ಫೆಬ್ರವರಿ 17ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಚೇತರಿಸಿಕೊಂಡಿವೆ. 61,002 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.52ರಷ್ಟು ಗಳಿಸಿಕೊಂಡಿದೆ. 17,944 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.49ರಷ್ಟು ಜಿಗಿದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರು 10 ವಾರಗಳ ಬಳಿಕ ಷೇರುಪೇಟೆಗೆ ಮರಳಿ ಖರೀದಿ ಉತ್ಸಾಹ ತೋರಿರುವುದು ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಪುಟಿದೇಳಲು ಕಾರಣವಾಗಿವೆ.
ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,005.85 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 2,735.1 ಕೋಟಿ ಮೌಲ್ಯದ ಷೇರುಗಳನ್ನು ಪಡೆದುಕೊಂಡಿದ್ದಾರೆ.
ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಪವರ್ ಸೂಚ್ಯಂಕ ಶೇ 3ರಷ್ಟು ಕುಸಿದಿದೆ. ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 2.8ರಷ್ಟು ಇಳಿಕೆಯಾಗಿದೆ. ಬ್ಯಾಂಕ್ ಸೂಚ್ಯಂಕ ಶೇ 1ರಷ್ಟು ತಗ್ಗಿದೆ. ಆದರೆ ಬಿಎಸ್ಇ ಲೋಹ ವಲಯ ಮತ್ತು ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕಗಳು ಕ್ರಮವಾಗಿ ಶೇ 2 ಮತ್ತು ಶೇ 1ರಷ್ಟು ಗಳಿಸಿಕೊಂಡಿವೆ.
ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಟೆಕ್ ಮಹೀಂದ್ರ, ಶ್ರೀ ಸಿಮೆಂಟ್ಸ್, ಒಎನ್‌ಜಿಸಿ, ಯುಪಿಎಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಗಳಿಸಿಕೊಂಡಿವೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಎನರ್ಜಿ ಮತ್ತು ನೈಕಾ ಕುಸಿದಿವೆ.
ಮುನ್ನೋಟ: ಈ ವಾರ ಸ್ಪೈಸ್‌ಜೆಟ್, ಕುಬೇರ್ ಉದ್ಯೋಗ್ ಲಿಮಿಟೆಡ್, ಪಾರ್ಶ್ವನಾಥ್ ಡೆವಲಪರ್ಸ್ ಲಿ., ಶರದ್ ಫೈಬರ್ಸ್ ಆ್ಯಂಡ್ ಯಾರ್ನ್ ಪ್ರೋಸೆಸರ್ಸ್ ಲಿ., ಎಲೆಂಟಾಸ್ ಬೆಕ್ ಇಂಡಿಯಾ ಲಿ., ನ್ಯೂ ಟೈಂ ಇನ್ಫ್ರಾಸ್ಟ್ರಕ್ಚರ್ ಲಿ., ಕೆಎಸ್‌ಬಿ ಲಿ., ಸ್ಯಾನೋಫಿ ಇಂಡಿಯಾ ಲಿ., ಸೇರಿದಂತೆ ಕೆಲವು ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳು, ವಿದೇಶಿ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಸೇರಿದಂತೆ ಪ್ರಮುಖ ಬೆಳವಣಿಗೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.