ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಮಾರುಕಟ್ಟೆಯ ‘ಸ್ಟೋರ್‌ಕಿಂಗ್‌’

Last Updated 19 ಜೂನ್ 2018, 16:05 IST
ಅಕ್ಷರ ಗಾತ್ರ

ಬಿಡದಿ ಬಳಿಯ ವಜರಹಳ್ಳಿಯ ಕಿರಾಣಿ ಅಂಗಡಿಯಲ್ಲಿ ನಾಲ್ಕೈದು ವರ್ಷಗಳ ಹಿಂದೆ ಪರಿಚಯಿಸಿದ ಪುಟ್ಟ ಕಿಯೊಕ್ಸ್‌ನಲ್ಲಿ ಹಳ್ಳಿಯ ಜನರು ತಮಗೆ ಬೇಕಾದ ಸರಕನ್ನು ಆಯ್ಕೆ ಮಾಡಿ ಅದರ ಬೆಲೆಯನ್ನು ಮಾಲೀಕನಿಗೆ ಮುಂಗಡ ಪಾವತಿಸಿದ್ದರು. ಒಂದೆರಡು ದಿನಗಳಲ್ಲಿ ಅವರು ಬಯಸಿದ್ದ ಸರಕು ಕೈಸೇರಿತ್ತು.

ಇಲ್ಲಿ ಖರೀದಿದಾರ ತನಗೆ ಬೇಕಾದ ಸರಕಿಗಾಗಿ ರಾಮನಗರಕ್ಕೆ ಇಲ್ಲವೆ ಬೆಂಗಳೂರಿಗೆ ಹೋಗಿ ಸಮಯ ವ್ಯರ್ಥ ಮಾಡಿರಲಿಲ್ಲ. ಮಹಾನಗರಗಳಲ್ಲಿ ಸಿಗುವ ಸರಕು ಅವರ ಮನೆ ಬಾಗಿಲಿಗೆ ಬಂದಿತ್ತು. ಕಿರಾಣಿ ಅಂಗಡಿ ಮಾಲೀಕನೂ ಈ ಸರಕುಗಳನ್ನು ತನ್ನ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿರಲಿಲ್ಲ. ಗೋದಾಮಿನಲ್ಲಿ ಅವುಗಳನ್ನು ಸಂಗ್ರಹಿಸಿ ಇಟ್ಟಿರಲೂ ಇಲ್ಲ. ಇಲ್ಲಿ ಸ್ಟೋರ್‌ಕಿಂಗ್‌ ಹೆಸರಿನ ನವೋದ್ಯಮವು ಗ್ರಾಮೀಣ ಜನರ ಅಗತ್ಯಗಳನ್ನು ಪೂರೈಸಲು ಮಧ್ಯವರ್ತಿಯಾಗಿ ಕೆಲಸ ಮಾಡಿತ್ತು. ಮಾಲೀಕನು ಗ್ರಾಹಕರ ಇಷ್ಟದ ಸರಕಿಗೆ ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿದ್ದ ಸ್ಟೋರ್‌ಕಿಂಗ್‌ಗೆ ಮಾಹಿತಿ ನೀಡಿ, ಗ್ರಾಹಕರು ನೀಡಿದ್ದ ಹಣ ಪಾವತಿಸಿದ್ದ. ಒಂದೆರಡು ದಿನಗಳಲ್ಲಿ ಸರಕು ಗ್ರಾಹಕರ ಕೈಸೇರಿತ್ತು.

2015ರ ಮೇ ತಿಂಗಳವರೆಗೆ ಇಂತಹ 400 ಕಿರಾಣಿ ಅಂಗಡಿಗಳ ಮೂಲಕ ಹಳ್ಳಿಗಳಲ್ಲಿನ ಗ್ರಾಹಕರನ್ನು ತಲುಪಿದ್ದ ಸ್ಟೋರ್‌ಕಿಂಗ್‌ ವ್ಯಾಪ್ತಿಗೆ ಬಂದಿರುವ ಕಿರಾಣಿ ಅಂಗಡಿಗಳ ಸಂಖ್ಯೆ ಈಗ 52 ಸಾವಿರಕ್ಕೆ ಏರಿದೆ. ಇದು ಈ ನವೋದ್ಯಮದ ಯಶಸ್ಸಿಗೆ ಕನ್ನಡಿ ಹಿಡಿಯುತ್ತದೆ. ರಾಜ್ಯದಲ್ಲಷ್ಟೇ ಅಲ್ಲದೆ ದಕ್ಷಿಣ ಭಾರತ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್‌ಗೂ ಈ ಸ್ಟಾರ್ಟ್‌ಅಪ್‌ನ ವ್ಯಾಪ್ತಿ ವಿಸ್ತರಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಬೇಡಿಕೆ ಇರುವ 400ರಷ್ಟು ಬಹುಬಗೆಯ ಸರಕುಗಳನ್ನು ಇಲ್ಲಿ ಪೂರೈಸಲಾಗುತ್ತಿದೆ. ಚಿಲ್ಲರೆ ವಹಿವಾಟುದಾರನೇ ದೊರೆ ಎನ್ನುವ ತತ್ವದಲ್ಲಿ ನಂಬಿಕೆ ಇರಿಸಿ ಈ ನವೋದ್ಯಮ ಸ್ಥಾಪಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳು ವಿಶ್ವಬ್ಯಾಂಕ್‌, ‘ನಾಸಾ’ದಂತಹ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ನೆರವಾಗುವ ತಂತ್ರಾಂಶ ಅಭಿವೃದ್ಧಿಪಡಿಸುತ್ತಿವೆ. ಗ್ರಾಮೀಣ ಪ್ರದೇಶದ ಜನರ ಬದುಕು ಹಸನುಗೊಳಿಸುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲು ಅಷ್ಟೇನೂ ಗಮನ ನೀಡುತ್ತಿಲ್ಲ. ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲು ಏನಾದರೂ ಮಾಡಬೇಕೆಂಬ ಶ್ರೀಧರ್‌ ಅವರ ತುಡಿತದ ಫಲವಾಗಿಯೇ ಈ ಸ್ಟೋರ್‌ಕಿಂಗ್ ನವೋದ್ಯಮ ಅಸ್ತಿತ್ವಕ್ಕೆ ಬಂದಿದೆ.

2012ರಿಂದೀಚೆಗೆ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚ ತೊಡಗಿದೆ. ದೇಶದ ಇನ್ನೂ 60 ಕೋಟಿ ಜನರಿಗೆ ಇನ್ನೂ ಸ್ಮಾರ್ಟ್‌ಫೋನ್‌ ಲಭ್ಯವಾಗಿಲ್ಲ. ಇವುಗಳಿಗೆ ಗ್ರಾಮೀಣ ಭಾಗದಲ್ಲಿ ವ್ಯಾಪಕ ಮಾರುಕಟ್ಟೆ ಇದೆ. ಈ ಸ್ಮಾರ್ಟ್‌ಫೋನ್‌ಗಳನ್ನೂ ಹಳ್ಳಿಯ ಜನರು ತಮ್ಮ ಮನೆ ಹತ್ತಿರದ ಕಿರಾಣಿ ಅಂಗಡಿಯಿಂದಲೇ ಖರೀದಿಸುವಂತೆ ಮಾಡುವುದು. ಕಿರಾಣಿ ಅಂಗಡಿಯಲ್ಲಿನ ಕಿಯೊಕ್ಸ್‌, ಟೆಲಿವಿಷನ್‌, ಟ್ಯಾಬ್‌ನಲ್ಲಿನ ಸರಕುಗಳ ವಿವರಗಳಲ್ಲಿ ತಮಗೆ ಬೇಕಾದ ಸರಕನ್ನು ಗುರುತಿಸಿ, ಅಂಗಡಿ ಮಾಲೀಕನಿಗೆ ಮುಂಗಡ ಹಣ ಪಾವತಿಸಿ, ಒಂದೆರಡು ದಿನಗಳಲ್ಲಿ ಸರಕು ಪಡೆಯುವ ಸೌಲಭ್ಯವನ್ನು ಸ್ಟೋರ್‌ಕಿಂಗ್‌ ಒದಗಿಸುತ್ತಿದೆ. ಗ್ರಾಮೀಣ ಜನರ ತಂತ್ರಜ್ಞಾನ ಬಳಕೆಯನ್ನು ಸರಳ ಮಾಡುವುದೂ ಸ್ಟೋರ್‌ ಕಿಂಗ್‌ನ ಮುಖ್ಯ ಉದ್ದೇಶವಾಗಿದೆ.

ಹಳ್ಳಿಯಲ್ಲಿನ ಕಿರಾಣಿ ಅಂಗಡಿಗಳ ಮಾಲೀಕರ ಜತೆ ಸ್ಥಳೀಯ ಜನರು ಸಹಜವಾಗಿಯೇ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಗ್ರಾಹಕ ಮತ್ತು ಅಂಗಡಿ ಮಾಲೀಕನ ಮಧ್ಯೆ ವಹಿವಾಟಿನ ಜತೆಗೆ ಆತ್ಮೀಯ ಸಂಬಂಧವೂ ಬೆಳೆದು ಬಂದಿರುತ್ತದೆ. ಅಲ್ಲಿ ನಂಬಿಕೆಯೇ ಮುಖ್ಯವಾಗಿರುತ್ತದೆ. ಬಾಲ್ಯದಿಂದಲೇ ಅಂಗಡಿ ಜತೆ ನಂಟು ಬೆಳೆದು ಬಂದಿರುತ್ತದೆ. ನಗರಗಳಿಗೆ ದುಡಿಯಲು ಹೋದವರಿಗೂ ಅಂಗಡಿ ಜತೆಗಿನ ನೆನಪುಗಳು ಹಸಿರಾಗಿರುತ್ತವೆ. ಇದನ್ನು ಆಧರಿಸಿಯೇ ಸ್ಟೋರ್‌ಕಿಂಗ್‌ ತನ್ನ ವಹಿವಾಟು ವಿಸ್ತರಿಸಿದೆ. ಅಂಗಡಿ ಮಾಲೀಕನನ್ನು ವಹಿವಾಟಿನ ರಾಜನನ್ನಾಗಿ ಮಾಡುವುದೇ ಈ ಸ್ಟಾರ್ಟ್‌ಅಪ್‌ನ ಇನ್ನೊಂದು ಮುಖ್ಯ ಉದ್ದೇಶವಾಗಿದೆ.

ಇ–ಕಾಮರ್ಸ್‌ನ ದೈತ್ಯ ಸಂಸ್ಥೆಗಳಾಗಿರುವ ಫ್ಲಿಪ್‌ಕಾರ್ಟ್‌, ಅಮೆಜಾನ್‌ಗಳಿಂದ ಗ್ರಾಮೀಣ ಪ್ರದೇಶದ ಗ್ರಾಹಕರ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಲ್ಲಿ ಸರಕು ಪೂರೈಸುವುದರಲ್ಲಿ ಒಂದೇ ಬಗೆಯ ಹೆಸರಿನ ಗೊಂದಲ, ಅಸ್ಪಷ್ಟ ವಿಳಾಸ ಮುಂತಾದವು ಅಡ್ಡಿಯಾಗುತ್ತವೆ. ಬಳಕೆದಾರರು ಕಿರಾಣಿ ಅಂಗಡಿಗಳ ಮೂಲಕ ಹೆಚ್ಚು ಸುಲಭವಾಗಿ ಸರಕುಗಳನ್ನು ಖರೀದಿಸಬಹುದಾಗಿದೆ.

ಸ್ಟೋರ್‌ಕಿಂಗ್‌ ಮತ್ತು ಗ್ರಾಹಕರ ಮಧ್ಯೆ ಚಿಲ್ಲರೆ ವ್ಯಾಪಾರಸ್ಥರು ಮಧ್ಯದ ಕೊಂಡಿಯಾಗಿರುತ್ತಾರೆ. ಗ್ರಾಹಕರು ದಿನಸಿ ಜತೆ, ಮಿಕ್ಸರ್‌ ಗ್ರೈಂಡರ್‌, ಸ್ಮಾರ್ಟ್‌ಫೋನ್‌, ಟಿ.ವಿಗಳನ್ನೂ ಖರೀದಿಸಬಹುದಾಗಿದೆ. ಇಂತಹ ವಹಿವಾಟಿನಲ್ಲಿ ನಂಬಿಕೆ ಮುಖ್ಯವಾಗಿರುತ್ತದೆ. ಬಹಳ ವರ್ಷಗಳಿಂದ ವಹಿವಾಟು ನಡೆಸುವ ಮನೆ ಸಮೀಪದ ಕಿರಾಣಿ ಅಂಗಡಿಗಳ ಮಾಲೀಕರ ಜತೆಗಿನ ಪರಿಚಯವು ಈ ಬಗೆಯ ವಹಿವಾಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಾಲೀಕನು ಬೇಕಿದ್ದರೆ ಮಾರಿದ ಸರಕಿಗೆ ಕಂತಿನಲ್ಲಿ ಹಣ ಪಡೆಯಬಹುದು.

‘2012ರಲ್ಲಿ ಈ ಪರಿಕಲ್ಪನೆಯನ್ನು ಜಾರಿಗೆ ತರಲು ಹೊರಟಾಗ, ಏಯ್‌ ಹೋಗ್ರಿ, ಯಾರ್‌ ತಗೋಳ್ತಾರೆ ನಿಮ್ಮ ಸರಕನ್ನು ಅಂತ ಮೂಗು ಮುರಿದವರೆ ಹೆಚ್ಚು. ಕಿರಾಣಿ ಅಂಗಡಿ ಮಾಲೀಕರು ಕೇಳುವ ನೂರೆಂಟು ಪ್ರಶ್ನೆಗಳಿಗೆ ಉತ್ತರ ನೀಡಿ, ವಹಿವಾಟಿನ ಸ್ವರೂಪದ ಬಗ್ಗೆ ನಂಬಿಕೆ ಮೂಡಿಸಿ, ಸರಕು ಖರೀದಿಗೆ ಪಾವತಿಸಿದ ಹಣ ನುಂಗಿ ಹಾಕುವುದಿಲ್ಲ ಎನ್ನುವುದನ್ನು ಮನವರಿಕೆ ಮಾಡಿಸುವುದೇ ದೊಡ್ಡ ತಲೆ ನೋವು ಆಗಿತ್ತು. ಹೀಗಾಗಿ ಆರಂಭಿಕ ವರ್ಷದಲ್ಲಿ ವಹಿವಾಟು ಕುಂಟುತ್ತಲೇ ಸಾಗಿತ್ತು. 2015ರ ಮೇ ತನಕ ಕೇವಲ 400 ಅಂಗಡಿಗಳನ್ನು ತಲುಪಲು ಸಾಧ್ಯವಾಗಿತ್ತು. ಈಗ ಇವುಗಳ ಸಂಖ್ಯೆ 52 ಸಾವಿರಕ್ಕೆ ಏರಿದೆ’ ಎಂದು ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಶ್ರೀಧರ್‌ ಗುಂಡಯ್ಯ ಅವರು ಹೇಳುತ್ತಾರೆ.

‘2008 ರಿಂದ ಆರಂಭವಾದ ಟೆಲಿವಿಷನ್‌ ಕಾರ್ಯಕ್ರಮಗಳ ನೇರ ಪ್ರಸಾರ (ಡಿಟಿಎಚ್‌) ಪರಿಕಲ್ಪನೆಯು ಗೃಹೋಪಯೋಗಿ ಉತ್ಪನ್ನಗಳಿಗೂ ವಿಸ್ತರಣೆಯಾದ ನಂತರ ಗ್ರಾಹಕರ ಮಾರುಕಟ್ಟೆ ವ್ಯಾಪಕವಾಗಿ ವಿಸ್ತರಿಸಿದೆ. ಸಣ್ಣ, ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚಿದಂತೆ, ಗೃಹೋಪಯೋಗಿ ಸಲಕರಣೆಗಳಿಗೆ ಬೇಡಿಕೆ ಹೆಚ್ಚುತ್ತ ಇದೆ. ಈ ಕ್ಷೇತ್ರದಲ್ಲಿ ಈಗ ದೊಡ್ಡ ಕ್ರಾಂತಿಯೇ ನಡೆದಿದೆ. ಗ್ರಾಹಕರ ಮಾರುಕಟ್ಟೆಯನ್ನು ಆಳುತ್ತಿರುವುದು ಟೆಲಿವಿಷನ್‌ ಮಾಧ್ಯಮವೇ ಹೊರತು ಇಂಟರ್‌ನೆಟ್‌ ಅಲ್ಲ. ಜನರ ಬಳಿ ಈಗ ದುಡ್ಡಿದೆ. ತಂತ್ರಜ್ಞಾನವನ್ನು ಚಿಲ್ಲರೆ ವ್ಯಾಪಾರಿಯ ಕೈಗೆ ಕೊಟ್ಟು ಗ್ರಾಹಕರ ಮನೆ ಬಾಗಿಲಿಗೆ ಸರಕು ಪೂರೈಸುವುದು ಭಾರಿ ಯಶಸ್ಸು ಕಾಣುತ್ತಿದೆ.

‘ಕನಿಷ್ಠ 6 ತಿಂಗಳವರೆಗೆ ಕಿರಾಣಿ ಅಂಗಡಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು ಸ್ಟೋರ್‌ಕಿಂಗ್‌ನ ವಹಿವಾಟಿನ ಜತೆ ಕೈಜೋಡಿಸಬಹುದು. ಅಗತ್ಯ ಇದ್ದವರಿಗೆ ಸಾಲದ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲ ವಿತರಿಸಲು ಸ್ಟೋರ್‌ಕಿಂಗ್‌ ನೆರವು ನೀಡಲಿದೆ. 15 ರಿಂದ 20 ರಿಂದ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನೆರವಿನಿಂದ ಇದುವರೆಗೆ ₹ 40 ಕೋಟಿ ಸಾಲ ವಿತರಣೆ ಮಾಡಲಾಗಿದೆ.

‘ಜನಪ್ರಿಯ ಬ್ರ್ಯಾಂಡ್‌ನ ಸರಕು ತಯಾರಿಸುವ 120 ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಯು ಇತರ ಸರಕುಗಳ ವಿತರಕರ ಮೂಲಕ ಕಿರಾಣಿ ಅಂಗಡಿಗಳಿಗೆ ಸರಕುಗಳನ್ನು ತಲುಪಿಸುತ್ತದೆ. ಈ ವಹಿವಾಟಿನಿಂದ ಗ್ರಾಮೀಣ ಭಾಗದ ಗ್ರಾಹಕರ ಅಭಿರುಚಿ, ವಹಿವಾಟಿನ ಸ್ವರೂಪ, ಆದಾಯ ಮತ್ತಿತರ ವಿವರಗಳ ದತ್ತಾಂಶವೂ ಸಂಗ್ರಹವಾಗುತ್ತಿದೆ.

‘ಸರಕುಗಳನ್ನು ಖರೀದಿಸುವ ಗ್ರಾಹಕರ ಪ್ರವೃತ್ತಿ ಬದಲಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಗ್ರಾಮೀಣ ಭಾಗದಲ್ಲಿ ಸ್ಟೋರ್‌ಕಿಂಗ್‌ ಮನೆ ಮಾತಾಗುತ್ತಿದೆ. ನಮ್ಮ ಜತೆ ವಹಿವಾಟು ನಡೆಸಲು ಬರುವವರ ಸಂಖ್ಯೆ ಹೆಚ್ಚುತ್ತಿದೆ' ಎಂದು ಅವರು ವಿಶ್ವಾಸದಿಂದ ಹೇಳುತ್ತಾರೆ.

ಕಿರಾಣಿ ಅಂಗಡಿ ಮಾಲೀಕನು ಸ್ಟೋರ್‌ಕಿಂಗ್‌ನ ಶಾಖೆಗೆ ಬ್ಯಾಂಕ್‌ ಮೂಲಕ ದುಡ್ಡು ಜಮೆ ಮಾಡಿದ ನಂತರವೇ ಆತನಿಗೆ ಸರಕನ್ನು ಕಳಿಸಿಕೊಡಲಾಗುತ್ತದೆ. ಸ್ಟೋರ್‌ಕಿಂಗ್‌ ಆ್ಯಪ್ ಇದೆ. ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಇದರಲ್ಲಿ ವ್ಯವಹರಿಸಬಹುದು. ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗುವ ಸರಕುಗಳ ಪೈಕಿ ಕ್ರೀಂ, ಶಾಂಪು, ಸೋಪ್‌, ಸ್ಮಾರ್ಟ್‌ಫೋನ್‌ಗಳು ಮುಂಚೂಣಿಯಲ್ಲಿ ಇವೆ. ಸಾಗಣೆ ಮಧ್ಯೆ ಸರಕಿಗೆ ಧಕ್ಕೆಯಾಗಿದ್ದರೆ ಹೊಸ ಸರಕು ಪೂರೈಸಲಾಗುವುದು.

ಸ್ಟೋರ್‌ಕಿಂಗ್‌ ಸಿಇಒ ಶ್ರೀಧರ್ ಗುಂಡಯ್ಯ
ಸ್ಟೋರ್‌ಕಿಂಗ್‌ ಸಿಇಒ ಶ್ರೀಧರ್ ಗುಂಡಯ್ಯ

‘ಸರಕುಗಳ ಮಾರಾಟ ಅಷ್ಟೇ ಅಲ್ಲದೆ, ಹಣ ವರ್ಗಾವಣೆ, ವಿದ್ಯುತ್‌ ಬಿಲ್‌ ಪಾವತಿಯಂತಹ ನಾಗರಿಕ ಸೇವೆಗಳನ್ನೂ ಸ್ಟೋರ್‌ಕಿಂಗ್‌ ಮೂಲಕ ನಿರ್ವಹಿಸಬಹುದು. ಒಟ್ಟಾರೆ ಇದೊಂದು ಸೂಪರ್‌ ಮಾರ್ಕೆಟ್‌, ಬೆಂಗಳೂರು ವನ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕು, ಹೋಬಳಿ, ಹಳ್ಳಿಗಳೇ ಇದರ ಮುಖ್ಯ ಮಾರುಕಟ್ಟೆ. ಇಂಡೊನೇಷ್ಯಾದಲ್ಲಿಯೂ 6 ತಿಂಗಳಿನಿಂದ ತನ್ನ ವಹಿವಾಟು ವಿಸ್ತರಿಸಿದೆ. ನಮ್ಮಲ್ಲಿ ವಹಿವಾಟು ಬೇರು ಬಿಡಲು ನಾಲ್ಕು ವರ್ಷಗಳು ಬೇಕಾದರೆ, ಅಲ್ಲಿ ಕೇವಲ 6 ತಿಂಗಳಲ್ಲಿ ಸಾಧ್ಯವಾಗಿದೆ. ’ ಎಂದು ಅವರು ನವೋದ್ಯಮದ ಬಗ್ಗೆ ಕಾರ್ಯವ್ಯಾಪ್ತಿ ವಿಸ್ತರಣೆ ಬಗ್ಗೆ ವಿವರಿಸುತ್ತಾರೆ. ಮಾಹಿತಿಗೆ www.storeking.in ಅಂತರ್ಜಾಲ ತಾಣ ಮತ್ತು 1800 200 1996 ಸಂಪರ್ಕಿಸಿ.

ಆರಂಭಿಕ ಹೂಡಿಕೆ ₹ 20 ಲಕ್ಷ

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುವ ಶ್ರೀಧರ್‌ ಗುಂಡಯ್ಯ (35) ಅವರು 2004ರಲ್ಲಿ ಎಂಜಿನಿಯರಿಂಗ್‌ ಕಂಪ್ಯೂಟರ್‌ ಸೈನ್ಸ್‌ ಪೂರ್ಣಗೊಳಿಸಿದ ಶ್ರೀಧರ್‌ ಅವರು ಓದಿನ ಜತೆಗೆ ಸಾಫ್ಟ್‌ವೇರ್‌ ಸಂಸ್ಥೆಯಲ್ಲಿಯೂ ಕೆಲಸ ಮಾಡುತ್ತಿದ್ದರು. ಲಂಡನ್‌ನಲ್ಲಿ ಇಂಟರ್‌ನೆಟ್ ಟೆಕ್ನಾಲಜಿಯಲ್ಲಿ ಮಾಸ್ಟರ್ಸ್‌ ಪದವಿ ಪಡೆದರು. ಅಮೆರಿಕದಲ್ಲಿ 2 ವರ್ಷ ಕೆಲಸ ಮಾಡಿದ ನಂತರ 2008ರಲ್ಲಿ ಭಾರತಕ್ಕೆ ಮರಳಿ ಯೂಲೋಪ್‌ (yulop) ಸಂಸ್ಥೆ ಸ್ಥಾಪಿಸಿದ್ದರು.

ಒಂದೂವರೆ ವರ್ಷ ಸಂಶೋಧನೆಯಲ್ಲಿ ತೊಡಗಿದ್ದಾಗ, ಚಿಲ್ಲರೆ ವರ್ತಕರ ಜತೆ ಸೇರಿ ಕೆಲಸ ಮಾಡಿದ್ದರು. ಆ ಸಮಯದಲ್ಲಿಯೇ ಗ್ರಾಮೀಣ ಮಾರುಕಟ್ಟೆ ಪ್ರವೇಶಿಸಿಲು ಸ್ಟೋರ್‌ಕಿಂಗ್‌ ನವೋದ್ಯಮ ಸ್ಥಾಪಿಸಿದ್ದರು. ಆರಂಭದಲ್ಲಿ ಶ್ರೀಧರ್‌ ಅವರು ತಮ್ಮ ಸ್ವಂತ ದುಡಿಮೆಯ ₹ 20 ಲಕ್ಷ ಹೂಡಿಕೆ ಮಾಡಿದ್ದರು. ಇದುವರೆಗೆ ₹ 120 ಕೋಟಿಯಷ್ಟು ಬಂಡವಾಳವನ್ನು ಬೇರೆ ಮೂಲಗಳಿಂದ ಹೂಡಿಕೆ ಮಾಡಲಾಗಿದೆ. ಮಾರ್ಚ್ ಅಂತ್ಯಕ್ಕೆ ₹ 1,350 ಕೋಟಿಗಳಷ್ಟು ವಹಿವಾಟು ನಡೆಸಿರುವ ಸಂಸ್ಥೆ, ಪ್ರಸಕ್ತ ವರ್ಷ ₹ 2,500 ಕೋಟಿಗಳಷ್ಟು ವಹಿವಾಟು ನಡೆಸುವ ಗುರಿ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT