ಗುರುವಾರ , ಡಿಸೆಂಬರ್ 3, 2020
23 °C

ಪ್ರಶ್ನೋತ್ತರ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

Prajavani

ಸೆಪ್ಟೆಂಬರ್‌ 23ರ ನಿಮ್ಮ ಅಂಕಣದಲ್ಲಿ ಪ್ರಧಾನ ಮಂತ್ರಿ ವಯೋ ವಂದನಾ ಯೋಜನೆಯ ವಾರ್ಷಿಕ ಬಡ್ಡಿ ದರ ಶೇ 7.4 ಇದ್ದು, ಈ ಬಡ್ಡಿದರ ಒಮ್ಮೆ ಠೇವಣಿ ಇರಿಸಿದ 10 ವರ್ಷಗಳವರೆಗೆ ಬದಲಾಗುವುದಿಲ್ಲ ಎಂದು ತಿಳಿಸಿದ್ದೀರಿ. ನಾನು ಇದೇ ಯೋಜನೆಯಲ್ಲಿ ಹಣ ಇರಿಸಬಯಸಿದ್ದೆ. ಆದರೆ ಒಬ್ಬ ಏಜೆಂಟರು ಇಂದು ನಿಗದಿಪಡಿಸಿದ ಬಡ್ಡಿ ಮುಂದಿನ ವರ್ಷಗಳಲ್ಲಿ ಬದಲಾಗುತ್ತದೆ ಎಂದು ತಿಳಿಸಿ, ಬೇರೊಂದು ಪಿಂಚಣಿ ಯೋಜನೆಯಲ್ಲಿ ಹಣ ತೊಡಗಿಸುವಂತೆ ಹೇಳಿದರು ಹಾಗೂ ನಾನು ಅದರಲ್ಲಿಯೇ ತೊಡಗಿಸಿದೆ. ಬಡ್ಡಿ ಬದಲಾಗುವುದಿಲ್ಲ ಎನ್ನುವುದು ತಿಳಿದಿದ್ದರೆ ಇದೇ ಯೋಜನೆಯಲ್ಲಿ ಹಣ ತೊಡಗಿಸುತ್ತಿದ್ದೆ. ದಯಮಾಡಿ ಇನ್ನೊಮ್ಮೆ ತಿಳಿಸಬೇಕಾಗಿ ವಿನಂತಿ. - ಹೆಸರು ಬೇಡ, ಬೆಂಗಳೂರು

ಉತ್ತರ: ಪ್ರಧಾನ ಮಂತ್ರಿ ವಯೋವಂದನಾ ಯೋಜನೆ ಎನ್ನುವುದು ಠೇವಣಿದಾರ ಹಾಗೂ ಎಲ್‌ಐಸಿ ನಡುವಣ ಮಾಡಿಕೊಂಡಿರುವ ಮುಚ್ಚಳಿಕೆ ಅಥವಾ ಒಪ್ಪಂದಕ್ಕೆ ಒಳಗಾದ ಒಂದು ಠೇವಣಿ.

ಕೇಂದ್ರ ಸರ್ಕಾರ ಈ ಠೇವಣಿಯ ಮೇಲಿನ ಬಡ್ಡಿದರವನ್ನು ಆಗಾಗ್ಗೆ ಬದಲಿಸಬಹುದು. ಆದರೆ, ಒಮ್ಮೆ ಇರಿಸಿದ ಠೇವಣಿಯಲ್ಲಿ ನಮೂದಿಸಿದ ಬಡ್ಡಿದರವನ್ನು ಅವಧಿ ಮುಗಿಯುವ ತನಕ ಎಂದಿಗೂ ಕಡಿಮೆ ಮಾಡುವ ಹಕ್ಕು ಎಲ್‌ಐಸಿಗೆ ಇರುವುದಿಲ್ಲ. ಅದೇ ಕಾನೂನು ಬ್ಯಾಂಕ್‌ ಠೇವಣಿ, ಅಂಚೆ ಕಚೇರಿ ಠೇವಣಿ ಹಾಗೂ ಸರ್ಕಾರಿ ಬಾಂಡ್‌ಗಳಿಗೂ ಅನ್ವಯಿಸುತ್ತದೆ. ವಯೋವಂದನಾದ ಪ್ರಸ್ತುತ ಬಡ್ಡಿದರ ಶೇ 7.4 ಇದ್ದು, ಈಗ ಹಣವಿರಿಸಿದರೆ ಇನ್ನು 10 ವರ್ಷಗಳ ತನಕ ಅದೇ ಬಡ್ಡಿ ಪಡೆಯಬಹುದು.

 

ಪ್ರಶ್ನೆ: ನಾನು, ನನ್ನ ಮಗ ಸೇರಿ ಒಂದು ಬ್ಯಾಂಕ್‌ನಲ್ಲಿ ಗೃಹ ಸಾಲ ಪಡೆಯಲು ವಿಚಾರಿಸಿದಾಗ ಅವರು ಒಂದು ವರ್ಷದ ಅವಧಿಯ 12 ಕಂತುಗಳಿಗೆ 12 ಚೆಕ್‌ಗಳನ್ನು ಮುಂಗಡವಾಗಿ ಕೊಡಬೇಕು ಎಂದು ಹೇಳಿದರು. ಅದರಲ್ಲಿ ದಿನಾಂಕ ನಮೂದಿಸಬಾರದು ಎಂದು ತಿಳಿಸಿದರು. ಇದು ಸರಿ ಇದೆಯೇ ಎಂದು ತಿಳಿಸಿ. - ಕೃಷ್ಣಸ್ವಾಮಿ, ಮಂಡ್ಯ

ಉತ್ತರ: ಕೆಲವೊಂದು ಬ್ಯಾಂಕ್‌ಗಳು ಸಾಲದ ಕಂತುಗಳ ಸಲುವಾಗಿ ಚೆಕ್‌ ಕೊಡಲು ಹೇಳುತ್ತವೆ. ಇದಕ್ಕೆ ಕಾರಣ, ಸಾಲಗಾರ ಸಮಯಕ್ಕೆ ಸರಿಯಾಗಿ ಕಂತು ಕಟ್ಟದೇ ಇದ್ದಲ್ಲಿ ಸ್ಥಿರ ಆಸ್ತಿ ಹರಾಜು ಮಾಡುವುದಕ್ಕಿಂತ ಚೆಕ್‌ ಬೌನ್ಸ್‌ ಕೇಸ್‌ ಹಾಕುವುದು ಸುಲಭ ಎಂಬುದು. ಹೀಗೆ ಮುಂಗಡ ಚೆಕ್ ಕೇಳಿದಲ್ಲಿ ಬ್ಯಾಂಕ್‌ಗೆ ಕೊಡುವ ಮುನ್ನ ಬ್ಯಾಂಕಿನ ಹೆಸರು, ಕಂತಿನ ಹಣ (ಸಂಖ್ಯೆ, ಅಕ್ಷರ ರೂಪದಲ್ಲಿ) ಬರೆದು ಕೊಡಬಹುದು. ಕೊಡುವ ಚೆಕ್‌ಗಳ ಜೆರಾಕ್ಸ್ ಪ್ರತಿ‌ ತೆಗೆದು, ಪ್ರತಿಯ ಮೇಲೆ ಬ್ಯಾಂಕ್‌ನವರಿಂದ ಅಕ್ನಾಲೆಜ್‌ಮೆಂಟ್‌ ಪಡೆದು ಇಟ್ಟುಕೊಳ್ಳಿ. ಚೆಕ್‌ನಲ್ಲಿ ತಾರೀಕು ಹಾಕುವುದು ಬೇಡ. ಚೆಕ್‌ನ ಅವಧಿ ಬರೇ ಮೂರು ತಿಂಗಳಾಗಿದ್ದರಿಂದ ತಾರೀಕು ಹಾಕುವುದು ಬೇಡ ಎಂದು ಬ್ಯಾಂಕ್‌ನವರು ಹೇಳುತ್ತಾರೆ. ಒಟ್ಟಿನಲ್ಲಿ ಮುಂಗಡ ಚೆಕ್‌ ಕೊಡುವುದರಿಂದ ಯಾವ ತೊಂದರೆಯೂ ಇರುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು