ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಪ್ರಶ್ನೋತ್ತರ | ಹಣಕಾಸು ಹೂಡಿಕೆ, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Published : 7 ಜನವರಿ 2025, 23:21 IST
Last Updated : 7 ಜನವರಿ 2025, 23:21 IST
ಫಾಲೋ ಮಾಡಿ
Comments
ಹಣಕಾಸು ಹೂಡಿಕೆ, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ
ಪ್ರ

ಪ್ರಶ್ನೆ: ನಾನು ಮಾಜಿ ಸೈನಿಕ. ಮಾಸಿಕ ₹33 ಸಾವಿರ ಪಿಂಚಣಿ ಪಡೆಯುತ್ತಿದ್ದೇನೆ. ಪ್ರಸ್ತುತ ಸರ್ಕಾರಿ ಉದ್ಯೋಗ ಹೊಂದಿದ್ದೇನೆ. ಇದರಿಂದ ಮಾಸಿಕ ವೇತನವಾಗಿ ₹43 ಸಾವಿರ ಬರುತ್ತಿದೆ. ದಯವಿಟ್ಟು ನನಗೆ ಮ್ಯೂಚುಯಲ್ ಫಂಡ್ ಮತ್ತು ಇತರೆ ಉತ್ತಮ ಹೂಡಿಕೆ ಅವಕಾಶಗಳ ಬಗ್ಗೆ ಸಲಹೆ ನೀಡಿ.

ಬಸವರಾಜ ಎಲ್., ಭದ್ರಾವತಿ, ಶಿವಮೊಗ್ಗ ಜಿಲ್ಲೆ.

ಪ್ರಸ್ತುತ ನೀವು ಪಿಂಚಣಿ ಹಾಗೂ ಮಾಸಿಕ ವೇತನದಿಂದ ಒಟ್ಟಾರೆ ₹76 ಸಾವಿರ ಆದಾಯ ಗಳಿಸುತ್ತಿ ದ್ದೀರಿ. ನಿಮ್ಮ ಆದಾಯದ ಎಷ್ಟು ಪ್ರಮಾಣವನ್ನು ನೀವು ನಿಮ್ಮ ಉದ್ದೇಶಿತ ಹೂಡಿಕೆಗೆ ಪ್ರತ್ಯೇಕಿಸಿ ಇಡಲು ಸಾಧ್ಯ ಎನ್ನುವುದನ್ನು ಮೊದಲು ನಿರ್ಧರಿಸಿ. ಉದಾಹರಣೆಗೆ ನಿಮ್ಮ ವೈದ್ಯಕೀಯ ವೆಚ್ಚ, ವಿಮಾ ವೆಚ್ಚ, ಮಕ್ಕಳ ವಿದ್ಯಾಭ್ಯಾಸದ ವೆಚ್ಚ, ಮನೆ ನಿರ್ವಹಣೆ, ಇತರೆ ಯಾವುದೇ ವೆಚ್ಚ ಇದ್ದರೂ ಅದನ್ನು ಕಳೆದು ಉಳಿದ ಮೊತ್ತ ಏನೆಂಬುದನ್ನು ನಿರ್ಧರಿಸಿ. ಆ ಉಳಿದ ಮೊತ್ತವನ್ನು ಹೂಡಿಕೆಗೆ ಉಪಯೋಗಿಸಿ.

ಮುಂದಿನ ಕೆಲವು ವರ್ಷ ನೀವು ಹೂಡಿಕೆ ಮಾಡುವ ಮೊತ್ತವನ್ನು ಬೆಳೆಸುವ ಉದ್ದೇಶ ಹೊಂದಿರುವ ಕಾರಣ, ಸದ್ಯದ ಕೆಲವು ವರ್ಷ ನಿಮ್ಮ ದಿನವಹಿ ಅಗತ್ಯಕ್ಕೆ ಅದರ ಅಗತ್ಯ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ, ಮ್ಯೂಚುಯಲ್ ಫಂಡ್‌ಗಳಲ್ಲಿ ದೀರ್ಘಾವಧಿ ಸಮಯಕ್ಕೆ ಹೂಡಿಕೆ ಮಾಡಿದಾಗಲೇ ಸಾಮಾನ್ಯ ಹೂಡಿಕೆಗಳಾದ ಬ್ಯಾಂಕ್ ಎಫ್‌.ಡಿಗಿಂತ ಹೆಚ್ಚಿನ ಲಾಭ ಬರುತ್ತದೆ.

ನೀವು ಈಗಾಗಲೇ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ನಿರ್ಣಯಿಸಿದ್ದೀರಿ. ಅಲ್ಲದೆ, ಇತರೆ ಹೂಡಿಕೆಗಳಲ್ಲೂ ಆಸಕ್ತಿ ಹೊಂದಿದ್ದೀರಿ. ನಿಮ್ಮ ನಿವೃತ್ತಿಗಾಗಿ ಒಂದಿಷ್ಟು ಮೊತ್ತವನ್ನು ಪಿಂಚಣಿ ಫಂಡ್‌ಗಳಲ್ಲಿ ತೊಡಗಿಸಿ. ಉತ್ತಮ ಕಂಪನಿಯ ಷೇರುಗಳನ್ನು ಮಾರುಕಟ್ಟೆಯು ಇಳಿಕೆ ಹಂತದಲ್ಲಿದ್ದಾಗ ಖರೀದಿಸಿ. ಈ ಬಗ್ಗೆ ದಿನವಹಿ ಮಾಹಿತಿಗಾಗಿ ಸಾಮಾನ್ಯ ಅರಿವು ಪಡೆಯಲು ವಾಣಿಜ್ಯ ವಾರ್ತಾ ಪತ್ರಿಕೆ ಅಥವಾ ಈ ಬಗ್ಗೆ ಮಾಹಿತಿ ನೀಡುವ ಮಾಧ್ಯಮಗಳನ್ನು ಗಮನಿಸುತ್ತಿರಿ.

ನಿಮ್ಮ ನಿರ್ಧಾರ ಈ ಎಲ್ಲ ಹಂತಗಳಿಗಿಂತ ನಿರ್ಣಾಯಕ ವಾದುದು. ನೀವು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ನಿರ್ಣಯ ಈಗಾಗಲೇ ತೆಗೆದುಕೊಂಡಿದ್ದರೆ ಈಕ್ವಿಟಿ ವಿಭಾಗದ ಹೂಡಿಕೆ ಗಳು ಉತ್ತಮ. ಈ ವರ್ಗದ ಹೂಡಿಕೆಗಳು ದೀರ್ಘಾವಧಿಯಲ್ಲಿ ಎಫ್‌.ಡಿಗಿಂತ ದುಪ್ಪಟ್ಟು ಲಾಭ ಗಳಿಸಿಕೊಟ್ಟಿವೆ. ಉಳಿದಂತೆ ಈಕ್ವಿಟಿ ಸೇವಿಂಗ್ಸ್ ಫಂಡ್ ದೀರ್ಘಾವ ಧಿಯಲ್ಲಿ ಸುಮಾರು ಶೇ 9ರಿಂದ ಶೇ 12ರಷ್ಟು ಲಾಭ ನೀಡಿದ ಉದಾಹರಣೆ ಇದೆ. ಈ ಬಗ್ಗೆ ಹೆಚ್ಚಿನ ಅರಿವು ಹೊಂದಿ ಹೂಡಿಕೆ ಮಾಡಿ.

ಪ್ರ

ನನ್ನ ಪತ್ನಿ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇ 30ರ ತೆರಿಗೆ ಶ್ರೇಣಿಗೆ ಸೇರಿದ್ದಾರೆ. ಅವರ ಹೆಸರಿನಲ್ಲಿ ಒಂದು ಮನೆ ಇದೆ. ಈಗ ಅದನ್ನು ತಿಂಗಳಿಗೆ ₹25 ಸಾವಿರಕ್ಕೆ ಬಾಡಿಗೆಗೆ ನೀಡಿದ್ದಾರೆ. ಈ ಸಂಬಂಧ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲು ಕೋರುತ್ತೇನೆ.

ಈ ಬಾಡಿಗೆಯನ್ನು ಅವರ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಬಾಡಿಗೆ ಆದಾಯವಾಗಿ ವರದಿ ಮಾಡುವುದು ಕಡ್ಡಾಯವೇ? ಬಾಡಿಗೆ ಮೊತ್ತದಲ್ಲಿ ಆಸ್ತಿ ಮತ್ತು ಇತರೆ ತೆರಿಗೆಗಳನ್ನು ಕಡಿತಗೊಳಿಸಿ ತೋರಿಸಬಹುದೆ? ಈ ಬಾಡಿಗೆ ಆದಾಯಕ್ಕೆ ತೆರಿಗೆ ಕಡಿತ ಅನ್ವಯಿಸುತ್ತದೆಯೇ? ಹೌದಾದರೆ ಮೂಲದಲ್ಲಿ ಆದಾಯ ತೆರಿಗೆ ಕಡಿತಗೊಳಿಸುವುದಕ್ಕೆ ಏನಾದರೂ ಮಿತಿಯಿದೆಯೇ?

ತೆರಿಗೆ ಕಡಿತ ಅನ್ವಯಿಸಿದರೆ ಅದನ್ನು ಕಡಿತಗೊಳಿಸುವ ಜವಾಬ್ದಾರಿ ಬಾಡಿಗೆದಾರನದೇ ಅಥವಾ ಮಾಲೀಕರದೆ? ತೆರಿಗೆ ಕಡಿತ ರಿಟರ್ನ್ಸ್‌ಗಳನ್ನು ಪ್ರತಿ ತಿಂಗಳು ಸಲ್ಲಿಸಬೇಕೆ? ಬಾಡಿಗೆದಾರ ಮತ್ತು ಮಾಲೀಕರಿಗೆ ಒಂದೇ ರೀತಿಯ ಫಾರ್ಮ್ ಅನ್ವಯಿಸುತ್ತದೆಯೇ? ಬಾಡಿಗೆದಾರರು ತೆರಿಗೆ ಕಡಿತ ಮಾಡಿದ ಮೊತ್ತವನ್ನು ಸಕಾಲದಲ್ಲಿ ಪಾವತಿಸದಿದ್ದರೆ ಮಾಲೀಕರಿಗಿರುವ ಆಯ್ಕೆಗಳೇನು? ಈ ಬಾಡಿಗೆ ಆದಾಯಕ್ಕೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ವಯವಾಗುತ್ತದೆಯೇ?

ಮಹೇಶ್, ಬೆಂಗಳೂರು.

ಉತ್ತರ: ನೀವು ನೀಡಿರುವ ಮಾಹಿತಿಯಂತೆ ನಿಮ್ಮ ಪತ್ನಿ ಹೆಸರಿನಲ್ಲಿರುವ ಮನೆಯ ಒಟ್ಟು ವಾರ್ಷಿಕ ಬಾಡಿಗೆ ಮೊತ್ತ ₹3 ಲಕ್ಷ. ಅಲ್ಲದೆ ನಿಮ್ಮ ಪತ್ನಿ ವೇತನ ಆದಾಯವನ್ನೂ ಪಡೆಯುತ್ತಿದ್ದಾರೆ. ಈ ಎರಡೂ ಆದಾಯ ಸೇರಿ ಒಟ್ಟು ಆದಾಯದ ಮೇಲೆ ಸಂಬಂಧಿತ ವಿನಾಯಿತಿ ಅನ್ವಯವಾದಲ್ಲಿ ಅದನ್ನು ಕಳೆದು ಉಳಿದ ಮೊತ್ತದ ಮೇಲೆ ತೆರಿಗೆ ನಿರ್ಣಯವಾಗುತ್ತದೆ. ಬಾಡಿಗೆ ಆದಾಯ ಹಾಗೂ ವೇತನ ಆದಾಯ ವೈಯಕ್ತಿಕ ತೆರಿಗೆ ದರದ ಶ್ರೇಣಿಯಲ್ಲಿ ತೆರಿಗೆಗೊಳಪಡುತ್ತದೆ.

ನೀವು ಬಾಡಿಗೆ ಆದಾಯದ ಮೇಲಿನ ತೆರಿಗೆ ಕಡಿತದ ಬಗ್ಗೆ ಪ್ರಮುಖವಾಗಿ ಕೇಳಿದ್ದೀರಿ. ಆದಾಯ ತೆರಿಗೆ ಸೆಕ್ಷನ್ 194 ಐಬಿ ಪ್ರಕಾರ ತಿಂಗಳ ಬಾಡಿಗೆ ₹50 ಸಾವಿರ ಮೀರಿದಾಗ ಬಾಡಿಗೆದಾರ ಶೇ 5ರ ದರದಲ್ಲಿ ತೆರಿಗೆ ಕಡಿತಗೊಳಿಸಿ ಆ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಮೊತ್ತವನ್ನು ಮನೆಯ ಮಾಲೀಕನಿಗೆ ಪಾವತಿಸಿರುವ ಬಗೆಗಿನ ಮಾಹಿತಿಯನ್ನು ಸರ್ಕಾರಕ್ಕೆ ‘ಫಾರಂ 26 ಕ್ಯೂಸಿ’ಯನ್ನು ಪ್ರತಿ ತಿಂಗಳು ಸಲ್ಲಿಸಬೇಕು.

ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಚಾರವೆಂದರೆ ಈ ತಿಂಗಳ ಬಾಡಿಗೆ ಮಿತಿ ಒಟ್ಟಾರೆಯಾಗಿ ವಾಸದ ಒಂದು ಮನೆಗಿರುವ ಮಿತಿಯಲ್ಲ. ಬದಲಾಗಿ ಪ್ರತ್ಯೇಕ ಪಾವತಿದಾರನಿಗೆ ಸಂಬಂಧಿಸಿದ ಮಿತಿಯಾಗಿದೆ. ಹೀಗಾಗಿ, ಒಂದೇ ಮನೆಯಲ್ಲಿ ಇಬ್ಬರು ವಾಸಿಸಿ ಪ್ರತ್ಯೇಕವಾಗಿ ಬಾಡಿಗೆ ಪಾವತಿಸುವುದಿದ್ದರೆ ಒಬ್ಬ ವ್ಯಕ್ತಿ ವೈಯಕ್ತಿಕವಾಗಿ ₹50 ಸಾವಿರ ಮಿತಿ ಮೀರಿ ಬಾಡಿಗೆ ಪಾವತಿಸುವುದಿದ್ದರೆ ಮಾತ್ರ ಈ ತೆರಿಗೆ ಕಡಿತ ಅಗತ್ಯ.

ಪ್ರಸ್ತುತ ನಿಮ್ಮ ತಿಂಗಳ ಬಾಡಿಗೆ ಮೊತ್ತ ₹25 ಸಾವಿರ ಆಗಿರುವುದರಿಂದ ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಬಾಡಿಗೆ ಆದಾಯದ ತೆರಿಗೆ ನಿರ್ಣಯಿಸುವಾಗ ಆಸ್ತಿ ತೆರಿಗೆ ಕಳೆದು ಉಳಿದ ಮೊತ್ತದ ಮೇಲೆ ಶೇ 30ರ ಸ್ಟ್ಯಾಂಡರ್ಡ್ ಡಿಡಕ್ಷನ್ ಸಿಗುತ್ತದೆ. ಉಳಿದ ಮೊತ್ತ ತೆರಿಗೆಗೆ ಒಳಪಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT