳ್ಳುವ ಹಂಬಲ ಇರಲಿ. ಸಮಯವೇ ಹಣ. ವರ್ಷ ಕಳೆದಂತೆ ಕುಟುಂಬದ ಜವಾಬ್ದಾರಿ ಹೆಚ್ಚುತ್ತಾ, ಹೆಚ್ಚಿನ ಉಳಿತಾಯ ಮಾಡಲು ಸಾಧ್ಯವಾಗಲಾರದು. ನೀವು ತಿಂಗಳಲ್ಲಿ ಉಳಿಸಬಹುದಾದ ಹಣವನ್ನು ಸಂಬಳ ಪಡೆಯುವ ಬ್ಯಾಂಕಿನಲ್ಲಿ ಐದು ವರ್ಷಗಳ ಅವಧಿಗೆ ಆರ್‌.ಡಿ. ಮಾಡಿ.

* ಪ್ರಶ್ನೆ: ನಾನು ನಿವೃತ್ತ ನೌಕರ. ಬೆಂಗಳೂರಿನ ಗಿರಿನಗರದಲ್ಲಿ ಸ್ವಂತ ಮನೆ ಇದೆ. ಈ ಮನೆ ಮಾರಾಟ ಮಾಡಿ ಬಂದ ಹಣವನ್ನು ಎನ್‌ಎಚ್‌ಐಎ–ಆರ್‌ಇಸಿ ಬಾಂಡ್‌ನಲ್ಲಿ ಇಡಬಹುದೇ? ಹೀಗೆ ಬರುವುದನ್ನು ಮೂರು ಭಾಗವಾಗಿ ವಿಂಗಡಿಸಿ ಇಬ್ಬರು ಮಕ್ಕಳು ಹಾಗೂ ನನ್ನ ಹೆಸರಿನಲ್ಲಿ ಇಡಬಹುದೇ? ಇದರಿಂದ ಬಂಡವಾಳ ಗಳಿಕೆ ತೆರಿಗೆ ಬರುತ್ತದೆಯೇ, ತಿಳಿಸಿ.

–ಹೆಸರು ಬೇಡ, ಬೆಂಗಳೂರು

ಉತ್ತರ: ಸೆಕ್ಷನ್‌ 54ಇಸಿ ಆಧಾರದ ಮೇಲೆ ಬಂಡವಾಳ ವೃದ್ಧಿ ತೆರಿಗೆ ವಿನಾಯಿತಿ ಪಡೆಯಲು ಎನ್‌ಎಚ್‌ಐಎ–ಆರ್‌ಇಸಿ ಬಾಂಡುಗಳಲ್ಲಿ ಇಡಬಹುದಾದ ಗರಿಷ್ಠ ಮಿತಿ ₹ 50 ಲಕ್ಷ ಮಾತ್ರ. ಉಳಿದ ಮೊತ್ತಕ್ಕೆ cost of inflation index, ಆಸ್ತಿ ಕೊಳ್ಳುವಾಗ ಕೊಟ್ಟ ಮೊತ್ತ ಕಳೆದು ಶೇ 20ರಷ್ಟು ಬಂಡವಾಳ ವೃದ್ಧಿ ತೆರಿಗೆ ಕೊಡಬೇಕಾಗುತ್ತದೆ. ಮನೆ ಯಾರ ಹೆಸರಿನಲ್ಲಿ ಇದೆಯೋ ಅವರ ಹೆಸರಿನಲ್ಲಿ ಮಾತ್ರ ಇಂತಹ ಹೂಡಿಕೆ ಮಾಡಬೇಕು. ನಿಮ್ಮ ಹೆಸರಿನಲ್ಲಿ ₹ 50 ಲಕ್ಷ ವಿಂಗಡಿಸಿ ಎರಡು ಬಾಂಡ್‌ ಪಡೆದು ನಿಮ್ಮ ಮಕ್ಕಳ ಹೆಸರಿಗೆ ಪ್ರತ್ಯೇಕವಾಗಿ ನಾಮ ನಿರ್ದೇಶನ ಮಾಡಿ. ತೆರಿಗೆ ಉಳಿಸಲು, ಮಾರಾಟ ಮಾಡಿ ಬರುವ ಮೊತ್ತದಿಂದ ಮತ್ತೊಂದು ಮನೆ ಕೂಡಾ ಕೊಳ್ಳಲು ಅವಕಾಶವಿದೆ. ಆದರೆ, ನೀವು ನಿಮ್ಮ ಹೆಸರಿನಲ್ಲಿಯೇ ಕೊಳ್ಳಬೇಕು. ಮುಂದೆ ವಿಲ್‌ ಅಥವಾ ಗಿಫ್ಟ್‌ ಡೀಡ್‌ ಮುಖಾಂತರ ಮಕ್ಕಳಿಗೆ ಸ್ಥಿರ ಆಸ್ತಿ ವರ್ಗಾಯಿಸಬಹುದು.

* ಪ್ರಶ್ನೆ: ನನ್ನ ವಯಸ್ಸು 33. 2008ರಿಂದ ನೌಕರಿ ಮಾಡುತ್ತಿದ್ದೇನೆ. ನನಗೆ ಒಂದು ಹಾಗೂ ಮೂರು ವರ್ಷ ವಯಸ್ಸಿನ ಎರಡು ಮಕ್ಕಳು. ತಿಂಗಳ ಸಂಬಳ ₹ 40,918. ಕಡಿತ, ಪಿಟಿ ₹ 200, ಜಿಐಎಸ್‌ ₹ 180, ಕೆಜಿಐಡಿ ₹ 7 ಸಾವಿರ, ಎಲ್‌ಐಸಿ ₹ 3,953, ಎನ್‌ಪಿಎಸ್‌ ₹ 3,825. ಮಕ್ಕಳ, ಕುಟುಂಬದ ಹಾಗೂ ಆದಾಯ ತೆರಿಗೆ ದೃಷ್ಟಿಯಿಂದ ಸಲಹೆ ನೀಡಿ.

–ಪ್ರಕಾಶ್, ಹಂದಿಗನೂರು

ಉತ್ತರ: ನೀವು ಆದಾಯ ತೆರಿಗೆ ಹಾಗೂ ದೀರ್ಘಾವಧಿ ಹೂಡಿಕೆ ದೃಷ್ಟಿಯಿಂದ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಪಿಪಿಎಫ್‌ ಖಾತೆ ತೆರೆಯಿರಿ. ಇಲ್ಲಿ ಕನಿಷ್ಠ ₹ 500 ಗರಿಷ್ಠ ₹ 1.50 ಲಕ್ಷ ವಾರ್ಷಿಕ ಹೂಡಿಕೆ ಮಾಡಬಹುದು. ಸೆಕ್ಷನ್‌ 80ಸಿ ಆಧಾರದ ಮೇಲೆ ತೆರಿಗೆ ವಿನಾಯಿತಿ ಇದೆ. ಹಾಗೂ ಸೆಕ್ಷನ್‌ 10(II) ಆಧಾರದ ಮೇಲೆ ಇಲ್ಲಿ ಬರುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಇದು ಭಾರತ ಸರ್ಕಾರದ ಯೋಜನೆಯಾಗಿದ್ದು, ಭದ್ರತೆಯಲ್ಲಿ ಅನುಮಾನ ಬೇಡ. ಹೆಣ್ಣು ಮಗುವಾಗಿದ್ದರೆ ಸುಕನ್ಯಾ ಸಮೃದ್ಧಿ ಯೋಜನೆ ಮಾಡಿ. ಒಟ್ಟಿನಲ್ಲಿ ಮನೆ ಖರ್ಚು, ಬಾಡಿಗೆ ಇತರೆ ಖರ್ಚು ಕಳೆದು ಉಳಿಯುವ ಮೊತ್ತವನ್ನು ಸಂಬಳ ಬರುವ ಬ್ಯಾಂಕಿನಲ್ಲಿ ಐದು ವರ್ಷಗಳ ಆರ್‌.ಡಿ ಮಾಡಿ. ಮುಂದೆ ಸ್ವಂತ ಮನೆ ಕಟ್ಟುವ ಗುರಿ ಇಟ್ಟುಕೊಂಡು ಬೇಡವಾದ ಖರ್ಚಿಗೆ ಕಡಿವಾಣ ಹಾಕಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು