ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75 ಸಾವಿರ ದಾಟಿದ ಸೆನ್ಸೆಕ್ಸ್‌: ಸಾರ್ವಕಾಲಿಕ ಗರಿಷ್ಠ

Published 10 ಏಪ್ರಿಲ್ 2024, 15:45 IST
Last Updated 10 ಏಪ್ರಿಲ್ 2024, 15:45 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರ ನಡೆದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. 

ಎಫ್‌ಎಂಸಿಜಿ, ಇಂಧನ ಮತ್ತು ಲೋಹದ ಷೇರುಗಳ ಗಳಿಕೆಯಿಂದಾಗಿ ಸೂಚ್ಯಂಕಗಳು ಏರಿಕೆ ಕಂಡವು. ಹೂಡಿಕೆದಾರರ ಸಂಪತ್ತು ಒಂದೇ ದಿನ ₹2.27 ಲಕ್ಷ ಕೋಟಿ ಏರಿಕೆಯಾಗಿದೆ. ಬಿಎಸ್‌ಇ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹402 ಲಕ್ಷ ಕೋಟಿ ದಾಟಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 354 ಅಂಶ ಹೆಚ್ಚಳವಾಗಿ 75,038ಕ್ಕೆ ಸ್ಥಿರಗೊಂಡಿತು. ವಹಿವಾಟಿನ ವೇಳೆ 75,105ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 111 ಅಂಶ ಏರಿಕೆ ಕಂಡು 22,753ಕ್ಕೆ ಕೊನೆಗೊಂಡಿತು.

ಐಟಿಸಿ, ಕೋಟಕ್‌ ಮಹೀಂದ್ರ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಏಷ್ಯನ್‌ ಪೇಂಟ್ಸ್‌, ಟೆಕ್‌ ಮಹೀಂದ್ರ, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ನೆಸ್ಲೆ ಕಂಪನಿಗಳ ಷೇರು ಮೌಲ್ಯ ಏರಿಕೆಯಾಗಿದೆ.

ಮಾರುತಿ ಸುಜುಕಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಲಾರ್ಸೆನ್‌ ಆ್ಯಂಡ್‌ ಟೊಬ್ರೊ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಮೌಲ್ಯ ಇಳಿಕೆ ಕಂಡಿದೆ. ರಂಜಾನ್‌ ಹಬ್ಬದ ಅಂಗವಾಗಿ ಷೇರುಪೇಟೆಗೆ ಗುರುವಾರ ರಜೆ ಇರಲಿದೆ.

‘ಭಾರತದ ಮಾರುಕಟ್ಟೆಯು ಏಷ್ಯನ್ ಮತ್ತು ಯುರೋಪಿಯನ್ ಮಾರುಕಟ್ಟೆಗಿಂತ ಕೊಂಚ ಹಿಂದುಳಿದಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರವಾದ ಪ್ರದರ್ಶನ ಕಂಡಿದೆ. ಇದು ಸೂಚ್ಯಂಕಗಳು ಏರಿಕೆಗೆ ಕಾರಣವಾಗಿದೆ’ ಎಂದು ಜಿಯೊಜಿತ್‌ ಫೈನಾನ್ಷಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ನ ಬಡ್ಡಿದರ ಕಡಿತ  ಹಾಗೂ ಮಾರ್ಚ್‌ ತಿಂಗಳ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ವರದಿಯತ್ತ ಹೂಡಿಕೆದಾರರು ಚಿತ್ತ ನೆಟ್ಟಿದ್ದರಿಂದ ಮಾರುಕಟ್ಟೆ ಏರಿಕೆ ಕಂಡಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT