ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಪ್ರಧಾನ ಮಂತ್ರಿ ವಯೋವಂದನಾ ಯೋಜನೆಯಲ್ಲಿ ₹15 ಲಕ್ಷ ಹಣ ಇಡಬಹುದೇ?

Last Updated 11 ಮೇ 2021, 19:45 IST
ಅಕ್ಷರ ಗಾತ್ರ

* ಪ್ರಶ್ನೆ: ನಾನು, ನನ್ನ ಹೆಂಡತಿ ಇಬ್ಬರೂ ಹಿರಿಯ ನಾಗರಿಕರು. ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿ ಹಾಗೂ ವಯೋ ವಂದನಾ ಯೋಜನೆ ಈ ಎರಡು ಹೂಡಿಕೆಗಳಲ್ಲಿ ನನಗೆ ಗೊಂದಲ ಇದೆ. ಪರಿಹರಿಸಿ. ನನ್ನ ಪ್ರಶ್ನೆ: ನಾನು ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರ ಠೇವಣಿಯಲ್ಲಿ ₹ 15 ಲಕ್ಷ ಇರಿಸಿದ್ದೇನೆ. ಈ ಠೇವಣಿ ಬ್ಯಾಂಕ್‌ಗಳಲ್ಲಿಯೂ ಲಭ್ಯವಿದೆ. ಅಂಚೆ ಕಚೇರಿಯಲ್ಲಿ ಇರಿಸಿದ ₹ 15 ಲಕ್ಷ ಹೊರತುಪಡಿಸಿ, ಬ್ಯಾಂಕ್‌ನಲ್ಲಿ ಮತ್ತೆ ಇದೇ ಯೋಜನೆಯಲ್ಲಿ ಠೇವಣಿ ಇಡಬಹುದೇ? ಈಗಿರುವ ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿ ಮುಂದುವರಿಸಿ, ಪ್ರಧಾನ ಮಂತ್ರಿ ವಯೋವಂದನಾ ಯೋಜನೆಯಲ್ಲಿ ₹ 15 ಲಕ್ಷ ಹಣ ಇಡಬಹುದೇ? ಇದೇ ರೀತಿ ನನ್ನ ಹೆಂಡತಿ ಹೆಸರಿನಲ್ಲಿಯೂ ಈ ಎರಡು ಯೋಜನೆಗಳಲ್ಲಿ ಹಣ ಇರಿಸಬಹುದೇ?
–ಗಜೇಂದ್ರ, ಬಾಣಾವರ

ಉತ್ತರ: ಹಿರಿಯ ನಾಗರಿಕನಾದವನು ಆತನ ಹೆಸರಿನಲ್ಲಿ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಗರಿಷ್ಠ ₹ 15 ಲಕ್ಷ ಠೇವಣಿಯನ್ನು ಹಿರಿಯ ನಾಗರಿಕರ ಠೇವಣಿ ಯೋಜನೆಯಲ್ಲಿ ಇರಿಸಬಹುದು. ನೀವು ಈಗಾಗಲೇ ₹ 15 ಲಕ್ಷವನ್ನು ಅಂಚೆ ಕಚೇರಿಯಲ್ಲಿ ಇಟ್ಟಿರುವುದರಿಂದ ಇದೇ ಯೋಜನೆಯಲ್ಲಿ ಬ್ಯಾಂಕ್‌ನಲ್ಲಿ ಹಣ ಇಡುವಂತಿಲ್ಲ. ಈ ಯೋಜನೆ ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಲಭ್ಯ ಇರುವುದರಿಂದ ಹಲವರಿಗೆ ಈ ಗೊಂದಲ ಮೂಡಿದೆ. ಇದೇ ವೇಳೆ, ಅಂಚೆ ಕಚೇರಿಯಲ್ಲಿ ಗರಿಷ್ಠ ₹ 15 ಲಕ್ಷ ಹಿರಿಯ ನಾಗರಿಕ ಠೇವಣಿಯಲ್ಲಿ ಇರಿಸಿ, ಈ ಠೇವಣಿ ಹೊರತುಪಡಿಸಿ, ಎಲ್‌ಐಸಿಯ ಪ್ರಧಾನ ಮಂತ್ರಿ ವಯೋ ವಂದನಾ ಯೋಜನೆಯಲ್ಲಿಯೂ ₹ 15 ಲಕ್ಷ ಹಣ ಇಡಬಹುದು. ಈ ಎರಡೂ ಯೋಜನೆಗಳಲ್ಲಿ ಹಿರಿಯ ನಾಗರಿಕರಾದ ನಿಮ್ಮ ಪತ್ನಿ ಹಾಗೂ ನೀವು ಕ್ರಮವಾಗಿ ₹ 15 ಲಕ್ಷ ಠೇವಣಿ ಮಾಡಬಹುದು.

ಹಿರಿಯ ನಾಗರಿಕರಲ್ಲಿ ಒಂದು ಮನವಿ: ಈ ಎರಡೂ ಠೇವಣಿಗಳ ಮೇಲಿನ ಇಂದಿನ ಬಡ್ಡಿದರ ಶೇ 7.4ರಷ್ಟಿದೆ. ಇದು ಮುಂದಿನ ದಿನಗಳಲ್ಲಿ ಕಡಿಮೆ ಆಗುವ ಸಾಧ್ಯತೆ ಇಲ್ಲದಿಲ್ಲ. ಹಾಗಾಗಿ, ಆದಷ್ಟು ಬೇಗ ಈ ಯೋಜನೆಗಳ ಇಂದಿನ ಬಡ್ಡಿದರದ ಪ್ರಯೋಜನ ಪಡೆಯುವುದು ಜಾಣತನ. ಠೇವಣಿ ಇರಿಸುವಾಗ ಇರುವ ಬಡ್ಡಿದರವನ್ನು ಠೇವಣಿ ಅವಧಿ ಮುಗಿಯುವ ತನಕ ಕಡಿಮೆ ಮಾಡುವಂತಿಲ್ಲ.

* ಪ್ರಶ್ನೆ: ನಮಸ್ತೆ ಸರ್. ನಾನು ಗೃಹಿಣಿ. ವಿದ್ಯಾಭ್ಯಾಸ ಎಂ.ಎ. ಬಿಎಡ್‌. ಸದ್ಯ ಕೆಲಸದಲ್ಲಿಲ್ಲ. ನನಗೆ 9 ತಿಂಗಳ ಗಂಡು ಮಗು ಇದೆ. ನನ್ನ ಯಜಮಾನರು ಪ್ರಾಥಮಿಕ ಶಾಲಾ ಶಿಕ್ಷಕರು. ಅವರ ತಿಂಗಳ ಸಂಬಳ ₹ 39 ಸಾವಿರ. ಕಡಿತ; ಕೆ.ಜಿ.ಐಡಿ. ₹ 1000, ಎಲ್‌ಐಸಿ ₹ 952, ಎನ್‌ಪಿಎಸ್‌ ₹ 3,293, ಪಿಎಲ್‌ಐ ₹ 2,642, ಸೊಸೈಟಿ ಸಾಲ ₹ 1,000, ಇತರೆ ₹500, ಗೃಹ ಸಾಲದ ಕಂತು ₹ 17,345, ಮನೆ ಬಾಡಿಗೆ ₹ 3 ಸಾವಿರ. ಇತರೆ ಖರ್ಚು ₹ 3 ಸಾವಿರ. ಎಲ್ಲಾ ಕಳೆದು ₹ 5 ಸಾವಿರ ಉಳಿಸಬಹುದು. ನನ್ನ ಯಜಮಾನರಿಗೆ ಇನ್ನು 26 ವರ್ಷ ಸೇವಾವಧಿ ಇದೆ. ಸಾಲ ತೀರಿಸಲು ಹಾಗೂ ಮಗುವಿನ ಭವಿಷ್ಯದ ಬಗ್ಗೆ ಸಲಹೆ ನೀಡಿ.
–ಹೆಸರು, ಊರು ಬೇಡ

ಉತ್ತರ: ನಿಮ್ಮ ಗಂಡನ ಸಂಬಳದ ಹೆಚ್ಚಿನ ಪಾಲು ಜೀವ ವಿಮೆಗೆ ಮುಡುಪಾಗಿ ಇಟ್ಟಿದ್ದಾರೆ. ಓರ್ವ ವ್ಯಕ್ತಿ ಆತನ ಆದಾಯದ ಶೇ 10ರಿಂದ ಶೇ 15ರಷ್ಟು ಮೊತ್ತವನ್ನು ಮಾತ್ರ ಜೀವ ವಿಮೆಗೆ ತೆಗೆದಿಟ್ಟರೆ ಸಾಕು. ಸೊಸೈಟಿ ಸಾಲ ಆದಷ್ಟು ಬೇಗ ತೀರಿಸಿ. ಗೃಹ ಸಾಲದ ಕಂತುಗಳನ್ನು ಕ್ರಮಬದ್ಧವಾಗಿ ತುಂಬುತ್ತಾ ಬನ್ನಿ. ನೀವು ಉಳಿಸಬಹುದಾದ ₹ 5 ಸಾವಿರದಲ್ಲಿ 10 ವರ್ಷಗಳ ಆರ್‌.ಡಿಯನ್ನು ಸಂಬಳ ಪಡೆಯುವ ಬ್ಯಾಂಕ್‌ನಲ್ಲಿ ಮಾಡಿ. ಶೇ 5.5ರ ಬಡ್ಡಿದರದಲ್ಲಿ 10 ವರ್ಷಗಳ ಅಂತ್ಯಕ್ಕೆ ₹ 8,00,050 ಪಡೆಯುವಿರಿ. ವಾರ್ಷಿಕ ಇನ್‌ಕ್ರಿಮೆಂಟ್‌ ಹಾಗೂ ಅರ್ಧ ವಾರ್ಷಿಕ ತುಟ್ಟಿಭತ್ಯೆಯಲ್ಲಿ ಕನಿಷ್ಠ ಶೇ 50ರಷ್ಟನ್ನು 10 ವರ್ಷಗಳ ಆರ್‌.ಡಿ. ಮಾಡುತ್ತಾ ಬನ್ನಿ. ಈ ಪ್ರಕ್ರಿಯೆ ನಿರಂತರವಾಗಿರಲಿ. ಹೀಗೆ ಕೂಡಿಟ್ಟ ಹಣ ಜೀವನದ ಸಂಜೆಯಲ್ಲಿ ಉಪಯುಕ್ತವಾಗುತ್ತದೆ.

* ಪ್ರಶ್ನೆ: ನಾನು ಐ.ಟಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳ ಸಂಬಳದಲ್ಲಿ ಎಲ್ಲಾ ಖರ್ಚು ಕಳೆದು ₹ 60 ಸಾವಿರ ಉಳಿಯುತ್ತದೆ. ಅವಿವಾಹಿತ. ಎರಡು ವರ್ಷಗಳಲ್ಲಿ ಮದುವೆ ಆಗಬೇಕು. ನನಗೆ ಉತ್ತಮ ಹೂಡಿಕೆ ತಿಳಿಸಿ.
–ಪ್ರಭಾಕರ್, ಕೋಣನಕುಂಟೆ, ಬೆಂಗಳೂರು

ಉತ್ತರ: ನೀವು ತೆರಿಗೆ ಉಳಿಸಲು ವಿಮೆ, ಪಿಪಿಎಫ್‌ ಇವೆರಡರಲ್ಲಿ ಒಟ್ಟಾರೆ ವಾರ್ಷಿಕ ₹ 1.50 ಲಕ್ಷ ಹೂಡಿಕೆ ಮಾಡಿ. ಸೆಕ್ಷನ್‌ 80ಸಿ ಆಧಾರದ ಮೇಲೆ ವಿನಾಯಿತಿ ಪಡೆಯಿರಿ. ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ವಾರ್ಷಿಕ ₹ 50 ಸಾವಿರ ಎನ್‌ಪಿಎಸ್‌ನಲ್ಲಿ ಹೂಡಿ ವಿನಾಯಿತಿ ಪಡೆಯಿರಿ. ಈ ಎರಡೂ ಹೂಡಿಕೆ ನಂತರವೂ ನಿಮ್ಮೊಡನೆ ₹ 40 ಸಾವಿರ ಉಳಿಯುತ್ತದೆ. ಅದನ್ನು ವಿಂಗಡಿಸಿ ₹ 20 ಸಾವಿರದಂತೆ ಎರಡು ವರ್ಷಗಳ ಆರ್‌.ಡಿ. ಮಾಡಿ. ಅಷ್ಟರಲ್ಲಿ ನಿಮ್ಮ ಮದುವೆ ನಿಶ್ಚಯವಾಗಬಹುದು. ಮದುವೆ ನಂತರ ಆರ್‌.ಡಿ. ಬದಲಾಗಿ ಗೃಹ ಸಾಲ ಪಡೆದು ಈಗ ಆರ್‌.ಡಿಗೆ ಕಟ್ಟುವ ಹಣ ಗೃಹ ಸಾಲದ ಕಂತಿಗೆ ತುಂಬಿ. ಹಣ ಉಳಿಸುವುದು ಒಂದು ಕಲೆ. ಇನ್ನೂ ಹೆಚ್ಚಿನ ಮಾಹಿತಿಗೆ ನನಗೆ ಕರೆ ಮಾಡಿ.

ಯು.ಪಿ.ಪುರಾಣಿಕ್
ಯು.ಪಿ.ಪುರಾಣಿಕ್

**
ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT