ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಸರ್ವಕಾಲಕ್ಕೂ ಸಲ್ಲುವ ‘ವ್ಯಾಲ್ಯೂ ಇನ್ವೆಸ್ಟಿಂಗ್’

Last Updated 31 ಜುಲೈ 2022, 21:15 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಕೆಲವು ಉತ್ತಮ ಕಂಪನಿಗಳ ಷೇರುಗಳು ಎಲೆಮರೆಯ ಕಾಯಿಗಳಂತೆ ಇರುತ್ತವೆ. ಅವುಗಳ ಆಂತರಿಕ ಮೌಲ್ಯ ಹೆಚ್ಚಿಗೆ ಇದ್ದರೂ ಷೇರು ಮಾರುಕಟ್ಟೆಯಲ್ಲಿ ಅವುಗಳಿಗೆ ಸಿಗಬೇಕಾದ ಮೌಲ್ಯ ಸಿಕ್ಕಿರುವುದಿಲ್ಲ. ವಾಸ್ತವದಲ್ಲಿ ಇರಬೇಕಾದ ಮೌಲ್ಯಕ್ಕಿಂತ ಕಡಿಮೆ ಮೌಲ್ಯವನ್ನು ಆ ಷೇರುಗಳು ಹೊಂದಿರುತ್ತವೆ. ಅಂತಹ ಷೇರುಗಳನ್ನು ಆಯ್ದು ಹೂಡಿಕೆ ಮಾಡುವುದು ‘ವ್ಯಾಲ್ಯೂ ಇನ್ವೆಸ್ಟಿಂಗ್’.

ಇತ್ತೀಚಿನ ಮಾರುಕಟ್ಟೆ ಏರಿಳಿತಗಳ ನಡುವೆಯೂಉತ್ತಮ ಆಂತರಿಕ ಮೌಲ್ಯ ಹೊಂದಿರುವ ಕೆಲವು ಕಂಪನಿಗಳ ಷೇರುಗಳು ಹೂಡಿಕೆದಾರರಿಗೆ ಒಳ್ಳೆಯ ಲಾಭ ತಂದುಕೊಟ್ಟಿವೆ. ‘ವ್ಯಾಲ್ಯೂ ಇನ್ವೆಸ್ಟಿಂಗ್’ ಬಗ್ಗೆ ಒಂದಿಷ್ಟು ಕಲಿಯಲು ಇದೊಂದು ಸಂದರ್ಭ.

‘ವ್ಯಾಲ್ಯೂ ಇನ್ವೆಸ್ಟಿಂಗ್’ನ ಹುಟ್ಟು: ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಹೂಡಿಕೆದಾರ ಬೆಂಜಮಿನ್ ಗ್ರಹಾಂ 1920ರಲ್ಲಿ ‘ವ್ಯಾಲ್ಯೂ ಇನ್ವೆಸ್ಟಿಂಗ್’ (ಅಂದರೆ ‘ಮೌಲ್ಯ ಆಧಾರಿತ ಹೂಡಿಕೆ’) ಎಂಬ ಹೊಸ ವಿಧಾನ ಹುಟ್ಟುಹಾಕಿದರು. ಒಂದು ಶತಮಾನದ ಬಳಿಕವೂ ಬೆಂಜಮಿನ್ ಗ್ರಹಾಂ ತತ್ವಗಳು ಹೂಡಿಕೆದಾರರಿಗೆ ಪ್ರಸ್ತುತವಾಗಿವೆ. ಜಗತ್ತಿನ ಶ್ರೀಮಂತ ಹೂಡಿಕೆದಾರ ವಾರನ್ ಬಫೆಟ್ ಸಂಪತ್ತು ಸೃಷ್ಟಿಸಿದ್ದು ಕೂಡ ಇದೇ ‘ವ್ಯಾಲ್ಯೂ ಇನ್ವೆಸ್ಟಿಂಗ್’ ಮೂಲಕ.

ಮೌಲ್ಯ ಆಧಾರಿತ ಹೂಡಿಕೆ ಅಂದರೆ?: ಉದಾಹರಣೆಗೆ ₹ 1,000 ಆಂತರಿಕ ಮೌಲ್ಯ (Intrinsic Value) ಹೊಂದಿರುವ ಷೇರಿನ ಬೆಲೆ ಇಂದು ₹ 400 ಇದ್ದು, ಅದನ್ನು ನೀವು ಇಂದು ಖರೀದಿಸಿದಿರಿ ಎಂದಿಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಆ ಷೇರಿನ ಬೆಲೆ ₹ 1,000 ಆದಾಗ ನಿಮಗೆ ₹ 600 ಲಾಭವಾಗುತ್ತದೆ. ಹೀಗೆ ಕಡಿಮೆ ಬಂಡವಾಳ ಹೂಡಿಕೆ ಮಾಡಿ, ದೀರ್ಘಾವಧಿಯಲ್ಲಿ ಹೆಚ್ಚು ಲಾಭ ಗಳಿಸುವ ತತ್ವ ‘ಮೌಲ್ಯ ಆಧಾರಿತ ಹೂಡಿಕೆ’. ಸರಳವಾಗಿ ಹೇಳುವುದಾದರೆ ಷೇರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತಿರುವ ಅತ್ಯುತ್ತಮ ಕಂಪನಿಗಳ ಷೇರುಗಳನ್ನು ಹುಡುಕಿ ಹಣ ತೊಡಗಿಸುವ ಪ್ರಕ್ರಿಯೆಯನ್ನು ಮೌಲ್ಯ ಆಧಾರಿತ ಹೂಡಿಕೆ ಎನ್ನಬಹುದು.

ಅತ್ಯುತ್ತಮ ಕಂಪನಿಯೊಂದರ ಷೇರನ್ನು ಗುರುತಿಸಿ ಕಡಿಮೆ ಬೆಲೆಗೆ ಅದನ್ನು ಖರೀದಿಸಿದ್ದೀರಿ ಎಂದಮೇಲೆ ಮುಂದೊಂದು ದಿನ ಆ ಷೇರಿನ ಬೆಲೆ ಏರಿಕೆಯಾಗಲೇಬೇಕಲ್ಲವೇ? ಷೇರಿನ ಬೆಲೆ ಜಿಗಿದಾಗ ನೀವು ಹೂಡಿಕೆ ಮಾಡಿದ್ದ ಕಡಿಮೆ ಬಂಡವಾಳಕ್ಕೆ ಹೆಚ್ಚು ಲಾಭ ಸಿಗುತ್ತದೆಯಲ್ಲವೇ? ಇದೇ ವ್ಯಾಲ್ಯೂ ಇನ್ವೆಸ್ಟಿಂಗ್‌ನ ಜಾದೂ.

ಆದರೆ ವ್ಯಾಲ್ಯೂಇನ್ವೆಸ್ಟಿಂಗ್‌ಗಾಗಿ ಉತ್ತಮ ಷೇರುಗಳನ್ನು ಹುಡುಕುವುದು ಸುಲಭದ ಮಾತಲ್ಲ. ಕಂಪನಿಯ ಆರ್ಥಿಕ ಸ್ಥಿತಿಗತಿ ಮತ್ತು ಭವಿಷ್ಯದ ಮುನ್ನೋಟ (Fundamental Analysis) ಆಧರಿಸಿ ನಿರ್ಧರಿಸಬೇಕಾಗುತ್ತದೆ.

ಊಹೆ ಅಲ್ಲ: ‘ಸಮಗ್ರ ಅಧ್ಯಯನ ಮತ್ತು ವಿಶ್ಲೇಷಣೆಯ ನಂತರ ಅಸಲು ಮತ್ತು ನಿರ್ದಿಷ್ಟ ಲಾಭಾಂಶದ ಸುರಕ್ಷತೆಯನ್ನು ಖಾತರಿಪಡಿಸುವ ಹಣಕಾಸು ಉತ್ಪನ್ನವನ್ನು ಮಾತ್ರ ಹೂಡಿಕೆ ಎಂದು ಪರಿಗಣಿಸಬಹುದು. ಯಾವ ಹೂಡಿಕೆಯು ಅಸಲು ಮತ್ತು ಲಾಭಾಂಶವನ್ನು ಖಾತರಿಪಡಿಸುವುದಿಲ್ಲವೋ ಅದು ಊಹಾತ್ಮಕ ಹೂಡಿಕೆ’ ಎಂದು ಬೆಂಜಮಿನ್ ಗ್ರಹಾಂ ಹೇಳಿದ್ದಾರೆ. ಹಾಗಾಗಿ ಕಡಿಮೆ ಬೆಲೆಗೆ ಸಿಗುತ್ತವೆ ಎಂಬ ಒಂದೇ ಕಾರಣಕ್ಕೆ, ಒಳ್ಳೆಯ ಆಂತರಿಕ ಮೌಲ್ಯ ಹೊಂದಿರದ ಕಂಪನಿಗಳ ಷೇರುಗಳನ್ನು ಖರೀದಿಸಿದರೆ ನಷ್ಟ ಬಹುತೇಕ ಖಚಿತ.

ಹುಡುಕುವುದು ಹೇಗೆ?: ಒಳ್ಳೆಯ ಮೌಲ್ಯ ಹೊಂದಿರಬಹುದಾಗಿದ್ದರೂ ಷೇರುಪೇಟೆಯಲ್ಲಿ ಬಹಳ ಕಡಿಮೆ ದರಕ್ಕೆ ಸಿಗುತ್ತಿರುವ ಷೇರುಗಳನ್ನು ಪತ್ತೆ ಮಾಡಲು ಹಲವು ಅನುಪಾತಗಳನ್ನು ಬಳಸಲಾಗುತ್ತದೆ. ಫ್ರೈಸ್ ಟು ಅರ್ನಿಂಗ್ಸ್ ರೇಷಿಯೊ, ಪ್ರೈಸ್ ಅರ್ನಿಂಗ್ಸ್ ಟು ಗ್ರೋಥ್ ರೇಷಿಯೊ, ಪ್ರೈಸ್ ಟು ಬುಕ್ ರೇಷಿಯೊ, ಡಿವಿಡೆಂಡ್ ಯೀಲ್ಡ್ ರೇಷಿಯೊ, ಡೆಟ್ ಟು ಈಕ್ವಿಟಿ ರೇಷಿಯೊ, ರಿಟರ್ನ್ ಆನ್ ಈಕ್ವಿಟಿ ರೇಷಿಯೊ, ಪ್ರೈಸ್ ಟು ಸೇಲ್ಸ್ ಹೀಗೆ ಹಲವು ಅನುಪಾತಗಳು ಮೌಲ್ಯ ಆಧಾರಿತ ಹೂಡಿಕೆಗೆ ಷೇರುಗಳನ್ನು ಗುರುತಿಸಲು ನೆರವಿಗೆ ಬರುತ್ತವೆ. ಪ್ರತಿ ಅನುಪಾತವನ್ನು ಅರ್ಥ ಮಾಡಿಕೊಂಡು ಮುಂದುವರಿದಾಗ ನಿರ್ದಿಷ್ಟ ಷೇರಿನ ಭವಿಷ್ಯದ ಬಗ್ಗೆ ನಿಮ್ಮ ಲೆಕ್ಕಾಚಾರ ನಿಖರವಾಗುತ್ತದೆ.

ವಾಸ್ತವದಲ್ಲಿ ಹೊಂದಿರಬೇಕಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯ ಹೊಂದಿರುವ ಷೇರುಗಳನ್ನು ‘ಓವರ್ ವ್ಯಾಲ್ಯೂಡ್’ ಎಂದು ಗುರುತಿಸಲಾಗುತ್ತದೆ. ವಾಸ್ತವದಲ್ಲಿ ಹೊಂದಿರಬೇಕಾದ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ಹೊಂದಿರುವ ಷೇರುಗಳು ‘ಅಂಡರ್ ವ್ಯಾಲ್ಯೂಡ್’ ಎಂದು ಪರಿಗಣಿತವಾಗುತ್ತವೆ. ಷೇರು ಹೂಡಿಕೆ ಮಾಡುವಾಗ ಅಂಡರ್ ವ್ಯಾಲ್ಯೂಡ್ ಷೇರುಗಳಿಗೆ ಆದ್ಯತೆ ಕೊಡಬೇಕು.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT