ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

Last Updated 1 ಜೂನ್ 2021, 20:14 IST
ಅಕ್ಷರ ಗಾತ್ರ

ಮಂಜುಳ, ರಾಮಮೂರ್ತಿನಗರ

ಪ್ರಶ್ನೆ: ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ವರ್ಷ ನನಗೆ ನಿವೃತ್ತಿಯಾಗುತ್ತಿದ್ದು, ನಿವೃತ್ತಿಯ ನಂತರ ಸುಮಾರು ₹ 45 ಲಕ್ಷ ಬರಬಹುದು. ಸ್ವಂತ ಮನೆ ಇದೆ. ಪಿಂಚಣಿ ಇಲ್ಲ. ಬೇರಾವ ಆದಾಯವೂ ಇಲ್ಲ. ಬಡ್ಡಿಯಿಂದಲೇ ಜೀವನ ಸಾಗಿಸಬೇಕಾದ್ದರಿಂದ ಪ್ರತಿ ತಿಂಗಳೂ ಬಡ್ಡಿ ಬರುವ ಹೂಡಿಕೆ ಬಗ್ಗೆ ತಿಳಿಸಿ.

ಉತ್ತರ: ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ವರಮಾನ ಹಾಗೂ ಬ್ಯಾಂಕುಗಳಿಗಿಂತ ಸ್ವಲ್ಪ ಹೆಚ್ಚಿನ ಬಡ್ಡಿ ಬರುವ ಭದ್ರತೆ ಇರುವ ಠೇವಣಿಗಳೆಂದರೆ ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿ ಹಾಗೂ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಪ್ರಧಾನ ಮಂತ್ರಿ ವಯೋ ವಂದನಾ ಯೋಜನೆ. ಎರಡೂ ಯೋಜನೆಯಲ್ಲಿ ಗರಿಷ್ಠ ₹ 15 ಲಕ್ಷ ಹಣ ಹೂಡಬಹುದು. ಅಂಚೆ ಕಚೇರಿ ಠೇವಣಿಯ ಅವಧಿ 5 ವರ್ಷ, ಎಲ್‌ಐಸಿಯ ವಯೋ ವಂದನಾ ಯೋಜನೆಯ ಅವಧಿ 10 ವರ್ಷ. ಪ್ರಸ್ತುತ ಬಡ್ಡಿದರ ಶೇಕಡ 7.4ರಷ್ಟು. ಇವೆರಡರಲ್ಲಿ ಒಟ್ಟಾರೆ ₹ 30 ಲಕ್ಷ ಇರಿಸಿದ ನಂತರ ಇನ್ನುಳಿದ ₹ 15 ಲಕ್ಷವನ್ನು ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ 5 ವರ್ಷಗಳ ಠೇವಣಿಯಲ್ಲಿ ಇಡಿ. ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಿರಿ. ಬ್ಯಾಂಕ್‌ಗಳಲ್ಲಿ ಠೇವಣಿ ಮೇಲೆ ಪ್ರತಿ ತಿಂಗಳೂ ಬಡ್ಡಿ ಪಡೆಯಬಹುದಾದರೂ ಹೀಗೆ ತಿಂಗಳು ತಿಂಗಳು ಬಡ್ಡಿ ಪಡೆಯುವಾಗ ನಿರ್ಧರಿಸಿದ ಬಡ್ಡಿದರದಲ್ಲಿ ಸ್ವಲ್ಪ ಕಡಿತ ಮಾಡಿ ಕೊಡುತ್ತಾರೆ. ನೀವು ವಯೋ ವಂದನಾ ಯೋಜನೆಯಲ್ಲಿ ಪ್ರತೀ ತಿಂಗಳೂ ಬಡ್ಡಿ ಪಡೆಯಬಹುದು ಹಾಗೂ ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದು.

ಡಾ. ಕೃಷ್ಣವೇಣಿ, ಊರುಬೇಡ

ಪ್ರಶ್ನೆ: ವೃತ್ತಿಯಲ್ಲಿ ನಾನು ಮತ್ತು ನನ್ನ ಪತಿ ವೈದ್ಯರು. ನಮ್ಮಿಬ್ಬರ ತಿಂಗಳ ಆದಾಯ ಸುಮಾರು ₹ 3 ಲಕ್ಷ. ನಮಗೆ
₹ 65 ಲಕ್ಷ ಗೃಹಸಾಲ ಇದೆ. ನಾವು ಇದುವರೆಗೆ ಮ್ಯೂಚುವಲ್‌ ಫಂಡ್‌ಗಳಲ್ಲಿ ₹ 5 ಲಕ್ಷ ತೊಡಗಿಸಿದ್ದೇವೆ. ಇದು ಸದ್ಯ ಲಾಭದಲ್ಲಿ ಇಲ್ಲ. ಪ್ರತೀ ತಿಂಗಳೂ ₹ 25 ಸಾವಿರ ಖಾಸಗಿ ಚಿಟ್‌ ಫಂಡ್‌ನಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಹೆಚ್ಚಿನ ಹಣ ತುಂಬಿ ಬೇಗ ಗೃಹಸಾಲ ತೀರಿಸಲು ನಿಮ್ಮ ಅಭಿಪ್ರಾಯ ತಿಳಿಸಿ.

ಉತ್ತರ: ಮ್ಯೂಚುವಲ್ ಫಂಡ್‌ ಹೂಡಿಕೆ ಷೇರುಮಾರುಕಟ್ಟೆ ಆಧರಿತ ಆದ್ದರಿಂದ ಅಲ್ಲಿ ಏರಿಳಿತ ಸಹಜ. ಲಾಭ ಬರುವ ತನಕ ಕಾಯಿರಿ. ಖಾಸಗಿ ಚಿಟ್‌ಫಂಡ್‌ ಹೂಡಿಕೆಯನ್ನು ನೀವು ಪ್ರಾಯಶಃ ನಿಮ್ಮ ಪರಿಚಯದವರಲ್ಲಿ ಮಾಡುತ್ತಿರಬೇಕು. ಈ ಹೂಡಿಕೆ ಎಂದಿಗೂ ಸುರಕ್ಷಿತ ಅಲ್ಲ. ತೆರಿಗೆ ಉಳಿಸಲು ನೀವಿಬ್ಬರೂ ನಿಮ್ಮ ವರಮಾನದಲ್ಲಿ ಶೇಕಡ 10ರಷ್ಟನ್ನು ಜೀವ ವಿಮೆಗೆ ಮುಡಿಪಾಗಿಡಿ ಹಾಗೂ ಇಬ್ಬರೂ ಪ್ರತ್ಯೇಕವಾಗಿ ಪಿಪಿಎಫ್‌ (ಸಾರ್ವಜನಿಕ ಭವಿಷ್ಯ ನಿಧಿ) ಖಾತೆ ತೆರೆದು ಗರಿಷ್ಠ ₹ 1.5 ಲಕ್ಷ ವಾರ್ಷಿಕವಾಗಿ ತುಂಬಿರಿ. ಇವೆರಡರಿಂದ ಸೆಕ್ಷನ್ 80ಸಿ ಆಧಾರದ ಮೇಲೆ ನಿಮ್ಮಿಬ್ಬರ ವಾರ್ಷಿಕ ಆದಾಯದಲ್ಲಿ ಪ್ರತ್ಯೇಕವಾಗಿ ₹ 1.5 ಲಕ್ಷ ಕಳೆದು ತೆರಿಗೆ ಸಲ್ಲಿಸಬಹುದು. ಸೆಕ್ಷನ್‌ 80ಸಿ ಹೊರತುಪಡಿಸಿ ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ವಾರ್ಷಿಕ ಕನಿಷ್ಠ ₹ 50 ಸಾವಿರ ಎನ್‌ಪಿಎಸ್‌ನಲ್ಲಿ (ರಾಷ್ಟ್ರೀಯ ಪಿಂಚಣಿ ಯೋಜನೆ) ತೊಡಗಿಸಿ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಉಳಿತಾಯ ಹಾಗೂ ತೆರಿಗೆ ದೃಷ್ಟಿಯಿಂದ ಈ ಹೂಡಿಕೆಗಳು ತುಂಬಾ ಅನುಕೂಲ.

ಗೃಹ ಸಾಲದ ಬಡ್ಡಿ ಸೆಕ್ಷನ್‌ 24 (ಬಿ) ಆಧಾರದ ಮೇಲೆ ಗರಿಷ್ಠ ₹ 2 ಲಕ್ಷವನ್ನು ಒಟ್ಟು ಆದಾಯದಿಂದ ಕಳೆದು ತೆರಿಗೆ ತುಂಬಬಹುದು. ಗೃಹ ಸಾಲಕ್ಕೆ ಹೆಚ್ಚು ಹಣ ತುಂಬುವುದು ಬೇಡ. ಆರ್ಥಿಕ ಶಿಸ್ತು ಪರಿಪಾಲಿಸಲು ಹಾಗೂ ಬೇಡವಾದ ಖರ್ಚಿಗೆ ಕಡಿವಾಣ ಹಾಕಲು ನೀವಿಬ್ಬರೂ ತಲಾ ₹ 25 ಸಾವಿರವನ್ನು 10 ವರ್ಷಗಳ ಆರ್‌.ಡಿ. ಮಾಡಿ. ಇಬ್ಬರಿಂದ ಸೇರಿಸಿ ₹ 85 ಲಕ್ಷ ಪಡೆಯುವಿರಿ. ಈ ಮೊತ್ತ ನಿಮ್ಮ ಜೀವನದ ಸಂಜೆಗೆ ನೆರವಾಗುತ್ತದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT