ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯನ್ನು ಮಂಕಾಗಿಸಿದ ಕೋವಿಡ್‌ನ ಎರಡನೇ ಅಲೆ

Last Updated 18 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೆಯ ವಾರ ಕುಸಿತ ದಾಖಲಿಸಿವೆ. 48,832 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇಕಡ 1.5ರಷ್ಟು ಕುಸಿದಿದೆ. 14,617 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ವಾರದ ಅವಧಿಯಲ್ಲಿ ಶೇ 1.4ರಷ್ಟು ಕುಸಿತ ಕಂಡಿದೆ. ಸೆನ್ಸೆಕ್ಸ್ ಮಿಡ್ ಕ್ಯಾಪ್ ಸೂಚ್ಯಂಕ ಶೇ 2.9ರಷ್ಟು ತಗ್ಗಿದ್ದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 2.6ರಷ್ಟು ಇಳಿಕೆಯಾಗಿದೆ.

ಇನ್ನು ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 1ಕ್ಕಿಂತ ಹೆಚ್ಚು ಕುಸಿದಿದೆ. ಫಾರ್ಮಾ ವಲಯ ಹೊರತುಪಡಿಸಿ ಉಳಿದೆಲ್ಲ ವಲಯಗಳು ನಕಾರಾತ್ಮಕ ಫಲಿತಾಂಶ ಕೊಟ್ಟಿವೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್–19 ಪ್ರಕರಣಗಳು ಸದ್ಯ ಮಾರುಕಟ್ಟೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿವೆ.

ಹಾಗಾಗಿ ಅಲ್ಪಾವಧಿಯಲ್ಲಿ ಷೇರುಪೇಟೆಯಲ್ಲಿ ಅನಿಶ್ಚಿತೆ ಮುಂದುವರಿಯಲಿದೆ. ಅಲ್ಲಲ್ಲಿ ಲಾಕ್‌ಡೌನ್ ಆಗುತ್ತಿರುವುದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿರುವುದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿರುವುದು ಸೇರಿ ಹಲವು ಅಂಶಗಳು ಷೇರುಪೇಟೆ ಏರಿಳಿತಕ್ಕೆ ಕಾರಣವಾಗಿವೆ. ಕಂಪನಿಗಳು ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದ ಫಲಿತಾಂಶ ಪ್ರಕಟಿಸುತ್ತಿವೆ. ಆದರೆ ಕೋವಿಡ್–19 ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಹೂಡಿಕೆದಾರರು ಫಲಿತಾಂಶವನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಸಿಪ್ಲಾ ಶೇ 6ರಷ್ಟು, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 6ರಷ್ಟು, ಎಚ್‌ಡಿಎಫ್‌ಸಿ ಶೇ 4ರಷ್ಟು ಮತ್ತು ಡಿಆರ್‌ಎಲ್ ಶೇ 2.3ರಷ್ಟು ಗಳಿಸಿವೆ. ಅದಾನಿ ಪೋರ್ಟ್ಸ್ ಶೇ 6ರಷ್ಟು, ಗ್ರಾಸಿಮ್ ಶೇ 5.5ರಷ್ಟು ಮತ್ತು ಇನ್ಫೊಸಿಸ್ ಶೇ 6.8ರಷ್ಟು ಇಳಿಕೆ ಕಂಡಿವೆ.

ಬ್ರಾಡರ್ ಮಾರ್ಕೆಟ್ ಸೂಚ್ಯಂಕದಲ್ಲಿ ಗ್ಲೆನ್ ಮಾರ್ಕ್ ಫಾರ್ಮಾ ಶೇ 10ರಷ್ಟು, ಜೆಎಸ್‌ಪಿಎಲ್ ಶೇ 4ರಷ್ಟು, ಡಾಬರ್ ಶೇ 3ರಷ್ಟು ಗಳಿಸಿವೆ. ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಶೇ 11ರಷ್ಟು, ಟಾಟಾ ಪವರ್ ಶೇ 9ರಷ್ಟು, ಡಿಎಲ್‌ಎಫ್ ಶೇ 9ರಷ್ಟು, ಅದಾನಿ ಪವರ್ ಶೇ 5ರಷ್ಟು, ಅದಾನಿ ಎಂಟರ್‌ಪ್ರೈಸಸ್ ಶೇ 4ರಷ್ಟು, ಬ್ಯಾಂಕ್ ಆಫ್ ಇಂಡಿಯಾ ಶೇ 3ರಷ್ಟು, ಟಾಟಾ ಕೆಮಿಕಲ್ಸ್ ಶೇ 4ರಷ್ಟು ಮತ್ತು ಅಂಬುಜಾ ಸಿಮೆಂಟ್ಸ್ ಶೇ 4ರಷ್ಟು ಕುಸಿದಿವೆ.

ಮುನ್ನೋಟ: ಜಾಗತಿಕ ಮಾರುಕಟ್ಟೆಗಳಲ್ಲಿ ಸದ್ಯದ ಮಟ್ಟಿಗೆ ಸಕಾರಾತ್ಮಕತೆ ಕಂಡುಬಂದರೂ ದೇಶೀಯವಾಗಿ ಹೆಚ್ಚಳವಾಗುತ್ತಿರುವ ಕೋವಿಡ್ ಪ್ರಕರಣಗಳು ಷೇರುಪೇಟೆ ಹೂಡಿಕೆದಾರರನ್ನು ಚಿಂತೆಗೀಡು ಮಾಡಿವೆ. ಈವಾರ ಎಚ್‌ಸಿಎಲ್ ಟೆಕ್, ಮಹೀಂದ್ರ ಆ್ಯಂಡ್ ಮಹೀಂದ್ರ ಫೈನಾನ್ಸಿಯಲ್ ಸರ್ವೀಸಸ್, ಐಸಿಐಸಿಐ ಬ್ಯಾಂಕ್, ನೆಟ್ವರ್ಕ್ 18, ಎಸಿಸಿ, ನೆಸ್ಲೆ ಇಂಡಿಯಾ, ಕ್ರಿಸಿಲ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT