ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಷೇರುಪೇಟೆ: ದಾಖಲೆಗೆ ಸಾಕ್ಷಿಯಾದ ‘ವಿಕ್ರಮ ಶಕೆ–2076’

ಕೋವಿಡ್‌ ಸಂಕಷ್ಟದ ನಡುವೆಯೂ ಎರಡಂಕಿ ಗಳಿಕೆ ಕಂಡ ‘ಸೆನ್ಸೆಕ್ಸ್‌’
Last Updated 20 ನವೆಂಬರ್ 2020, 3:02 IST
ಅಕ್ಷರ ಗಾತ್ರ

‘ವಿಕ್ರಮ ಶಕೆ–2076’ರಲ್ಲಿ ಕೋವಿಡ್‌–19 ಸಾಂಕ್ರಾಮಿಕ ರೋಗದ ಪರಿಣಾಮ ಶೇ 40ರಷ್ಟು ಕುಸಿತ ಕಂಡಿದ್ದರೂ ಆರೇಳು ತಿಂಗಳ ಅವಧಿಯಲ್ಲಿ ಫೀನಿಕ್ಸ್‌ನಂತೆ ಮೇಲಕ್ಕೆ ಬಂದ ಭಾರತೀಯ ಷೇರು ಮಾರುಕಟ್ಟೆಯು, ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪುವ ಮೂಲಕ ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿದೆ.

***

ಭಾರಿ ಏರಿಳಿತದ ನಡುವೆಯೇ ಭಾರತೀಯ ಷೇರು ಮಾರುಕಟ್ಟೆಯ ಸೂಚ್ಯಂಕಗಳಾದ ‘ಸೆನ್ಸೆಕ್ಸ್‌’ ಹಾಗೂ ‘ನಿಫ್ಟಿ’ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿರುವುದಕ್ಕೆ ಹಿಂದೂ ಕ್ಯಾಲೆಂಡರ್‌ ‘ವಿಕ್ರಮ ಶಕೆ–2076’ ಸಾಕ್ಷಿಯಾಯಿತು.

ದೀಪಾವಳಿ ಹಬ್ಬದಲ್ಲಿ ‘ಲಕ್ಷ್ಮೀ’ ಪೂಜೆ ಮಾಡಿ ವಹಿವಾಟು ನಡೆಸುವುದರೊಂದಿಗೆ ವ್ಯಾಪಾರಿಗಳು ಹೊಸ ವರ್ಷದ ಲೆಕ್ಕ ಆರಂಭಿಸುತ್ತಾರೆ. 2019ರ ಅಕ್ಟೋಬರ್‌ 27ರಂದು ದೀಪಾವಳಿ ಹಬ್ಬದಲ್ಲಿ ಷೇರುಪೇಟೆಯಲ್ಲಿ ‘ಮುಹೂರ್ತ’ ವಹಿವಾಟಿನೊಂದಿಗೆ ‘ವಿಕ್ರಮ ಶಕೆ–2076’ರ ಲೆಕ್ಕಚಾರ ಆರಂಭಗೊಂಡಿತ್ತು. ನವೆಂಬರ್‌ 13ರ ವಹಿವಾಟಿನೊಂದಿಗೆ ಅಂತ್ಯಗೊಂಡ ‘ವಿಕ್ರಮ ಶಕೆ–2076’ರಲ್ಲಿ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಸಾಕಷ್ಟು ಏಳು–ಬೀಳುಗಳನ್ನು ಕಂಡರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿರುವ ಕೋವಿಡ್‌–19 ಸಾಂಕ್ರಾಮಿಕ ರೋಗದ ಪರಿಣಾಮ ಷೇರುಪೇಟೆಯಲ್ಲಿನ ‘ಕರಡಿ ಕುಣಿತ’ದಿಂದಾಗಿ ಶೇ 40ರಷ್ಟು ಕುಸಿತ ಕಂಡು, ಭಾರಿ ಪ್ರಮಾಣದಲ್ಲಿ ಹೂಡಿಕೆದಾರರ ಸಂಪತ್ತು ಕರಗಿತ್ತು. ಆದರೆ, ಐದಾರು ತಿಂಗಳಲ್ಲೇ ‘ಫೀನಿಕ್ಸ್‌’ನಂತೆ ಪುಟಿದೆದ್ದ ಮಾರುಕಟ್ಟೆಯ ‘ಗೂಳಿ ಓಟ’ವು ನಿರೀಕ್ಷೆಗೂ ಮೀರಿ ಗಳಿಕೆಯನ್ನೂ ತಂದುಕೊಟ್ಟಿತು.

ಇದೇ ನವೆಂಬರ್‌ 13ರಂದು ಬಾಂಬೆ ಷೇರು ವಿನಿಮಯ ಕೇಂದ್ರದ (ಬಿ.ಎಸ್‌.ಇ) ಸೂಚ್ಯಂಕ ‘ಸೆನ್ಸೆಕ್ಸ್‌’ 43,443 ಅಂಶಗಳಿಗೆ ಹಾಗೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌.ಎಸ್‌.ಇ) ಸೂಚ್ಯಂಕ ‘ನಿಫ್ಟಿ’ 12,720 ಅಂಶಗಳಿಗೆ ಏರಿಕೆ ಕಾಣುವುದರೊಂದಿಗೆ ‘ವಿಕ್ರಮ ಶಕೆ–2076’ರ ವಹಿವಾಟು ಅತ್ಯಗೊಂಡಿದೆ. ನವೆಂಬರ್‌ 11ರ ವಹಿವಾಟಿನಲ್ಲಿ ‘ಸೆನ್ಸೆಕ್ಸ್‌’ ಸೂಚ್ಯಂಕವು 43,708 ಅಂಶಗಳಿಗೆ ಹಾಗೂ ‘ನಿಫ್ಟಿ’ ಸೂಚ್ಯಂಕವು 12,769 ಅಂಶಗಳಿಗೆ ತಲುಪಿ, ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆಯನ್ನೂ ನಮೂದಿಸಿರುವುದು ಈ ವರ್ಷದ ವಿಶೇಷವಾಗಿದೆ.

ಕೋವಿಡ್‌ ಕಾರಣಕ್ಕೆ ಈ ವರ್ಷ ಮಾರುಕಟ್ಟೆಯು ಶೇ 40ರಷ್ಟು ಕುಸಿತ ಕಂಡಿದ್ದರೂ ಹೂಡಿಕೆದಾರರಿಗೆ ‘ಸೆನ್ಸೆಕ್ಸ್‌’ ಎರಡಂಕಿಯಷ್ಟು ಗಳಿಕೆಯನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದೆ. 2019ರ ಅಕ್ಟೋಬರ್‌ 25ಕ್ಕೆ 39,058 ಅಂಶಗಳಿದ್ದ ‘ಸೆನ್ಸೆಕ್ಸ್‌’, ಒಂದು ವರ್ಷದ ಅವಧಿಯಲ್ಲಿ 4,385 (ಶೇ 11.22) ಅಂಶಗಳ ಏರಿಕೆ ಕಂಡಿದೆ.

ಅದೇ ದಿನ 11,584 ಅಂಶಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದ ‘ನಿಫ್ಟಿ’ಯು, ಒಂದು ವರ್ಷದ ಅವಧಿಯಲ್ಲಿ 1,136 (ಶೇ 9.8) ಅಂಶಗಳ ಗಳಿಕೆಯೊಂದಿಗೆ ಮುಂದಡಿ ಇಟ್ಟಿದೆ. ದೇಶದ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಪರಿಣಾಮ ‘ಸೆನ್ಸೆಕ್ಸ್‌’ ಹಾಗೂ ‘ನಿಫ್ಟಿ’ಯಲ್ಲಿ ‘ಗೂಳಿ ಓಟ’ ಮುಂದುವರಿದಿದ್ದು, ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿದೆ.

ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಜೋ ಬೈಡನ್‌ ಗೆದ್ದಿರುವುದು ಹಾಗೂ ಜಗತ್ತನ್ನೇ ಬಾಧಿಸುತ್ತಿದ್ದ ಕೋವಿಡ್‌ ರೋಗಕ್ಕೆ ಲಸಿಕೆ ಕಂಡುಹಿಡಿಯಲಾಗಿದೆ ಎಂಬ ಸುದ್ದಿಯ ಪರಿಣಾಮ ವರ್ಷದ ಕೊನೆಯ ಒಂದು ತಿಂಗಳ ಅವಧಿಯಲ್ಲಿ ಮಾರುಕಟ್ಟೆಯು ಶೇ 10ರಷ್ಟು ಏರಿಕೆ ಕಾಣುವುದರ ಜೊತೆಗೆ ಹೊಸ ದಾಖಲೆಯನ್ನೂ ಬರೆಯಿತು.

‘ವಿಕ್ರಮ ಶಕೆ–2066’ರಲ್ಲಿ (2010ನೇ ವರ್ಷ) 20,894 ಅಂಶಗಳಲ್ಲಿ ‘ಸೆನ್ಸೆಕ್ಸ್‌’ ವರ್ಷದ ವಹಿವಾಟು ಮುಗಿಸಿತ್ತು. 10 ವರ್ಷಗಳ ಅವಧಿಯಲ್ಲಿ 22,549 (ಶೇ 108) ಅಂಶಗಳ ಏರಿಕೆ ಕಂಡಿರುವ ‘ಸೆನ್ಸೆಕ್ಸ್‌’, ವಾರ್ಷಿಕ ಸರಾಸರಿ ಶೇ 10.8ರಷ್ಟು ಗಳಿಕೆಯನ್ನು ದಾಖಲಿಸಿದೆ.

ಫಾರ್ಮಾ, ಐಟಿ ಜಯಭೇರಿ: ಫಾರ್ಮಾಸ್ಯುಟಿಕಲ್‌, ಮಾಹಿತಿ ತಂತ್ರಜ್ಞಾನ (ಐ.ಟಿ), ಆಟೊಮೊಬೈಲ್‌, ಕೆಮಿಕಲ್‌ ಸೆಕ್ಟರ್‌ನ ಕಂಪನಿಗಳು ಈ ವರ್ಷ ಜಯಭೇರಿ ಸಾಧಿಸಿದ್ದು, ಹೂಡಿಕೆದಾರರ ಸಂಪತ್ತನ್ನು ಹೆಚ್ಚಿಸುವಲ್ಲಿ ವಿಶೇಷ ಕೊಡುಗೆ ನೀಡಿವೆ. ಬಿಎಸ್‌ಇ ಹೆಲ್ತ್‌ಕೇರ್‌ ಹಾಗೂ ಬಿಎಸ್‌ಇ ಐಟಿ ಸೂಚ್ಯಂಕಗಳ ಮೌಲ್ಯವು ಕ್ರಮವಾಗಿ ಶೇ 53.7 ಹಾಗೂ ಶೇ 48.2ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರ ಸಂಪತ್ತು ವೃದ್ಧಿಸಿರುವ ವಲಯಗಳಲ್ಲಿ ಇವು ಮುಂಚೂಣಿಯಲ್ಲಿವೆ.

ನವೀಕರಿಸಬಹುದಾದ ಇಂಧನ ಕ್ಷೇತ್ರದ ‘ಅದಾನಿ ಗ್ರೀನ್‌ ಎನರ್ಜಿ’ ಕಂಪನಿಯ ಷೇರು ಮೌಲ್ಯವು ಕೇವಲ ಒಂದು ವರ್ಷದ ಅವಧಿಯಲ್ಲಿ ಶೇ 1000ರಷ್ಟು ಹೆಚ್ಚಾಗಿದ್ದು, ಹೂಡಿಕೆದಾರರು ಹುಬ್ಬೇರಿಸುವಂತೆ ಮಾಡಿದೆ. 2019ರ ಅಕ್ಟೋಬರ್‌ 27ಕ್ಕೆ ₹ 90.15 ಇದ್ದ ಈ ಕಂಪನಿಯ ಷೇರಿನ ಬೆಲೆಯು ವರ್ಷಾಂತ್ಯದಲ್ಲಿ ₹ 988 ತಲುಪಿದೆ. ಲೌರಸ್‌ ಲ್ಯಾಬ್‌, ಅಲ್ಕಿ ಅಮೈನ್ಸ್‌ ಕೆಮಿಕಲ್ಸ್‌, ಜೆ.ಬಿ. ಕ್ಯಾಮಿಕಲ್ಸ್‌ ಆ್ಯಂಡ್‌ ಫಾರ್ಮಾಸ್ಯುಟಿಕಲ್ಸ್‌, ಗ್ರನುಲ್ಸ್‌ ಇಂಡಿಯಾ, ಡಿಕ್ಸೊನ್‌ ಟೆಕ್ನಾಲಜೀಸ್‌, ಟಾಟಾ ಕಮ್ಯುನಿಕೇಷನ್ಸ್‌, ವೊಡಾಫೋನ್‌, ಎಸ್ಕಾರ್ಟ್ಸ್‌ ಸೇರಿ 20ಕ್ಕೂ ಹೆಚ್ಚು ಕಂಪನಿಗಳ ಷೇರಿನ ಮೌಲ್ಯವು ದುಪ್ಪಟ್ಟಾಗಿದೆ.

ಡಾ.ರೆಡ್ಡಿ ಲ್ಯಾಬೊರೇಟರೀಸ್‌, ಸಿಪ್ಲಾ, ಎಚ್‌ಸಿಎಲ್‌, ಇನ್ಫೊಸಿಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ವಿಪ್ರೊ, ಭಾರತಿ ಏರ್‌ಟೆಲ್‌, ಟಿಸಿಎಸ್‌, ಟಾಟಾ ಸ್ಟೀಲ್‌ ಕಂಪನಿಗಳು ತಮ್ಮ ಷೇರಿನ ಮೌಲ್ಯವನ್ನು ಶೇ 25ರಿಂದ ಶೇ 75ರಷ್ಟು ಹೆಚ್ಚಿಸಿಕೊಂಡಿವೆ.

ಬಿಎಸ್‌ಇ–500 ಸೂಚ್ಯಂಕಗಳಲ್ಲಿ 190ಕ್ಕೂ ಹೆಚ್ಚು ಕಂಪನಿಗಳ ಷೇರಿನ ಮೌಲ್ಯ ಕಡಿಮೆಯಾಗಿವೆ. ಸುಮಾರು 90 ಕಂಪನಿಗಳ ಷೇರಿನ ಮೌಲ್ಯವು ಶೇ 25ಕ್ಕಿಂತ ಹೆಚ್ಚು ಕುಸಿದಿದೆ. ಫೈನಾನ್ಸ್‌, ರಿಟೇಲ್‌, ಹೋಟೆಲ್‌, ವಿಮಾನಯಾನ, ರಿಫೈನರಿಸ್‌ ವಲಯಗಳ ಕಂಪನಿಗಳಲ್ಲಿ ಬಂಡವಾಳ ಹೂಡಿಕೆದಾರರು ನಷ್ಟದ ಹಾದಿಯನ್ನು ತುಳಿದಿದ್ದಾರೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ರೇಮಂಡ್‌, ಸ್ಪೈಸ್‌ಜೆಟ್‌, ಒಎನ್‌ಜಿಸಿ, ಅದಾನಿ ಪವರ್‌, ಆಯಿಲ್‌ ಇಂಡಿಯಾ, ಬಿಎಚ್‌ಇಎಲ್‌ ಕಂಪನಿಗಳ ಷೇರಿನ ಮೌಲ್ಯವು ಶೇ 40ರಿಂದ ಶೇ 50ರವರೆಗೆ ಕುಸಿತ ಕಂಡಿರುವುದಕ್ಕೆ ಈ ವರ್ಷ ಸಾಕ್ಷಿಯಾಗಿದೆ.

**

ವಿಕ್ರಮ ಶಕೆ–2076ರ ಸೆನ್ಸೆಕ್ಸ್‌ ವಿವರ

ವಲಯ ಬದಲಾವಣೆ (ಶೇಕಡಾವಾರು)

ಬಿಎಸ್‌ಇ ಹೆಲ್ತ್‌ಕೇರ್‌ 53.70

ಬಿಎಸ್‌ಇ ಐಟಿ 48.20

ಬಿಎಸ್‌ಇ ಟೆಲಿಕಾಂ 23.30

ಬಿಎಸ್‌ಇ ಇನ್‌ಫ್ರಾ –15.10

ಬಿಎಸ್‌ಇ ಆಯಿಲ್‌ & ಗ್ಯಾಸ್‌ –14.70

ಬಿಎಸ್‌ಇ ಕ್ಯಾಪಿಟಲ್‌ ಗೂಡ್ಸ್‌ –13.40

**

ಸೆನ್ಸೆಕ್ಸ್‌ನ ದಶಕದ ಹೆಜ್ಜೆಗುರುತು

ವಿಕ್ರಮ ಶಕೆ ಸೆನ್ಸೆಕ್ಸ್‌ ಅಂಶ ಬದಲಾವಣೆ (ಶೇಕಡಾವಾರು)

2076 43,433 11
2075 39,058 12
2074 34,992 07
2073 32,584 17
2072 27,942 09
2071 25,743 –04
2070 26,787 26
2069 21,197 14
2068 18,670 08
2067 17,255 –17
2066 20,894 21

ಮಾಹಿತಿ: ಬಿಎಸ್‌ಇ / ಎನ್‌ಎಸ್‌ಇ ವೆಬ್‌ಸೈಟ್‌ ಹಾಗೂ ವಿವಿಧ ಮೂಲಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT