ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ: ತೆರಿಗೆ ಇನ್ನಷ್ಟು ಉಳಿಯುವಂತೆ ಮಾಡುವುದು ಹೇಗೆ?

Last Updated 7 ಜೂನ್ 2022, 19:31 IST
ಅಕ್ಷರ ಗಾತ್ರ

ಹೆಸರು ಬೇಡ, ಬೆಂಗಳೂರು

* ಪ್ರಶ್ನೆ: ನಾನು ಖಾಸಗಿ ಕಂಪನಿಯೊಂದರ ಉದ್ಯೋಗಿ. ನಾನು 80ಜಿ ಅಡಿ ನೋಂದಾಯಿತ ಸಂಸ್ಥೆಗಳಿಗೆ ದೇಣಿಗೆ ಕೊಡುತ್ತಿರುತ್ತೇನೆ. ಕೆಲವೊಮ್ಮೆ ಶೇಕಡ 100ರಷ್ಟು, ಇನ್ನು ಕೆಲವು ಸಂದರ್ಭಗಳಲ್ಲಿ ಶೇಕಡಾ 50ರಷ್ಟು ತೆರಿಗೆ ವಿನಾಯಿತಿ ಸಿಗುತ್ತದೆ ಎಂದು ತೆರಿಗೆ ವಿವರ ಸಲ್ಲಿಸುವಾಗಲಷ್ಟೇ ಗಮನಕ್ಕೆ ಬರುತ್ತದೆ. ಈ ಬಗ್ಗೆ ನಾವು ಮೊದಲೇ ಹೇಗೆ ಮಾಹಿತಿ ಪಡೆಯಬಹುದು? ತೆರಿಗೆ ಇನ್ನಷ್ಟು ಉಳಿಯುವಂತೆ ಮಾಡುವುದು ಹೇಗೆ?

ಉತ್ತರ: ಆದಾಯ ತೆರಿಗೆಯ ಸೆಕ್ಷನ್ 80ಜಿ ಎಲ್ಲರೂ ತಿಳಿದಿರುವ, ದೇಣಿಗೆಗೆ ಸಂಬಂಧಪಟ್ಟಂತೆ ಸಿಗುವ ಆದಾಯ ತೆರಿಗೆ ವಿನಾಯಿತಿಯ ಸೆಕ್ಷನ್. ಆದರೆ, ಇದರ ಅಡಿ ಯಾವುದೇ ಸಂಘ, ಸಂಸ್ಥೆಗಳಿಗೆ ದೇಣಿಗೆ ಕೊಟ್ಟ ಮೊತ್ತಕ್ಕೆ ನೂರಕ್ಕೆ ನೂರರಷ್ಟು ತೆರಿಗೆ ವಿನಾಯಿತಿ ಸಿಗುತ್ತದೆ ಎನ್ನುವುದು ಬಹುತೇಕರ ಕಲ್ಪನೆ ಮಾತ್ರ. ಈ ಸೆಕ್ಷನ್ ಅಡಿ ಮುಖ್ಯವಾಗಿ ನಾಲ್ಕು ಪ್ರತ್ಯೇಕ ವಿಚಾರಗಳಿವೆ.

1) ಕೊಟ್ಟ ದೇಣಿಗೆಗೆ ಸಿಗುವ ಸಂಪೂರ್ಣ ತೆರಿಗೆ ವಿನಾಯಿತಿ, 2) ಕೊಟ್ಟ ದೇಣಿಗೆಗೆ ಸಿಗುವ ಶೇಕಡಾ 50ರಷ್ಟು ತೆರಿಗೆ ವಿನಾಯಿತಿ, 3) ಆದಾಯದ ಶೇಕಡ 10ಕ್ಕೆ ನಿರ್ಬಂಧಿತವಾಗಿ ಕೊಟ್ಟ ದೇಣಿಗೆಗೆ ಸಿಗುವ ಸಂಪೂರ್ಣ ತೆರಿಗೆ ವಿನಾಯಿತಿ, 4) ಆದಾಯದ ಶೇಕಡ 10ಕ್ಕೆ ನಿರ್ಬಂಧಿತವಾಗಿ ಕೊಟ್ಟ ದೇಣಿಗೆಗೆ ಸಿಗುವ ಶೇ 50ರ ತೆರಿಗೆ ವಿನಾಯಿತಿ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಕೆಲವು ನಿರ್ದಿಷ್ಟ ಫಂಡ್ ಅಥವಾ ಸಂಸ್ಥೆಗಳಿಗೆ ಕೊಡುವ ದೇಣಿಗೆಗೆ ಸಂಬಂಧಿಸಿದಂತೆ ದೇಣಿಗೆ ಮೊತ್ತ ಒಂದೇ ಆಗಿದ್ದರೂ, ಶೇಕಡಾ 30ರ ತೆರಿಗೆ ಹಂತಕ್ಕೆ ಒಳಪಡುವ ವ್ಯಕ್ತಿಗೆ ಸಿಗುವ ತೆರಿಗೆ ವಿನಾಯಿತಿ ಹಾಗೂ ಶೇಕಡಾ 5ರ ತೆರಿಗೆ ಹಂತಕ್ಕೆ ಒಳಪಡುವ ವ್ಯಕ್ತಿಗೆ ಸಿಗುವ ತೆರಿಗೆ ವಿನಾಯಿತಿಯಲ್ಲಿ ವ್ಯತ್ಯಾಸ ಇರುತ್ತದೆ. ಇದಕ್ಕೆ ಮೇಲೆ ತಿಳಿಸಿರುವ ಮೂರನೆಯ ಹಾಗೂ ನಾಲ್ಕನೆಯ ಕ್ರಮಾಂಕದಲ್ಲಿ ಉಲ್ಲೇಖಿಸಿದ ನಿರ್ಬಂಧಗಳೇ ಕಾರಣ. 80 ಜಿ ಅಡಿ ವಿನಾಯಿತಿ ಸಿಗುವ ಸಂಸ್ಥೆಗಳ ಕುರಿತ ದೀರ್ಘ ಮಾಹಿತಿಯನ್ನು ಇಲ್ಲಿ ನೀಡುವುದು ಸಾಧ್ಯವಿಲ್ಲ. ಅದನ್ನು ನೇರವಾಗಿ ಆದಾಯ ತೆರಿಗೆ ಇಲಾಖೆಯ ಜಾಲತಾಣದಲ್ಲಿ ನೋಡಬಹುದು.

ತೆರಿಗೆದಾರರು ದೇಣಿಗೆ ಕೊಟ್ಟಾಗ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಹಣ ಕೊಟ್ಟವರ ಪ್ಯಾನ್ ಸಂಖ್ಯೆಯನ್ನು ಸರಿಯಾಗಿ ದಾಖಲಿಸಿದ್ದಾರೆಯೇ ಎನ್ನುವುದನ್ನೂ ಪರಿಶೀಲಿಸಬೇಕು. ಎರಡು ಸಾವಿರಕ್ಕೂ ಅಧಿಕ ಮೊತ್ತವನ್ನು ದೇಣಿಗೆ ನೀಡುವ ಸಂದರ್ಭದಲ್ಲಿ ಚೆಕ್, ಡಿ.ಡಿ., ನೆಫ್ಟ್ ಇತ್ಯಾದಿ ರೂಪದಲ್ಲಿ ವ್ಯವಹಾರ ನಡೆಸಿದಲ್ಲಿ ಮಾತ್ರ ತೆರಿಗೆ ವಿನಾಯಿತಿ ಲಭ್ಯ. ಮಾತ್ರವಲ್ಲ, ಯಾವುದೇ ದೇಣಿಗೆ ಪಡೆದ ಸಂಸ್ಥೆಗಳು, ಹಿಂದಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ, ದೇಣಿಗೆ ನೀಡಿದ ವ್ಯಕ್ತಿಗಳ ಪ್ಯಾನ್ ಸಹಿತ ಸಂಪೂರ್ಣ ವಿವರವನ್ನು ಮೇ 31ಕ್ಕೆ ಮೊದಲು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸುವುದು ಈಗ ಅನಿವಾರ್ಯ. ಸಂಸ್ಥೆಗಳು ಸಲ್ಲಿಸುವ ಈ ವಿವರಗಳೊಂದಿಗೆ, ತೆರಿಗೆದಾರರು ಸಲ್ಲಿಸುವ 80 ಜಿ ವಿನಾಯಿತಿ ಅರ್ಜಿಗಳಲ್ಲಿನ ಮಾಹಿತಿಯನ್ನು ತಾಳೆ ಮಾಡಲಾಗುತ್ತದೆ.

ಹೆಸರು ಬೇಡ, ಊರು ಬೇಡ

* ಪ್ರಶ್ನೆ: ನಾನು ಕಳೆದ ವರ್ಷ ಐ.ಟಿ. ವಿವರ ಸಲ್ಲಿಸುವ ಸಂದರ್ಭದಲ್ಲಿ ಕೆಲವು ವಿನಾಯಿತಿಗಳನ್ನು ಅಗತ್ಯ ಮಾಹಿತಿಯ ಕೊರತೆಯಿಂದ ಬಿಟ್ಟಿದ್ದೆ. ಅದರ ಪರಿಣಾಮವಾಗಿ, ತೆರಿಗೆಯನ್ನೂ ಕಟ್ಟಿದ್ದೆ. ಈಗ ನಾನು ಪೂರ್ಣ ಮಾಹಿತಿ, ದಾಖಲೆ ಹೊಂದಿದ್ದೇನೆ. ಹಳೆಯ ವಿವರ ಪರಿಷ್ಕರಿಸಬಹುದೇ ಮತ್ತು ರಿಫಂಡ್ ಪಡೆಯಬಹುದೇ?

ಉತ್ತರ: ಸಾಮಾನ್ಯ ನಿಯಮದಂತೆ ತೆರಿಗೆ ವಿವರವನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139(5) ಅಡಿ ಪರಿಷ್ಕರಿಸಲು ಅವಕಾಶವಿದೆ. ಪರಿಷ್ಕರಣೆಗೆ ಅರ್ಹವೆನಿಸಲು, ಆದಾಯ ತೆರಿಗೆ ವಿವರವನ್ನು ನಿಗದಿತ ಅವಧಿಯೊಳಗೆ ಸಲ್ಲಿಸಿರಬೇಕು ಹಾಗೂ ಆದಾಯ ತೆರಿಗೆ ಮೌಲ್ಯಮಾಪನ ಮಾಡುವ ಅಧಿಕಾರಿಗಳಿಂದ ತೆರಿಗೆದಾರನ ಆದಾಯ ತೆರಿಗೆ ವಿವರ ಪರಿಶೀಲನೆ ಬಾಕಿ ಇದ್ದಿರಬೇಕು. ನೀವು ಸಾಮಾನ್ಯ ಗಡುವಿನೊಳಗೆ (ಸೆಕ್ಷನ್ 139(1) ಇದರಡಿ) ಅಥವಾ ಗಡುವು ಮೀರಿ ದಂಡ ತೆತ್ತು ತಡವಾಗಿ ವಿವರ ಸಲ್ಲಿಸಿದ್ದರೂ (ಸೆಕ್ಷನ್ 139(4) ಇದರಡಿ) ಆದಾಯ ತೆರಿಗೆ ವಿವರ ಪರಿಷ್ಕರಿಸಲು ಅವಕಾಶವಿದೆ. ಇಂತಹ ಪರಿಷ್ಕರಣೆಗೂ ಕಾಲಮಿತಿ ಇದೆ. ಸಂಬಂಧಪಟ್ಟ ಅಸೆಸ್ಮೆಂಟ್ ವರ್ಷ ಮುಗಿಯುವ 3 ತಿಂಗಳ ಮೊದಲು ಅಥವಾ ತೆರಿಗೆ ಅಧಿಕಾರಿಗಳು ತೆರಿಗೆ ಮೌಲ್ಯಮಾಪನ ಮುಗಿಸುವುದರೊಳಗೆ ಯಾವುದು ಮೊದಲೋ ಆ ಅವಧಿಯೊಳಗೆ ಪರಿಷ್ಕರಣೆಗೆ ಅವಕಾಶವಿದೆ. ಈ ರೀತಿ ವಿವರ ಪರಿಷ್ಕರಣೆ ಮಾಡುವಾಗ, ಮೂಲ ವಿವರವನ್ನು ಹಿಂಪಡೆಯಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಪರಿಷ್ಕೃತ ವಿವರವನ್ನು ಮೂಲ ವಿವರ ಸಲ್ಲಿಸಿದ ವಿಧಾನದಲ್ಲಿಯೇ ಸಲ್ಲಿಸಬೇಕು. ಮೂಲ ವಿವರವನ್ನು ಆನ್‌ಲೈನ್‌ ಮೂಲಕ ಸಲ್ಲಿಸಿದಂತೆ, ಪರಿಷ್ಕೃತ ವಿವರವನ್ನೂ ಸೂಕ್ತ ಫಾರಂ ಆಯ್ಕೆ ಮಾಡುವ ಮೂಲಕ ಆನ್‌ಲೈನ್ ಮೂಲಕ ಸಲ್ಲಿಸಬೇಕು. ನೀವು ಆದಾಯ ತೆರಿಗೆಯ ಮರುಪಾವತಿ ಸ್ವೀಕರಿಸಿದ್ದರೆ, ನಿಮ್ಮ ಮೌಲ್ಯಮಾಪನ ಪೂರ್ಣಗೊಂಡಿದೆ ಎಂದು ಅರ್ಥವಲ್ಲ. ಆದಾಯ ತೆರಿಗೆ ಮರುಪಾವತಿಯನ್ನು ಸ್ವೀಕರಿಸಿದ್ದರೂ ಆದಾಯ ತೆರಿಗೆ ವಿವರವನ್ನು ತೆರಿಗೆದಾರರು ಪರಿಷ್ಕರಿಸಬಹುದು. ಸಾಮಾನ್ಯ ನಿಯಮದಂತೆ ನೀವು ಆರ್ಥಿಕ ವರ್ಷ 2020-21ಕ್ಕೆ (ಅಸೆಸ್ಮೆಂಟ್ ವರ್ಷ 2021-22) ಸಂಬಂಧಿಸಿದಂತೆ, 2021ರ ಡಿಸೆಂಬರ್ 31ರವರೆಗೆ ಪರಿಷ್ಕರಣೆಗೆ ಅವಕಾಶವಿತ್ತು. ಅದಲ್ಲದೆ, ಈ ಬಾರಿ ಕೋವಿಡ್ ಕಾರಣ ಗಡುವನ್ನು ಈ ವರ್ಷದ ಮಾರ್ಚ್‌ 31ರವರೆಗೂ ವಿಸ್ತರಿಸಲಾಗಿತ್ತು. ಈಗ ಈ ಎರಡೂ ಕಾಲಮಿತಿಗಳು ಮೀರಿರುವುದರಿಂದ ಅದಕ್ಕೆ ಅವಕಾಶವಿಲ್ಲ.

ಇಷ್ಟೇ ಅಲ್ಲದೆ, ಉದ್ದೇಶಪೂರ್ವಕವಲ್ಲದ, ಮೂಲ ವಿವರದಲ್ಲಿ ಯಾವುದೇ ಲೋಪ ಅಥವಾ ತಪ್ಪು ಕಂಡುಬಂದಲ್ಲಿ ಮಾತ್ರ ಪರಿಷ್ಕೃತ ವಿವರವನ್ನು (ಸೆಕ್ಷನ್ 139 (5)) ಸಲ್ಲಿಸಲು ಅನುಮತಿ ನೀಡಲಾಗಿದೆ. ಈ ಅವಕಾಶ, ವಿವರ ಸಲ್ಲಿಕೆಯಲ್ಲಾದ ಲೋಪ ಅಥವಾ ತಪ್ಪುಗಳ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಆದಾಯ ಮಾಹಿತಿ ಮರೆಮಾಚುವಿಕೆ ಅಥವಾ ಸುಳ್ಳು ಹೇಳಿಕೆಗಳ ಪ್ರಕರಣಗಳಿಗೆ ಅಲ್ಲ. ಮೂಲ ವಿವರ ಸಲ್ಲಿಸುವ ಸಮಯದಲ್ಲಿ, ಕೆಲವು ಆದಾಯವನ್ನು ಮರೆಮಾಚಿದ್ದರೆ ಮತ್ತು ಅಂತಹ ಆದಾಯವನ್ನು ಬಹಿರಂಗಪಡಿಸಿ ಸೆಕ್ಷನ್ 139(5) ಅಡಿಯಲ್ಲಿ ಪರಿಷ್ಕೃತ ವಿವರವನ್ನು ಸಲ್ಲಿಸಿದರೆ, ಅಂತಹ ಪ್ರಕರಣದಲ್ಲಿ ಪ್ರತ್ಯೇಕ ದಂಡ ವಿಧಿಸಲು ಅವಕಾಶವಿದೆ ಎಂಬುದನ್ನು ತೆರಿಗೆದಾರರು ಅರಿತಿರಬೇಕು.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT