ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಷೇರು ಮಾರುಕಟ್ಟೆ | ಸೆನ್ಸೆಕ್ಸ್‌ 667, ನಿಫ್ಟಿ 183 ಅಂಶ ಇಳಿಕೆ

Published 29 ಮೇ 2024, 13:50 IST
Last Updated 29 ಮೇ 2024, 13:50 IST
ಅಕ್ಷರ ಗಾತ್ರ

ಮುಂಬೈ/ ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಬುಧವಾರವೂ ಕರಡಿ ಕುಣಿತ ಜೋರಾಗಿತ್ತು. ಲೋಕಸಭಾ ಚುನಾವಣಾ ಫಲಿತಾಂಶದ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಲಾಭ  ಮಾಡಿಕೊಳ್ಳುವ ಉದ್ದೇಶದಿಂದ ಷೇರುಗಳ ಮಾರಾಟಕ್ಕೆ ಮುಂದಾದರು. ಇದರಿಂದ ಸೂಚ್ಯಂಕಗಳು ಇಳಿಕೆಯ ಹಾದಿ ಹಿಡಿದವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 667 ಅಂಶ ಇಳಿಕೆ (ಶೇ 0.89ರಷ್ಟು) ಕಂಡು 74,502 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ವಹಿವಾಟಿನ ಒಂದು ಹಂತದಲ್ಲಿ 715 ಅಂಶ ಇಳಿಕೆ ಕಂಡಿತ್ತು.  

ಎರಡು ದಿನಗಳ ಹಿಂದೆ ಸಾರ್ವಕಾಲಿಕ ಗರಿಷ್ಠ ಮಟ್ಟ ದಾಖಲಿಸಿದ್ದ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 183 ಅಂಶ ಇಳಿಕೆ (ಶೇ 0.80ರಷ್ಟು) ಕಂಡು, 22,704 ಅಂಶಗಳಲ್ಲಿ ಸ್ಥಿರಗೊಂಡಿತು. 

ಸೆನ್ಸೆಕ್ಸ್‌ ಗುಚ್ಛದಲ್ಲಿನ ಟೆಕ್‌ ಮಹೀಂದ್ರ, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫಿನ್‌ಸರ್ವ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಎಕ್ಸಿಸ್‌ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಇನ್ಫೊಸಿಸ್‌ ಷೇರಿನ ಮೌಲ್ಯವು ಕುಸಿತ ಕಂಡಿದೆ.

ಪವರ್‌ ಗ್ರಿಡ್‌, ಸನ್‌ ಫಾರ್ಮಾ, ನೆಸ್ಲೆ ಇಂಡಿಯಾ, ಐಟಿಸಿ ಮತ್ತು ಭಾರ್ತಿ ಏರ್‌ಟೆಲ್‌ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

ಸತತ ನಾಲ್ಕು ದಿನಗಳ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಂಡಿರುವುದರಿಂದ ಹೂಡಿಕೆದಾರರ ಸಂಪತ್ತು ₹5.12 ಲಕ್ಷ ಕೋಟಿಯಷ್ಟು ಕರಗಿದೆ. 

‘ಈ ತಿಂಗಳ ಅಂತ್ಯಕ್ಕೆ ಅಮೆರಿಕದ ಫೆಡರಲ್‌ ರಿಸರ್ವ್‌ನ ಆದ್ಯತೆಯ ಹಣದುಬ್ಬರ ಮಾಪಕವಾದ ವೈಯಕ್ತಿಕ ಬಳಕೆ ವೆಚ್ಚದ (ಪಿಸಿಇ) ಬೆಲೆ ಸೂಚ್ಯಂಕದ ವರದಿ ಬಿಡುಗಡೆಯಾಗಲಿದೆ. ಹೂಡಿಕೆದಾರರಿಗೆ ಈ ಸೂಚ್ಯಂಕ ಏರಿಕೆಯಾಗುವ ಸುಳಿವು ಸಿಕ್ಕಿದೆ. ಹಾಗಾಗಿ, ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ ತಿಳಿಸಿದೆ.

ಬಿಎಸ್ಇ ಮಿಡ್‌ಕ್ಯಾಪ್‌ ಶೇ 0.38ರಷ್ಟು ಇಳಿಕೆಯಾದರೆ, ಸ್ಮಾಲ್‌ಕ್ಯಾಪ್‌ ಶೇ 0.23ರಷ್ಟು ಏರಿಕೆ ದಾಖಲಿಸಿದೆ.  

ಬ್ಯಾಂಕಿಂಗ್‌ (ಶೇ 1.37), ಹಣಕಾಸು ಸೇವೆ (ಶೇ 1.32), ತೈಲ ಮತ್ತು ಅನಿಲ (ಶೇ 0.95), ರಿಯಾಲ್ಟಿ (ಶೇ 0.88) ಮತ್ತು ಸೇವೆ ಸೂಚ್ಯಂಕ (ಶೇ 0.60ರಷ್ಟು) ಇಳಿಕೆ ಕಂಡಿದೆ. ಹೆಲ್ತ್‌ಕೇರ್‌, ಕೈಗಾರಿಕೆ, ಟೆಲಿಕಮ್ಯುನಿಕೇಷನ್‌, ಬಂಡವಾಳ ಸರಕು, ಲೋಹ ಮತ್ತು ವಿದ್ಯುತ್ ಸೂಚ್ಯಂಕಗಳು ಗಳಿಕೆ ಕಂಡಿವೆ. 

ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆಯು ಶೇ 0.88ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 84.94 ಡಾಲರ್‌ಗೆ ಮುಟ್ಟಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT