ಭಾನುವಾರ, ಆಗಸ್ಟ್ 14, 2022
20 °C
ವಿದೇಶಿ ಬಂಡವಾಳ ಒಳಹರಿವು, ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ವಹಿವಾಟು

46 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈ ಷೇರುಪೇಟೆಯು (ಬಿಎಸ್‌ಇ) ಇದೇ ಮೊದಲ ಬಾರಿಗೆ 46 ಸಾವಿರದ ಗಡಿ ದಾಟಿದೆ. ವಿದೇಶಿ ಬಂಡವಾಳದ ಒಳಹರಿವು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟಿನಿಂದಾಗಿ ಮುಂಬೈ ಷೇರುಪೇಟೆಯು ಬುಧವಾರ ದಾಖಲೆಯ ಮಟ್ಟವನ್ನು ತಲುಪಿತು.

ಬಿಎಸ್‌ಇ ಸೂಚ್ಯಂಕವು 495 ಅಂಶಗಳ ಏರಿಕೆಯೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 46,103 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಮಧ್ಯಂತರ ವಹಿವಾಟಿನಲ್ಲಿ 45,164ರ ಗರಿಷ್ಠ ಮಟ್ಟ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ 136 ಅಂಶ ಹೆಚ್ಚಾಗಿ ದಾಖಲೆಯ ಮಟ್ಟವಾದ 13,529 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ದಿನದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 13,549 ಅಂಶಗಳನ್ನು ತಲುಪಿತ್ತು.

ಗರಿಷ್ಠ ಗಳಿಕೆ: ದಿನದ ವಹಿವಾಟಿನಲ್ಲಿ ಏಷ್ಯನ್‌ ಪೇಂಟ್ಸ್‌ ಷೇರು ಶೇಕಡ 3.7ರಷ್ಟು ಗಳಿಕೆ ಕಂಡಿತು. ಕೋಟಕ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಇನ್ಫೊಸಿಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಐಟಿಸಿ ಷೇರುಗಳು ಗಳಿಕೆ ಕಂಡುಕೊಂಡವು.

ನಷ್ಟ: ಅಲ್ಟ್ರಾಟೆಕ್‌ ಸಿಮೆಂಟ್‌, ಟಾಟಾ ಸ್ಟೀಲ್‌, ಮಾರುತಿ, ಎಸ್‌ಬಿಐ ಮತ್ತು ಬಜಾಜ್‌ ಆಟೊ ಷೇರುಗಳ ಮೌಲ್ಯ ಇಳಿಕೆ ಕಂಡಿದೆ.‌

‘ಕೋವಿಡ್‌–19ಕ್ಕೆ ಲಸಿಕೆ ಸಿದ್ದವಾಗಿದ್ದು, ಜಗತ್ತಿನ ಹಲವು ಕಡೆಗಳಲ್ಲಿ ವಿತರಣೆ ಆರಂಭವಾಗಿದೆ. ಕೋವಿಡ್–19 ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಆತಂಕವು ಇದರಿಂದಾಗಿ ತಗ್ಗಿದೆ. ವಿವಿಧ ದೇಶಗಳಲ್ಲಿ ಲಾಕ್‌ಡೌನ್‌ ಸಡಿಲಿಸುತ್ತಿರುವುದರಿಂದಾಗಿ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ’ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಮುಖ್ಯಸ್ಥ ವಿನೋದ್‌ ಮೋದಿ ಹೇಳಿದ್ದಾರೆ.

ಆರ್ಥಿಕ ಚೇತರಿಕೆಗೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಂದಾಗಿ ವಿದೇಶಿ ಹೂಡಿಕೆದಾರರಿಗೆ ಭಾರತದ ಮಾರುಕಟ್ಟೆಯು ಹೂಡಿಕೆಗೆ ಪ್ರಮುಖ ತಾಣವಾಗಿದೆ. ಕಾರ್ಪೊರೇಟ್‌ ಗಳಿಕೆಯು ಉತ್ತಮವಾಗಿದೆ ಎಂದೂ ಅವರು ತಿಳಿಸಿದ್ದಾರೆ.

‘ಸ್ಮಾಲ್‌ ಮತ್ತು ಮಿಡ್‌ ಕ್ಯಾಪ್‌ ಕಂಪನಿಗಳು ಉತ್ತಮ ವಹಿವಾಟು ನಡೆಸುತ್ತಿದ್ದು, ಅಲ್ಪಾವಧಿಯಿಂದ ಮಧ್ಯಮಾವಧಿಯಲ್ಲಿ ಅವು ಇದೇ ರೀತಿ ಮುಂದುವರಿಯುವ ನಿರೀಕ್ಷೆ ಇದೆ. ಕೋವಿಡ್‌–19ಕ್ಕೆ ಲಸಿಕೆ ಲಭ್ಯವಾಗುತ್ತಿರುವುದು, ಭಾರತದ ಮತ್ತು ಅಭಿವೃದ್ಧಿ ಹೊಂದಿರುವ ದೇಶಗಳು ಪ್ರಕಟಿಸಿರುವ ಆರ್ಥಿಕ ಉತ್ತೇಜನ ಕೊಡುಗೆಗಳು ಷೇರುಪೇಟೆಗಳ ಉತ್ಸಾಹ ಹೆಚ್ಚಿಸಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಏಷ್ಯಾದಲ್ಲಿ ಶಾಂಘೈ ಹೊರತುಪಡಿಸಿ ಉಳಿದೆಲ್ಲ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಯುರೋಪ್‌ನಲ್ಲಿಯೂ ಏರುಮುಖ ಚಲನೆ ಕಂಡುಬಂತು.

ಅಂಕಿ–ಅಂಶ

0.96% (ಒಂದು ಬ್ಯಾರಲ್‌ಗೆ 49.31 ಡಾಲರ್‌): ಬ್ರೆಂಟ್‌ ತೈಲ ದರ ಏರಿಕೆ

3 ಪೈಸೆ (₹ 73.57): ‌ಒಂದು ಡಾಲರ್‌ಗೆ ರೂಪಾಯಿ ಮೌಲ್ಯದಲ್ಲಿ ಆಗಿರುವ ಏರಿಕೆ

0.49%: ‌ಬಿಎಸ್‌ಇ ಸ್ಮಾಲ್‌, ಮಿಡ್‌ ಕ್ಯಾಪ್‌ ಸೂಚ್ಯಂಕದ ಏರಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು