ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉಳಿತಾಯ; ದೊಡ್ಡ ಕಡಿತ

Last Updated 7 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಮಂದಗತಿಯ ಆರ್ಥಿಕ ಪ್ರಗತಿ, ಕೋವಿಡ್‌–19 ನಿಯಂತ್ರಣ ಉದ್ದೇಶದ ದಿಗ್ಬಂಧನ ಸಂದರ್ಭದಲ್ಲಿಯೇ ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ವಿವಿಧ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಕನಿಷ್ಠ ಶೇ 0.70 ರಿಂದ ಗರಿಷ್ಠ ಶೇ 1.40ರವರೆಗೆ ಕಡಿತಗೊಳಿಸಲಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಪಿ) ಬಡ್ಡಿ ದರವನ್ನು 2019ರ ಜುಲೈ ನಂತರ ಮೊದಲ ಬಾರಿಗೆ ಇಳಿಸಲಾಗಿದೆ.

ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತಿದೆ. 2012ರಿಂದ ಈ ಪದ್ಧತಿ ಜಾರಿಯಲ್ಲಿ ಇದೆ. ಸರ್ಕಾರಿ ಸಾಲಪತ್ರಗಳ ಆದಾಯ ಆಧರಿಸಿ ಈ ಬಡ್ಡಿ ದರಗಳನ್ನು ನಿಗದಿಪಡಿಸಲಾಗುತ್ತ ಬರಲಾಗಿದೆ. ದರ ಕಡಿತವು ತುಂಬ ದಿನಗಳಿಂದ ಬಾಕಿ ಇತ್ತು.ದರ ಕಡಿತದ ಒತ್ತಡ ಇದ್ದರೂ, ಜನವರಿ – ಮಾರ್ಚ್‌ ತ್ರೈಮಾಸಿಕದಲ್ಲಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. ಗರಿಷ್ಠ ಮಟ್ಟದಲ್ಲಿ ಇರುವ ಬಡ್ಡಿ ದರಗಳಿಂದಾಗಿ ತಮ್ಮ ಠೇವಣಿಗಳ ಮೇಲಿನ ಬಡ್ಡಿ ದರ ಇಳಿಸಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್‌ಗಳು ಆಕ್ಷೇಪ ದಾಖಲಿಸಿದ್ದವು.

ಗಮನಾರ್ಹ ಪ್ರಮಾಣದಲ್ಲಿ ಬಡ್ಡಿ ದರ ಕಡಿತಗೊಂಡಿರುವುದು ಸಣ್ಣ ಹೂಡಿಕೆದಾರರು ಮತ್ತು ಹಿರಿಯ ನಾಗರಿಕರನ್ನು ನಿರುತ್ಸಾಹಗೊಳಿಸಿದೆ. ತಮ್ಮ ಹಣವನ್ನು ಸುರಕ್ಷಿತವಾಗಿ ಗರಿಷ್ಠ ಲಾಭದ ಉದ್ದೇಶಕ್ಕೆ ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಗೊಂದಲ ಬಹುತೇಕ ಸಣ್ಣ ಹೂಡಿಕೆದಾರರಲ್ಲಿ ಮನೆ ಮಾಡಿದೆ. ಕಡಿಮೆ ಬಡ್ಡಿ ದರಗಳಿಂದಾಗಿ ಸಣ್ಣ ಉಳಿತಾಯಗಾರರು ಇನ್ನು ಮುಂದೆ ಕಡಿಮೆ ಬಡ್ಡಿ ಆದಾಯ ಪಡೆಯಬೇಕಾಗುತ್ತದೆ. ಬಡ್ಡಿ ದರಗಳು ಕಡಿಮೆಯಾಗಲಿವೆ ಎನ್ನುವ ನಿರೀಕ್ಷೆ ವ್ಯಾಪಕವಾಗಿತ್ತು. ಆದರೆ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ), ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿ ದರಗಳು ಈ ಮಟ್ಟದಲ್ಲಿ ಕಡಿತಗೊಳ್ಳಲಿವೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ.

ಕೊರೊನಾ ವೈರಸ್‌ ಪಿಡುಗು ವಿಶ್ವದಾದ್ಯಂತ ಸೃಷ್ಟಿಸಿರುವ ಬಿಕ್ಕಟ್ಟಿನ ಕಾರಣಕ್ಕೆ ಎಲ್ಲೆಡೆ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಕಡಿತ ಮಾಡುತ್ತಿವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ಇತ್ತೀಚೆಗಷ್ಟೇ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಗಣನೀಯವಾಗಿ (ಶೇ 0.75) ತಗ್ಗಿಸಿತ್ತು. ಇದರ ಬೆನ್ನಲ್ಲೇ, ವಾಣಿಜ್ಯ ಬ್ಯಾಂಕ್‌ಗಳೂ ಸಾಲ ಮತ್ತು ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ತಗ್ಗಿಸುತ್ತಿವೆ. ಹೀಗಾಗಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳೂ ಕಡಿಮೆಯಾಗುವ ನಿರೀಕ್ಷೆ ಹೆಚ್ಚಿತ್ತು. ಈ ಹಿಂದೆ, ಬ್ಯಾಂಕ್‌ ಠೇವಣಿಗಳಿಗೆ ಹೋಲಿಸಿದರೆ ಸಣ್ಣ ಉಳಿತಾಯ ಯೋಜನೆಗಳು ಹೆಚ್ಚು ಆಕರ್ಷಕವಾಗಿದ್ದವು. ಈಗ ಅವುಗಳ ನಡುವಣ ಅಂತರ ಗಮನಾರ್ಹವಾಗಿ ಕಡಿಮೆಯಾಗಿದೆ.

ಖಾತರಿ ಆದಾಯ ಮತ್ತು ಹೂಡಿಕೆ ಮಾಡಿದ ಹಣದ ಸುರಕ್ಷತೆ ದೃಷ್ಟಿಯಿಂದ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಹೆಚ್ಚು ವಿಶ್ವಾಸಾರ್ಹವಾಗಿವೆ. ಅದರಲ್ಲೂ ಸಾಮಾಜಿಕ ಸುರಕ್ಷತೆಯ ಯೋಜನೆಗಳಾದ ಹಿರಿಯ ನಾಗರಿಕರ ಉಳಿತಾಯ ಯೋಜನೆ, ಹೆಣ್ಣು ಮಗುವಿನ ಸುಕನ್ಯಾ ಸಮೃದ್ಧಿ ಯೋಜನೆಗಳು ಜನಸಾಮಾನ್ಯರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಸಣ್ಣ ಉಳಿತಾಯದ ವಿವಿಧ ಯೋಜನೆಗಳು ಶಿಸ್ತಿನ ಹೂಡಿಕೆ ವಿಧಾನಗಳೂ ಆಗಿವೆ. ನಿವೃತ್ತ ಬದುಕಿನ ಅಗತ್ಯಗಳು, ಮಕ್ಕಳ ಶಿಕ್ಷಣ, ಮದುವೆ ಮತ್ತಿತರ ದೀರ್ಘಾವಧಿಯ ಹಣಕಾಸು ಗುರಿಗಳನ್ನು ತಲುಪಲು ಈ ಯೋಜನೆಗಳು ಹೆಚ್ಚು ಉಪಯುಕ್ತವಾಗಿವೆ. ಇದೇ ಕಾರಣಕ್ಕೆ, ಸಣ್ಣ ಹೂಡಿಕೆದಾರರು ಸಾಧ್ಯವಿರುವಷ್ಟರ ಮಟ್ಟಿಗೆ ಈ ಯೋಜನೆಗಳಲ್ಲಿನ ಹೂಡಿಕೆ ಮುಂದುವರೆಸುವುದೇ ಹೆಚ್ಚು ಸೂಕ್ತ.

‘ಕೋವಿಡ್‌–19’ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯನ್ನು ತೀವ್ರವಾಗಿ ಬಾಧಿಸುತ್ತಿದೆ. ಆರ್ಥಿಕ ಹಿಂಜರಿತ ಸಾಧ್ಯತೆಯನ್ನು ಅಲ್ಲಗಳೆ ಯುವಂತಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಬಡ್ಡಿ ದರ ಕಡಿಮೆಯಾಗಿದ್ದರೂ ನಷ್ಟಕ್ಕೆ ಗುರಿಯಾಗಲು ಇಷ್ಟವಿಲ್ಲದವರು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವುದನ್ನು ಮೊದಲಿ ನಂತಯೇ ಮುಂದುವರೆಸ ಲಿದ್ದಾರೆ ಎಂದು ಹೂಡಿಕೆ ತಜ್ಞರು ಹೇಳುತ್ತಾರೆ.

ಬಡ್ಡಿ ದರ ಕಡಿಮೆ ಮಾಡಿದ್ದರೂ, ಸಣ್ಣ ಉಳಿತಾಯ ಯೋಜನೆಗಳು, ಇತರ ಹೂಡಿಕೆ ಉತ್ಪನ್ನಗಳಿಗೆ ಹೋಲಿಸಿದರೆ ಹೂಡಿಕೆದಾರರ ಪಾಲಿಗೆ ಹೆಚ್ಚು ಆಕರ್ಷಕವಾಗಿಯೇ ಇರಲಿವೆ. ಹೆಚ್ಚು ನಷ್ಟ ಸಾಧ್ಯತೆ ಇರುವ ಹೂಡಿಕೆಗಳಿಂದ ದೂರ ಇರಲು ಬಯಸುವವರು ತಮ್ಮ ದೀರ್ಘಾವಧಿ ಹಣಕಾಸು ಗುರಿಗಳನ್ನು ತಲುಪಲು ಸಣ್ಣ ಉಳಿತಾಯ ಯೋಜನೆಗಳನ್ನೇ ಹೆಚ್ಚಾಗಿ ಅವಲಂಬಿಸಲಿದ್ದಾರೆ.

ಬದಲಾದ ಬಡ್ಡಿ ದರಗಳು ಏಪ್ರಿಲ್‌ನಿಂದ ಹೊಸ ಹೂಡಿಕೆ ಗಳಿಗೆ ಅನ್ವಯವಾಗಲಿವೆ. ಏಪ್ರಿಲ್‌ಗಿಂತ ಮುಂಚಿನ ಎನ್‌ಎಸ್‌ಸಿ, ಎಸ್‌ಸಿಎಸ್‌ಎಸ್‌, ಕಿಸಾನ್‌ ವಿಕಾಸ್‌ ಪತ್ರ ಮತ್ತಿತರ ಯೋಜನೆಗಳು ಇದರಿಂದ ಬಾಧಿತಗೊಳ್ಳುವುದಿಲ್ಲ. ಆದರೆ, ‘ಪಿಪಿಎಫ್‌’ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಇದುವರೆಗೆ ಸಂಗ್ರಹವಾಗಿರುವ ಮೊತ್ತಕ್ಕೆ ಹೊಸ ಬಡ್ಡಿ ಅನ್ವಯವಾಗಲಿದೆ.

ಬಡ್ಡಿ ದರ ಕಡಿತವು ತೀವ್ರ ಸ್ವರೂಪದ್ದಾಗಿದ್ದರೂ, ದೀರ್ಘಾ ವಧಿಯ ಹಲವಾರು ಹಣಕಾಸು ಗುರಿಗಳನ್ನು ತಲುಪಲು ಈ ಯೋಜನೆಗಳಲ್ಲಿಯೇ ಹೂಡಿಕೆಯನ್ನು ನಿರಂತರವಾಗಿ ಮುಂದು ವರೆಸಬಹುದು. ಸದ್ಯದ ಸವಾಲಿನ ಸಂದರ್ಭದಲ್ಲಿ ಸುರಕ್ಷಿತ ಹೂಡಿಕೆಯೇ ಹೆಚ್ಚು ಭರವಸೆದಾಯಕವಾಗಿದೆ. ಉತ್ತಮವಾಗಿ ನಡೆಯುತ್ತಿರುವ ಉದ್ದಿಮೆಗಳೂ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ ಉಳಿತಾಯವನ್ನು ಜೋಪಾನವಾಗಿ ಕಾಯ್ದುಕೊಳ್ಳಲು ಎಚ್ಚರಿಕೆ ವಹಿಸುವುದೇ ಜಾಣತನದ ನಿರ್ಧಾರವಾಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT