ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Personal Finance: ಪ್ರಶ್ನೋತ್ತರ- ಹೂಡಿಕೆಗೆ ಎಲ್ಲಿ ಲಾಭ ಜಾಸ್ತಿ?

Last Updated 28 ಜೂನ್ 2022, 21:41 IST
ಅಕ್ಷರ ಗಾತ್ರ

ವೆಂಕಟೇಶ್ ಕೆ.ವಿ., ಬೆಂಗಳೂರು

l ಪ್ರಶ್ನೆ: ನಾನು ಸಣ್ಣ ಗುತ್ತಿಗೆದಾರ. ನನಗೆ ಬರುವ ವಾರ್ಷಿಕ ಆದಾಯ ₹ 15–20 ಲಕ್ಷ. ಇದರ ಶೇಕಡ 50ರಿಂದ ಶೇ 60ರಷ್ಟು ಖರ್ಚು ಇದೆ. ನನಗೆ ಹಣ ಪಾವತಿಸುವ ಬಹುತೇಕ ಕಂಪನಿಗಳು ಸ್ಥಳೀಯವಾಗಿ ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಂಡಿವೆ. ಇವರು ತೆರಿಗೆ ಮುರಿದು ಉಳಿದ ಹಣ ನನಗೆ ಪಾವತಿಸುತ್ತಾರೆ. ಆದರೆ ಸರಿಯಾದ ಫಾರಂ 16ಅನ್ನು ಹಾಗೂ ದಾಖಲೆಗಳನ್ನು ಕೊಡುತ್ತಿಲ್ಲ. ನಾನು ಏನು ಮಾಡಬಹುದು? ಇದರಿಂದ ಮುಂದೆ ನನಗೇನು ತೊಂದರೆ ಇದೆ?

ಉತ್ತರ: ತೆರಿಗೆ ಕಡಿತಗೊಳಿಸಿ ಉಳಿದ ಮೊತ್ತವನ್ನು ಪಾವತಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ, ಅವರು ಪ್ರತಿ ತ್ರೈಮಾಸಿಕ ಅವಧಿ ಮುಗಿದ ಒಂದು ತಿಂಗಳೊಳಗೆ ಕಡಿತಗೊಳಿಸಿದ ತೆರಿಗೆಯ ಬಗೆಗಿನ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗಿರುತ್ತದೆ. ಆದಾಯ ತೆರಿಗೆ ಇಲಾಖೆಯ ಟ್ರೇಸಸ್ ಎಂಬ ಜಾಲತಾಣದ ಮೂಲಕ ಫಾರಂ 16/16ಎ ಅನ್ನು ತೆರಿಗೆ ಕಡಿತಗೊಳಿಸಲಾದ ವ್ಯಕ್ತಿಗೆ ನೀಡಲು ನಂತರದ 15 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು. ಟಿಡಿಎಸ್ ಪ್ರಮಾಣಪತ್ರಗಳನ್ನು ನೀಡುವುದು ಈಗ ಕಡ್ಡಾಯ.

ಒಂದು ವೇಳೆ ಟಿಡಿಎಸ್ ಪ್ರಮಾಣಪತ್ರಗಳನ್ನು ಸಕಾಲದಲ್ಲಿ ಒದಗಿಸದಿದ್ದರೆ, ಅಂತಹ ಕಂಪನಿಯ ನಿರ್ದೇಶಕರಿಗೆ ಲಿಖಿತ ರೂಪದಲ್ಲಿ ನಿಮ್ಮ ಸಮಸ್ಯೆ ಹಾಗೂ ನಿಮ್ಮ ಮುಂದಿನ ಕ್ರಮದ ಬಗ್ಗೆ ಎಚ್ಚರಿಕೆ ಪತ್ರ ಬರೆಯುವುದು ಸಮಂಜಸ. ಒಂದು ವೇಳೆ ಅದಕ್ಕೆ ಪ್ರತಿಕ್ರಿಯೆ ಬರದಿದ್ದಲ್ಲಿ, ಸ್ಥಳೀಯ ಆದಾಯ ತೆರಿಗೆ ಇಲಾಖೆಯ (ಟಿಡಿಎಸ್) ವಿಭಾಗದಲ್ಲಿ ದೂರು ದಾಖಲಿಸಬಹುದು ಅಥವಾ ಆನ್ಲೈನ್ ಮೂಲಕವೂ ದೂರು ದಾಖಲಿಸಬಹುದು. ಇಂತಹ ಪ್ರಕರಣಗಳು ತಪ್ಪಿತಸ್ಥ ಸಂಸ್ಥೆಗಳ ಮೇಲೆ ಸೂಕ್ತ ಕಾನೂನು ಕ್ರಮ ಹಾಗೂ ದಂಡ ವಿಧಿಸಲು ನೆರವಾಗುತ್ತವೆ.

ಒಂದು ವೇಳೆ, ಕಡಿತಗೊಳಿಸಲಾದ ತೆರಿಗೆ ವಿವರ ನಿಮ್ಮ ಆದಾಯ ತೆರಿಗೆಯ ‘26 ಎ ಎಸ್’ ಫಾರಂನಲ್ಲಿ ಕಂಡುಬರದಿದ್ದಲ್ಲಿ, ಅಷ್ಟು ತೆರಿಗೆ ಮೊತ್ತ ನಿಮಗೆ ಕೊರತೆಯಾಗುತ್ತದೆ. ಇದರ ಪರಿಣಾಮ ನಿಮಗೆ ಹೆಚ್ಚುವರಿ ತೆರಿಗೆ ಕಟ್ಟಬೇಕಾಗಿ ಬರಬಹುದು ಅಥವಾ ತೆರಿಗೆ ಮರಳಿ ಸಿಗುವುದು ಇದ್ದಲ್ಲಿ ನಿಮಗೆ ಅಷ್ಟು ಮೊತ್ತ ಕಡಿಮೆ ಬರಬಹುದು.

ರವಿಕುಮಾರ, ಶಿವಮೊಗ್ಗ

l ಪ್ರಶ್ನೆ: ನನ್ನ ಬಳಿ ₹ 1 ಲಕ್ಷ ಇದೆ. ಈ ಹಣವನ್ನು ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಲು ಬಯಸಿದ್ದೇನೆ. ಇದನ್ನು ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ? ಯಾವುದು ಸುರಕ್ಷಿತ?

ಉತ್ತರ: ಬಹುತೇಕ ಸಂದರ್ಭಗಳಲ್ಲಿ ‘ರಿಸ್ಕ್ ಮತ್ತು ರಿಟರ್ನ್ಸ್’ ಸಮಾನಾಂತರವಾಗಿ ಚಲಿಸುತ್ತವೆ. ಇವೆರಡೂ ಒಂದನ್ನೊಂದು ಬಿಡದೆ ಒಂದೇ ದಿಕ್ಕಿನಲ್ಲಿ ಚಲಿಸುವ ವಿಚಾರಗಳು. ಅಂದರೆ ಅಧಿಕ ರಿಸ್ಕ್ ಇರುವಲ್ಲಿ ಅಧಿಕ ರಿಟರ್ನ್ಸ್ ಇರುತ್ತದೆ, ಕಡಿಮೆ ರಿಸ್ಕ್ ತೆಗೆದುಕೊಳ್ಳುವವರು ಕಡಿಮೆ ರಿಟರ್ನ್ಸ್ ಪಡೆಯುತ್ತಾರೆ ಎನ್ನುವುದೇ ಇದರ ಅರ್ಥ. ಇರುವ ಹಣವನ್ನು ಎಲ್ಲ ರೀತಿಯಲ್ಲಿ ಸಂರಕ್ಷಿಸಲು ಹಾಗೂ ವೃದ್ಧಿಗೊಳಿಸಲು, ಸರಿಯಾದ ಸಮಯದಲ್ಲಿ ಸರಿಯಾದ ಹೂಡಿಕೆ ಉತ್ಪನ್ನಗಳಲ್ಲಿ, ತಾಳ್ಮೆಯಿಂದ ತೊಡಗಿಸಬೇಕು. ಸಾಂಪ್ರದಾಯಿಕ ಹೂಡಿಕೆಗಳಾದ ಬ್ಯಾಂಕ್ ಠೇವಣಿ, ಅಂಚೆ ಕಚೇರಿ ಹೂಡಿಕೆ ಇತ್ಯಾದಿಗಳಿಗೆ ಹೋಲಿಸಿದರೆ, ಷೇರು ಮಾರುಕಟ್ಟೆ ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆಗಳಿಂದ ಹೆಚ್ಚು ಲಾಭ ಗಳಿಸಲು ಅವಕಾಶ ಇರುತ್ತದೆ. ಆದರೆ, ಇದಕ್ಕೆ ಪರಿಶ್ರಮ ಹಾಗೂ ಹೆಚ್ಚಿನ ತಿಳಿವಳಿಕೆ ಅಗತ್ಯ. ಅನ್ಯರ ಮಾರ್ಗದರ್ಶನ ಎಷ್ಟೇ ಇದ್ದರೂ, ನಮ್ಮ ಹಣ ಹಾಗೂ ನಿರ್ಧಾರಗಳಿಗೆ ನಾವೇ ಜವಾಬ್ದಾರರು.

ನಿಮಗೆ ಮೇಲೆ ಉಲ್ಲೇಖಿಸಿರುವ ವಿಚಾರಗಳಲ್ಲಿ ಆಸಕ್ತಿ ಇದ್ದರೆ, ಉತ್ತಮ ಕಂಪನಿಯ ಷೇರುಗಳಲ್ಲಿ ಮ್ಯೂಚುವಲ್ ಫಂಡ್‌ಗಳ ಮೂಲಕ ವ್ಯವಸ್ಥಿತವಾಗಿ ಹೂಡಿಕೆ (ಎಸ್‌ಐಪಿ) ಮಾಡಬಹುದು. ಮಾರುಕಟ್ಟೆ ಕುಸಿತದ ಅಪಾಯದಿಂದ ನಿಮ್ಮ ಹಣವನ್ನು ರಕ್ಷಿಸಲು ಇದು ಪರಿಣಾಮಕಾರಿ. ನಿಮ್ಮ ಒಟ್ಟು ಹೂಡಿಕೆಯ ಮೊತ್ತ ಹಾಗೂ ಅವಧಿಯನ್ನು ಈಗಾಗಲೇ ಖಚಿತಪಡಿಸಿಕೊಂಡಿದ್ದೀರಿ. ನೀವು ನಿಮ್ಮ ಹಣವನ್ನು ಮೊದಲ ಹಂತದಲ್ಲಿ ಲಿಕ್ವಿಡ್ ಅಥವಾ ಡೆಟ್ ಫಂಡ್‌ಗಳಲ್ಲಿ ತೊಡಗಿಸಬಹುದು. ಇದು ನಿಮಗೆ ಅಲ್ಪ ಮೊತ್ತದ ಲಾಭ ಕೊಡುತ್ತಿರುತ್ತದೆ. ತದನಂತರ, ನಿಮ್ಮ ನಿರ್ಧಾರದಂತೆ ನಿಮ್ಮ ಷೇರು ಬ್ರೋಕರ್ ಜೊತೆ ಮಾತುಕತೆ ನಡೆಸಿ, ವಾರದ ನಿಶ್ಚಿತ ದಿನ ಅಥವಾ ಮಾಸಿಕವಾಗಿ ಒಂದು ನಿಗದಿತ ದಿನ ನಿರ್ದಿಷ್ಟ ಕಂಪನಿಗಳ ಷೇರು ಖರೀದಿಸುವ ನಿರ್ದೇಶನ ನೀಡಬಹುದು. ಇದು ಕೂಡ ವ್ಯವಸ್ಥಿತ ಹೂಡಿಕೆಗೆ ನೆರವಾಗುತ್ತದೆ. ನಿಮ್ಮ ಹೂಡಿಕೆಯ ಅರ್ಧದಷ್ಟು ಮೊತ್ತವನ್ನು ಎರಡು ಅಥವಾ ಮೂರು ಉತ್ತಮವಾದ ಈಕ್ವಿಟಿ, ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಬಹುದು. ಇನ್ನುಳಿದ ಮೊತ್ತವನ್ನು ವಿವಿಧ ವರ್ಗಗಳ ನಾಲ್ಕೈದು ಉತ್ತಮ ಕಂಪನಿಗಳ ಷೇರುಗಳಲ್ಲಿ ಸಮಾನವಾಗಿ ತೊಡಗಿಸಿ. ಇದಕ್ಕೆ ಅಗತ್ಯವಾದ ಮೊತ್ತವನ್ನು (ಮೊದಲೇ ಹೂಡಿಕೆ ಮಾಡಿದ್ದ) ಲಿಕ್ವಿಡ್ ಅಥವಾ ಡೆಟ್ ಫಂಡ್‌ಗಳಿಂದ ಹಿಂಪಡೆಯುತ್ತಿರಿ.

ಯಾವುದೇ ಸಂದರ್ಭದಲ್ಲೂ ಒಂದೇ ಹಂತದಲ್ಲಿ ನಿಮ್ಮ ಎಲ್ಲ ಹಣವನ್ನು ಒಂದೇ ಕಡೆ, ಒಂದೇ ಬಾರಿಗೆ ತೊಡಗಿಸದಿರಿ. ನಷ್ಟ ಕಾಣುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಯಾವತ್ತೂ ಬೇಡ. ಲಾಭಾಂಶ ಹಾಗೂ ವಹಿವಾಟು ಉತ್ತಮವಿರುವ ಹಾಗೂ ಭವಿಷ್ಯದಲ್ಲಿ ಉತ್ತಮ ನಿರೀಕ್ಷೆ ಇರುವ ವ್ಯವಹಾರದಲ್ಲಿ ಹಣ ತೊಡಗಿಸಿ, (ಉ.ದಾ. ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಇಂಧನ ಇತ್ಯಾದಿ ಕ್ಷೇತ್ರಗಳು). ಅಗ್ಗವಾಗಿ ತೋರುವ ‘ಪೆನ್ನಿ ಷೇರು’ಗಳಲ್ಲಿ ಹಣ ತೊಡಗಿಸುವಾಗ ಎಚ್ಚರಿಕೆಯಿಂದ ಇರಿ. ಅಪರೂಪಕ್ಕೊಮ್ಮೆ ಮಾತ್ರ ಬಿಕರಿಯಾಗುವ ಷೇರುಗಳಲ್ಲಿ ಹಣ ತೊಡಗಿಸುವಾಗಲೂ ಎಚ್ಚರಿಕೆ ಇರಲಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT