ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ: ಹಣಕಾಸು ಸಂಬಂಧಿತ ಪ್ರಶ್ನೆಗೆ ದೈತೋಟ ಸಲಹೆ

Last Updated 9 ಆಗಸ್ಟ್ 2022, 20:39 IST
ಅಕ್ಷರ ಗಾತ್ರ

ಅನಂತಾಚಾರ್, ಟಾಟಾ ನಗರ, ಬೆಂಗಳೂರು

l ಪ್ರಶ್ನೆ: ನಾನು ಹಿರಿಯ ನಾಗರಿಕ, ವಯಸ್ಸು 79 ವರ್ಷ. ನನಗೆ ವಾರ್ಷಿಕ ₹ 5.50 ಲಕ್ಷ ಪಿಂಚಣಿ ಬರುತ್ತಿದೆ. ಬ್ಯಾಂಕಿನಿಂದ ₹ 2 ಲಕ್ಷ ಬಡ್ಡಿ ಬರುತ್ತಿದೆ. ಕೆಲವು ಸರ್ಕಾರಿ, ಅರೆ ಸರ್ಕಾರಿ ಕಂಪನಿಗಳಿಂದ ವರ್ಷಕ್ಕೆ ₹ 1 ಲಕ್ಷದಷ್ಟು ಡಿವಿಡೆಂಡ್ ಬರುತ್ತದೆ. ನನಗೆ ತೆರಿಗೆ ಉಳಿಸುವ ಉಪಾಯ ತಿಳಿಸಿ. ನಾನು ನನ್ನ ಹೆಸರಲ್ಲಿ ಮನೆಯೊಂದನ್ನು ಬಾಡಿಗೆಗೆ ಕೊಟ್ಟಿದ್ದೇನೆ. ವರ್ಷಕ್ಕೆ ₹ 3 ಲಕ್ಷ ಬಾಡಿಗೆ ಬರುತ್ತಿದೆ. 75 ವರ್ಷ ಮೇಲ್ಪಟ್ಟ ನಾಗರಿಕರು ತೆರಿಗೆ ವಿವರ ಸಲ್ಲಿಸುವ ಅಗತ್ಯ ಇಲ್ಲವೆಂದು ಓದಿದ್ದೆ. ಇದರ ಪ್ರಯೋಜನ ನನಗೆ ಸಿಗುವುದೇ?

ಉತ್ತರ: ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚಿನಆದಾಯ ಇರುವ ಎಲ್ಲರೂ ಆದಾಯ ತೆರಿಗೆ ವಿವರ ಸಲ್ಲಿಸಬೇಕು. ತೆರಿಗೆ ವಿನಾಯಿತಿ ಗರಿಷ್ಠ ಮೊತ್ತ ನಿಮ್ಮ ವಯೋಮಾನದ ಮೇಲೆ ನಿರ್ಧಾರವಾಗುತ್ತದೆ. ನೀವು 60ರಿಂದ 80 ವರ್ಷದೊಳಗಿನ ವಯೋಮಾನದಲ್ಲಿ ಇರುವುದರಿಂದ ನಿಮ್ಮ ಗರಿಷ್ಠ ತೆರಿಗೆ ವಿನಾಯಿತಿ ಮೊತ್ತ ₹ 3 ಲಕ್ಷ. ನಿಮ್ಮ ವಯಸ್ಸು 80 ವರ್ಷ ಆದಾಗ ಪ್ರಸ್ತುತ ಇರುವ ಆದಾಯ ತೆರಿಗೆ ನಿಯಮದಂತೆ ₹ 5 ಲಕ್ಷದ ತನಕ ತೆರಿಗೆ ವಿನಾಯಿತಿ ಇರುತ್ತದೆ.

75 ವರ್ಷ ಮೀರಿದ ವ್ಯಕ್ತಿಗಳಿಗೆ ತೆರಿಗೆ ವಿವರ ಸಲ್ಲಿಸುವುದರಿಂದ ವಿನಾಯಿತಿಯು ಕೇಂದ್ರ ಬಜೆಟ್ ಪ್ರಸ್ತಾವನೆಯಂತೆ 2021-22ರಿಂದ ಜಾರಿಯಲ್ಲಿದ್ದರೂ ಅದಕ್ಕೆ ಕೆಲವು ಷರತ್ತುಗಳು ಅನ್ವಯವಾಗುತ್ತವೆ. ಮೊದಲನೆಯದಾಗಿ ವ್ಯಕ್ತಿಯು ನಿವಾಸಿ ಭಾರತೀಯನಾಗಿದ್ದು ವಯಸ್ಸು 75 ವರ್ಷ ಆಗಿರಬೇಕು. ಅಂಥವರು ಪಿಂಚಣಿ ಮತ್ತು ಬಡ್ಡಿ ಆದಾಯ ಮಾತ್ರ ಗಳಿಸುತ್ತಿರಬೇಕು. ಪಿಂಚಣಿ ಆದಾಯ ನಿಗದಿತ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದು, ತೆರಿಗೆ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಬ್ಯಾಂಕಿಗೆ ಸಲ್ಲಿಸಿರಬೇಕು. ನಿಮಗೆ ತೆರಿಗೆ ಅನ್ವಯವಾದಲ್ಲಿ ಅಂತಹ ತೆರಿಗೆ ಮೊತ್ತವನ್ನು ಕಡಿತಗೊಳಿಸಿ ಬ್ಯಾಂಕ್‌ಗಳು ಪಾವತಿಸಿರಬೇಕು. ನಿಮಗೆ ಪಿಂಚಣಿ, ಬಡ್ಡಿ ಆದಾಯವಲ್ಲದೆ ಡಿವಿಡೆಂಡ್ ಹಾಗೂ ಮನೆ ಬಾಡಿಗೆ ಆದಾಯ ಇದೆ. ಒಟ್ಟು ₹ 11.50 ಲಕ್ಷ ಆದಾಯ ಬರುತ್ತಿದೆ. ಈ ಆದಾಯಗಳು ತೆರಿಗೆಗೊಳಪಡುವ ಆದಾಯವಾಗಿರುತ್ತವೆ. ಹೀಗಾಗಿ, ಈ ನಿಯಮದ ಅಡಿ ನೀವು ಪ್ರಯೋಜನ ಪಡೆಯಲು ಸಾಧ್ಯವಿಲ್ಲ.

ನೀವು ನಿಮ್ಮ ಹೂಡಿಕೆಯ ಮಾಹಿತಿ ತಿಳಿಸಿಲ್ಲ. ಒಂದುವೇಳೆ ನಿಮ್ಮಲ್ಲಿ ತೆರಿಗೆ ಉಳಿತಾಯಕ್ಕೆ ಸಂಬಂಧಿಸಿದ ಹೂಡಿಕೆಗಳು ಇಲ್ಲವಾದಲ್ಲಿ, ನೀವು ಅಂತಹ ಹೂಡಿಕೆಗಳನ್ನು ಮಾಡಬಹುದು. ಇದಕ್ಕಾಗಿ ಸಮೀಪದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿ ನೀಡಿ ₹ 1.50 ಲಕ್ಷದ ತನಕ ತೆರಿಗೆ ಉಳಿತಾಯ ಖಾತೆಗಳಲ್ಲಿ ಹಣ ತೊಡಗಿಸಿ.

ಪಿ.ಎಚ್. ಮುತ್ತತ್ತಿ, ಬಾಗಲಕೋಟೆ

l ಪ್ರಶ್ನೆ: ನಾನು ಇತ್ತೀಚೆಗೆ ‘ಪಿ2ಪಿ’ ಆ್ಯಪ್ ಆಧಾರಿತ ಹೂಡಿಕೆ ಬಗ್ಗೆ ಕೇಳಿರುತ್ತೇನೆ. ಇದರಲ್ಲಿ ಅಧಿಕ ಲಾಭ ಸಿಗುತ್ತದೆ ಎಂದು ಅವುಗಳನ್ನು ನಡೆಸುವ ಅನೇಕ ವೆಬ್‌ಸೈಟ್‌ಗಳು ಮಾಹಿತಿ ಕೊಡುತ್ತಿವೆ. ಇಂತಹ ಮಾಹಿತಿ ಖಚಿತ ಇರಬಹುದೇ ? ಅಸಲು ಮೊತ್ತ ಭದ್ರವೇ?

ಉತ್ತರ: ಪಿ2ಪಿ ಅಂದರೆ (Peer-to-peer) ಸಾಲ ಪಡೆಯಲಿಚ್ಛಿಸುವ ವ್ಯಕ್ತಿ ಹಾಗೂ ಸಾಲ ನೀಡಲು ತಯಾರಿರುವ ವ್ಯಕ್ತಿಗಳ ನಡುವಿನ ಹಣದ ವ್ಯವಹಾರ. ಪಿ2ಪಿ ವ್ಯವಹಾರ ನಡೆಸುವ ಸಂಸ್ಥೆಗಳು ತಮ್ಮ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಈ ಇಬ್ಬರ ನಡುವೆ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತವೆ. ಇದಕ್ಕಾಗಿ ಅವು ಆರ್‌ಬಿಐ ಪರವಾನಗಿ ಪಡೆಯಬೇಕಾಗಿರುತ್ತದೆ. ಪಿ2ಪಿ ವ್ಯವಹಾರದ ವಿಶೇಷ ಎಂದರೆ, ಬ್ಯಾಂಕುಗಳು ನಡೆಸಬೇಕಾದ ಠೇವಣಿ ಸಂಗ್ರಹ ಹಾಗೂ ಸಾಲ ನೀಡುವ ವ್ಯವಹಾರವನ್ನು ಇಂತಹ ಸಂಸ್ಥೆಗಳೇ ತಮ್ಮ ವೆಬ್ ವೇದಿಕೆ ಮೂಲಕ ನಡೆಸುತ್ತವೆ. ಇಲ್ಲಿ ಬ್ಯಾಂಕ್‌ಗಳ ಸಹಭಾಗಿತ್ವ ಇಲ್ಲ.

ಷೇರುಪೇಟೆ, ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು, ಕ್ರಿಪ್ಟೊ, ರಿಯಲ್ ಎಸ್ಟೇಟ್ ಅಥವಾ ಚಿನ್ನ ಇತ್ಯಾದಿ ಹೂಡಿಕೆ ಪ್ರಕಾರಗಳಿಗಿಂತ ಇದು ತುಸು ಭಿನ್ನವಾದ ಅಪಾಯ ಹೊಂದಿದೆ. ಬ್ಯಾಂಕ್‌ಗಳು ಕೊಟ್ಟ ಸಾಲ ಮರಳಿ ಬರದಿದ್ದರೆ ಆ ಮೊತ್ತ ಎನ್‌ಪಿಎ ಆಗಿ ಪರಿವರ್ತನೆಯಾಗುತ್ತದೆ. ಅಂಥದೇ ಅಪಾಯ ಇಲ್ಲಿ ಕೊಡುವ ಸಾಲಗಳಿಗೂ ಇದೆ. ಕಾರಣ, ಪಿ2ಪಿ ವ್ಯವಹಾರದಲ್ಲಿ ಸಾಲ ಪಡೆಯುವ ವ್ಯಕ್ತಿಯ ಸಾಮಾನ್ಯ ವ್ಯಾವಹಾರಿಕ ನಡವಳಿಕೆ, ಈತನಕದ ಸಿಬಿಲ್ ಅಂಕ, ಪ್ಯಾನ್, ಆಧಾರ್, ಆದಾಯ ಮೂಲ ಇತ್ಯಾದಿಗಳನ್ನಷ್ಟೇ ಮುಖ್ಯ ಮಾನದಂಡವನ್ನಾಗಿ ಪರಿಗಣಿಸಿ ಸಾಲಗಾರರ ಶ್ರೇಣಿಯನ್ನು ವರ್ಗೀಕರಿಸಲಾಗುತ್ತದೆ.

ಈ ವ್ಯವಹಾರದಲ್ಲಿ ಹಣ ತೊಡಗಿಸಬೇಕೆ ಬೇಡವೇ ಎನ್ನುವ ಮೊದಲು ಈ ಕೆಲವು ಅಂಶಗಳನ್ನು ಪರಿಗಣಿಸಿ.

1) ಪಿ2ಪಿ ವ್ಯವಹಾರ ನಡೆಸುವ ಸಂಸ್ಥೆಗಳು ಸಾಲ ಮರುಪಾವತಿಗೆ ಯಾವುದೇ ರೀತಿಯ ಭದ್ರತೆ ನೀಡುವುದಿಲ್ಲ. ಸಾಲ ಪಡೆದಾತ ಯಾವುದೇ ಕಾರಣಕ್ಕೆ ಹಣ ಮರಳಿಸದಿದ್ದಲ್ಲಿ ಸಾಲ ನೀಡಿದ ವ್ಯಕ್ತಿ ನಷ್ಟ ಅನುಭವಿಸಬೇಕಾಗಬಹುದು. ಸಾಲ ಪಡೆದಾತ ದೇಶದ ಯಾವುದೋ ಮೂಲೆಯಲ್ಲಿ ವ್ಯವಹರಿಸುತ್ತಿರಬಹುದು. ಹೀಗಾಗಿ ಹಣ ವಸೂಲಾತಿ ಕಾನೂನು ಪ್ರಕ್ರಿಯೆ ಬಹಳ ನಿಧಾನವಾಗಿ ಸಾಗಬಹುದು.

2) ಎಲ್ಲಾ ಬಡ್ಡಿ ದರಗಳು ಅಲ್ಲಿ ನಿಗದಿಪಡಿಸುವ ಗರಿಷ್ಠ ದರಗಳಾಗಿರುತ್ತವೆಯೇ ಹೊರತು ಅದಕ್ಕಿಂತ ಅಧಿಕ ಲಾಭ ನಿಮಗೆ ಸಿಗಲಾರದು. 3) ಇಲ್ಲಿ ಬ್ಯಾಂಕ್‌ಗಳಂತೆ ಲಿಖಿತ ರೂಪದಲ್ಲಿ ಸಾಲ ಮಂಜೂರಾತಿ, ಅದಕ್ಕೆ ಸಂಬಂಧಿಸಿದಂತೆ ಆಸ್ತಿ ಅಡಮಾನ ಇರುವುದಿಲ್ಲ. ಇಂತಹ ಸಾಲಗಳನ್ನು ವೈಯಕ್ತಿಕ ಅಭದ್ರ ಸಾಲವೆಂದೇ ತಿಳಿಯಲಾಗುತ್ತದೆ.
4) ಇಂತಹ ವ್ಯವಹಾರದಲ್ಲಿ ಹಣ ತೊಡಗಿಸುವ ಮೊದಲು ಅಧಿಕ ಬಡ್ಡಿ ನೀಡುವ ಹೂಡಿಕೆಗಳ ಮೇಲೆ ಅಧಿಕ ಅಪಾಯವೂ ಇರುತ್ತದೆ ಎನ್ನುವುದು ತಿಳಿದಿರಲಿ.
5) ಇಲ್ಲಿ ನಿಮಗೆ ನಷ್ಟವಾಗುವ ಸಾಧ್ಯತೆಯೂ ಇರುತ್ತದೆ. ನಿಮಗೆ ಹೊರೆಯಾಗದಷ್ಟು ಮೊತ್ತ ಮಾತ್ರ ತೊಡಗಿಸಿ. ಮೊದಲು ಸಣ್ಣ ಮೊತ್ತ ತೊಡಗಿಸಿ ವ್ಯವಹಾರವನ್ನು ಅರಿತುಕೊಳ್ಳಿ. ಆರ್‌ಬಿಐ ಪರವಾನಗಿ ಇರುವ ಸಂಸ್ಥೆಗಳೊಂದಿಗಷ್ಟೇ ವ್ಯವಹರಿಸಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001
ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT