ನವದೆಹಲಿ: ಷೇರು ಸೂಚ್ಯಂಕಗಳು ಹೊಸ ಎತ್ತರಕ್ಕೆ ಜಿಗಿತ ಕಂಡಿದ್ದರಿಂದ ಪ್ರಸಕ್ತ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಹೂಡಿಕೆದಾರರ ಸಂಪತ್ತು ₹110.57 ಲಕ್ಷ ಕೋಟಿ ಹೆಚ್ಚಳವಾಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 12,026 ಅಂಶ (ಶೇ 16.64ರಷ್ಟು) ಏರಿಕೆ ಕಂಡಿದೆ.
ಬಿಎಸ್‌ಇ ಗುಚ್ಛದಲ್ಲಿನ ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ₹110 ಲಕ್ಷ ಕೋಟಿಯಿಂದ ₹474 ಲಕ್ಷ ಕೋಟಿಗೆ (5.67 ಟ್ರಿಲಿಯನ್ ಡಾಲರ್) ಏರಿಕೆಯಾಗಿದೆ. ಸೆಪ್ಟೆಂಬರ್ 27ರಂದು ನಡೆದ ವಹಿವಾಟಿನಲ್ಲಿ ಎಂ–ಕ್ಯಾಪ್ ₹477 ಲಕ್ಷ ಕೋಟಿ ದಾಟಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ.
‘ದೇಶೀಯ ಮಟ್ಟದಲ್ಲಿ ಹೆಚ್ಚಾದ ನಗದು ಹರಿವಿನಿಂದಾಗಿ ಮ್ಯೂಚುವಲ್ ಫಂಡ್ ಉದ್ಯಮಕ್ಕೆ ಒಳಹರಿವಿನಲ್ಲಿ ಏರಿಕೆಯಾಗಿದೆ’ ಎಂದು ಸ್ವಸ್ತಿಕ್ ಇನ್‌ವೆಸ್ಟ್‌ಮಾರ್ಟ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಸಂತೋಷ್ ಮೀನಾ ಹೇಳಿದ್ದಾರೆ.
ವರ್ಷದ ಆರಂಭದಲ್ಲಿ 72,217 ಅಂಶ ಇದ್ದ ಸೆನ್ಸೆಕ್ಸ್, ಈಗ 84,266ಕ್ಕೆ ಮುಟ್ಟಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ 12,645 ಅಂಶ (ಶೇ 34.32ರಷ್ಟು) ಹಾಗೂ ಸ್ಮಾಲ್‌ಕ್ಯಾಪ್ ಸೂಚ್ಯಂಕ 14,777 ಅಂಶ (ಶೇ 34.62ರಷ್ಟು) ಏರಿಕೆ ಕಂಡಿದೆ.