ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಖಾತೆ ವಿಚಾರ, ಟ್ವಿಟರ್ ಖರೀದಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ: ಇಲಾನ್ ಮಸ್ಕ್

ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಟೆಸ್ಲಾ ಕಂಪನಿ ಮುಖ್ಯಸ್ಥ ಇಲಾನ್‌ ಮಸ್ಕ್‌ ಶುಕ್ರವಾರ ಪ್ರಕಟಿಸಿದ್ದಾರೆ.

ಟ್ವಿಟರ್‌ನಲ್ಲಿ ನಕಲಿ ಖಾತೆಗಳು ಹಾಗೂ ಸ್ಪ್ಯಾಮ್‌ ಖಾತೆಗಳಿಗೆ ಸಂಬಂಧಿಸಿದ ವಿವರಗಳು ಬಾಕಿ ಉಳಿದಿರುವುದನ್ನು ಪ್ರಸ್ತಾಪಿಸಿರುವ ಮಸ್ಕ್‌, ಟ್ವಿಟರ್ ಖರೀದಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ ಎಂದಿದ್ದಾರೆ.

ಷೇರುಪೇಟೆ ಸಾರ್ವಜನಿಕ ವಹಿವಾಟು ಆರಂಭಕ್ಕೂ ಮುನ್ನ (ಪ್ರೀಮಾರ್ಕೆಟ್‌ ಟ್ರೇಡಿಂಗ್‌) ಟ್ವಿಟರ್‌ನ ಷೇರು ಬೆಲೆ ಶೇಕಡ 17ರಷ್ಟು ಕುಸಿದಿರುವುದಾಗಿ ವರದಿಯಾಗಿದೆ.

ಪಾವತಿ ವ್ಯವಸ್ಥೆಗೆ ಒಳಗೊಳ್ಳುವ ನಿತ್ಯದ ಟ್ವಿಟರ್‌ ಬಳಕೆದಾರರ ಪೈಕಿ ಶೇಕಡ 5ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪ್ಯಾಮ್‌ ಖಾತೆಗಳಿರುವುದಾಗಿ ಟ್ವಿಟರ್‌ ಈ ಹಿಂದೆ ಹೇಳಿತ್ತು. ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 22.9 ಕೋಟಿ ಬಳಕೆದಾರರಿಗೆ ಜಾಹೀರಾತು ಸೇವೆ ಒದಗಿಸಿತ್ತು.

ಕೆಲವು ಹೊತ್ತಿನ ನಂತರ ಮತ್ತೆ ಟ್ವೀಟ್ ಮಾಡಿರುವ ಮಸ್ಕ್ ಅವರು, ‘ಟ್ವಿಟರ್ ಸ್ವಾಧೀನ ಮಾಡಿಕೊಳ್ಳುವ ವಿಚಾರದಲ್ಲಿ ಬದ್ಧತೆ ಹೊಂದಿದ್ದೇನೆ’ ಎಂದು ಹೇಳಿದ್ದಾರೆ.

‘ನಕಲಿ ಖಾತೆಗಳ ಸಂಖ್ಯೆಯು ನಾವು ಅಂದಾಜು ಮಾಡಿರುವುದಕ್ಕಿಂತ ಹೆಚ್ಚಾಗಿರಬಹುದು’ ಎಂದು ಟ್ವಿಟರ್ ಈಚೆಗೆ ಹೇಳಿದೆ.

'ಸ್ಪ್ಯಾಮ್‌ ಬಾಟ್ಸ್‌' (ನಕಲಿ ಖಾತೆಗಳ ಮೂಲಕ ಟ್ವೀಟ್‌ಗಳನ್ನು ಹಂಚುವ ತಾಂತ್ರಿಕ ವ್ಯವಸ್ಥೆ) ತೆರವುಗೊಳಿಸುವುದು ಮೊದಲ ಆದ್ಯತೆಯಾಗಿದೆ ಎಂದು ಮಸ್ಕ್‌ ಹೇಳಿದ್ದರು.

ಮಸ್ಕ್‌ ಅವರು ಸಾಮಾಜಿಕ ಮಾಧ್ಯಮ 'ಟ್ವಿಟರ್‌' ಕಂಪನಿಯನ್ನು 44 ಬಿಲಿಯನ್‌ ಡಾಲರ್‌ (ಸುಮಾರು ₹3.36 ಲಕ್ಷ ಕೋಟಿ) ಮೊತ್ತಕ್ಕೆ ಖರೀದಿಸಲು ಮುಂದಾಗಿದ್ದಾರೆ. ಅದಕ್ಕೆ ಅಗತ್ಯವಿರುವ ಹಣ ಸಂಗ್ರಹಿಸಲು ಟೆಸ್ಲಾ ಕಂಪನಿಯ 52.3 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಶುಕ್ರವಾರದ ವಹಿವಾಟಿನಲ್ಲಿ ಟ್ವಿಟರ್ ಷೇರು ಮೌಲ್ಯವು ಶೇಕಡ 6ರಷ್ಟು ಕುಸಿದಿದೆ. ಇದೇ ವೇಳೆ ಟೆಸ್ಲಾ ಷೇರುಗಳ ಮೌಲ್ಯವು ಶೇ 7ರಷ್ಟು ಹೆಚ್ಚಳವಾಗಿದೆ. ಟೆಸ್ಲಾ ಷೇರುಗಳನ್ನು ಟ್ವಿಟರ್ ಖರೀದಿಗೆ ಹಣ ಒಗ್ಗೂಡಿಸಲು ಬಳಸುವುದಾಗಿ ಮಸ್ಕ್ ಹೇಳಿದ್ದಾರೆ.

‘ಮಸ್ಕ್ ಅವರು ಮಾಡಿರುವ ವಿಲಕ್ಷಣವಾದ ಟ್ವೀಟ್‌ನ ಕಾರಣದಿಂದಾಗಿ, ಟ್ವಿಟರ್ ಖರೀದಿ ಯೋಜನೆಯು ಮುರಿದುಬೀಳುವಂತಿದೆ ಎಂದು ಷೇರುಪೇಟೆಯ ಮಂದಿ ಆಲೋಚಿಸಬಹುದು. ಅಥವಾ ಮಸ್ಕ್ ಅವರು ಕಡಿಮೆ ಬೆಲೆಗೆ ಖರೀದಿಸಲು ಆಲೋಚಿಸಿರಬಹುದು. ಅಲ್ಲದೆ, ಮಸ್ಕ್ ಅವರು ಒಂದಿಷ್ಟು ದಂಡ ಪಾವತಿಸಿ ಖರೀದಿ ಯೋಜನೆಯಿಂದ ಹಿಂದೆ ಸರಿಯುತ್ತಿರಬಹುದು’ ಎಂದು ವಿಶ್ಲೇಷಕ ಡ್ಯಾನ್ ಐವ್ಸ್ ಹೇಳಿದ್ದಾರೆ.

ಅಕಸ್ಮಾತ್‌ ಟ್ವಿಟರ್‌ ಖರೀದಿಯಿಂದ ಹಿಂದೆ ಸರಿದರೆ, ಭಾರತದಲ್ಲಿ ಟೆಸ್ಲಾ ಕಾರು ತಯಾರಿಕೆಗೆ ಹೂಡಿಕೆ ಮಾಡುವಂತೆ ಇಲಾನ್‌ ಮಸ್ಕ್‌ ಅವರಿಗೆ ಸೀರಂ ಇನ್‌ಸ್ಟಿಟ್ಯೂಟ್‌ನ (ಎಸ್‌ಐಐ) ಸಿಇಒ ಆದಾರ್‌ ಪೂನಾವಾಲಾ ಇತ್ತೀಚೆಗಷ್ಟೇ ಟ್ವಿಟರ್‌ನಲ್ಲಿ ಪ್ರೇರೇಪಿಸಿದ್ದರು.

ಹಿಂದಿನಿಂದಲೂ ಟ್ವಿಟರ್‌ಗೆ ಹಲವು ಬದಲಾವಣೆಗಳನ್ನು ಸೂಚಿಸುತ್ತಿರುವ ಮಸ್ಕ್‌, ವಾಣಿಜ್ಯ ಬಳಕೆ ಮತ್ತು ಸರ್ಕಾರದ ಖಾತೆಗಳಿಗೆ ಟ್ವಿಟರ್‌ ಶುಲ್ಕ ವಿಧಿಸುವುದಾಗಿ ಪ್ರಕಟಿಸಿದ್ದರು. ಸಾಮಾನ್ಯ ಬಳಕೆದಾರರಿಗೆ ಟ್ವಿಟರ್‌ ಉಚಿತವಾಗಿಯೇ ಇರಲಿದೆ ಎಂದಿರುವ ಅವರು, ವಾಣಿಜ್ಯ ಮತ್ತು ಸರ್ಕಾರದ ಖಾತೆಗಳಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸಬಹುದು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT