ಮಂಗಳವಾರ, ಡಿಸೆಂಬರ್ 1, 2020
17 °C
ಷೇರುಪೇಟೆಯಲ್ಲಿ ಸದ್ದು ಮಾಡುತ್ತಿರುವ ಬ್ಯಾಂಕಿಂಗ್‌ ವಲಯ; ಮೂರೇ ವಾರಗಳಲ್ಲಿ ಶೇ 22 ಗಳಿಕೆ

PV Web Exclusive | ‘ಬಜಾಜ್‌ ಫಿನ್‌ಸರ್ವ್‌’ ಷೇರುಮೌಲ್ಯ ಶೇ 53 ಹೆಚ್ಚಳ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ ಹಾಗೂ ರಾಷ್ಟ್ರೀಯ ಷೇರುಪೇಟೆಯ ಬ್ಯಾಂಕಿಂಗ್‌ ವಲಯದ ಸೂಚ್ಯಂಕಗಳು ಕೇವಲ 15 ವಹಿವಾಟು ದಿನಗಳಲ್ಲಿ ಶೇ 22ರಷ್ಟು ಅಂಶಗಳ ಏರಿಕೆ ಕಂಡಿವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ‘ಬಜಾಜ್‌ ಫಿನ್‌ಸರ್ವ್‌’ ಕಂಪನಿಯ ಷೇರಿನ ಮೌಲ್ಯವು ಈ ಅಲ್ಪ ಅವಧಿಯಲ್ಲಿ ಶೇಕಡ 53ರಷ್ಟು ಹೆಚ್ಚಾಗಿದೆ.

ಷೇರುಪೇಟೆಯಲ್ಲಿ ಮೂರು ವಾರಗಳಿಂದ ಬ್ಯಾಂಕಿಂಗ್‌ ಹಾಗೂ ಬ್ಯಾಂಕೇತರ ಹಣಕಾಸು ಕಂ‍ಪನಿಗಳು (ಎನ್‌.ಬಿ.ಎಫ್‌.ಸಿ) ಭಾರಿ ಸದ್ದು ಮಾಡುತ್ತಿವೆ. ದೇಶದ ಆರ್ಥಿಕತೆಯ ಬೆಳವಣಿಗೆಯು ಕೆಳಮುಖದಿಂದ ಏರುಮುಖದತ್ತ ತಿರುವು ಪಡೆದ ಬೆನ್ನಲ್ಲೇ ಹೂಡಿಕೆದಾರರ ಚಿತ್ತ ಬ್ಯಾಂಕಿಂಗ್‌ ವಲಯದತ್ತ ಹರಿಯುತ್ತಿದೆ.

ಹೂಡಿಕೆದಾರರು ಬ್ಯಾಂಕಿಂಗ್‌ ಹಾಗೂ ಎನ್‌.ಬಿ.ಎಫ್‌.ಸಿ ವಲಯದ ಕಂಪನಿಗಳ ಷೇರುಗಳನ್ನು ಖರೀದಿಸಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. ಕೇವಲ 15 ವಹಿವಾಟು ದಿನಗಳಲ್ಲೇ ಮುಂಬೈ ಷೇರುಪೇಟೆಯ ‘ಬಿಎಸ್‌ಇ ಬ್ಯಾಂಕೆಕ್ಸ್‌’ ಸೂಚ್ಯಂಕವು 6,216 (ಶೇ 22.69) ಅಂಶಗಳು ಹಾಗೂ ರಾಷ್ಟ್ರೀಯ ಷೇರುಪೇಟೆಯ ‘ನಿಫ್ಟಿ ಬ್ಯಾಂಕ್‌’ ಸೂಚ್ಯಂಕವು 5,335 (ಶೇ 22.32) ಅಂಶಗಳ ಏರಿಕೆ ಕಂಡಿರುವುದೇ ಇದಕ್ಕೆ ಸಾಕ್ಷಿ. ಈ ಅವಧಿಯಲ್ಲಿ ‘ಬಿಎಸ್‌ಇ ಸೆನ್ಸೆಕ್ಸ್‌’ ಸೂಚ್ಯಂಕವು 4,268 (ಶೇ 10.77) ಅಂಶಗಳು ಹಾಗೂ ‘ನಿಫ್ಟಿ–50’ ಸೂಚ್ಯಂಕವು 1,217 (ಶೇ 10.45) ಅಂಶಗಳನ್ನು ಮಾತ್ರ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಅಕ್ಟೋಬರ್‌ 30ರಂದು 27,389 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದ್ದ ‘ಬಿಎಸ್‌ಇ ಬ್ಯಾಂಕೆಕ್ಸ್‌’ ಸೂಚ್ಯಂಕವು, ನವೆಂಬರ್‌ 20ರಂದು 33,605 ಅಂಶಗಳ ಮಟ್ಟಕ್ಕೆ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ‘ನಿಫ್ಟಿ ಬ್ಯಾಂಕ್‌’ ಸೂಚ್ಯಂಕವು 23,901 ಅಂಶಗಳಿಂದ 29,236 ಅಂಶಗಳಿಗೆ ತಲುಪಿದೆ. 15 ವಹಿವಾಟು ದಿನಗಳಲ್ಲಿ ಕೇವಲ ಮೂರು ‘ರೆಡ್‌ ಕ್ಯಾಂಡಲ್‌’ ನಿರ್ಮಾಣಗೊಂಡಿವೆ. ಉಳಿದ 12 ‘ಗ್ರೀನ್‌ ಕ್ಯಾಂಡಲ್‌’ಗಳು ಷೇರುಪೇಟೆಯಲ್ಲಿ ಬ್ಯಾಂಕಿಂಗ್‌ ವಲಯದ ‘ಗೂಳಿ ಓಟ’ದ ಕಥೆಗಳನ್ನು ಹೇಳುತ್ತಿವೆ.

ಕಳೆದ 15 ವಹಿವಾಟು ದಿನಗಳಲ್ಲಿ ‘ಬಿಎಸ್‌ಇ ಪ್ರೈವೇಟ್‌ ಬ್ಯಾಂಕ್‌’ ಸೂಚ್ಯಂಕವು 2,139 (ಶೇ 21.73) ಅಂಶಗಳು, ‘ಬಿಎಸ್‌ಇ ಫೈನಾನ್ಸ್‌’ ಸೂಚ್ಯಂಕವು 1,151 (ಶೇ 21.26) ಅಂಶಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿವೆ. ಇದೇ ಅವಧಿಯಲ್ಲಿ ‘ನಿಫ್ಟಿ ಫೈನಾನ್ಸ್‌ ಸರ್ವೀಸ್‌’ ಸೂಚ್ಯಂಕವು 2,500 (ಶೇ21.34) ಅಂಶಗಳು ಹಾಗೂ ‘ನಿಫ್ಟಿ ಪಿಎಸ್‌ಯು ಬ್ಯಾಂಕ್‌’ ಸೂಚ್ಯಂಕವು 208 (ಶೇ 16.49) ಅಂಶಗಳನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಬದಲಾದ ಟ್ರೆಂಡ್‌: ಅಕ್ಟೋಬರ್‌ 30ರವರೆಗೂ ಬ್ಯಾಂಕಿಂಗ್‌ ವಲಯದಲ್ಲಿ ಮಾರಾಟದ ಒತ್ತಡದಿಂದಾಗಿ ಅಲ್ಪಾವಧಿಯ ‘ಡೌನ್‌ ಟ್ರೆಂಡ್‌’ ಕಂಡುಬರುತ್ತಿತ್ತು. ನವೆಂಬರ್‌ 2ರಂದು ಹೂಡಿಕೆದಾರರು ತೋರಿದ ಖರೀದಿ ಉತ್ಸಾಹದಿಂದಾಗಿ ‘ನಿಫ್ಟಿ ಬ್ಯಾಂಕ್‌’ ಸೂಚ್ಯಂಕವು 992 ಅಂಶಗಳು ಹಾಗೂ ‘ನಿಫ್ಟಿ ಫೈನಾನ್ಸ್‌ ಸರ್ವೀಸ್‌’ ಸೂಚ್ಯಂಕವು 541 ಅಂಶಗಳನ್ನು ಗಳಿಸಿಕೊಳ್ಳುವುದರೊಂದಿಗೆ ‘ಅಪ್‌ ಟ್ರೆಂಡ್‌’ ಶುರುವಾಗಿತ್ತು.

ಇದನ್ನೂ ಓದಿ: 

ನವೆಂಬರ್‌ 10ರಂದು 1,072 ಅಂಶಗಳ ಗಳಿಕೆಯೊಂದಿಗೆ ಹೂಡಿಕೆದಾರರ ಉತ್ಸಾಹಕ್ಕೆ ‘ನಿಫ್ಟಿ ಬ್ಯಾಂಕ್‌’ ಸೂಚ್ಯಂಕವು ಸಾಕ್ಷಿಯಾಗಿತ್ತು. ಆದರೆ, ಹೂಡಿಕೆದಾರರು ‘ಲಾಭ ಗಳಿಕೆ’ಗೆ ಮುಂದಾಗಿದ್ದರಿಂದ ನ.19ರಂದು 847 ಅಂಶಗಳನ್ನು ಕಳೆದುಕೊಳ್ಳಬೇಕಾಯಿತು. ನ.20ರಂದು ಬೆಳಗಿನ ಅವಧಿಯಲ್ಲಿ ಅಲ್ಪ ಇಳಿಕೆ ಕಂಡಿದ್ದರೂ ದಿನದ ಅಂತ್ಯಕ್ಕೆ 333 ಅಂಶಗಳನ್ನು ಗಳಿಸಿಕೊಳ್ಳುವ ಮೂಲಕ ‘ಇನ್ನೇನು ಇಳಿಮುಖವಾಗಬಹುದು’ ಎಂಬ ಲೆಕ್ಕಾಚಾರವನ್ನು ಸೂಚ್ಯಂಕವು ಹುಸಿಗೊಳಿಸಿದೆ.

ಅರ್ಧಶತಕ ಹೊಡೆದ ಬಜಾಜ್‌ ಫಿನ್‌ಸರ್ವ್‌: ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿರುವ ‘ಬಜಾಜ್‌ ಫಿನ್‌ಸರ್ವ್‌’ ಕಂಪನಿಯ ಷೇರಿನ ಮೌಲ್ಯವು ಕೇವಲ 15 ವಹಿವಾಟು ದಿನಗಳಲ್ಲೇ ಅರ್ಧಪಟ್ಟು ಹೆಚ್ಚಾಗಿದ್ದು, ‘ಅರ್ಧಶಕತ’ದ ಸಾಧನೆ ಮಾಡಿದೆ. ಅಕ್ಟೋಬರ್‌ 30ರಂದು ಈ ಕಂಪನಿಯ ಷೇರಿನ ಬೆಲೆಯು ₹ 5,574 ಇತ್ತು. ನವೆಂಬರ್‌ 20ಕ್ಕೆ ₹ 8,543ಕ್ಕೆ (ಶೇ 53.26) ತಲುಪಿದ್ದು, ‘ನಿಫ್ಟಿ–50’ ಸೂಚ್ಯಂಕದಲ್ಲಿರುವ ಹಣಕಾಸು ಸಂಸ್ಥೆಗಳ ಪೈಕಿ ಲಾಭಗಳಿಗೆಯಲ್ಲಿ ಇದು ಮೊದಲ ಸ್ಥಾನದಲ್ಲಿದೆ.

ಉತ್ತಮವಾಗಿ ನಡೆಯುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆಸ್ತಿಯು ₹ 50 ಸಾವಿರ ಕೋಟಿಗಿಂತಲೂ ಹೆಚ್ಚಿದ್ದರೆ ಹಾಗೂ 10 ವರ್ಷಗಳಿಂದ ನಡೆಸುತ್ತಿದ್ದರೆ ಅದನ್ನು ಬ್ಯಾಂಕ್‌ ಆಗಿ ಪರಿವರ್ತಿಸಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆಂತರಿಕ ಕಾರ್ಯಕಾರಿ ಸಮಿತಿ ಅಭಿಪ್ರಾಯಪಟ್ಟಿದೆ. ಇದರ ಲಾಭ ಪಡೆಯಬಹುದಾದ ಕಂಪನಿಗಳ ಸಾಲಿನಲ್ಲಿ ‘ಬಜಾಜ್‌ ಫಿನ್‌ಸರ್ವ್‌’ ಮೊದಲ ಸ್ಥಾನದಲ್ಲಿದೆ ಎಂಬ ಸುದ್ದಿಯಿಂದಾಗಿ ಹೂಡಿಕೆದಾರರು ಖರೀದಿಗೆ ಮುಗಿಬಿದ್ದ ಪರಿಣಾಮ, ನವೆಂಬರ್‌ 20ರಂದು ಈ ಕಂಪನಿಯ ಷೇರಿನ ಮೌಲ್ಯವು ಒಂದೇ ದಿನಕ್ಕೆ ₹ 719 (ಶೇ 9.19) ಹೆಚ್ಚಾಗಿದೆ. ಈ ಕಂಪನಿಯ ಸಹೋದರ ಸಂಸ್ಥೆಯಾದ ‘ಬಜಾಜ್‌ ಫೈನಾನ್ಸ್‌’ ಕಂಪನಿಯ ಷೇರಿನ ಮೌಲ್ಯವು ಮೂರು ವಾರಗಳಲ್ಲಿ ₹ 1,407 (ಶೇ 42.52) ಹೆಚ್ಚಾಗಿದೆ.

ಇದೇ ಅವಧಿಯಲ್ಲಿ ಇಂಡಸ್‌ ಬ್ಯಾಂಕ್‌ ಷೇರಿನ ಮೌಲ್ಯವು ₹ 225 (ಶೇ 38.39) ಹೆಚ್ಚಾಗಿದ್ದು, ‘ನಿಫ್ಟಿ–50’ ಸೂಚ್ಯಂಕದಲ್ಲಿರುವ ಬ್ಯಾಂಕಿಂಗ್‌ ಕಂಪನಿಗಳ ಲಾಭ ಗಳಿಕೆ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಎಸ್‌ಬಿಐ (ಶೇ 28.57), ಎಕ್ಸಿಸ್‌ ಬ್ಯಾಂಕ್‌ (ಶೇ 23.32), ಐಸಿಐಸಿಐ ಬ್ಯಾಂಕ್‌  (ಶೇ 22.13), ಕೋಟಕ್‌ ಮಹಿಂದ್ರಾ ಬ್ಯಾಂಕ್‌  (ಶೇ 22.1), ಎಚ್‌ಡಿಎಫ್‌ಸಿ (ಶೇ 21.36), ಎಚ್‌ಡಿಎಫ್‌ಸಿ ಬ್ಯಾಂಕ್‌  (ಶೇ 18.58) ಕಂಪನಿಗಳು ತಮ್ಮ ಷೇರಿನ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.

ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರವರ್ತಕರು ಗರಿಷ್ಠ ಶೇಕಡ 26ರವರೆಗೆ ಷೇರುಗಳನ್ನು ಹೊಂದಲು ಅವಕಾಶ ಕಲ್ಪಿಸಬಹುದು ಎಂದು ಆರ್‌ಬಿಐನ ಆಂತರಿಕ ಕಾರ್ಯಕಾರಿ ಸಮಿತಿ ಶಿಫಾರಸು ಮಾಡಿದೆ. ಮೂರು ವರ್ಷಗಳ ಅನುಭವ ಹಾಗೂ ಈ ಅವಧಿಯಲ್ಲಿ ಅದರ ವಹಿವಾಟು ಹೇಗಿತ್ತು ಎಂಬುದನ್ನು ಪರಿಗಣಿಸಿ ಪೇಮೆಂಟ್‌ ಬ್ಯಾಂಕ್‌ಗಳಿಗೆ ಕಿರು ಹಣಕಾಸಿನ ಬ್ಯಾಂಕ್‌ ಆಗಿ ಪರಿವರ್ತನೆ ಹೊಂದಲು ಅವಕಾಶ ನೀಡಬಹುದು ಎಂದೂ ಸಮಿತಿ ಪ್ರಸ್ತಾವದಲ್ಲಿ ಹೇಳಿದೆ. ಇದು ಬ್ಯಾಂಕಿಂಗ್‌ ವಲಯದಲ್ಲಿ ಇನ್ನಷ್ಟು ಸಂಚಲನ ಮೂಡಿಸಲಿದೆ. ಇದರಿಂದಾಗಿ ಬ್ಯಾಂಕಿಂಗ್‌ ವಲಯ ಕಂಪನಿಗಳ ಷೇರಿನ ಮೌಲ್ಯ ಇನ್ನಷ್ಟು ಹೆಚ್ಚಲೂಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು