ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಪ್ರಶ್ನೋತ್ತರ: ಫ್ಲ್ಯಾಟ್ ಮಾರಾಟದಿಂದ ನನಗೆ ತೆರಿಗೆ ಎಷ್ಟು ಬರಬಹುದು?

Published : 26 ಆಗಸ್ಟ್ 2025, 23:22 IST
Last Updated : 26 ಆಗಸ್ಟ್ 2025, 23:22 IST
ಫಾಲೋ ಮಾಡಿ
Comments
ಪ್ರ

ನಾನು ಸುಮಾರು ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದೆ. ಈಗ ಅದರ ಮೌಲ್ಯ ದ್ವಿಗುಣಗೊಂಡಿದೆ. ನಾನು ಅದನ್ನು ಮಾರಾಟ ಮಾಡಿ ಬರುವ ಹಣದಲ್ಲಿ ಅರ್ಧದಷ್ಟನ್ನು ಸ್ವಂತ ಉದ್ಯೋಗಕ್ಕೆ ಬಳಕೆ ಮಾಡಬೇಕೆಂದಿದ್ದೇನೆ. ಇನ್ನುಳಿದ ಮೊತ್ತವನ್ನು ಸ್ವಂತ ಖರ್ಚು–ವೆಚ್ಚ, ಹೂಡಿಕೆಗೆ ಬಳಸಬೇಕೆಂದಿದ್ದೇನೆ. ನನ್ನ ಸ್ವಂತ ಉದ್ಯೋಗ ವೃದ್ಧಿ ಆಗುವವರೆಗೂ ನಾನು ಬಾಡಿಗೆ ಮನೆಯಲ್ಲಿ ಇರಬೇಕೆಂದಿದ್ದೇನೆ. ನನ್ನ ಪ್ರಶ್ನೆ ಏನೆಂದರೆ, ಈ ಫ್ಲ್ಯಾಟ್ ಮಾರಾಟದಿಂದ ನನಗೆ ತೆರಿಗೆ ಎಷ್ಟು ಬರಬಹುದು? ತೆರಿಗೆ ಉಳಿತಾಯ ಅವಕಾಶ ಇದೆಯೇ?

ನೀವು ಹತ್ತು ವರ್ಷಗಳ ಹಿಂದೆ ಖರೀದಿಸಿದ ಫ್ಲ್ಯಾಟ್ ಅನ್ನು ಈಗ ಮಾರಾಟ ಮಾಡಿದರೆ ಅದನ್ನು ದೀರ್ಘಾವಧಿ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. 2024ರ ಜುಲೈ 23ರ ನಂತರದ ಹೊಸ ನಿಯಮದ ಪ್ರಕಾರ ಇಂತಹ ಸ್ಥಿರ ಆಸ್ತಿಗಳ ಮಾರಾಟದಿಂದ ಬರುವ ಲಾಭಕ್ಕೆ ಎರಡು ವಿಧಾನಗಳಲ್ಲಿ ತೆರಿಗೆ ನಿರ್ಣಯಿಸಬಹುದು, ನಮಗೆ ಲಾಭದಾಯಕ ವಿಧಾನವನ್ನು ಆಯ್ಕೆ ಮಾಡಬಹುದು. ಒಂದೆಡೆ, ಶೇ 12.5ರ ನಿಗದಿತ ದರದಲ್ಲಿ ಇಂಡೆಕ್ಸೇಷನ್ ಲಾಭವಿಲ್ಲದೆ ಮಾರಾಟ ಮೌಲ್ಯ ಹಾಗೂ ಖರೀದಿ ಮೌಲ್ಯದ ಅಂತರದ (ಲಾಭ) ಮೇಲೆ ತೆರಿಗೆ ಕಟ್ಟುವುದು. ಮತ್ತೊಂದು, ಹಳೆಯ ನಿಯಮವನ್ನು ಅನುಸರಿಸಿ ಶೇ 20ರ ದರದಲ್ಲಿ ಇಂಡೆಕ್ಸೇಷನ್ ಲಾಭ ಪರಿಗಣಿಸಿ ತೆರಿಗೆ ಕಟ್ಟುವುದು. ಯಾವ ವಿಧಾನದಲ್ಲಿ ತೆರಿಗೆ ಕಡಿಮೆ ಬರುತ್ತದೋ ಅದನ್ನು ಆಯ್ಕೆ ಮಾಡುವ ಅವಕಾಶ ಇದೆ. ನಿಮ್ಮ ಹೂಡಿಕೆ ಹತ್ತು ವರ್ಷಗಳ ಹಿಂದಿನದಾದ್ದರಿಂದ ಇಂಡೆಕ್ಸೇಷನ್ ಪ್ರಯೋಜನ ಪಡೆಯುವುದು ಲಾಭದಾಯಕ ಆಗಬಹುದು. ಇದಕ್ಕಾಗಿ ಲೆಕ್ಕ ಹಾಕಿ ನೋಡಿದ ಮೇಲೆ ಕಡಿಮೆ ತೆರಿಗೆ ನೀಡುವ ವಿಧಾನವನ್ನು ಆಯ್ಕೆ ಮಾಡುವುದು ಸೂಕ್ತ.

ತೆರಿಗೆ ಉಳಿತಾಯಕ್ಕೂ ಅವಕಾಶಗಳಿವೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ಪ್ರಕಾರ ಫ್ಲ್ಯಾಟ್ ಮಾರಾಟದಿಂದ ಬಂದ ಲಾಭವನ್ನು ಮತ್ತೆ ಇನ್ನೊಂದು ಮನೆ ಖರೀದಿಸಲು ಅಥವಾ ಕಟ್ಟಿಸಲು ಬಳಸಿದರೆ ಲಾಭದ ಅಷ್ಟೂ ತೆರಿಗೆ ವಿನಾಯಿತಿ ದೊರೆಯುತ್ತದೆ. ಅದೇ ರೀತಿ ಸೆಕ್ಷನ್ 54ಇಸಿ ಅಡಿಯಲ್ಲಿ ಅಧಿಕೃತ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೂ ದೀರ್ಘಾವಧಿ ಲಾಭದ ಮೇಲಿನ ತೆರಿಗೆ ತಗ್ಗಿಸಬಹುದು. ಹೀಗಾಗಿ ಸ್ವಂತ ಉದ್ಯೋಗಕ್ಕಾಗಿ ಅರ್ಧ ಮೊತ್ತ ಬಳಸಿಕೊಂಡು ಉಳಿದ ಅರ್ಧ ಮೊತ್ತವನ್ನು ಹೊಸ ಮನೆ ಅಥವಾ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಹೊರೆ ಕಡಿಮೆ ಮಾಡಬಹುದು. ನಿಖರ ಲೆಕ್ಕಾಚಾರಕ್ಕಾಗಿ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಪ್ರ

ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ವೇತನದಿಂದ ತೆರಿಗೆ ಕಡಿತ ಮಾಡಲಾಗಿತ್ತು. ಆದರೆ ಕಂಪನಿಯು ಆ ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸುವ ಮೊದಲು ನಾನು 2012-13ರಲ್ಲಿ ₹32,622 ಹೊಣೆಗಾರಿಕೆಯೊಂದಿಗೆ ಆದಾಯ ತೆರಿಗೆ ವಿವರ ಸಲ್ಲಿಸಿದ್ದೆ. ನಂತರ, ಕಂಪನಿಯು ಟಿಡಿಎಸ್‌ ಮೊತ್ತ ಪಾವತಿಸಿಲ್ಲ ಮತ್ತು ಪ್ರಸ್ತುತ ಆ ಕಂಪನಿಯು ಅಸ್ತಿತ್ವದಲ್ಲಿಲ್ಲ.

2022ರ ಡಿಸೆಂಬರ್‌ನಲ್ಲಿ ಆದಾಯ ತೆರಿಗೆ ಇಲಾಖೆಯಿಂದ ₹48,170 ಪಾವತಿಸಲು ಸೂಚನೆಯು ನನಗೆ ಬಂತು. ನಾನು ಲೆಕ್ಕಪರಿಶೋಧಕರೊಂದಿಗೆ ಪರಿಶೀಲಿಸಿದಾಗ, ಅದು ಮೊದಲ ಸೂಚನೆಯಾಗಿರುವುದರಿಂದ ಅವರು ಅದನ್ನು ನಿರ್ಲಕ್ಷಿಸಲು ಹೇಳಿದರು. ಆದರೆ, ಆದಾಯ ತೆರಿಗೆ ಪೋರ್ಟಲ್‌ನಲ್ಲಿ, ಇದನ್ನು 2016ರಲ್ಲಿ ನೀಡಲಾದ ಟಿಪ್ಪಣಿ ಎಂದು ಉಲ್ಲೇಖಿಸಲಾಗಿದೆ. ಬಡ್ಡಿ ಸಹಿತ ಪ್ರಸ್ತುತ ಬೇಡಿಕೆಯು ₹99 ಸಾವಿರ ಆಗಿದೆ. ಏನು ಮಾಡಬಹುದು ಎಂಬುದನ್ನು ಸೂಚಿಸಬಹುದೇ? ಕಂಪನಿಯು ಈಗ ಅಸ್ತಿತ್ವದಲ್ಲಿಲ್ಲದ ಕಾರಣ ನಾನು ₹32,622 ತೆರಿಗೆ ಮೊತ್ತವನ್ನು ಪಾವತಿಸಲು ಸಿದ್ಧನಿದ್ದೇನೆ.

ನಿಮ್ಮ ಸಮಸ್ಯೆಯನ್ನು ವಿವಿಧ ಆಯಾಮಗಳಲ್ಲಿ ನೋಡಬೇಕಾಗುತ್ತದೆ. ಇಲ್ಲಿ ನಿಮ್ಮ ಹಿಂದಿನ ಕಂಪನಿಯ ಆರ್ಥಿಕ ಸಮಸ್ಯೆ, ಬಂದಿದ್ದ ನೋಟಿಸ್‌ಗೆ ತಕ್ಷಣ ಉತ್ತರಿಸದೆ ಇದ್ದಿದ್ದು, ಸರಿಯಾದ ತೆರಿಗೆ ನಿರ್ಣಯ ಎಷ್ಟೆಂದು ತಿಳಿಯಬೇಕಾದ ವಿಚಾರಗಳ ಸುತ್ತ ಸಮಸ್ಯೆ ಇದೆ. ತೆರಿಗೆ ಒಂದು ಬಾರಿ ಪಾವತಿಯಾದರೆ ಅದೇ ವರ್ಷಕ್ಕೆ ಸಂಬಂಧಿಸಿ ಮತ್ತೆ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ನಿಮ್ಮ ವಿಚಾರದಲ್ಲಿ ಹಿಂದಿನ ವರ್ಷದಲ್ಲಿ ವಿವರ ಸಲ್ಲಿಕೆಯಾಗಿದೆ. ಆದರೆ ನೀವೇ ತಿಳಿಸಿರುವಂತೆ, ತೆರಿಗೆ ಪಾವತಿ ಆಗಿಲ್ಲ. ಹೀಗಾಗಿ ನಿಮ್ಮ ವಿವರ ಸಲ್ಲಿಕೆ ಆಗಿದ್ದರೂ, ತೆರಿಗೆ ಸಂಪೂರ್ಣ ಪಾವತಿ ಆಗದ ಹೊರತು, ಮೇಲ್ನೋಟಕ್ಕೆ ಅದು ಸಮರ್ಪಕ ಎಂದು ಪರಿಗಣಿಸಲು ಅವಕಾಶ ಇಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139(9)ರ ವಿವರಣೆಯಂತೆ, ತೆರಿಗೆ ಬಾಕಿ ಉಳಿಸಿ ವಿವರ ಸಲ್ಲಿಸಿದಾಗ ಅದು 15 ದಿನದೊಳಗೆ ಅಥವಾ ಸಂಬಂಧಿತ ತೆರಿಗೆ ಅಧಿಕಾರಿಗಳು ನೀಡುವ ಸಮಯಾವಕಾಶದೊಳಗೆ ಲೋಪಗಳನ್ನು ಸರಿಮಾಡದಿದ್ದಾಗಲೂ ಸಲ್ಲಿಕೆಯಾದ ವಿವರ ಅಮಾನ್ಯವಾಗುತ್ತದೆ. ನಿಮಗೂ ಇಂತಹ ನೋಟಿಸ್ ಬಂದಿರಬಹುದಾದ ಸಾಧ್ಯತೆ ಇದೆ. ಆದರೆ ಇದು ನಿಮ್ಮ ಗಮನಕ್ಕೆ ಬಂದಿರದೆ, ಸಮಸ್ಯೆ ಮುಂದುವರಿದಂತಿದೆ.

ಈ ವಿಚಾರವಾಗಿ ನಿಮ್ಮ ಆದಾಯ ತೆರಿಗೆ ಪ್ಯಾನ್ ಖಾತೆಯ ವಿವರದೊಂದಿಗೆ, ನುರಿತ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ. ಆದಾಯ ತೆರಿಗೆಯ ಪೋರ್ಟಲ್‌ನಲ್ಲಿ ನಿಮ್ಮ ಹೆಸರಲ್ಲಿ ಈಗಾಗಲೇ ಇರುವ ನೋಟಿಸ್ ಹಾಗೂ ಅವು ಯಾವ ಸೆಕ್ಷನ್ ಅಡಿ, ಯಾವ ಕಾರಣಕ್ಕಾಗಿ ಜಾರಿ ಮಾಡಲಾಗಿದೆ ಎನ್ನುವುದನ್ನು ಮೊದಲ ಹಂತದಲ್ಲಿ ವಿಶ್ಲೇಷಿಸಬೇಕು. ಆನ್‌ಲೈನ್ ಮೂಲಕ ಸಾಧ್ಯವಾಗದಿದ್ದ ಸಂದರ್ಭದಲ್ಲಿ, ಸೂಕ್ತ ಸಲಹೆ ಪಡೆದು, ನಿಮ್ಮ ಪೂರ್ವ ಮಾಹಿತಿಯನ್ನು ಸಂಬಂಧಿತ ಇಲಾಖಾ ವಿಭಾಗಕ್ಕೆ ಲಿಖಿತ ರೂಪದಲ್ಲಿ ಸಲ್ಲಿಸಬೇಕಾಗುತ್ತದೆ. ಇದರ ವಿಲೇವಾರಿಗೆ ನಂತರದ ಹಂತದಲ್ಲಿ ಅವರ ಸಲಹೆ ಸೂಚನೆಗಳೂ ಮುಖ್ಯ. ಇನ್ನು ಬಡ್ಡಿಯ ವಿಚಾರವಾಗಿ ಹೇಳುವುದಾದರೆ, ಯಾವುದೇ ತೆರಿಗೆ ಕಡಿತ, ಸಕಾಲಿಕ ಮುಂಗಡ ತೆರಿಗೆ ಪಾವತಿಸದೇ ತೆರಿಗೆ ಉಳಿದಾಗ, ಬಡ್ಡಿಯೂ ಅನ್ವಯಿಸುತ್ತದೆ. ಇದರ ಪಾವತಿಗೆ ಅಧಿಕ ಕಾಲಾವಕಾಶ ಪಡೆದಂತೆ ಬಡ್ಡಿ ಸೇರುತ್ತಾ ಹೋಗುತ್ತದೆ.

ತೆರಿಗೆ ಪಾವತಿಸದೆ ಯಾವುದೇ ಕಂಪನಿಯನ್ನು ಮುಚ್ಚುವ ಸಂದರ್ಭ ಬಂದಾಗ ಕೆಲವೆಲ್ಲ ಪಾವತಿಗಳನ್ನು ಸಂಬಂಧಿತ ಲಿಕ್ವಿಡೇಟರ್‌ಗಳು ಕಾನೂನಿನ ಪ್ರಕಾರ ಆದ್ಯತೆಯ ಮೇರೆಗೆ ವಿಲೇವಾರಿ ಮಾಡಬೇಕಾಗಿರುತ್ತದೆ. ಉದಾಹರಣೆಗೆ, ಕಾರ್ಮಿಕರ ವೇತನ, ಭದ್ರತೆಯುಳ್ಳ ಬ್ಯಾ೦ಕ್ ಸಾಲ, ಇತರ ವರ್ಗದ ವೇತನ, ಕಂಪನಿಯ ಇತರೆ ಸಾಲಗಾರರ ಪಾವತಿ, ತದನಂತರ ಸರ್ಕಾರಕ್ಕೆ ಪಾವತಿಸಬೇಕಾದ ಹಣ, ಕೊನೆಗೆ ಹಣ ಉಳಿದರೆ ಷೇರುದಾರರಿಗೆ, ಹೀಗೆ ಅದರ ಆದ್ಯತೆ ಇರುತ್ತದೆ. ಹೀಗಾಗಿ ನಿಮ್ಮ ತೆರಿಗೆ ಮೊತ್ತ ಕಂಪನಿ ಕಡೆಯಿಂದ ಪಾವತಿ ಆಗದಿರುವ ಸಾಧ್ಯತೆಯೇ ಹೆಚ್ಚು ಹಾಗೂ ಪ್ರಸ್ತುತ ಆ ಸಂಸ್ಥೆ ಮುಚ್ಚಿರುವ ಕಾರಣ ಏನನ್ನೂ ಮಾಡಲಾಗದು. ಹೀಗಾಗಿ, ಪೂರ್ಣ ಮಾಹಿತಿಯೊಡನೆ, ಆದ್ಯತೆಯ ಮೇರೆಗೆ ಹೆಚ್ಚುವರಿ ಸಲಹೆ ಪಡೆದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT