ಸೋಮವಾರ, ಏಪ್ರಿಲ್ 6, 2020
19 °C

ಷೇರುಪೇಟೆಗೆ ಉತ್ಸಾಹ ತುಂಬಿದ ಕೇಂದ್ರ ಪ್ಯಾಕೇಜ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಘೋಷಿಸಿರುವ ದೇಶವ್ಯಾಪಿ ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಲಿರುವವರಿಗೆ ನೆರವು ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಘೋಷಿಸಿದ 1.70 ಲಕ್ಷ ರೂಪಾಯಿ ಮೌಲ್ಯದ ವಿಶೇಷ ಪ್ಯಾಕೇಜ್‌ ಷೇರುಪೇಟೆಯಲ್ಲಿ ಭರವಸೆ ಮೂಡಿಸಿದೆ.

ಸಚಿವರ ಹೇಳಿಕೆ ಹೊರಬಿದ್ದ ನಂತರ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 1258.04 ಅಂಶಗಳ (ಶೇ 44.1) ಏರಿಕೆ ಕಂಡು 29,793.82ಕ್ಕೆ ತಲುಪಿತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ 284.85 ಅಂಶ (ಶೇ 3.42) ಏರಿಕೆ ಕಂಡು 8,602.70 ತಲುಪಿತು.

ಭಾರತ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಕೊರೊನಾ ವೈರಸ್‌ ಪಿಡುಗಿನಿಂದ ಬಾಧೆಗೊಳಾಗಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಪ್ಯಾಕೇಜ್‌ ಘೋಷಿಸಬಹುದು ಎಂಬ ನಿರೀಕ್ಷೆಯೊಂದಿಗೆ ಇಂದು ಷೇರುಪೇಟೆಯಲ್ಲಿ ವಹಿವಾಟು ಆರಂಭವಾಗಿತ್ತು.

ಅಮೆರಿಕದ ವ್ಯಾಪಾರಿಗಳು ಮತ್ತು ಕಾರ್ಮಿಕರಿಗೆ ನೆರವಾಗುವ 2 ಲಕ್ಷ ಕೋಟಿ ಡಾಲರ್ ಮೊತ್ತದ ಪ್ಯಾಕೇಜ್‌ ಅನ್ನು ಅಮೆರಿಕದ ಸೆನೆಟ್ ಅಂಗೀಕರಿಸಿದ್ದು ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ ಮೂಡಿಸಿತು.

ಈಚಿನ ದಿನಗಳಲ್ಲಿ ಸತತವಾಗಿ ಕುಸಿದಿದ್ದ ಇಂಡಸ್‌ಇಂಡ್ ಬ್ಯಾಂಕ್, ಆಕ್ಸಿಸ್‌ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಉತ್ಸಾಹ ತೋರಿದರು. ಈ ಕಂಪನಿಗಳ ಷೇರು ಮೌಲ್ಯವೂ ಹೆಚ್ಚಾಯಿತು. ಇಂಡಸ್‌ಇಂಡ್ ಬ್ಯಾಂಕ್‌ನ ಷೇರು ಒಂದೇ ದಿನ ಶೇ 47ರಷ್ಟು ಏರಿಕೆ ದಾಖಲಿಸಿತು.

ಮಧ್ಯಾಹ್ನ 3ರ ಹೊತ್ತಿಗೆ ಸೆನ್ಸೆಕ್ಸ್‌ 1,300 ಅಂಶಗಳ ಏರಿಕೆ ಕಂಡು, 29,838.32 ತಲುಪಿತ್ತು. ನಿಫ್ಟಿ 362.55 ಅಂಶಗಳ ಏರಿಕೆ ದಾಖಲಿಸಿ, 8,680.40 ಮುಟ್ಟಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು