ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಪ್ರಶ್ನೋತ್ತರ ಅಂಕಣ: ಮ್ಯೂಚುವಲ್ ಫಂಡ್‌ಗಳ ಸ್ವಿಚ್ ಮಾಡಿದರೆ ತೆರಿಗೆ ಲೆಕ್ಕ ಹೇಗೆ?

Published : 9 ಜುಲೈ 2025, 0:24 IST
Last Updated : 9 ಜುಲೈ 2025, 0:24 IST
ಫಾಲೋ ಮಾಡಿ
Comments
ಪ್ರ

ನಾನು ಮ್ಯೂಚುವಲ್ ಫಂಡ್ ಒಂದರಲ್ಲಿ ಹೂಡಿಕೆ ಮಾಡಿದ್ದೇನೆ. ಈಗ ಆ ಫಂಡ್‌ನಲ್ಲಿ ಲಾಭದ ಪ್ರಮಾಣ ಅಷ್ಟೇನೂ ಚೆನ್ನಾಗಿ ಇಲ್ಲ. ಇನ್ನೊಂದು ಫಂಡ್‌ನಲ್ಲಿ ಉತ್ತಮ ಪ್ರಮಾಣದಲ್ಲಿ ಲಾಭ ಸಿಗುತ್ತಿದ್ದು, ಅದಕ್ಕೆ ನನ್ನ ಹಣವನ್ನು ವರ್ಗಾಯಿಸಬೇಕಿದೆ. ಹೀಗೆ ಮಾಡುವಾಗ ತೆರಿಗೆಯನ್ನು ಯಾವ ರೀತಿಯಲ್ಲಿ ಲೆಕ್ಕ ಹಾಕಲಾಗುತ್ತದೆ? ಮ್ಯೂಚುವಲ್ ಫಂಡ್ ಸ್ವಿಚ್ ಎಂದು ಕರೆಯುವ ಈ ವ್ಯವಸ್ಥೆಯು ತೆರಿಗೆ ವಿನಾಯಿತಿಯ ವ್ಯಾಪ್ತಿಗೆ ಬರುತ್ತದೆಯೇ? ಮ್ಯೂಚುವಲ್ ಫಂಡ್‌ಗಳ ನಡುವೆ ಸ್ವಿಚ್ ಮಾಡಿದರೆ ತೆರಿಗೆ ಹೇಗೆ ಲೆಕ್ಕ ಹಾಕಲಾಗುತ್ತದೆ?

ನೀವು ಈಗಿರುವ ಮ್ಯೂಚುವಲ್ ಫಂಡ್‌ನಿಂದ ಮತ್ತೊಂದು ಫಂಡ್‌ಗೆ ಹಣವನ್ನು ನಿಮ್ಮ ಹೂಡಿಕೆ ತಂತ್ರದ ಭಾಗವಾಗಿ ವರ್ಗಾಯಿಸಲು ಯೋಚಿಸುತ್ತಿದ್ದೀರಿ. ಆದರೆ, ಈ ಪ್ರಕ್ರಿಯೆಯು ತೆರಿಗೆ ಸಂಬಂಧಿತ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂಬುದನ್ನು ಗಮನಿಸಿ. ಮ್ಯೂಚುವಲ್ ಫಂಡ್ ಸ್ವಿಚ್ ಎಂದರೆ, ನೀವು ಒಂದು ಫಂಡ್‌ನಲ್ಲಿನ ಹೂಡಿಕೆ ಮೊತ್ತ ಅಥವಾ ಯೂನಿಟ್‌ಗಳನ್ನು, ಇನ್ನೊಂದು ಫಂಡ್‌ಗೆ ವರ್ಗಾಯಿಸುವುದು ಅಥವಾ ಖರೀದಿಸುವುದಾಗಿದೆ. ಹೂಡಿಕೆದಾರರು ಒಟ್ಟಾರೆ ಮೊತ್ತವನ್ನು ಮ್ಯೂಚುವಲ್ ಫಂಡ್‌ಗಳಿಂದ ನಗದು ರೂಪದಲ್ಲಿ ಹಿಂಪಡೆಯಲಿಲ್ಲ ಎಂಬ ಕಾರಣಕ್ಕೆ ತೆರಿಗೆ ಇಲ್ಲ ಎಂದರ್ಥವಲ್ಲ. ಹೀಗಾಗಿ ಸ್ವಿಚ್ ಮಾಡಿದಾಗಲೂ, ಅದನ್ನು ತೆರಿಗೆ ಉದ್ದೇಶದಿಂದ ನಿಜವಾದ ಮಾರಾಟ ಎಂದೇ ಪರಿಗಣಿಸಲಾಗುತ್ತದೆ. ನೀವು ಅನೇಕ ಬಾರಿ ಖರೀದಿಸಿದ ಒಂದು ಫಂಡ್‌ನಿಂದ ಒಂದೇ ಬಾರಿಗೆ ಸ್ವಿಚ್ ಮಾಡಿದಾಗ ಅದರ ಖರೀದಿಯ ದಿನಾಂಕದ ಅನುಕ್ರಮದಲ್ಲಿ (ಫಸ್ಟ್ ಇನ್ ಫಸ್ಟ್ ಔಟ್) ಮಾರಾಟವಾಗಿದೆ ಎಂದು ಊಹಿಸಿ, ಆ ಕಾಲಾವಧಿಗೆ ಹೊಂದಿಕೊಂಡು ದೀರ್ಘಾವಧಿ ಅಥವಾ ಅಲ್ಪಾವಧಿ ಹೂಡಿಕೆಗಳೆಂದು ನಿರ್ಣಯಿಸಲಾಗುತ್ತದೆ.

ಪ್ರಸ್ತುತ ನಿಯಮದಂತೆ, ಈಕ್ವಿಟಿ ವಿಭಾಗದ ಅಲ್ಪಾವಧಿ ಹೂಡಿಕೆಗಳಿಗೆ (ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆ) ಬರುವ ಲಾಭವನ್ನು ಶೇಕಡ 20ರ ದರದಲ್ಲಿ ತೆರಿಗೆಗೆ ಒಳಪಡಿಸಲಾಗುತ್ತದೆ. ಅದು ದೀರ್ಘಾವಧಿ ಲಾಭವಾದರೆ (ಒಂದು ವರ್ಷಕ್ಕಿಂತ ಅಧಿಕ ಅವಧಿಯ ಹೂಡಿಕೆ) ಲಾಭಕ್ಕೆ ಶೇ 12.5ರ ದರದಲ್ಲಿ ತೆರಿಗೆ ಇರುತ್ತದೆ. ವಾರ್ಷಿಕವಾಗಿ ₹1.25 ಲಕ್ಷದವರೆಗೆ ದೀರ್ಘಾವಧಿ ಲಾಭ ಇದ್ದಲ್ಲಿ ತೆರಿಗೆಯಿಂದ ವಿನಾಯಿತಿಯಿದ್ದು, ಅದಕ್ಕಿಂತ ಹೆಚ್ಚಿನ ಲಾಭದ ಮೇಲೆ ಶೇಕಡ 12.5ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ. ನೀವು ಸ್ವಿಚ್ ಮಾಡಿದ ಹೂಡಿಕೆಗಳ ಲಾಭ ಇದೇ ಮಿತಿಯೊಳಗಿದ್ದರೆ ತೆರಿಗೆ ಅನ್ವಯಿಸುವುದಿಲ್ಲ. ಮಾತ್ರವಲ್ಲದೆ, ನಷ್ಟವಾಗಿದ್ದ ಸಂದರ್ಭದಲ್ಲಿ, ಅದನ್ನು ಮುಂದಿನ 8 ವರ್ಷ ಮುಂದೂಡುವ ಮತ್ತು ಮುಂದೆ ಸಿಗುವ ಅದೇ ವರ್ಗದ ಲಾಭಗಳಿಗೆ ವಜಾ ಮಾಡುವ ಅವಕಾಶ ಇದೆ. 

ಇನ್ನು ಈಕ್ವಿಟಿ ವಿಭಾಗವಲ್ಲದ ಯಾವುದೇ ದೀರ್ಘಾವಧಿ ಫಂಡ್‌ಗಳಾಗಿದ್ದರೆ, (24 ತಿಂಗಳಿಗಿಂತ ಹೆಚ್ಚಿನ ಹೂಡಿಕೆ ಅವಧಿ) ಶೇಕಡ 12.5ರ ತೆರಿಗೆ ಹಾಗೂ ಇದೇ ವರ್ಗದ ಅಲ್ಪಾವಧಿ ಹೂಡಿಕೆ ಫಂಡ್‌ಗಳಾಗಿದ್ದರೆ (24 ತಿಂಗಳಿಗಿಂತ ಕಡಿಮೆ ಹೂಡಿಕೆ ಅವಧಿ) ವೈಯಕ್ತಿಕ ತೆರಿಗೆ ದರಗಳು ಅನ್ವಯಿಸುತ್ತವೆ. ಹೀಗಾಗಿ ಈ ಅಂಶಗಳನ್ನು ಪರಿಗಣಿಸಿ, ಯಾವುದೇ ಅವಧಿಯಲ್ಲಿ ಸ್ವಿಚ್ ಮಾಡಿದರೂ ಲಾಭವನ್ನು ನಿಮ್ಮ ಆದಾಯದ ಭಾಗವೆಂದು ಪರಿಗಣಿಸಲಾಗುತ್ತದೆ. ಇನ್ನೂ ಒಂದು ಅಂಶ ಏನೆಂದರೆ, ಸೆಕ್ಷನ್ 112ಎ(6)ರಂತೆ, ಇಂತಹ ಹೂಡಿಕೆಗಳು ವಿಶೇಷ ತೆರಿಗೆ ದರದಲ್ಲಿ ಒಳಪಡುವುದರಿಂದ ಅಂತಹ ಆದಾಯಕ್ಕೆ ಪ್ರತ್ಯೇಕವಾಗಿ ತೆರಿಗೆ ಪಾವತಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ತೆರಿಗೆದಾರರಿಗೆ ಅಂತಹ ಆದಾಯಕ್ಕೆ ಸೆಕ್ಷನ್ 87ಎ ಅಡಿ ಲಭ್ಯವಿರುವ ರಿಬೇಟ್ ಪಡೆಯಲು ಅವಕಾಶ ಇಲ್ಲ. ಅಂದರೆ, ಉದಾಹರಣೆಗೆ ಒಟ್ಟಾರೆ ಆದಾಯ ₹12 ಲಕ್ಷದೊಳಗಿದ್ದರೂ, ಬದಲಾದ ನಿಯಮದಂತೆ, ಬಂಡವಾಳ ಲಾಭಕ್ಕೆ ರಿಬೇಟ್ ನೀಡಲು ಅವಕಾಶವಿಲ್ಲ. ನಿಮ್ಮ ಫಂಡ್‌ಗಳ ನಿರ್ದಿಷ್ಟ ವರ್ಗ, ಹೂಡಿಕೆಯ ಅವಧಿ ಇತ್ಯಾದಿಗಳ ಮೇಲೆ ತೆರಿಗೆ ನಿರ್ಣಯವಾಗುವ ಕಾರಣ ಇನ್ನೂ ಹೆಚ್ಚಿನ ಮಾಹಿತಿಯೊಂದಿಗೆ ತೆರಿಗೆ ಸಲಹೆಗಾರರೊಡನೆ ಸಮಾಲೋಚಿಸಿ.

ನಾನು ಕಳೆದ ಕೆಲವು ವರ್ಷಗಳಿಂದ ಹೂಡಿಕೆ ಮಾಡುತ್ತಿದ್ದೇನೆ. ನಾನು ನನ್ನ ಸ್ವಂತ ಅನುಭವ, ಓದು ಹಾಗೂ ಸ್ನೇಹಿತರ ಜೊತೆಗಿನ ವಿಚಾರ ವಿನಿಮಯದ ಆಧಾರದಲ್ಲಿ ಹೂಡಿಕೆ ಮಾಡುತ್ತಾ ಬಂದಿದ್ದೇನೆ. ಇತ್ತೀಚೆಗೆ ಸೆಬಿ, ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್‌ ಫಂಡ್‌ಗಳಲ್ಲಿ (ಎಸ್‌ಐಎಫ್) ಹೂಡಿಕೆಗೆ ಅನುಮತಿ ನೀಡಿದೆ. ಇದು ಮ್ಯೂಚುವಲ್ ಫಂಡ್ ಅಥವಾ ಷೇರು ಇತ್ಯಾದಿಗಳಲ್ಲಿ ನೇರ ಹೂಡಿಕೆ ಮಾಡುವುದಕ್ಕಿಂತ ಉತ್ತಮ ವಿಧಾನವೇ?

ನೀವು ಕಳೆದ ಹಲವು ವರ್ಷಗಳಿಂದ ಸ್ವಂತ ಅಧ್ಯಯನ, ಅನುಭವ ಹಾಗೂ ಸ್ನೇಹಿತರ ಸಲಹೆಯ ಆಧಾರದ ಮೇಲೆ ಹೂಡಿಕೆಯಲ್ಲಿ ತೊಡಗಿರುವುದರ ಜೊತೆಗೆ ಹೊಸ ಹೂಡಿಕೆ ಮಾರ್ಗಗಳನ್ನು ಅನ್ವೇಷಣೆ ಮಾಡುತ್ತಿರುವುದು ಉತ್ತಮ ನಡೆ. ಒಂದು ವರ್ಷದ ಹಿಂದೆ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಎಸ್‌ಐಎಫ್‌ಗೆ ಅನುಮತಿ ನೀಡಿದೆ. ಇದು ಹೂಡಿಕೆದಾರರ ಇನ್ನೊಂದು ವರ್ಗವನ್ನು ಸೃಷ್ಟಿ ಮಾಡುವುದರಲ್ಲಿ ಮಹತ್ವದ ಪಾತ್ರವಹಿಸಿದೆ. ಇದರಲ್ಲಿ ₹10 ಲಕ್ಷಕ್ಕೆ ಕಡಿಮೆ ಇಲ್ಲದಂತೆ ಆರಂಭಿಕ ಮೊತ್ತವನ್ನು ಹೂಡಿಕೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕಾಗಿರುತ್ತದೆ. ಇದು ₹50 ಲಕ್ಷಕ್ಕೂ ಹೆಚ್ಚಿನ ಮೊತ್ತ ಹೂಡಿಕೆ ಮಾಡುವ ಕೆಲವು ಶ್ರೀಮಂತರು ತಮ್ಮ ಹೂಡಿಕೆಗಳನ್ನು ನಿರ್ವಹಿಸಲು ಅನುಸರಿಸುವ ಪೋರ್ಟ್‌ಫೋಲಿಯೊ ಮ್ಯಾನೇಜ್‌ಮೆಂಟ್‌ ಸರ್ವಿಸಸ್‌ಗಿಂತ (ಪಿಎಂಎಸ್) ಒಂದು ಹಂತ ಕೆಳಗಿನದು. ಅಂದರೆ, ಮಧ್ಯಮ ವರ್ಗದ ಹೂಡಿಕೆದಾರರೂ ಇಂತಹ ವಿಶಿಷ್ಟ ಹೂಡಿಕೆ ವಿಧಾನದಲ್ಲಿ ತೊಡಗಿಸಿಕೊಳ್ಳಬಹುದು. ಇದರಲ್ಲಿ ಫಂಡ್‌ ನಿರ್ವಾಹಕರಿಗೆ ಕೇವಲ ಷೇರುಗಳಲ್ಲದೆ, ಬಾಂಡ್, ರೀಟ್ಸ್, ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌, ಪ್ಯೂಚರ್ಸ್ ಮತ್ತು ಆಪ್ಶನ್‌ಗಳಲ್ಲೂ ನಿಗದಿತ ಶೇಕಡವಾರು ಮೊತ್ತದ ಹೂಡಿಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇದು ಹೂಡಿಕೆದಾರರಿಗೆ ಒಟ್ಟಾರೆ ವಿಭಿನ್ನ ಮಟ್ಟದ ಆರ್ಥಿಕ ಅಪಾಯ ಇರುವ ಹಾಗೂ ಉತ್ತಮ ಲಾಭ ಗಳಿಕೆಗೂ ಅವಕಾಶ ಇರುವ ಒಂದು ವೇದಿಕೆಯನ್ನು ತೆರೆದಿಟ್ಟಿದೆ. ಇಲ್ಲಿ ಮಾಡಿದ ಹೂಡಿಕೆಯನ್ನು ನಿಗದಿತ ಸಮಯಕ್ಕೆ ಮೊದಲು ಹಿಂದಕ್ಕೆ ಪಡೆಯಲು ಅವಕಾಶ ಇಲ್ಲ. ಪೂರ್ವ ಮಾಹಿತಿಯಂತೆ ಹೂಡಿಕೆಯಿಂದ ಹಿನ್ನಡೆಯಲು ಅವಕಾಶ ಇರುತ್ತದೆ. ಹೀಗಾಗಿ, ನಮ್ಮ ಹೂಡಿಕೆಯ ಉದ್ದೇಶ ಹಾಗೂ ಅದರ ಅಗತ್ಯ ಏನೆಂಬುದು ಮುಖ್ಯವೇ ಹೊರತು ಪರಸ್ಪರ ತುಲನೆ ಅನಿವಾರ್ಯವಲ್ಲ. ಕಾರಣ, ಪ್ರತಿ ವರ್ಗದ ಹೂಡಿಕೆಗೂ ಅದರದ್ದೇ ಆದ ಗ್ರಾಹಕ ವರ್ಗ, ಅದಕ್ಕೆ ಸಂಬಂಧಿತ ಆರ್ಥಿಕ ಸಾಮ್ಯತೆ ಇರುವ ಜನರು ಇರುತ್ತಾರೆ. ಪ್ರಸ್ತುತ ಈ ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್‌ ಫಂಡ್‌ಗಳು, ಮಧ್ಯಮ ವರ್ಗದ ಮಂದಿಗೆ ಉತ್ತಮ ಅವಕಾಶ ನೀಡುವಂತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT