ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಬ್ಯಾಂಕ್‌ಗೆ ಆರ್‌ಬಿಐ ಸಮ್ಮತಿ

Last Updated 10 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ತಿರುವನಂತಪುರ: ತನ್ನದೇ ಆದ ಬ್ಯಾಂಕ್‌ ಸ್ಥಾಪಿಸುವ ಕೇರಳ ಸರ್ಕಾರದ ಬಹುದಿನದ ಕನಸು ಸದ್ಯದಲ್ಲೇ ನನಸಾಗಲಿದೆ.

ಜಿಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು (ಡಿಸಿಬಿ) ಕೇರಳ ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿ, ‘ಕೇರಳ ಬ್ಯಾಂಕ್‌’ ಸ್ಥಾಪಿಸುವುದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಗುರುವಾರ ತನ್ನ ಅಂತಿಮ ಒಪ್ಪಿಗೆ ನೀಡಿದೆ.

ಉದ್ದೇಶಿತ ಕೇರಳ ಬ್ಯಾಂಕ್‌ ಅಸ್ತಿತ್ವಕ್ಕೆ ಬಂದರೆ ಅದು ರಾಜ್ಯದಲ್ಲಿ ಅತಿ ದೊಡ್ಡ ಬ್ಯಾಂಕಿಂಗ್‌ ಜಾಲ ಹೊಂದಿದ ಬ್ಯಾಂಕ್ ಆಗಿರಲಿದೆ.

ಮುಖ್ಯಮಂತ್ರಿ ಸಂತಸ: ರಾಜ್ಯ ಸರ್ಕಾರವು ತನ್ನದೇ ಆದ ಬ್ಯಾಂಕ್‌ ಹೊಂದಿರುವುದಕ್ಕೆ ಕೇಂದ್ರೀಯ ಬ್ಯಾಂಕ್‌ ಸಮ್ಮತಿ ನೀಡಿರುವುದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಹೊಸ ಬ್ಯಾಂಕ್‌ ಅಸ್ತಿತ್ವಕ್ಕೆ ಬರುವುದರಿಂದ ರಾಜ್ಯದ ಅಭಿವೃದ್ಧಿ ಪ್ರಕ್ರಿಯೆ ತ್ವರಿತಗೊಳ್ಳಲಿದೆ’ ಎಂದು ಹೇಳಿದ್ದಾರೆ.

ಷರತ್ತು: ಕೇರಳ ಬ್ಯಾಂಕ್‌ ಸ್ಥಾಪನೆಗೆ ಅಂತಿಮ ಒಪ್ಪಿಗೆ ನೀಡಿರುವುದು ಕೆಲ ಷರತ್ತುಗಳಿಗೆ ಒಳಪಟ್ಟಿದೆ ಎಂದು ಆರ್‌ಬಿಐ ತಿಳಿಸಿದೆ. ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿ ಇರುವ ಕೆಲ ಪ್ರಕರಣಗಳ ಅಂತಿಮ ತೀರ್ಪಿಗೆ ಈ ಅನುಮತಿಯು ಒಳಪಟ್ಟಿರುತ್ತದೆ.

13 ‘ಡಿಸಿಬಿ’ಗಳನ್ನು ವಿಲೀನಗೊಳಿಸಿ ಹೊಸದಾಗಿ ‘ಕೇರಳ ಬ್ಯಾಂಕ್‌’ ಸ್ಥಾಪಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರತಿಪಕ್ಷ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ನಿಯಂತ್ರಣದಲ್ಲಿ ಇರುವ ಮಲ್ಲಪುರಂ ಜಿಲ್ಲಾ ಸಹಕಾರಿ ಬ್ಯಾಂಕ್‌ ಹೊರತುಪಡಿಸಿ ಉಳಿದೆಲ್ಲ ‘ಡಿಸಿಬಿ’ಗಳು, ಎಡ ಪಕ್ಷಗಳ ನೇತೃತ್ವದಲ್ಲಿನ ಸರ್ಕಾರದ ಉದ್ದೇಶಿತ ವಿಲೀನ ಪ್ರಸ್ತಾವಕ್ಕೆ ಅನುಮೋದನೆ ನೀಡಿವೆ. ಈ ಸಂಬಂಧ ಸರ್ವ ಸದಸ್ಯರ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿವೆ.

ರಾಜ್ಯದಲ್ಲಿ ಸಹಕಾರಿ ವಲಯವನ್ನು ಬಲಪಡಿಸುವುದು ‘ಕೇರಳ ಬ್ಯಾಂಕ್‌’ ಸ್ಥಾಪನೆಯ ಮುಖ್ಯ ಉದ್ದೇಶವಾಗಿದೆ ಎಂಧು ಸರ್ಕಾರ ಹೇಳಿಕೊಂಡಿದೆ.

ಈ ವಿಲೀನ ಪ್ರಸ್ತಾವವು ಸಾಂಪ್ರದಾಯಿಕ ಸಹಕಾರಿ ವಲಯವನ್ನು ನಾಶಪಡಿಸುತ್ತದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಸಹಕಾರಿ ಕ್ಷೇತ್ರ ಬಲಪಡಿಸುವ ಕುರಿತು ಸಲಹೆ ನೀಡಲು ಬೆಂಗಳೂರು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ (ಐಐಎಂ–ಬಿ) ಪ್ರೊ. ಎಂ. ಎಸ್‌. ಶ್ರೀರಾಮ್‌ ಅವರ ಅಧ್ಯಕ್ಷತೆಯಲ್ಲಿ ಕೇರಳ ರಾಜ್ಯ ಸರ್ಕಾರವು ತಜ್ಞರ ಸಮಿತಿ ನೇಮಿಸಿತ್ತು.

2017ರ ಆಗಸ್ಟ್‌ನಲ್ಲಿ ವರದಿ ಸಲ್ಲಿಸಿದ್ದ ಸಮಿತಿಯು, 18 ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು.

ಸಹಕಾರಿ ಬ್ಯಾಂಕ್‌ ಕಾಯ್ದೆ ತಿದ್ದುಪಡಿ?
ಮುಂಬೈ (ಪಿಟಿಐ): ಸಹಕಾರಿ ಬ್ಯಾಂಕ್‌ಗಳ ಆಡಳಿತ ಮತ್ತು ನಿಯಂತ್ರಣ ಕ್ರಮಗಳಲ್ಲಿ ಸುಧಾರಣೆ ತರಲು ಕೈಗೊಳ್ಳಬೇಕಾದ ಹೊಸ ಕ್ರಮಗಳ ಬಗ್ಗೆ ಸಲಹೆ ನೀಡಲು ಸಮಿತಿ ರಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ.

‘ಅಗತ್ಯ ಬಿದ್ದರೆ ಸಹಕಾರಿ ಬ್ಯಾಂಕ್‌ ಕಾಯ್ದೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿಗಳನ್ನೂ ತರಲಾಗುವುದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಹಕಾರಿ ಬ್ಯಾಂಕ್‌ಗಳ ಮೇಲಿನ ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿಯಂತ್ರಣವನ್ನು ಬಿಗಿಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.

‘ಸಹಕಾರಿ ಬ್ಯಾಂಕ್‌ಗಳಲ್ಲಿ ಹಗರಣಗಳು ನಡೆಯುವುದನ್ನು ತಪ್ಪಿಸುವ ಮತ್ತು ಅವುಗಳ ಮೇಲಿನ ನಿಯಂತ್ರಣ ಕ್ರಮಗಳನ್ನು ಬಲಪಡಿಸುವ ಬಗ್ಗೆ ಸಮಿತಿಯು ಅಧ್ಯಯನ ನಡೆಸಲಿದೆ. ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರವು ಎದುರಿಸುತ್ತಿರುವ ಸಮಸ್ಯೆಗಳನ್ನು ಸಮಗ್ರವಾಗಿ ಪರಾಮರ್ಶಿಸಿ ಅಗತ್ಯ ಸಲಹೆಗಳನ್ನೂ ನೀಡಲಿದೆ’ ಎಂದರು.

ಸಹಕಾರಿ ಬ್ಯಾಂಕ್‌ಗಳನ್ನು ರಾಜಕಾರಣಿಗಳು ಮತ್ತು ಕೆಲ ಪ್ರಭಾವಿಗಳ ಆಸ್ತಿ ಎಂಬಂತೆ ಪರಿಗಣಿಸಿದ್ದಾರೆ. ನಿರ್ದೇಶಕ ಮಂಡಳಿಗಳು ಬ್ಯಾಂಕಿಂಗ್‌ ನಿಯಂತ್ರಣ ಕ್ರಮಗಳನ್ನು ನಿರ್ಲಕ್ಷಿಸುತ್ತಿವೆ. ವಸೂಲಾಗದ ಸಾಲದ ಹೊರೆ ಹೆಚ್ಚುತ್ತಿದೆ. ಠೇವಣಿದಾರರ ಹಣಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ. ಹಲವಾರು ಸಹಕಾರಿ ಬ್ಯಾಂಕ್‌ಗಳು ವೈಫಲ್ಯ ಕಂಡಿವೆ. ಹಗರಣಕ್ಕೆ ಸಿಲುಕಿರುವ ಸಹಕಾರಿ ಬ್ಯಾಂಕ್‌ಗಳ ಸಾಲಿಗೆ ಈಗ ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ (ಪಿಎಂಸಿ) ಹೊಸದಾಗಿ ಸೇರ್ಪಡೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT