ನಾನು ಪ್ರಸಾಧನ ತಜ್ಞೆಯಾಗಿ ಕೆಲಸ ಮಾಡುತ್ತಿದ್ದೇನೆ. ನಿಯಮಿತವಾಗಿ ಹಾಗೂ ಕೆಲವೊಮ್ಮೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲು ಸುರಕ್ಷಿತ ಹಾಗೂ ಸ್ವಲ್ಪವಾದರೂ ಹಣದುಬ್ಬರ ಮೀರಿ ಬೆಳೆಯಬಲ್ಲ ಹೂಡಿಕೆ ಕುರಿತ ಉತ್ತಮ ಆಯ್ಕೆ ಬಗ್ಗೆ ತಿಳಿಸಿ – ಕವಿತಾ, ಬೆಳಗಾವಿ
ನಿಮ್ಮ ಹಣವನ್ನು ನಿಯಮಿತವಾಗಿ ಅಥವಾ ಏಕ ಕಂತಿನ ಮೂಲಕ ಹೂಡಿಕೆಗೆ ಯೋಜಿಸುವುದಾದರೆ ಹಾಗೂ ನಿರ್ದಿಷ್ಟವಾಗಿ ಹಣದುಬ್ಬರ ಮಟ್ಟವನ್ನು ಮೀರಿ ಬೆಳೆಯಬಲ್ಲ ಹೂಡಿಕೆಗಳಾಗಬೇಕೆಂದರೆ ಈಕ್ವಿಟಿ, ಚಿನ್ನ ಅಥವಾ ಈಕ್ವಿಟಿ ವಿಭಾಗದ ಹೂಡಿಕೆ ಆಗಿರಬೇಕು. ಉದಾಹರಣೆಗೆ ಈಕ್ವಿಟಿ ಷೇರು, ಚಿನ್ನದ ಬಾಂಡ್ ಅಥವಾ ಫಂಡ್ ಅಥವಾ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಗಳಿಂದ ಮಾತ್ರ ಈ ಗುರಿ ಸಾಧ್ಯ.
ಆದರೆ, ಇವುಗಳ ಸುರಕ್ಷತೆ ಅಲ್ಪಾವಧಿಗಿಂತ ದೀರ್ಘಾವಧಿ ಹೂಡಿಕೆಯಲ್ಲಿ ಹೆಚ್ಚಾಗಿ ಗೋಚರವಾಗುತ್ತದೆ. ಇನ್ನೂ ಹೇಳುವುದಾದರೆ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಇಂಡೆಕ್ಸ್ ಫಂಡ್‌ಗಳೂ ನಿಮಗೆ ಉತ್ತಮ ಆಯ್ಕೆ ಆಗಬಹುದು. ಹೂಡಿಕೆಯ ಮೊದಲು ನಿಮ್ಮ ಆಯ್ಕೆ ಸರಿಯಾದ ಕಂಪನಿ ಅಥವಾ ಉತ್ತಮ ಫಂಡ್‌ಗಳಲ್ಲಿದೆಯೇ ಎಂಬುದನ್ನು ಪರಾಮರ್ಶಿಸಿ ಮುಂದುವರಿಯಿರಿ.
ನಾನು ಶಿಕ್ಷಕಿಯಾಗಿದ್ದು, ಗ್ರಾಮೀಣ ಭಾಗದಲ್ಲಿ ನೆಲಸಿದ್ದೇನೆ. ಇಬ್ಬರು ಮಕ್ಕಳ ತಾಯಿಯಾಗಿ ಹಾಗೂ ಮನೆಯ ಅಗತ್ಯ ವೆಚ್ಚಗಳನ್ನು ಭರಿಸಿ ಉಳಿದ ಮೊತ್ತವನ್ನು ಉಳಿತಾಯ ಮಾಡುತ್ತಿದ್ದೇನೆ. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಅವರಲ್ಲಿ ಉಳಿತಾಯದ ಬಗ್ಗೆ ನಾವು ಹೇಗೆ ತಿಳಿವಳಿಕೆ ನೀಡಬಹುದು ಅಥವಾ ಅವರಿಗಾಗಿ ನಾವೇನು ಮಾರ್ಗದರ್ಶನ ಮಾಡಬಹುದು. ಕೆಲವೊಮ್ಮೆ ನಾವು ಕೊಡುವ ಹಣವನ್ನು ದುಂದುವೆಚ್ಚ ಮಾಡದ ರೀತಿ ಅವರಿಗೆ ಯಾವ ರೀತಿ ತಿಳಿ ಹೇಳಬಹುದು ಎಂಬ ಬಗ್ಗೆ ತಿಳಿಸಿ– ರಾಜಶ್ರೀ, ವಿಟ್ಲ, ದಕ್ಷಿಣ ಕನ್ನಡ ಜಿಲ್ಲೆ.
ಇಂದಿನ ದಿನಗಳಲ್ಲಿ ಎಳೆಯ ಮಕ್ಕಳ ಕೈಯಲ್ಲಿ ಅನಿವಾರ್ಯವಾಗಿ ಹಣ ನೀಡಬೇಕಾದ ಪರಿಸ್ಥಿತಿ ಇದ್ದಾಗ ಅದನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಇರುವ ವ್ಯವಸ್ಥೆಯಲ್ಲಿ ನಾವು ಅವರಿಗೆ ಸರಿಯಾಗಿ ತಿಳಿವಳಿಕೆ ನೀಡಿ ಹಣವನ್ನು ಅನಿವಾರ್ಯ ಸಂದರ್ಭದಲ್ಲಿ ಉಪಯೋಗಿಸುವುದು ಹಾಗೂ ಅದರ ಮಹತ್ವವನ್ನು ಸೂಕ್ತವಾಗಿ ತಿಳಿಸಿ ಹೇಳಬಹುದು.
ವಿದ್ಯಾರ್ಥಿಗಳು ತಮ್ಮ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಹಣಕಾಸು ಯೋಜನೆ ಮತ್ತು ಉಳಿತಾಯ ಅಥವಾ ಹೂಡಿಕೆ ಕುರಿತು ಜಾಗೃತಿ ಹೊಂದಬೇಕಾಗುವುದು ಮುಖ್ಯವಾಗಿದೆ. ಪ್ರಾರಂಭಿಕ ಹಂತದಲ್ಲಿ ಹಣಕಾಸಿನ ರಕ್ಷಣೆ, ಬಡ್ಡಿದರ, ಹೂಡಿಕೆಯ ವಿವಿಧ ಮಾರ್ಗಗಳು, ದೀರ್ಘಾವಧಿಯಲ್ಲಿ ಸಂಚಯವಾಗುವ ಬಡ್ಡಿ ಅಥವಾ ಹೂಡಿಕೆಯ ಸಂಚಿತ ಆದಾಯ ಇತ್ಯಾದಿ ಕುರಿತು ಅವರಿಗೆ ಅರ್ಥ ಮಾಡಿಕೊಡಬೇಕು. ಅವರು ಭವಿಷ್ಯದ ಆರ್ಥಿಕ ನೆಲೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲು ನೆರವಾಗುವ ಮಾಹಿತಿ ನೀಡಬೇಕು.
ಹೂಡಿಕೆ ಮತ್ತು ಹಣಕಾಸು ಜಾಗೃತಿಯು ವಿವಿಧ ಹೂಡಿಕೆಯ ಅವಕಾಶಗಳಾದ ಷೇರು ಮಾರುಕಟ್ಟೆ, ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್), ಬಾಂಡ್, ಮ್ಯೂಚುವಲ್ ಫಂಡ್, ಸ್ಥಿರ ಆಸ್ತಿ ಮತ್ತು ಇತರೆ ಉಳಿತಾಯದ ಅವಶ್ಯಕತೆ ಬಗ್ಗೆ ತಿಳಿಯುವಲ್ಲಿ ಇದು ಅವರಿಗೆ ನೆರವಾಗುತ್ತದೆ. ಇಂತಹ ಜಾಗೃತಿಯು ಯುವಜನರಿಗೆ ಕೇವಲ ಉಳಿತಾಯದ ಮಹತ್ವವನ್ನು ಮಾತ್ರವಲ್ಲ, ಬಡ್ಡಿ ಮತ್ತು ವಿವಿಧ ಬಗೆಯ ಹೂಡಿಕೆಗಳಲ್ಲಿ ಹಣ ಹೂಡುವುದರಿಂದ ಉಂಟಾಗುವ ನಷ್ಟ ಮತ್ತು ಲಾಭ ಎರಡನ್ನೂ ಕಾರಣ ಸಹಿತ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಯುವಜನರಲ್ಲಿ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಹೂಡಿಕೆ ಮತ್ತು ಉಳಿತಾಯದ ಅಭ್ಯಾಸವನ್ನು ಬೆಳೆಸುವುದು ಪಾಲಕರ ವಿಶ್ವಾಸ ವೃದ್ಧಿಸುವಂತೆ ಮಾಡುತ್ತದೆ. ಅಲ್ಲದೆ, ತಮ್ಮ ಭವಿಷ್ಯದ ಆರ್ಥಿಕ ಸ್ಥಿರತೆಗೆ ಒಂದು ಆಧಾರವಾಗಬಲ್ಲದು. ಉದಾಹರಣೆಗೆ ಪದೇ ಪದೇ ಮಾಡುವ ಮನೋರಂಜನಾ ವೆಚ್ಚ, ಅರ್ಹತೆ ಹಾಗೂ ಅನಿವಾರ್ಯತೆಗಿಂತ ಅಧಿಕ ಮಟ್ಟದ ವಿಲಾಸಿ ಬದುಕಿನ ವ್ಯಾಮೋಹ, ನಮ್ಮ ಆರ್ಥಿಕ ಕ್ಷಮತೆ ವೃದ್ಧಿಸುವ ಸಾಮರ್ಥ್ಯವನ್ನು ತಡೆಯುತ್ತದೆ. ಈ ಬಗ್ಗೆ ಪಠ್ಯಕ್ರಮವನ್ನು ಮೀರಿದ ನಿತ್ಯದ ಬದುಕಿಗೆ ಬೇಕಾದ ಜ್ಞಾನದ ಹಂಚಿಕೆಯ ಅರಿವು ಮೂಡಿಸುವ ಜವಾಬ್ದಾರಿ ಹಾಗೂ ಅನಿವಾರ್ಯತೆ ಇಂದು ಪೋಷಕರಿಗೂ, ಶಾಲಾ ಕಾಲೇಜುಗಳಿಗೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.