ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟದ ಒತ್ತಡಕ್ಕೆ ಕುಸಿದ ಸೆನ್ಸೆಕ್ಸ್: ಹೂಡಿಕೆದಾರರಿಗೆ ₹2.39 ಲಕ್ಷ ಕೋಟಿ ನಷ್ಟ

Last Updated 29 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳು ಮಾರಾಟದ ಒತ್ತಡಕ್ಕೆ ಒಳಗಾಗಿ ಸೋಮವಾರ ಕುಸಿತ ಕಂಡವು.

ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಹೆಚ್ಚಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ನಕಾರಾತ್ಮಕ ವಹಿವಾಟಿಗೆ ಕಾರಣವಾಯಿತು. ಹೀಗಾಗಿ ದೇಶದಲ್ಲಿ ಐ.ಟಿ, ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಹೆಚ್ಚಿನ ಮಾರಾಟದ ಒತ್ತಡಕ್ಕೆ ಒಳಗಾದವು.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಮತ್ತು ಕಚ್ಚಾ ತೈಲ ದರ ಏರಿಕೆಯು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದವು ಎಂದು ವಿಶ್ಲೇಷಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, ವಹಿವಾಟಿನ ಆರಂಭದಲ್ಲಿ 1,460 ಅಂಶಗಳಷ್ಟು ಕುಸಿತ ಕಂಡಿತ್ತು. ಆ ಬಳಿಕ ತುಸು ಚೇತರಿಕೆ ಹಾದಿಗೆ ಮರಳಿತು. ಅಂತಿಮವಾಗಿ 861 ಅಂಂಶಗಳ ಇಳಿಕೆಯೊಂದಿಗೆ 57,972 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 246 ಅಂಶ ಇಳಿಕೆಯಾಗಿ 17,312 ಅಂಶಗಳಿಗೆ ತಲುಪಿತು.

ನಕಾರಾತ್ಮಕ ವಹಿವಾಟಿನಿಂದ ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹2.39 ಲಕ್ಷ ಕೋಟಿ ಕರಗಿದೆ. ಇದರಿಂದಾಗಿ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹ 274.56 ಲಕ್ಷ ಕೋಟಿಗೆ ಇಳಿಕೆ ಆಗಿದೆ.

‘ರೂಪಾಯಿ ಮೇಲೆ ಒತ್ತಡ ಹೆಚ್ಚಲಿದೆ’

‘ಜಾಗತಿಕ ಆರ್ಥಿಕತೆಯ ಮಂದಗತಿಯ ಬೆಳವಣಿಗೆ ಮತ್ತು ಹಣದುಬ್ಬರದ ಆತಂಕವು ರೂಪಾಯಿ ಮೇಲೆ ಇನ್ನಷ್ಟು ಒತ್ತಡ ತರಬಹುದು’ ಎಂದು ಶೇರ್‌ಖಾನ್ ಬ್ರೋಕರೇಜ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಅನುಜ್‌ ಚೌಧರಿ ಹೇಳಿದ್ದಾರೆ.

ಇತರೆ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ವೃದ್ಧಿ ಆಗಿರುವುದು ಹಾಗೂ ಕಚ್ಚಾ ತೈಲ ದರ ಏರಿಕೆಯಿಂದಾಗಿ ರೂಪಾಯಿ ಮೌಲ್ಯ ಕುಸಿತ ಕಾಣುವಂತಾಯಿತು. ಆರ್‌ಬಿಐ ಮಧ್ಯಪ್ರವೇಶದಿಂದಾಗಿ ಸೋಮವಾರ ರೂಪಾಯಿ ಹೆಚ್ಚಿನ ಕುಸಿತ ಕಾಣುವುದು ತಪ್ಪಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಜುಲೈ 20ರಂದು ಮೊದಲ ಬಾರಿಗೆ ರೂಪಾಯಿ ಮೌಲ್ಯವು ₹80ರ ಗಡಿ ದಾಟಿ, ₹80.05ಕ್ಕೆ ತಲುಪಿತ್ತು.

ಬ್ರೆಂಟ್ ಕಚ್ಚಾ ತೈಲ ದರ ಶೇ 0.79ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 101.8 ಡಾಲರ್‌ಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT