ಗುರುವಾರ , ಫೆಬ್ರವರಿ 9, 2023
30 °C
ಬ್ಯಾಂಕಿಂಗ್, ವಿದ್ಯುತ್ ವಲಯದಲ್ಲಿ ಹೂಡಿಕೆ

ದಾಖಲೆ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿದ ಸೆನ್ಸೆಕ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಲ್ಲಿ 248 ಅಂಶ ಏರಿಕೆ ಆಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 61,872 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ. ದಿನದ ಕೊನೆಯಲ್ಲಿ ಬ್ಯಾಂಕಿಂಗ್, ವಿದ್ಯುತ್ ವಲಯದ ಷೇರುಗಳನ್ನು ಹೂಡಿಕೆದಾರರು ಹೆಚ್ಚು ಖರೀದಿಸಿದ್ದು ಸೂಚ್ಯಂಕದ ಏರಿಕೆಗೆ ನೆರವಾಯಿತು.

ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ವಹಿವಾಟು ಕೂಡ ದೇಶಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿತು. ರೂಪಾಯಿ ಬಲವರ್ಧನೆ ಹಾಗೂ ಚಿಲ್ಲರೆ ಹಣದುಬ್ಬರ ತುಸು ಇಳಿಕೆ, ವಿದೇಶಿ ಹೂಡಿಕೆಯ ಹರಿವು ಕೂಡ ಮಾರುಕಟ್ಟೆಯಲ್ಲಿ ತೇಜಿ ವಹಿವಾಟು ನಡೆಯಲು ಕಾರಣವಾದವು ಎಂದು ವರ್ತಕರು ತಿಳಿಸಿದ್ದಾರೆ.

ಸೆನ್ಸೆಕ್ಸ್‌ ನವೆಂಬರ್‌ 11ರಂದು 61,795 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದ್ದು ಇದುವರೆಗಿನ ಗರಿಷ್ಠವಾಗಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 74 ಅಂಶ ಏರಿಕೆ ದಾಖಲಿಸಿತು. ‘ಬ್ಯಾಂಕಿಂಗ್ ವಲಯದ ಷೇರುಗಳು ಸೂಚ್ಯಂಕಗಳ ಚೇತರಿಕೆಗೆ ಕಾರಣವಾದವು. ಚಿಲ್ಲರೆ ಹಣದುಬ್ಬರ ದರವು ಶೇ 6ಕ್ಕಿಂತ ಹೆಚ್ಚಿದ್ದರೂ, ಜನವರಿಯಿಂದ ಅದು ಶೇ 6ರ ಮಟ್ಟಕ್ಕಿಂತ ಕೆಳಕ್ಕೆ ಬರುವ ನಿರೀಕ್ಷೆ ಇದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

‘ದೇಶದಲ್ಲಿ ಚಿಲ್ಲರೆ ಹಣದುಬ್ಬರ ತಗ್ಗುತ್ತಿರುವ ಕಾರಣ ಆರ್‌ಬಿಐ ಮುಂದಿನ ಹಣಕಾಸು ನೀತಿ ಸಭೆಯಲ್ಲಿ ರೆ‍ಪೊ ದರವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿಕ್ಕಿಲ್ಲ ಎಂಬ ಲೆಕ್ಕಾಚಾರ ಹೂಡಿಕೆದಾರರಲ್ಲಿ ಇದೆ’ ಎಂದು ಕೋಟಕ್ ಸೆಕ್ಯುರಿಟೀಸ್‌ನ ಸಣ್ಣ ಹೂಡಿಕೆಗಳ (ಈಕ್ವಿಟಿ) ಸಂಶೋಧನಾ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.

ಸೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಷೇರುಪೇಟೆಗಳಲ್ಲಿ ಚೇತರಿಕೆ ದಾಖಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 1.62ರಷ್ಟು ಕಡಿಮೆ ಆಗಿದ್ದು ಪ್ರತಿ ಬ್ಯಾರೆಲ್‌ಗೆ 91.63 ಡಾಲರ್‌ಗೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು