ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಫ್ಟಿ–50 ಇಟಿಎಫ್‌ ಹೂಡಿಕೆ ಏಕೆ ಮುಖ್ಯ?

Last Updated 21 ಏಪ್ರಿಲ್ 2023, 16:21 IST
ಅಕ್ಷರ ಗಾತ್ರ

ಭಾರತದ ಹೂಡಿಕೆದಾರರು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಹೆಚ್ಚೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈಕ್ವಿಟಿ ಹೂಡಿಕೆಗಳ ವಿಚಾರದಲ್ಲಿ ಅವರು ಸಕ್ರಿಯವಲ್ಲದ ಮಾರ್ಗವನ್ನು ಬಹಳ ಉತ್ಸಾಹದಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಇಂಡೆಕ್ಸ್ ಫಂಡ್‌ಗಳು ಮತ್ತು ಇಟಿಎಫ್‌ ಫೋಲಿಯೊಗಳಲ್ಲಿ ಆಗಿರುವ ಹೆಚ್ಚಳವು ಇದನ್ನು ಹೇಳುತ್ತಿದೆ. ಆದರೆ, ಮೊದಲ ಬಾರಿಗೆ ಈಕ್ವಿಟಿಯಲ್ಲಿ ಹೂಡಿಕೆ ಮಾಡುತ್ತಿರುವವರಿಗೆ, ಹೂಡಿಕೆಯ ಪಯಣವು ಅಷ್ಟೇನೂ ಸಲೀಸಾಗಿ ಇಲ್ಲದಿರಬಹುದು. ಏಕೆಂದರೆ, ಅಲ್ಪಾವಧಿ ಟ್ರೇಡಿಂಗ್‌ ಹೊರತಾಗಿ ಯೋಚನೆ ಮಾಡದೇ ಇದ್ದರೆ, ಈಕ್ವಿಟಿಗಳ ಬಗ್ಗೆ ಆಳವಾಗಿ ಅರಿತುಕೊಳ್ಳುವ ಅವರ ಸಾಮರ್ಥ್ಯವು ಸೀಮಿತವಾಗಿರಬಹುದು.

ಕಳೆದ ಒಂದು ದಶಕದಲ್ಲಿ ಭಾರತದ ಈಕ್ವಿಟಿ ಮಾರುಕಟ್ಟೆಯು ಭಾರಿ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ. ಹೀಗಾಗಿ, ಈಕ್ವಿಟಿಗಳಲ್ಲಿ ಹಣ ತೊಡಗಿಸುವ ಮೂಲಕ ಭಾರತದ ಬೆಳವಣಿಗೆ ಪ್ರಕ್ರಿಯೆಯ ಭಾಗವಾಗಲು ಬಯಸುತ್ತಿರುವ ಹೂಡಿಕೆದಾರ ನೀವಾಗಿದ್ದರೆ, ನಿಫ್ಟಿ–50 ಇಟಿಎಫ್‌ನಂತಹ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದು ಒಂದು ಉತ್ತಮ ನಿರ್ಧಾರವಾಗಬಹುದು.

ನಿಫ್ಟಿ–50 ಎಂದರೇನು?

ನಿಫ್ಟಿ–50 ಭಾರತದಲ್ಲಿ ಪ್ರಮುಖ ಈಕ್ವಿಟಿ ಸೂಚ್ಯಂಕ. ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‌ಎಸ್‌ಇ) ನೋಂದಣಿ ಆಗಿರುವ, ಮಾರುಕಟ್ಟೆ ಬಂಡವಾಳದ ಆಧಾರದಲ್ಲಿ ಭಾರತದ 50 ಅತಿದೊಡ್ಡ ಕಂಪನಿಗಳನ್ನು ಇದು ಒಳಗೊಂಡಿದೆ. ಭಾರತದ ಷೇರು ಮಾರುಕಟ್ಟೆಗಳ ಗುಣಮಟ್ಟವನ್ನು ತಿಳಿಸುವ ಒಂದು ಅಳತೆಗೋಲು ಇದು ಎಂಬ ಹೆಗ್ಗಳಿಕೆಯನ್ನೂ ಹೊತ್ತಿದೆ. ವಿವಿಧ ವಲಯಗಳನ್ನು ಪ್ರತಿನಿಧಿಸುವ ಕಂಪನಿಗಳನ್ನು ಇದು ಹೊಂದಿರುವ ಕಾರಣದಿಂದಾಗಿ, ವೈವಿಧ್ಯಮಯ ಕಂಪನಿಗಳು ಈ ಸೂಚ್ಯಂಕದ ಭಾಗವಾಗಿರುವ ಕಾರಣದಿಂದಾಗಿ ಹೂಡಿಕೆದಾರರು ಈ ಸೂಚ್ಯಂಕವನ್ನು ತಮ್ಮ ಲಾಭಾಂಶವನ್ನು ಹೋಲಿಸಿ ನೋಡುವುದಕ್ಕೆ ಮಾನದಂಡವನ್ನಾಗಿ ಬಳಸುತ್ತಾರೆ. ಕಳೆದ ಐದು ವರ್ಷಗಳಲ್ಲಿ ಈ ಸೂಚ್ಯಂಕವು ಶೇಕಡ 11.45ರಷ್ಟು ವಾರ್ಷಿಕ ಸಂಯುಕ್ತ ಬೆಳವಣಿಗೆ ದರದಲ್ಲಿ (ಸಿಎಜಿಆರ್‌) ಲಾಭಾಂಶ ತಂದುಕೊಟ್ಟಿದೆ. 1996ರಲ್ಲಿ ಇದು ಸ್ಥಾಪನೆಯಾದ ವರ್ಷದಿಂದ ಪರಿಗಣಿಸುವುದಾದರೆ, ಇದು ಶೇ 11.25ರಷ್ಟು ಲಾಭಾಂಶ ತಂದುಕೊಟ್ಟಿದೆ. (ಆಧಾರ: Niftyindices.com/factsheet)

ಭಾರತದ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ನೀವು ಬಯಸುತ್ತಿದ್ದರೆ, ಆರಂಭಿಕ ಹೆಜ್ಜೆಯಾಗಿ ನಿಫ್ಟಿ–50 ಒಂದು ಉತ್ತಮ ಆಯ್ಕೆ. ಇದು ವಿವಿಧ ವಲಯಗಳಲ್ಲಿನ ಕಂಪನಿಗಳಲ್ಲಿ ಹಣ ತೊಡಗಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಪ್ರತ್ಯೇಕವಾಗಿ ಷೇರುಗಳನ್ನು ಆಯ್ಕೆ ಮಾಡುವ ಅಗತ್ಯ ಇರುವುದಿಲ್ಲ. ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳ ಪೈಕಿ ಉತ್ತಮ, ಲಾರ್ಜ್‌ ಕ್ಯಾಪ್‌ ವಲಯದ ಕಂಪನಿಗಳನ್ನು ಈ ಸೂಚ್ಯಂಕ ಒಳಗೊಂಡಿದೆ.

ನಿಫ್ಟಿ–50 ಇಟಿಎಫ್‌ ಎಂದರೇನು?

ನಿಫ್ಟಿ–50 ಇಟಿಎಫ್‌, ಒಂದು ಪ್ಯಾಸಿವ್ ಮ್ಯೂಚುವಲ್‌ ಫಂಡ್. ನಿಫ್ಟಿ–50 ಸೂಚ್ಯಂಕದಲ್ಲಿ ಯಾವೆಲ್ಲ ಕಂಪನಿಗಳು ಇವೆಯೋ, ಅವುಗಳಿಗೆ ಸೂಚ್ಯಂಕದಲ್ಲಿ ಎಷ್ಟರಮಟ್ಟಿಗೆ ಪ್ರಾಧಾನ್ಯತೆ ಇದೆಯೋ, ಅದೇ ಕಂಪನಿಗಳಲ್ಲಿ ಹಾಗೂ ಅಷ್ಟೇ ಪ್ರಮಾಣದ ಪ್ರಾಧಾನ್ಯತೆಯಲ್ಲಿ ಈ ಇಟಿಎಫ್‌ ಹಣ ತೊಡಗಿಸುತ್ತದೆ. ಇದರಿಂದಾಗಿ, ಈ ಇಟಿಎಫ್‌ನಲ್ಲಿ ಹೂಡಿಕೆ ಮಾಡುವವರಿಗೆ, ಸೂಚ್ಯಂಕ ನೀಡುವ ಲಾಭಾಂಶ ಎಷ್ಟಿರುತ್ತದೋ ಅಷ್ಟೇ ಪ್ರಮಾಣದ ಲಾಭಾಂಶ ಸಿಗುತ್ತದೆ.

ಹೂಡಿಕೆದಾರರಿಗೆ ಲಭ್ಯವಿರುವ ಕೆಲವು ವಿಶಿಷ್ಟ ಅನುಕೂಲಗಳು:

● ಷೇರಿನ ಹಾಗೆಯೇ ಇಟಿಎಫ್‌ಗಳನ್ನು ದಿನದ ವಹಿವಾಟು ಅವಧಿಯಲ್ಲಿ ಯಾವುದೇ ಸಮಯದಲ್ಲಿ ಖರೀದಿ ಮಾಡಬಹುದು ಮತ್ತು ಮಾರಾಟ ಮಾಡಬಹುದು. ಇಟಿಎಫ್‌ ಮೂಲಕ ವಹಿವಾಟು ನಡೆಸುವುದು ಅತ್ಯಂತ ಅನುಕೂಲಕರ.

● ನಿಫ್ಟಿ–50 ಇಟಿಎಫ್‌ನಲ್ಲಿ ಹೂಡಿಕೆ ಮಾಡುವ ಮೂಲಕ, ಈಕ್ವಿಟಿ ಹೂಡಿಕೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದಕ್ಕೆ ಮೊದಲ ಹೆಜ್ಜೆ ಇರಿಸಬಹುದು. ಹೂಡಿಕೆದಾರರಿಗೆ ಬೇಕಿರುವುದು ಒಂದು ಡಿಮ್ಯಾಟ್ ಖಾತೆ ಮತ್ತು ಟ್ರೇಡಿಂಗ್ ಖಾತೆ. ಮಾರುಕಟ್ಟೆಯ ಚಲನೆಯ ಬಗ್ಗೆ ಹೂಡಿಕೆದಾರರಿಗೆ ತಿಳಿವಳಿಕೆ ಬಂದ ನಂತರ, ಸಕ್ರಿಯವಾಗಿ ನಿರ್ವಹಣೆ ಮಾಡಲಾಗುವ ಇತರ ಹಣಕಾಸು ಉತ್ಪನ್ನಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿಸಿಕೊಳ್ಳಬಹುದು.

● ನಿಫ್ಟಿ–50 ಇಟಿಎಫ್‌ ಪ್ಯಾಸಿವ್ ಫಂಡ್ ಆಗಿರುವುದರಿಂದ, ಇದರಲ್ಲಿ ಫಂಡ್ ನಿರ್ವಾಹಕನ ಪರಿಣತಿ ಅಥವಾ ಸಂಶೋಧನೆ ಅಗತ್ಯ ಇಲ್ಲ. ಹೀಗಾಗಿ ಇಲ್ಲಿ ನಿರ್ವಹಣಾ ವೆಚ್ಚ ತುಂಬಾ ಕಡಿಮೆ ಆಗಿರುತ್ತದೆ.

● ಡಿಮ್ಯಾಟ್ ಖಾತೆ ಇಲ್ಲದವರು, ನಿಫ್ಟಿ–50 ಆಧಾರಿತ ಇಂಡೆಕ್ಸ್‌ ಫಂಡ್‌ನಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು. ಇಟಿಎಫ್‌ ಹಾಗೂ ಇಂಡೆಕ್ಸ್‌ ಫಂಡ್‌ ನಡುವಿನ ವ್ಯತ್ಯಾಸವೆಂದರೆ, ಷೇರುಪೇಟೆಯಲ್ಲಿ ಇಂಡೆಕ್ಸ್‌ ಫಂಡ್‌ ಯೂನಿಟ್‌ಅನ್ನು ಟ್ರೇಡ್ ಮಾಡಲು ಆಗುವುದಿಲ್ಲ. ಇಟಿಎಫ್‌ಗೆ ಹೋಲಿಸಿದರೆ ಸ್ವಲ್ಪ ಹೆಚ್ಚಿನ ನಿರ್ವಹಣಾ ವೆಚ್ಚವನ್ನು ಇದು ಹೊಂದಿರುತ್ತದೆ.

ರಾಷ್ಟ್ರೀಯ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಅಗ್ರ 50 ಕಂಪನಿಗಳಲ್ಲಿ ಇಟಿಎಫ್‌ ಮೂಲಕ ಹೂಡಿಕೆ ಮಾಡುವ ಬಯಕೆ ಇದ್ದರೆ, ನಿಫ್ಟಿ–50 ಇಟಿಎಫ್ ಪರಿಗಣಿಸಬಹುದು. ಹೀಗೆ ಮಾಡುವಾಗ, ನಿರ್ವಹಣಾ ವೆಚ್ಚ, ಟ್ರೇಡಿಂಗ್‌ ಪ್ರಮಾಣ ಇತ್ಯಾದಿ ಪರಿಶೀಲಿಸಿ, ಮುಂದುವರಿಯಿರಿ.

ಲೇಖಕ: ಇಟಿಎಫ್‌ ಮಾರಾಟ ಮುಖ್ಯಸ್ಥರು, ಐಸಿಐಸಿಐ ಪ್ರುಡೆನ್ಷಿಯಲ್ ಎಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT