ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಹಿವಾಟು ಆರಂಭದಲ್ಲಿಯೇ ಕುಸಿದ ಸೆನ್ಸೆಕ್ಸ್‌: ಇಂಧನ, ಫಾರ್ಮಾ ಷೇರುಗಳಲ್ಲಿ ಚೇತರಿಕೆ

Last Updated 16 ಏಪ್ರಿಲ್ 2020, 4:31 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ವಿಸ್ತರಣೆ ನಿರ್ಧಾರದಿಂದ ಬುಧವಾರ ಬೆಳಗಿನ ವಹಿವಾಟಿನಲ್ಲಿ ಏರಿಕೆ ಕಂಡು ಮಧ್ಯಾಹ್ನದ ನಂತರ ಇಳಿಮುಖವಾದ ಷೇರುಪೇಟೆ ವಹಿವಾಟು, ಗುರುವಾರ ಆರಂಭದಿಂದಲ್ಲಿಯೇ ಕುಸಿತ ದಾಖಲಿಸಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 284.3 ಅಂಶ ಇಳಿಕೆಯಾಗಿ 30,095.51 ಅಂಶ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 74 ಅಂಶ ಕಡಿಮೆಯಾಗಿ 8,851 ಅಂಶಗಳಲ್ಲಿ ವಹಿವಾಟು ನಡೆಯಿತು. ನಿಫ್ಟಿ 50 ಷೇರುಗಳಲ್ಲಿ 24 ಕಂಪನಿಗಳ ಷೇರು ನಷ್ಟ ಅನುಭವಿಸಿದ್ದು, ವೇದಾಂತ ಲಿಮಿಟೆಡ್‌, ಯುಪಿಎಲ್‌, ಪವರ್‌ಗ್ರಿಡ್‌, ಬಿಪಿಸಿಎಲ್‌ ಹಾಗೂ ಜೀ ಎಂಟರ್‌ಟೈನ್ಮೆಂಟ್‌ ಸೇರಿ 26 ಕಂಪನಿಗಳ ಷೇರುಗಳು ಶೇ 2ರಿಂದ 5ರಷ್ಟು ಗಳಿಕೆ ದಾಖಲಿಸಿವೆ.

ಇಂಧನ, ಲೋಹ ಹಾಗೂ ಫಾರ್ಮಾ ವಲಯದ ಷೇರುಗಳ ಕಡೆಗೆ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ. ಐಟಿ, ಆಟೊ, ಬ್ಯಾಂಕ್‌ ಹಾಗೂ ಎಫ್‌ಎಂಸಿಜಿ ಕಂಪನಿಗಳ ಷೇರುಗಳ ಬೆಲೆ ಇಳಿಕೆಯಾಗಿದೆ.

ವಿಪ್ರೊ ₹2,326.1 ಕೋಟಿ ಲಾಭಾಂಶ ವರದಿ ಘೋಷಿಸಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 5.29ರಷ್ಟು ಲಾಭಾಂಶ ಇಳಿಕೆಯಾಗಿದೆ. ಇಂದು ವಿಪ್ರೊ ಷೇರು ಬೆಲೆ ಶೇ 1ರಷ್ಟು ಕಡಿಮೆಯಾಗಿದೆ. ಟಿಸಿಎಸ್‌ ಷೇರು ಬೆಲೆ ಶೇ 2.5ರಷ್ಟು ಇಳಿಕೆಯಾಗಿದೆ.

ಬೆಳಿಗ್ಗೆ 9:55ಕ್ಕೆ ಸೆನ್ಸೆಕ್ಸ್‌ 138.68 ಅಂಶ ಕಡಿಮೆಯಾಗಿ 30,241.13 ಅಂಶಗಳಲ್ಲಿ ವಹಿವಾಟು ನಡೆದಿದೆ ಹಾಗೂ ನಿಫ್ಟಿ 19.20 ಅಂಶ ಇಳಿಕೆಯೊಂದಿಗೆ 8,906.10 ಅಂಶ ತಲುಪಿದೆ.

ಬುಧವಾರ ಗಳಿಕೆ–ಇಳಿಕೆ ಎರಡನ್ನೂ ದಾಖಲಿಸಿದ ಷೇರುಪೇಟೆ, ಸೆನ್ಸೆಕ್ಸ್‌ 310.21 ಅಂಶ ಕಡಿಮೆಯಾಗಿ 30,379.81 ಅಂಶಗಳಲ್ಲಿ ವಹಿವಾಟು ಮುಗಿದಿತ್ತು. ನಿಫ್ಟಿ 68.55 ಅಂಶ ಕಡಿಮೆಯಾಗಿ 8,925.30 ಅಂಶಗಳಲ್ಲಿ ವಹಿವಾಟು ಮುಗಿಸಿತು.

ಲಾಕ್‌ಡೌನ್‌ನಿಂದ ಬಹುತೇಕ ಅಂಗಡಿಗಳು ಮುಚ್ಚಿದ್ದು ವ್ಯಾಪಾರ, ಕೊಳ್ಳುವಿಕೆ ಕಡಿಮೆಯಾಗಿದೆ. ದೇಶೀಯವಾಗಿ ಸಿದ್ಧವಾಗುವ ಉತ್ಪನ್ನಗಳು ಹಾಗೂ ಆಹಾರ ಪದಾರ್ಥಗಳ ರಫ್ತು ಪ್ರಮಾಣದಲ್ಲೂ ಇಳಿಕೆಯಾಗಿರುವುದು ಆರ್ಥಿಕ ಹೊಡೆತ ಹೆಚ್ಚಿಸಿದೆ. ಏಷ್ಯಾದ ಇತರೆ ಷೇರುಪೇಟೆಗಳಲ್ಲಿಯೂ ವಹಿವಾಟು ಇಳಿಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT