ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಕಲಿಸಿದ ಪಾಠ

Last Updated 7 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ವೇತನ ಬರುತ್ತಿತ್ತು, ಅದರಲ್ಲಿ ಒಂದಿಷ್ಟು ಪಾಲು ಮನೆ ಖರ್ಚಿಗೆ, ಇನ್ನೊಂದಿಷ್ಟು ಪಾಲು ಸಾಲ ತೀರಿಸಲು, ಮತ್ತೊಂದಿಷ್ಟು ಪಾಲು ಸಿನಿಮಾ, ಸುತ್ತಾಟ, ಹೊಟೆಲ್ ಊಟ ಇತ್ಯಾದಿ ಮನರಂಜನೆಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು... ಪ್ರತಿ ತಿಂಗಳೂ ಸರಿಯಾಗಿ ಸಿಗುತ್ತಿದ್ದ ವೇತನವೇ ಕಡಿತವಾಗುತ್ತದೆ ಎಂಬ ಆಲೋಚನೆ ಮನಸ್ಸಿನಲ್ಲಿ ಯಾವತ್ತೂ ಸುಳಿದಿರಲಿಲ್ಲ...’

ಇದು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕರಾವಳಿಯ ಯುವಕ ಅಜಯ್ (ಹೆಸರು ಬದಲಾಯಿಸಲಾಗಿದೆ) ಅವರ ಮಾತು. ತಿಂಗಳ ಸಂಬಳವನ್ನು ಶಿಸ್ತಿನಿಂದಲೇ ಖರ್ಚು ಮಾಡುತ್ತಿದ್ದರೂ ಅವರಿಗೆ ಆಪತ್ ಕಾಲಕ್ಕೆ ಒಂದು ನಿಧಿಯನ್ನು ಇಟ್ಟುಕೊಳ್ಳಬೇಕು ಎಂದು ಯಾವತ್ತೂ ಅನಿಸಿರಲಿಲ್ಲ. ಆದರೆ, ಕೋವಿಡ್–19 ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟು ಅವರಿಗೆ ಆ ಪಾಠವನ್ನು ಕಲಿಸಿಕೊಟ್ಟಿದೆ.

ಕೋವಿಡ್–19 ಸಾಂಕ್ರಾಮಿಕವು ದೇಶವನ್ನು ಆವರಿಸುವ ಮೊದಲೂ ವೈಯಕ್ತಿಕ ಹಣಕಾಸು ಸಲಹೆಗಾರರು ‘ಆಪತ್ತಿನ ಸಂದರ್ಭಕ್ಕೆಂದು ಹಣ ಇಟ್ಟುಕೊಂಡಿರಿ’ ಎಂಬ ಸಲಹೆಗಳನ್ನು ನೀಡುತ್ತಿದ್ದರು. ಈಗಲೂ ಅವರು ಅದೇ ಮಾತು ಹೇಳುತ್ತಿದ್ದಾರೆ. ಅವರು ಹೇಳುವ ಮಾತು ಮೊದಲಿಗಿಂತಲೂ ಈಗ ಹೆಚ್ಚು ಅಪ್ಯಾಯಮಾನವಾಗಿ ಕೇಳಿಸುತ್ತಿದೆ!

‘ಕೋವಿಡ್ ಪೂರ್ವದಲ್ಲಿ ನಾವು, ಪ್ರತಿ ವ್ಯಕ್ತಿ ತನ್ನ ಮೂರು ತಿಂಗಳುಗಳ ಖರ್ಚು–ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವಷ್ಟು ಹಣವನ್ನು ಆಪತ್ ಕಾಲದ ಧನದ ರೂಪದಲ್ಲಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದೆವು. ವ್ಯಕ್ತಿ ಉದ್ಯೋಗ ಕಳೆದುಕೊಂಡರೆ ಅಥವಾ ಇನ್ಯಾವುದೋ ಕಾರಣದಿಂದ ಆದಾಯ ಇಲ್ಲದಂತೆ ಆದರೆ, ಹೊಸ ಉದ್ಯೋಗವನ್ನು, ಆದಾಯ ಮೂಲವನ್ನು ಹುಡುಕಿಕೊಳ್ಳಲು ಮೂರು ತಿಂಗಳು ಸಾಕಾಗಬಹುದು ಎಂಬ ಅಂದಾಜಿನಿಂದ ಆ ಸಲಹೆ ನೀಡುತ್ತಿದ್ದೆವು. ಆದರೆ, ಈಗ ನಾವು ಪ್ರತಿ ವ್ಯಕ್ತಿಯೂ ಕನಿಷ್ಠ ಆರು ತಿಂಗಳುಗಳ ಖರ್ಚು–ವೆಚ್ಚಗಳನ್ನು ನಿಭಾಯಿಸಲು ಅಗತ್ಯವಿರುವ ಹಣವನ್ನು ಆಪತ್ ಕಾಲದ ಧನವಾಗಿ ತೆಗೆದಿರಿಸಬೇಕು ಎಂಬ ಸಲಹೆ ನೀಡುತ್ತಿದ್ದೇವೆ’ ಎಂದು ಹೇಳುತ್ತಾರೆ ವೈಯಕ್ತಿಕ ಹಣಕಾಸು ಮತ್ತು ತೆರಿಗೆ ಸಲಹೆ ನೀಡುವ ವಿಶ್ವಾಸ್ ಎನ್. ಪ್ರಭು.

‘ಸಾಧ್ಯವಾದರೆ, ಒಂದು ವರ್ಷಕ್ಕೆ ಸಾಕಾಗುವಷ್ಟು ಹಣವನ್ನು ಪ್ರತ್ಯೇಕವಾಗಿ ತೆಗೆದಿರಿಸಿ ಎಂದೂ ಹೇಳುವುದಿದೆ. ಏಕೆಂದರೆ, ಇಂದಿನ ಸಂಕಷ್ಟದ ಸಂದರ್ಭದಲ್ಲಿ ಮೂರು ತಿಂಗಳಲ್ಲಿ ಹೊಸ ಉದ್ಯೋಗ ಹುಡುಕಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುತ್ತದೆ ಎನ್ನಲಾಗದು. ಆದರೆ, ಒಂದು ವರ್ಷಕ್ಕೆ ಸಾಕಾಗುವಷ್ಟು ಹಣವನ್ನು ಪ್ರತ್ಯೇಕವಾಗಿ ಇರಿಸುವುದು ಎಲ್ಲರಿಗೂ ಆಗಲಿಕ್ಕಿಲ್ಲ’ ಎಂದು ಪ್ರಭು ಹೇಳುತ್ತಾರೆ.

ಆಪತ್ ಕಾಲಕ್ಕೆ ಅಗತ್ಯವಿರುವ ಹಣವನ್ನು ಮಾಮೂಲಿ ಉಳಿತಾಯ ಖಾತೆಯಲ್ಲಿ ಇರಿಸುವುದು ತರವಲ್ಲ. ಆ ಹಣವನ್ನು ನಿಶ್ಚಿತ ಠೇವಣಿಯಾಗಿಯೂ ಇರಿಸಲಾಗದು. ಅದನ್ನು ಲಿಕ್ವಿಡ್ ಮ್ಯೂಚುವಲ್‌ ಫಂಡ್‌ಗಳಲ್ಲಿ ಇರಿಸು ವುದು ಸೂಕ್ತ. ಲಿಕ್ವಿಡ್‌ ಫಂಡ್‌ಗಳು ಹಣಕ್ಕೆ ಉಳಿತಾಯ ಖಾತೆಗಿಂತ ತುಸು ಹೆಚ್ಚಿನ ಬಡ್ಡಿ ನೀಡುತ್ತವೆ. ಹಣವನ್ನು ಯಾವಾಗ ಬೇಕಿದ್ದರೂ ಹಿಂಪಡೆಯಬಹುದು. ಆಪತ್ ಕಾಲಕ್ಕೆಂದು ನಿಧಿ ಇಲ್ಲದಿದ್ದರೆ, ಉಳಿತಾಯದ ಹಣ ಕರಗಿಸಬೇಕಾಗುತ್ತದೆ.

ಪೇಟಿಎಂ ಮನಿ, ಫೋನ್‌ಪೆ ತರಹದ ಹೊಸ ಕಾಲದ ಹಣಕಾಸು ನಿರ್ವಹಣಾ ಆ್ಯಪ್‌ ಬಳಸಿ ಕೂಡ ಲಿಕ್ವಿಡ್ ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ಇರಿಸಬಹುದು.

ಈ ಮಾತುಗಳು ನೆನಪಿನಲ್ಲಿರಲಿ

ಆರು ತಿಂಗಳ ಖರ್ಚು ನಿಭಾಯಿಸಲು ಬೇಕಿರುವಷ್ಟು ಹಣ ಪ್ರತ್ಯೇಕವಾಗಿ ತೆಗೆದಿರಿಸಿ

ಸಾಧ್ಯವಾದರೆ ಈ ಹಣವನ್ನು ಲಿಕ್ವಿಡ್ ಮ್ಯೂಚುವಲ್‌ ಫಂಡ್‌ಗಳಲ್ಲಿ ಇರಿಸಿ

ಕಷ್ಟಕಾಲಕ್ಕೆಂದು ಹಣ ಇರಿಸದಿದ್ದರೆ ಉಳಿತಾಯ ಕರಗಿ ನೀರಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT