ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ‘ಸ್ವಾಸ್ಥ್ಯ’ ಹೆಚ್ಚಿಸಿಕೊಂಡ ಫಾರ್ಮಾ ವಲಯ!

ಕೋವಿಡ್‌ ಎರಡನೇ ಅಲೆಯ ನಡುವೆ ಫಾರ್ಮಾ ಕಂಪನಿಗಳ ಗಳಿಕೆಯ ಓಟ
Last Updated 11 ಏಪ್ರಿಲ್ 2021, 15:51 IST
ಅಕ್ಷರ ಗಾತ್ರ

ದೇಶದಲ್ಲಿ ಕೋವಿಡ್‌ನಎರಡನೇ ಅಲೆಯ ಭೀತಿಯ ಕಾರ್ಮೋಡ ಷೇರುಪೇಟೆಯನ್ನು ಆವರಿಸುತ್ತಿರುವ ನಡುವೆಯೇ ಫಾರ್ಮಾ ವಲಯದ ಕಂಪನಿಗಳು ಮತ್ತೆ ಹೂಡಿಕೆದಾರರ ಗಮನ ಸೆಳೆಯುತ್ತಿವೆ. ಇದೇ ಏಪ್ರಿಲ್‌ 9ರಂದು ಮುಂಬೈ ಷೇರುಪೇಟೆಯ ‘ಸೆನ್ಸೆಕ್ಸ್‌’ ಸೂಚ್ಯಂಕವು 154.89 (ಶೇ –0.31) ಹಾಗೂ ರಾಷ್ಟ್ರೀಯ ಷೇರುಪೇಟೆಯ ‘ನಿಫ್ಟಿ–50’ ಸೂಚ್ಯಂಕವು 38.95 (ಶೇ –0.26) ಅಂಶಗಳ ಕುಸಿತ ಕಂಡಿದೆ. ಆದರೆ, ‘ಬಿಎಸ್‌ಇ ಹೆಲ್ತ್‌ಕೇರ್‌’ ಸೂಚ್ಯಂಕ 514.51 (ಶೇ 2.32) ಹಾಗೂ ‘ನಿಫ್ಟಿ ಫಾರ್ಮಾ’ ಸೂಚ್ಯಂಕವು 383 (ಶೇ 3.04) ಅಂಶಗಳ ಗಳಿಕೆಯೊಂದಿಗೆ ಓಟವನ್ನು ಮುಂದುವರಿಸಿವೆ.

ಬ್ಯಾಂಕಿಂಗ್‌ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌.ಬಿ.ಎಫ್‌.ಸಿ) ಷೇರಿನ ನಾಗಾಲೋಟದಿಂದಾಗಿ ಬೇಡಿಕೆ ಕುಸಿದು ಎರಡು–ಮೂರು ತಿಂಗಳಿಂದ ಫಾರ್ಮಾ ಕಂಪನಿಗಳ ಷೇರಿನ ಬೆಲೆ ಕೆಳಮುಖ ಮಾಡಿದ್ದವು. ಕೋವಿಡ್‌ ಭೀತಿ ಮತ್ತೆ ಕಾಡುತ್ತಿದ್ದಂತೆ ಬ್ಯಾಂಕಿಂಗ್‌ ವಲಯದ ಕಂಪನಿಗಳು ಮಾರಾಟದ ಒತ್ತಡ ಎದುರಿಸುತ್ತಿವೆ. ಇದರ ಜೊತೆಗೇ ಹೂಡಿಕೆದಾರರು ಫಾರ್ಮಾ ಕಂಪನಿಗಳತ್ತ ಚಿತ್ತ ಹರಿಸಿದ್ದರಿಂದ ಎರಡು–ಮೂರು ವಾರಗಳಿಂದ ಫಾರ್ಮಾ ಕಂಪನಿಗಳ ಷೇರಿನ ಬೆಲೆ ಮತ್ತೆ ಏರುಗತಿಯನ್ನು ಪಡೆದಿದೆ.

ಏಪ್ರಿಲ್‌ 9ರಂದು 12,995.35 ಅಂಶಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದ ‘ನಿಫ್ಟಿ ಫಾರ್ಮಾ’, ಕಳೆದ ಒಂದು ವಾರದ ಅವಧಿಯಲ್ಲಿ ಶೇ 5ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಒಂದು ತಿಂಗಳಲ್ಲಿ ಶೇ 7.10ರಷ್ಟು ಏರಿಕೆ ಕಂಡಿದ್ದರೆ, ಮೂರು ತಿಂಗಳ ಅವಧಿಗೆ ಹೋಲಿಸಿದರೆ ಈ ಪ್ರಮಾಣವು ಶೇ –2.08ರಷ್ಟಿದೆ. ಆರು ತಿಂಗಳ ಅವಧಿಯಲ್ಲಿ ಶೇ 7.90ರಷ್ಟು ಏರಿಕೆ ಕಂಡಿದ್ದರೆ, ಒಂದು ವರ್ಷದ ಅವಧಿಯಲ್ಲಿ ಶೇ 47.65ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. 8,706.40 ಅಂಶಗಳು (2020ರ ಏಪ್ರಿಲ್‌ 9) ನಿಫ್ಟಿ ಫಾರ್ಮಾದ 52 ವಾರಗಳ ಕನಿಷ್ಠ ಮಟ್ಟವಾಗಿದ್ದರೆ, 13,476.80 ಅಂಶಗಳು (2021ರ ಜನವರಿ 12) 52 ವಾರಗಳ ಗರಿಷ್ಠ ಮಟ್ಟವಾಗಿದೆ.

‘ಡೈಲಿ ಚಾರ್ಟ್‌’ ನೋಡಿದಾಗ 52 ವಾರಗಳ ಗರಿಷ್ಠ ಮಟ್ಟ ತಲುಪಿದ ಬಳಿಕ ನಿಫ್ಟಿ ಫಾರ್ಮಾದ ಮೌಲ್ಯವು ಕುಸಿಯತೊಡಗಿದ್ದು, ಮಾರ್ಚ್‌ 18ರವರೆಗೂ (11,514.45 ಅಂಶ) ಕೆಳಮುಖ (ಡೌನ್‌ ಟ್ರೆಂಡ್‌) ಮಾಡಿತ್ತು. ಮಾರ್ಚ್‌ 19ರಿಂದ ಫಾರ್ಮಾ ವಲಯವು ಏರುಗತಿಯನ್ನು (ಅಪ್‌ ಟ್ರೆಂಡ್‌) ಪಡೆದಿದೆ. ಮಾರ್ಚ್‌ 18ರ ನಂತರದ 14 ದಿನಗಳ ವಹಿವಾಟಿನಲ್ಲಿ ಕೇವಲ ನಾಲ್ಕು ಪುಟ್ಟ ‘ರೆಡ್‌ ಕ್ಯಾಂಡಲ್‌’ಗಳು ನಿರ್ಮಾಣಗೊಂಡಿದ್ದವು. ಹದಿನಾಲ್ಕು ದಿನಗಳ ವಹಿವಾಟಿನಲ್ಲಿ ಏಪ್ರಿಲ್‌ 9ರಂದು ಅತಿ ದೊಡ್ಡ ‘ಗ್ರೀನ್‌ ಕ್ಯಾಂಡಲ್’ (383.65 ಅಂಶ) ನಿರ್ಮಾಣಗೊಂಡಿದ್ದರೆ, ಮಾರ್ಚ್‌ 30ರಂದು ಎರಡನೇ ದೊಡ್ಡ ‘ಗ್ರೀನ್‌ ಕ್ಯಾಂಡಲ್‌’ (323 ಅಂಶ) ಮೂಡಿಬಂದಿರುವುದು ಹೂಡಿಕೆದಾರರು ತೋರುತ್ತಿರುವ ಉತ್ಸಾಹಕ್ಕೆ ಸಾಕ್ಷಿಯಾಗಿದೆ.

ಮುಂಚೂಣಿಯಲ್ಲಿರುವ ಕೆಡಿಲಾ ಹೆಲ್ತ್‌: ಏಪ್ರಿಲ್‌ 9ರಂದು ಅಂತ್ಯಗೊಂಡ ವಹಿವಾಟಿನಲ್ಲಿ ರಾಷ್ಟ್ರೀಯ ಷೇರುಪೇಟೆಯಲ್ಲಿ ಕೆಡಿಲಾ ಹೆಲ್ತ್‌ ಕಂಪನಿಯ ಷೇರಿನ ಮೌಲ್ಯವು ₹ 43 (ಶೇ 9.29) ಹೆಚ್ಚಾಗಿದ್ದು, ಫಾರ್ಮಾ ವಲಯದ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಒಂದು ತಿಂಗಳ ಅವಧಿಯಲ್ಲಿ ಈ ಕಂಪನಿಯ ಷೇರಿನ ಮೌಲ್ಯವು ಶೇ 15.98ರಷ್ಟು ಹೆಚ್ಚಾಗಿದ್ದರೆ, ಒಂದು ವಾರದ ಅವಧಿಯಲ್ಲಿ ಶೇ 16.44ರಷ್ಟು ಏರಿಕೆ ದಾಖಲಿಸಿದೆ.

ಸಿಪ್ಲಾ ಕಂಪನಿಯ ಷೇರಿನ ಬೆಲೆಯು ಕಳೆದ ಶುಕ್ರವಾರ ₹ 41.05 (ಶೇ 4.88) ಹೆಚ್ಚಾಗಿದೆ. ಒಂದು ತಿಂಗಳ ಅವಧಿಯಲ್ಲಿ ಶೇ 10.80ರಷ್ಟು ಏರಿಕೆಯಾಗಿದ್ದರೆ, ಒಂದು ವಾರದ ಅವಧಿಯಲ್ಲಿ ಶೇ 7.91ರಷ್ಟು ಹೆಚ್ಚಾಗಿದ್ದು, ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ.

ಅರವಿಂದೊ ಫಾರ್ಮಾ ಕಂಪನಿಯ ಷೇರಿನ ಬೆಲೆಯು ಹಿಂದಿನ ವಹಿವಾಟಿನ ದಿನದಲ್ಲಿ ₹ 36.30 (ಶೇ 4) ಹೆಚ್ಚಾಗಿದೆ. ಒಂದು ತಿಂಗಳ ಅವಧಿಯಲ್ಲಿ ಈ ಕಂಪನಿಯ ಷೇರಿನ ಮೌಲ್ಯವು ಶೇ 10.64ರಷ್ಟು ಹೆಚ್ಚಾಗಿದ್ದರೆ, ಕಳೆದ ಒಂದು ವಾರದ ಅವಧಿಯಲ್ಲಿ ಶೇ 7.08ರಷ್ಟು ಏರಿಕೆಯಾಗಿದೆ.

ಕಳೆದ ಒಂದು ವಾರದಲ್ಲಿ ಲೂಪಿನ್‌ (ಶೇ 5.11), ಸನ್‌ ಫಾರ್ಮಾ (ಶೇ 4.26), ಡಾ.ರೆಡ್ಡಿ ಲ್ಯಾಬ್ಸ್‌ (ಶೇ 3.76), ಡಿವಿಎಸ್‌ ಲ್ಯಾಬ್ಸ್‌ (ಶೇ 3.77), ಬಯೋಕಾನ್‌ (ಶೇ 2.37), ಅಲ್ಕೆಮ್‌ ಲ್ಯಾಬ್‌ (ಶೇ 2.05) ಹಾಗೂ ಟೊರೆಂಟ್‌ ಫಾರ್ಮಾ (ಶೇ 1.04) ಕಂಪನಿಗಳ ಷೇರಿನ ಮೌಲ್ಯ ಹೆಚ್ಚಾಗಿದೆ.

‘ಚಂಚಲಶೀಲ’(ವಲಟೈಲ್‌)ವಾಗಿರುವ ಷೇರುಪೇಟೆಯಲ್ಲಿ ಫಾರ್ಮಾ ವಲಯವು ಏರುಗತಿಯನ್ನು ಕಾಯ್ದುಕೊಂಡು, 52 ವಾರಗಳ ಗರಿಷ್ಠ ಮಟ್ಟವನ್ನು ಮತ್ತೆ ತಲುಪುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಲಿವೆಯೇ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT