ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2009ರಿಂದ ಒಂದೇ ದಿನದ ಅತಿ ಹೆಚ್ಚು ಗಳಿಕೆ: ಸೆನ್ಸೆಕ್ಸ್‌ ಶೇ 8.97ರಷ್ಟು ಏರಿಕೆ

Last Updated 7 ಏಪ್ರಿಲ್ 2020, 12:19 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ತಡೆಗೆ ದೇಶದಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್‌ 14ನೇ ದಿನದಲ್ಲಿದ್ದು, ಮಂಗಳವಾರ ದೇಶದ ಷೇರುಪೇಟೆಗಳಲ್ಲಿ ಚೇತರಿಕೆ ಕಂಡು ಬಂದಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 2,476.26 ಅಂಶಗಳು (ಶೇ 8.97ರಷ್ಟು) ಏರಿಕೆಯೊಂದಿಗೆ 30,067.21 ಅಂಶ ತಲುಪಿದೆ. 2009ರ ಮೇನಿಂದ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಗಳಿಕೆ ದಾಖಲಾಗಿದೆ.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 708.40 ಅಂಶಗಳು (ಶೇ 8.76ರಷ್ಟು) ಹೆಚ್ಚಳದೊಂದಿಗೆ 8,792.20 ಅಂಶಗಳಲ್ಲಿ ದಿನದ ವಹಿವಾಟು ಮುಕ್ತಾಯಗೊಂಡಿದೆ. ಬ್ಯಾಂಕಿಂಗ್‌, ಫೈನಾನ್ಸ್‌, ಐಟಿ ಹಾಗೂ ಫಾರ್ಮಾ ಕಂಪನಿಗಳ ಷೇರುಗಳ ಖರೀದಿಗೆ ಹೂಡಿಕೆದಾರರು ಉತ್ಸಾಹ ತೋರಿದರು. ಸೆನ್ಸೆಕ್ಸ್‌ ವಹಿವಾಟು ಮುಕ್ತಾಯಕ್ಕೂ ಮುನ್ನ 2,556.7 ಅಂಶ ಏರಿಕೆಯೊಂದಿಗೆ 30,157.65 ಅಂಶಗಳವರೆಗೂ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆಯಲ್ಲಿ 1,843 ಷೇರುಗಳು ಏರಿಕೆಯಾಗಿದ್ದು, 539 ಕಂಪನಿಗಳ ಷೇರುಗಳು ಇಳಿಕೆಯಾಗಿವೆ. ಮುಂಬೈ ಷೇರುಪೇಟಯಲ್ಲಿ 1,514 ಕಂಪನಿಗಳ ಷೇರುಗಳು ಗಳಿಕೆ ದಾಖಲಿಸಿದ್ದು, 331 ಷೇರುಗಳು ನಷ್ಟ ಅನುಭವಿಸಿವೆ. ಏಷ್ಯಾದ ಇತರೆ ಷೇರುಪೇಟಗಳಲ್ಲಿಯೂ ವಹಿವಾಟು ಶೇ 2ರಿಂದ ಶೇ 4ರಷ್ಟು ಚೇತರಿಕೆ ದಾಖಲಿಸಿವೆ.

ಡಾಲರ್‌ ಎದುರು ರೂಪಾಯಿ ಮೌಲ್ಯ 49 ಪೈಸೆ ಚೇತರಿಕೆ ಕಂಡು ₹75.64ರಲ್ಲಿ ವಹಿವಾಟು ನಡೆದಿದೆ.

ಹೈಡ್ರಾಕ್ಸಿಕ್ಲೋರೊಕ್ವಿನ್‌ ಸೇರಿದಂತೆ ಹಲವು ಔಷಧಿಗಳ ರಫ್ತಿಗೆ ಹೇರಿದ್ದ ನಿರ್ಬಂಧಗಳನ್ನು ಭಾರತ ಹಿಂಪಡೆದಿರುವ ಕಾರಣ ಫಾರ್ಮಾ ಕಂಪನಿಗಳ ಷೇರುಗಳು ಗಳಿಕೆ ಕಂಡಿವೆ. ನಿಫ್ಟಿ ಫಾರ್ಮಾ ಸೂಚ್ಯಂಕದ 10 ಕಂಪನಿಗಳು ಜಿಗಿತ ಕಂಡಿವೆ. ಡಾ. ರೆಡ್ಡೀಸ್‌ ಮತ್ತು ಸಿಪ್ಲಾ ಷೇರುಗಳು ಶೇ 11ರ ವರೆಗೂ ಏರಿಕೆ ದಾಖಲಿಸಿವೆ. ಇದರೊಂದಿಗೆ ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ ಹಾಗೂ ಐಸಿಐಸಿಐ ಬ್ಯಾಂಕ್‌ಗಳ ಷೇರುಗಳು ಶೇ 13ರಿಂದ ಶೇ 25ರ ವರೆಗೂ ಹೆಚ್ಚಳ ಕಂಡವು. ಕ್ಯಾಡಿಲಾ ಹೆಲ್ತ್‌ಕೇರ್‌, ಅರವಿಂದೊ ಫಾರ್ಮಾ ಹಾಗೂ ದಿವೀಸ್‌ ಲ್ಯಾಬ್‌ಗಳ ಕಂಪನಿಗಳನ್ನು ಒಳಗೊಂಡಿರುವ ಮಿಡ್‌ಕ್ಯಾಒ್‌ ಷೇರುಗಳು ಸಹ ಶೇ 10ರಿಂದ ಶೇ 17ರಷ್ಟು ಏರಿಕೆಯಾಗಿವೆ.

ಹಿಂದುಸ್ತಾನ್‌ ಯೂನಿಲಿವರ್‌ ಷೇರುಗಳು ಶೇ 13.6ರಷ್ಟು ಏರಿಕೆಯೊಂದಿಗೆ ಪ್ರತಿ ಷೇರು ಬೆಲೆ ₹2,449 ತಲುಪಿದೆ.

ಏಪ್ರಿಲ್‌ 10, ಶುಕ್ರವಾರ ಗುಡ್‌ ಫ್ರೈಡೇ ಇರುವ ಕಾರಣ ಷೇರುಪೇಟೆಗಳಲ್ಲಿ ವಹಿವಾಟು ನಡೆಯುವುದಿಲ್ಲ. ಹಾಗಾಗಿ, ಈ ವಾರದ ವಹಿವಾಟು ಗುರುವಾರಕ್ಕೆ ಮುಕ್ತಾಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT