ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ: 18 ತಿಂಗಳಲ್ಲಿ ಶೇಕಡ 130ರಷ್ಟು ಏರಿದ ಸೆನ್ಸೆಕ್ಸ್‌

Last Updated 24 ಸೆಪ್ಟೆಂಬರ್ 2021, 18:53 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಮೊದಲ ಅಲೆಯ ಆರಂಭದಲ್ಲಿ 25ಸಾವಿರದ ಸಮೀಪಕ್ಕೆ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಈಗ 60 ಸಾವಿರದ ಗಡಿಯನ್ನು ದಾಟಿದೆ. 2020ರ ಮಾರ್ಚ್‌ ಕೊನೆಯಲ್ಲಿ ಸೆನ್ಸೆಕ್ಸ್ ಇದ್ದ ಮಟ್ಟಕ್ಕೆ ಈಗಿನ ಮಟ್ಟವನ್ನು ಹೋಲಿಸಿದರೆ, ಶೇಕಡ 130ರಷ್ಟು ಏರಿಕೆ ಕಂಡಿದೆ!

ವ್ಯವಸ್ಥೆಯಲ್ಲಿ ನಗದು ಹರಿವು ಜಾಸ್ತಿ ಇರುವುದು, ನಿಶ್ಚಿತ ಆದಾಯವನ್ನು ತಂದುಕೊಡುವ ಠೇವಣಿಗಳ ಮೇಲಿನ ಬಡ್ಡಿದರವು ತೀರಾ ಕಡಿಮೆ ಪ್ರಮಾಣಕ್ಕೆ ಬಂದಿರುವುದು, ಹೆಚ್ಚಿನ ಲಾಭ ತಂದುಕೊಡಬಲ್ಲ ಈಕ್ವಿಟಿಗಳಲ್ಲಿ ಹೂಡಿಕೆಗೆ ಜನ ಮುಂದಾಗುತ್ತಿರುವುದು ಸೆನ್ಸೆಕ್ಸ್‌ನ ಈ ಪರಿಯ ಓಟಕ್ಕೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಕೋವಿಡ್‌ನ ಕೆಟ್ಟ ಪರಿಣಾಮಗಳನ್ನು ನಿವಾರಿಸಿಕೊಂಡು ಅರ್ಥ ವ್ಯವಸ್ಥೆಯು ಬೆಳವಣಿಗೆ ಕಾಣುತ್ತದೆ ಎನ್ನುವ ಭರವಸೆಯು ಕೂಡ ಈ ಏರಿಕೆಗೆ ಒಂದು ಕಾರಣ ಎಂದು ಅವರು ಹೇಳಿದ್ದಾರೆ.

‘ಅರ್ಥ ವ್ಯವಸ್ಥೆಯ ಚೇತರಿಕೆಯು ಚೆನ್ನಾಗಿ ಇರಲಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಬೆಳವಣಿಗೆಯು ಸುಸ್ಥಿರವಾಗಿ ಇರಲಿದೆ ಎಂಬ ನಿರೀಕ್ಷೆಯು ಮಾರುಕಟ್ಟೆಯಲ್ಲಿ ತೇಜಿ ವಹಿವಾಟಿಗೆ ಕಾರಣವಾಗಿವೆ. ಜಾಗತಿಕವಾಗಿಯೂ ಭಾರತವು ಹೂಡಿಕೆಗೆ ಆಕರ್ಷಕ ತಾಣವಾಗಿ ಮುಂದುವರಿದಿದೆ’ ಎಂದು ಐಐಎಫ್‌ಎಲ್‌ ಸೆಕ್ಯುರಿಟೀಸ್‌ನ ರಿಟೇಲ್‌ ವಿಭಾಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಂದೀಪ್ ಭಾರದ್ವಾಜ್ ಹೇಳಿದ್ದಾರೆ.

‘ಹೀಗಿದ್ದರೂ, ಸಣ್ಣ ಹೂಡಿಕೆದಾರರು ತಮ್ಮ ಹೂಡಿಕೆಗಳು ಒಂದೇ ಕಡೆ ಆಗದಂತೆ ನಿಗಾ ವಹಿಸಬೇಕು. ಆಗ, ಮಾರುಕಟ್ಟೆಯಲ್ಲಿ ಅಸ್ಥಿರ ಪರಿಸ್ಥಿತಿ ನಿರ್ಮಾಣವಾದರೆ ಅದನ್ನು ಎದುರಿಸಲು ಸಾಧ್ಯವಾಗುತ್ತದೆ’ ಎಂದು ಅವರು ಕಿವಿಮಾತು ಹೇಳಿದರು. ‘ಅರ್ಥ ವ್ಯವಸ್ಥೆ ಗಟ್ಟಿಗೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಾಧ್ಯವಾಗಿದೆ. ಹಾಗೆಯೇ, ಕೋವಿಡ್‌ನ ಮೂರನೆಯ ಅಲೆಯು ತೀರಾ ಅಪಾಯಕಾರಿ ಆಗಲಿಕ್ಕಿಲ್ಲ ಎಂಬ ಲೆಕ್ಕಾಚಾರ ಕೂಡ ಇದಕ್ಕೆ ಕಾರಣ’ ಎಂದು ಟಿಐಡಬ್ಲ್ಯು ಪ್ರೈವೇಟ್ ಈಕ್ವಿಟಿ ಕಂಪನಿಯ ಮುಖ್ಯ ಹೂಡಿಕೆ ಅಧಿಕಾರಿ ಮೋಹಿತ್ ರಲ್ಹಾನ್ ಹೇಳಿದರು.

‘ಮುಂಬರುವ ತ್ರೈಮಾಸಿಕ ಫಲಿತಾಂಶಗಳುಸಕಾರಾತ್ಮಕವಾಗಿ ಇರಲಿವೆ ಎಂಬ ನಿರೀಕ್ಷೆ, ಜಿಎಸ್‌ಟಿಸಂಗ್ರಹದಲ್ಲಿ ಹೆಚ್ಚಳ ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಜಿಗಿತಕ್ಕೆ ಕಾರಣ. ಆದರೆ,ಅಮೆರಿಕದ ಫೆಡರಲ್ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ ಸೇರಿ ವಿವಿಧ ದೇಶಗಳ ಬ್ಯಾಂಕುಗಳು ಬಡ್ಡಿ ದರವನ್ನುಕ್ರಮೇಣ ಹೆಚ್ಚಿಸಿ, ವ್ಯವಸ್ಥೆಯಲ್ಲಿ ನಗದು ಹರಿವಿನ ಪ್ರಮಾಣ ತಗ್ಗಿಸುವ ಇಂಗಿತ ವ್ಯಕ್ತಪಡಿಸಿವೆ. ಆ ಕೆಲಸ ಶುರುವಾದ ಬಳಿಕ ಷೇರುಪೇಟೆಯಲ್ಲಿ ಸೂಚ್ಯಂಕಗಳ ಓಟಕ್ಕೆ ಒಂದಿಷ್ಟು ಕಡಿವಾಣ ಬೀಳಬಹುದು’ ಎಂದು ಇಂಡಿಯನ್ ಮನಿ ಡಾಟ್‌ ಕಾಂ ಕಂಪನಿಯ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ ಕೆ.ಟಿ. ಅವಿನಾಶ್ ಅಂದಾಜಿಸಿದರು.

ಚೀನಾದ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿ ಎವರ್‌ಗ್ರಾಂಡ್‌ ಸಾಲದ ಕಂತು ಪಾವತಿಸಲು ವಿಫಲವಾದಲ್ಲಿ, ಅದರಿಂದ ಆಗುವ ಪರಿಣಾಮಗಳು ಮಾರುಕಟ್ಟೆಯ ಚಲನೆಯ ಮೇಲೆ ಪ್ರಭಾವ ಬೀರಲಿವೆ ಎಂದು ಅವಿನಾಶ್ ಹೇಳಿದರು.

ಸಣ್ಣ ಹೂಡಿಕೆದಾರರು ನೇರವಾಗಿ ಹಾಗೂ ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡುತ್ತಿರುವುದು ಕೂಡ ಸೂಚ್ಯಂಕಗಳ ಏರಿಕೆಗೆ ಒಂದು ಕಾರಣ ಎಂದು ಕೋಟಕ್ ಮಹೀಂದ್ರ ಆಸ್ತಿ ನಿರ್ವಹಣಾ ಕಂಪನಿಯ ಈಕ್ವಿಟಿ ಸಂಶೋಧನಾ ವಿಭಾಗದ ಮುಖ್ಯಸ್ಥೆ ಶಿಬಾನಿ ಕುರಿಯನ್ ವಿಶ್ಲೇಷಿಸಿದ್ದಾರೆ.

ಮ್ಯೂಚುವಲ್‌ ಫಂಡ್‌ಗಳ ಕೊಡುಗೆ
ಬೆಂಗಳೂರು:
ಸೂಚ್ಯಂಕವು 60 ಸಾವಿರದ ಗಡಿ ದಾಟಿರುವುದು ದೇಶದ ಬೆಳವಣಿಗೆಯ ಸಾಮರ್ಥ್ಯದ ದ್ಯೋತಕ ಎಂದು ಬಿಎಸ್‌ಇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಶಿಶ್‌ ಕುಮಾರ್ ಚೌಹಾಣ್ ಹೇಳಿದ್ದಾರೆ.

ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಷೇರು ಮಾರುಕಟ್ಟೆಗಳ ಕಡೆ ಬರುತ್ತಿದ್ದಾರೆ. ಇವರು ಹೀಗೆ ಮಾರುಕಟ್ಟೆಗಳತ್ತ ಮುಖ ಮಾಡಲುಹೊಸ ಕಾಲದ ಬ್ರೋಕರೇಜ್ ಸಂಸ್ಥೆಗಳು ನೆರವಾಗಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ ಠೇವಣಿಗಳ ಮೇಲಿನ ಬಡ್ಡಿ ದರ ಕಡಿಮೆ ಇರುವುದು ಕೂಡ ಸಣ್ಣ ಹೂಡಿಕೆದಾರರು ಮಾರುಕಟ್ಟೆಗಳತ್ತ ಚಿತ್ತ ಹರಿಸಲು ಒಂದು ಕಾರಣ ಎಂದು ಹೇಳಿದ್ದಾರೆ.

‘ಕೋವಿಡ್ ಸಂದರ್ಭದಲ್ಲಿ ಭಾರತವು ವಿಶ್ವದ ನಾಯಕನ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಕಳೆದ 18 ತಿಂಗಳ ಅವಧಿಯಲ್ಲಿ ಭಾರತದ ಷೇರು ಮಾರುಕಟ್ಟೆಗಳು ಇತರ ಮಾರುಕಟ್ಟೆಗಳಿಗೆ ಹೋಲಿಸಿದರೆ ಅತ್ಯುತ್ತಮ ಬೆಳವಣಿಗೆ ಕಂಡಿವೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT