ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 1ರಷ್ಟು ಕುಸಿತ ಕಂಡ ಷೇರುಪೇಟೆ

ಅಮೆರಿಕದ ಷೇರುಪೇಟೆಯಲ್ಲಿ ಮಾರಾಟದ ಒತ್ತಡ
Last Updated 10 ಮಾರ್ಚ್ 2023, 15:26 IST
ಅಕ್ಷರ ಗಾತ್ರ

ಮುಂಬೈ: ಅಮೆರಿಕದ ಮಾರುಕಟ್ಟೆಯಲ್ಲಿ ಕಂಡುಬಂದ ಮಾರಾಟದ ಒತ್ತಡವು ಭಾರತದ ಷೇರುಪೇಟೆಗಳಲ್ಲಿ ಶುಕ್ರವಾರ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು.

ಅಮೆರಿಕದ ಫೆಡರಲ್‌ ರಿಸರ್ವ್‌ ತನ್ನ ಮುಂದಿನ ಸಭೆಯಲ್ಲಿ ಯಾವ ಪ್ರಮಾಣದಲ್ಲಿ ಬಡ್ಡಿದರ ಹೆಚ್ಚಳ ಮಾಡಬಹುದು ಎನ್ನುವ ಬಗ್ಗೆ ಆತಂಕ ಎದುರಾಗಿರುವುದು ಸಹ ವಹಿವಾಟಿನ ಮೇಲೆ ಪರಿಣಾಮ ಬೀರಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 671 ಅಂಶ ಇಳಿಕೆ ಕಂಡು 59,135 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 177 ಅಂಶ ಇಳಿಕೆಯಾಗಿ 17,324 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ನವೋದ್ಯಮಗಳಿಗೆ ಹಣಕಾಸಿನ ನೆರವು ಒದಗಿಸುವ ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (ಎಸ್‌ವಿಬಿ) ಷೇರು ಮೌಲ್ಯ ಶೇ 60ರಷ್ಟು ಕುಸಿತ ಕಂಡಿದ್ದರಿಂದ ಅಮೆರಿಕದ ಷೇರುಪೇಟೆಗಳಲ್ಲಿ ಅತಿಯಾದ ಮಾರಾಟದ ಒತ್ತಡ ಕಂಡುಬಂದಿತು. ಬಡ್ಡಿದರ ಹೆಚ್ಚಳವು ಸಾಲ ಮರುಪಾವತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಳವಳದಿಂದಾಗಿ ಬ್ಯಾಂಕಿಂಗ್‌ ಷೇರುಗಳು ಕುಸಿತ ಕಾಣುವಂತಾಯಿತು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ತನ್ನ ಮುಂದಿನ ಸಭೆಯಲ್ಲಿ ಯಾವ ಪ್ರಮಾಣದಲ್ಲಿ ಬಡ್ಡಿದರ ಹೆಚ್ಚಳ ಮಾಡಲಿದೆ ಎನ್ನುವ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಎದುರಾಗಿದೆ. ಶುಕ್ರವಾರ ಅಮೆರಿಕದ ಕೆಲವು ಬ್ಯಾಂಕ್‌ಗಳ ಷೇರು ಮೌಲ್ಯ ಇಳಿಕೆ ಕಂಡಿರುವುದು ಅನಿಶ್ಚಿತತೆಯನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್ ಸರ್ವಿಸಸ್‌ ಲಿಮಿಟೆಡ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ್‌ ಖೇಮ್ಕಾ ತಿಳಿಸಿದ್ದಾರೆ.

ಬಿಎಸ್‌ಇನಲ್ಲಿ ವಲಯವಾರು ಇಳಿಕೆ (%)

ಹಣಕಾಸು ಸೇವೆಗಳು;1.77

ಬ್ಯಾಕಿಂಗ್‌;1.85

ಬಂಡವಾಳ ಸರಕುಗಳು;1.08

ರಿಯಾಲ್ಟಿ;1.07

ಇಂಡಸ್ಟ್ರಿಯಲ್‌;0.85

ಐ.ಟಿ.;0.63

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT