ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು ಸಂಬಂಧಿತ ಪ್ರಶ್ನೆಗಳಿಗೆ ದೈತೋಟ ಸಲಹೆ

Last Updated 17 ಜನವರಿ 2023, 19:02 IST
ಅಕ್ಷರ ಗಾತ್ರ

ಅಶೋಕ ಸಾಲುಂಕೆ, ಊರು ನಮೂದಿಸಿಲ್ಲ
ಪ್ರಶ್ನೆ: ತಾಯಿಯ ಬ್ಯಾಂಕ್ ಖಾತೆಯಿಂದ ಸುಮಾರು ₹ 20 ಲಕ್ಷವನ್ನು ನನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದರೆ, ಅದಕ್ಕೆ ನಾನು ತೆರಿಗೆ ಪಾವತಿಸಬೇಕೇ? ನಾನು ಐ.ಟಿ. ವಿವರ ಸಲ್ಲಿಸುತ್ತಿಲ್ಲ. ತಾಯಿಗೆ 90 ವರ್ಷ ವಯಸ್ಸು, ನನಗೆ 68 ವರ್ಷ ವಯಸ್ಸು. ಅವರಿಗೆ ತಂದೆಯ ಸರ್ಕಾರಿ ಪಿಂಚಣಿ ಬರುತ್ತದೆ. ಪಿಂಚಣಿ ಖಾತೆಯಿಂದ ನನಗೆ ಹಣ ವರ್ಗಾವಣೆ ಮಾಡುತ್ತಾರೆ. ತೆರಿಗೆ ಬರದಂತೆ ಮಾಡಲು ಮಾರ್ಗ ಏನು?

ಉತ್ತರ: ನೀವು ನೀಡಿರುವ ಮಾಹಿತಿಯಂತೆ, ನಿಮ್ಮ ತಾಯಿಯ ಖಾತೆಯಿಂದ ₹ 20 ಲಕ್ಷ ನಿಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುವ ಉದ್ದೇಶವಿದೆ. ಆದಾಯ ತೆರಿಗೆಗೆ ಸಂಬಂಧಿಸಿದ ಸಾಮಾನ್ಯ ನಿಯಮದ ಪ್ರಕಾರ, ವ್ಯಕ್ತಿಯೊಬ್ಬ ಒಂದು ವರ್ಷದಲ್ಲಿ ಒಟ್ಟಾರೆ ₹ 50,000ಕ್ಕಿಂತ ಅಧಿಕ ಮೊತ್ತವನ್ನು ಯಾರಿಂದ ಉಡುಗೊರೆಯಾಗಿ ಪಡೆದರೂ ತೆರಿಗೆ ಅನ್ವಯವಾಗುತ್ತದೆ. ಹೀಗಾಗಿ ಆ ಮೊತ್ತವನ್ನು ಸ್ವೀಕರಿಸಿದ ವ್ಯಕ್ತಿ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ ಈ ಸಾಮಾನ್ಯ ನಿಯಮಕ್ಕೆ ಕೆಲವೊಂದು ವಿನಾಯಿತಿಗಳಿವೆ. ಆದಾಯ ತೆರಿಗೆಯ ಸೆಕ್ಷನ್ 56(2)ರ ಅನ್ವಯ ಸಂಬಂಧಿಕರು ನೀಡುವ ಉಡುಗೊರೆಗೆ ತೆರಿಗೆ ವಿನಾಯಿತಿ ಇದೆ. ಇಲ್ಲಿ ನಿಮ್ಮ ಹಣದ ವ್ಯವಹಾರ ಸಮೀಪದ ಸಂಬಂಧಿಕರ ನಡುವೆ ನಡೆಯುತ್ತದೆ. ಹೀಗಾಗಿ ತೆರಿಗೆ ಇರುವುದಿಲ್ಲ. ಆದರೆ ಅದಕ್ಕೆ ಅಗತ್ಯವಿರುವ ಪೂರಕ ದಾಖಲೆಯಾಗಿ ‘ಗಿಫ್ಟ್‌ ಡೀಡ್’ ದಾಖಲಿಸಿಕೊಳ್ಳುವುದು ಸೂಕ್ತ.

ನಿಮ್ಮ ತಾಯಿ ಸುಮಾರು 90 ವರ್ಷ ವಯಸ್ಸಿನ ‘ಅತಿ ಹಿರಿಯ ನಾಗರೀಕರು’. ಅವರಿಗೆ ಅನ್ವಯವಾಗುವ ಗರಿಷ್ಠ ತೆರಿಗೆ ವಿನಾಯಿತಿ ಮೊತ್ತ ₹ 5 ಲಕ್ಷ. ಅದರ ಮೇಲಷ್ಟೇ ತೆರಿಗೆ ಅನ್ವಯವಾಗುತ್ತದೆ. ನೀವು ‘ಹಿರಿಯ ನಾಗರೀಕರು’. ನಿಮಗೆ ಅನ್ವಯಿಸುವ ಗರಿಷ್ಠ ತೆರಿಗೆ ವಿನಾಯಿತಿ ಮೊತ್ತ ₹ 3 ಲಕ್ಷ. ಹೀಗಾಗಿ, ನಿಮಗೆ ಈ ಮಿತಿಗಿಂತ ಹೆಚ್ಚಿನ ಯಾವುದೇ ಆದಾಯ ಇಲ್ಲವಾದಲ್ಲಿ ತೆರಿಗೆ ವಿವರ ಸಲ್ಲಿಸುವ ಅಗತ್ಯವಿಲ್ಲ.

***

ರವಿ ಮೂಲಿಮನಿ, ಊರು ನಮೂದಿಸಿಲ್ಲ
ಪ್ರಶ್ನೆ: ನಾನು ಷೇರು ಮಾರುಕಟ್ಟೆಯಲ್ಲಿ ₹ 10 ಲಕ್ಷ ಹೂಡಿಕೆ ಮಾಡಿ ₹ 6 ಲಕ್ಷ ಲಾಭ ಗಳಿಸಿದ್ದೇನೆ. ಇದಕ್ಕೆ ತೆರಿಗೆ ಎಷ್ಟು ಪಾವತಿ ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂದು ತಿಳಿಸಿಕೊಡಿ.

ಉತ್ತರ: ಷೇರು ಮಾರುಕಟ್ಟೆ ವ್ಯವಹಾರದ ಲಾಭ ಅಥವಾ ನಷ್ಟಕ್ಕೆ ಅನುಗುಣವಾಗಿ, ವಿವಿಧ ವರ್ಗಗಳ ಬಂಡವಾಳ ಆಸ್ತಿಯ ಮಾರಾಟಕ್ಕೆ ಅನುಗುಣವಾಗಿ ತೆರಿಗೆ ನಿರ್ಣಯವಾಗುತ್ತದೆ. ನೀವು ಉಲ್ಲೇಖಿಸಿರುವ ಈಕ್ವಿಟಿ ಷೇರುಗಳ ಮಾರಾಟದಿಂದ ಬರುವ ಆದಾಯ ಅಥವಾ ನಷ್ಟವು, ಆದಾಯ ತೆರಿಗೆಯ ‘ಬಂಡವಾಳ ವೃದ್ಧಿ’ (ಕ್ಯಾಪಿಟಲ್ ಗೇನ್ಸ್) ಶೀರ್ಷಿಕೆಯಡಿ ಉಲ್ಲೇಖವಾಗಿದೆ. ಇಲ್ಲಿ ಆದಾಯವನ್ನು ಮತ್ತಷ್ಟು ವರ್ಗೀಕರಿಸಲಾಗಿದೆ. ಷೇರುಗಳ ಹೂಡಿಕೆಯ ಅವಧಿಗೆ ಅನುಗುಣವಾಗಿ ದೀರ್ಘಾವಧಿಯ ಬಂಡವಾಳ ಲಾಭ–ನಷ್ಟ ಹಾಗೂ ಅಲ್ಪಾವಧಿಯ ಬಂಡವಾಳ ಲಾಭ–ನಷ್ಟ ಎಂಬ ಎರಡು ವರ್ಗಗಳಲ್ಲಿ ಇವುಗಳನ್ನು ವಿಂಗಡಿಸಲಾಗಿದೆ. ಇಲ್ಲಿ ಹೂಡಿಕೆಯ ಅವಧಿ ಎಂದರೆ ಷೇರುಗಳನ್ನು ಖರೀದಿಸಿದ ದಿನಾಂಕದಿಂದ ಮಾರಾಟ ಅಥವಾ ವರ್ಗಾವಣೆಯ ದಿನಾಂಕದವರೆಗೆ ನಿಮ್ಮ ಡಿಮ್ಯಾಟ್ ಖಾತೆಯಲ್ಲಿದ್ದ ಅವಧಿ.

ಷೇರು ಮಾರುಕಟ್ಟೆಗಳಲ್ಲಿ ನೋಂದಾಯಿತವಾಗಿರುವ ಈಕ್ವಿಟಿ ಷೇರುಗಳಲ್ಲಿ ವ್ಯವಹರಿಸಿದ್ದರೆ, ಖರೀದಿಸಿದ 12 ತಿಂಗಳೊಳಗೆ ಮಾರಾಟ ಮಾಡಿದಾಗ ಹೂಡಿಕೆದಾರ ಅಲ್ಪಾವಧಿಯ ಬಂಡವಾಳ ಲಾಭ ಅಥವಾ ಅಲ್ಪಾವಧಿಯ ಬಂಡವಾಳ ನಷ್ಟ ಕಾಣುತ್ತಾನೆ. ಈ ಅವಧಿ 12 ತಿಂಗಳಿಗಿಂತ ಹೆಚ್ಚಿನದಾಗಿದ್ದರೆ, ಅದು ದೀರ್ಘಾವಧಿ ಹೂಡಿಕೆಯ ಲಾಭ - ನಷ್ಟವಾಗುತ್ತದೆ. ಎಲ್ಲರಿಗೂ ತಿಳಿದಂತೆ, ಷೇರುಗಳನ್ನು ಖರೀದಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದಾಗ ಮಾರಾಟಗಾರ ಅಲ್ಪಾವಧಿ ಬಂಡವಾಳ ಲಾಭವನ್ನು ಗಳಿಸುತ್ತಾನೆ. ಖರೀದಿ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿಯಲ್ಲಿ ಅಲ್ಪಾವಧಿಯ ಬಂಡವಾಳ ನಷ್ಟ ಹೊಂದುತ್ತಾನೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಯಾವುದೇ ಷೇರ‌ನ್ನು ಮಾರಾಟ ಮಾಡಿದಾಗ ಪ್ರತಿ ಷೇರುಗಳ ಹೂಡಿಕೆಯ ಅವಧಿಯನ್ನು ಆಧರಿಸಿ, ದೀರ್ಘಾವಧಿ ಹಾಗೂ ಅಲ್ಪಾವಧಿ ಮಾರಾಟದಿಂದ ಬಂದ ಲಾಭ ಎಷ್ಟು ಎಂದು ಮೊದಲು ವಿಂಗಡಿಸಬೇಕು. ಆದಾಯ ತೆರಿಗೆ ನಿಯಮದಂತೆ, ಇಲ್ಲಿ ಮೊದಲು ಖರೀದಿಸಿದ ಷೇರುಗಳನ್ನು ಮೊದಲು ಮಾರಾಟ ಮಾಡಲಾಗಿದೆ ಎಂದೇ ಪರಿಭಾವಿಸಿ ತೆರಿಗೆ ಲೆಕ್ಕಹಾಕಬೇಕಾಗುತ್ತದೆ.

ಈ ರೀತಿ ಲೆಕ್ಕ ಹಾಕುವಾಗ ಖರೀದಿಗೆ ಸಂಬಂಧಿತ ಬ್ರೋಕರೇಜ್, ಇತರೆ ಶುಲ್ಕಗಳನ್ನು ಖರೀದಿ ಮೊತ್ತಕ್ಕೆ ಸೇರಿಸಬೇಕು ಹಾಗೂ ಮಾರಾಟ ಮೌಲ್ಯದಲ್ಲೂ ಇಂತಹ ವೆಚ್ಚಗಳನ್ನು ಕಳೆದು ಉಳಿದ ಮೊತ್ತದ ಮೇಲಷ್ಟೇ ಲಾಭ ನಷ್ಟ ನಿರ್ಧಾರವಾಗುತ್ತದೆ. ಅಲ್ಪಾವಧಿಯ ಬಂಡವಾಳ ಲಾಭಗಳಿಗೆ ಶೇ 15ರ ವಿಶೇಷ ತೆರಿಗೆ ದರ ಅನ್ವಯವಾಗುತ್ತದೆ. ಹೀಗಾಗಿ ತೆರಿಗೆದಾರರ ಸ್ಲ್ಯಾಬ್ ದರವು ಏನೆ ಇದ್ದರೂ, ಈ ದರ ಅನ್ವಯವಾಗುತ್ತದೆ.

ನೀವು ನೀಡಿದ ಮಾಹಿತಿಯಿಂದ ಮೇಲೆ ತಿಳಿಸಿರುವ ಯಾವ ವರ್ಗದಲ್ಲಿ ನಿಮ್ಮ ಲಾಭ ಗಳಿಕೆ ಆಗಿದೆ ಎನ್ನುವುದು ಸ್ಪಷ್ಟವಾಗುವುದಿಲ್ಲ. ಹೀಗಾಗಿ ಮೇಲಿನ ಮಾಹಿತಿಯನ್ನು ಸರಿಯಾಗಿ ಗಮನಿಸಿ ನಿಮ್ಮ ತೆರಿಗೆ ನಿರ್ಣಯಿಸಿ. ಲಾಭದ ಮೊತ್ತ ಬಹಳ ಹೆಚ್ಚಿರುವ ಕಾರಣ ನಿಖರ ಡಿಮ್ಯಾಟ್ ವಿವರ ಹಾಗೂ ಖರೀದಿ–ಮಾರಾಟ ಮಾಹಿತಿ, ಲಾಭ–ನಷ್ಟದ ಆಂತರಿಕ ವರ್ಗೀಕರಣ ಇಲ್ಲಿ ಮುಖ್ಯ. ಹೆಚ್ಚಿನ ಮಾಹಿತಿಯೊಂದಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ. ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ದೀರ್ಘಾವಧಿ ಬಂಡವಾಳ ಲಾಭ ಗಳಿಸಿದ್ದರೆ, ಗಳಿಸಿದ ₹ 1 ಲಕ್ಷಕ್ಕಿಂತ ಹೆಚ್ಚಿನ ಲಾಭದ ಮೇಲೆ ಶೇ 10ರ ದರದಲ್ಲಿ ತೆರಿಗೆ ಇರುತ್ತದೆ. ನೀವು ಕೇಳಿರುವಂತೆ, ತೆರಿಗೆಯನ್ನು ಆದಾಯ ತೆರಿಗೆ ಇಲಾಖೆಗೆ ಆನ್‌ಲೈನ್‌ ಮೂಲಕ ಪಾವತಿಸಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT