ಮಂಗಳವಾರ, ಸೆಪ್ಟೆಂಬರ್ 22, 2020
22 °C
ಮುಂದುವರಿದ ಎಫ್‌ಪಿಐ ಹೊರಹರಿವು: ಸೂಚ್ಯಂಕಗಳ ಭಾರಿ ಏರಿಳಿತ

ಷೇರುಪೇಟೆ| ವಾರದ ವಹಿವಾಟು ನಕಾರಾತ್ಮಕ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಷೇರುಪೇಟೆಗಳಲ್ಲಿ ವಾರದ ವಹಿವಾಟು ಚಂಚಲವಾಗಿತ್ತು. ಆದರೆ, ಆರ್ಥಿಕ ಚೇತರಿಕೆಗೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಹೂಡಿಕೆ ಚಟುವಟಿಕೆ ತುಸು ಚೇತರಿಸಿಕೊಂಡಿದೆ.

ಷೇರುಪೇಟೆಯ ಬಂಡವಾಳ ಮೌಲ್ಯ ₹140.28 ಲಕ್ಷ ಕೋಟಿಗೆ ತಲುಪಿದೆ. ಗಣೇಶ ಚತುರ್ಥಿ ಪ್ರಯುಕ್ತ ಸೋಮವಾರ ರಜೆ ಇತ್ತು. ಹೀಗಾಗಿ, ಸೆಪ್ಟೆಂಬರ್‌ 3 ರಿಂದ 6ರವರೆಗೆ ನಡೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಎರಡು ದಿನ ಸೂಚ್ಯಂಕಗಳು ಏರಿಕೆ ಕಂಡಿದ್ದು, ಎರಡು ದಿನ ಇಳಿಕೆಯಾಗಿವೆ.

ಮಂಗಳವಾರ ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗಿ ಸೂಚ್ಯಂಕಗಳು ಹೆಚ್ಚಿನ ಹಾನಿ ಅನುಭವಿಸುವಂತಾಯಿತು.

ಬುಧವಾರ ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಚೇತರಿಕೆ ಹಾದಿಗೆ ಮರಳಿದವು. ಗುರುವಾರ ಅಲ್ಪ ಇಳಿಕೆ ಕಂಡರೆ ಶುಕ್ರವಾರ ಉತ್ತಮ ಏರಿಕೆ ಕಂಡು ದಿನದ ವಹಿವಾಟು ಅಂತ್ಯಗೊಂಡಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 351 ಅಂಶ ಇಳಿಕೆ ಕಂಡು, 36,981 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 77 ಅಂಶ ಇಳಿಕೆಯಾಗಿ 10,940 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಎಫ್‌ಪಿಐ ಹೊರಹರಿವು: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ದೇಶದ ಷೇರುಪೇಟೆಯಲ್ಲಿ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ. ಮಂಗಳವಾರದ ವಹಿವಾಟಿನಲ್ಲಿ ₹ 2,016 ಕೋಟಿ ಹಾಗೂ ಗುರುವಾರದ ವಹಿವಾಟಿನಲ್ಲಿ ₹ 561 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 30 ಪೈಸೆ ಕಡಿಮೆಯಾಗಿ ಒಂದು ಡಾಲರ್‌ಗೆ
₹ 71.22ಕ್ಕೆ ತಲುಪಿದೆ.

ನಕಾರಾತ್ಮಕ ಅಂಶಗಳು: ದೇಶದ ಜಿಡಿಪಿ ವೃದ್ಧಿ ದರವು ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 6 ವರ್ಷಗಳ ಕನಿಷ್ಠ ಮಟ್ಟವಾದ ಶೇ 5 ಕುಸಿದಿದೆ.

ತಯಾರಿಕಾ ವಲಯದ ಜುಲೈ ತಿಂಗಳ ಪ್ರಗತಿ 15 ತಿಂಗಳ ಕನಿಷ್ಠ ತಲುಪಿದೆ. ಮೂಲಸೌಕರ್ಯ ವಲಯದ 8 ಕೈಗಾರಿಕೆಗಳ ಪ್ರಗತಿ ಆಗಸ್ಟ್‌ನಲ್ಲಿ ಶೇ 2.1ಕ್ಕೆ ಇಳಿಕೆ ಕಂಡಿದೆ.

ಸರ್ಕಾರಿ ಸ್ವಾಮ್ಯದ ಪ್ರಮುಖ 10 ಬ್ಯಾಂಕ್‌ಗಳ ವಿಲೀನ ನಿರ್ಧಾರದಿಂದ ಬ್ಯಾಂಕ್‌ಗಳ ಷೇರುಗಳ ಮೌಲ್ಯ ಇಳಿಕೆಯಾಗಿತ್ತು. ವಾಹನಗಳ ಮಾರಾಟ ನಿರಂತರವಾಗಿ ಕುಸಿತ ಕಾಣುತ್ತಿದ್ದು, ವಾಹನ ತಯಾರಿಕಾ ಕಂಪನಿಗಳ ಷೇರುಗಳು ನಷ್ಟ ಅನುಭವಿಸುತ್ತಿವೆ. ಡಾಲರ್‌ ಎದುರು ರೂಪಾಯಿ ಮೌಲ್ಯದ ಇಳಿಕೆಯೂ ಸೂಚ್ಯಂಕದ ಇಳಿಕೆಗೆ ಕಾರಣವಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು