ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಆರನೇ ವಾರವೂ ಜಿಗಿದ ಸೂಚ್ಯಂಕ

Last Updated 26 ಜುಲೈ 2020, 22:46 IST
ಅಕ್ಷರ ಗಾತ್ರ

ಭಾರತೀಯ ಷೇರುಪೇಟೆಯ ಸೂಚ್ಯಂಕಗಳು ಸತತ ಆರನೇ ವಾರವೂ ಗಳಿಕೆ ಕಂಡಿವೆ. 38,128 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇಕಡ 3ರಷ್ಟು ಗಳಿಕೆ ಕಂಡಿದೆ. 11,194 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.6ರಷ್ಟು ಏರಿಕೆ ದಾಖಲಿಸಿದೆ. ಇನ್ನು ‘ಸ್ಮಾಲ್‌ಕ್ಯಾಪ್’ ಮತ್ತು ‘ಮಿಡ್‌ಕ್ಯಾಪ್’ ಸೂಚ್ಯಂಕಗಳು ಕ್ರಮವಾಗಿ ಶೇ 1.4ರಷ್ಟು ಮತ್ತು ಶೇ 1.2ರಷ್ಟು ಜಿಗಿದಿವೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿರುವ ಸಕಾರಾತ್ಮಕ ವಾತಾವರಣ, ತ್ರೈಮಾಸಿಕ ಫಲಿತಾಂಶಗಳಲ್ಲಿ ಪ್ರಮುಖ ಕಂಪನಿಗಳ ಉತ್ತಮ ಸಾಧನೆ , ಕೋವಿಡ್–19ಕ್ಕೆ ಲಸಿಕೆ ಲಭ್ಯವಾಗುವ ನಿರೀಕ್ಷೆ ಮತ್ತು ಅರ್ಥವ್ಯವಸ್ಥೆಯ ಚೇತರಿಕೆಯ ಕಾರಣಗಳಿಂದ ಮಾರುಕಟ್ಟೆಯಲ್ಲಿ ಉತ್ಸಾಹ ಕಂಡುಬಂದಿದೆ. ಹಿಂದೂಸ್ಥಾನ್ ಯುನಿಲಿವರ್, ಬಜಾಜ್ ಅಟೋ, ಏಷಿಯನ್ ಪೇಂಟ್ಸ್ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಮಾರುಕಟ್ಟೆ ತಜ್ಞರ ಲೆಕ್ಕಾಚಾರ ಮೀರಿ ಆಶಾದಾಯಕವಾಗಿ ಇವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ತೈಲೋತ್ಪನ್ನ (ಎನರ್ಜಿ) ಸೂಚ್ಯಂಕವು ಶೇ 6ರಷ್ಟು ಗಳಿಕೆ ಕಂಡಿದೆ. ಐ.ಟಿ. ಸೂಚ್ಯಂಕ ಶೇ 2.8ರಷ್ಟು ಹೆಚ್ಚಳವಾಗಿದೆ. ಆದರೆ ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 2.2ರಷ್ಟು ಕುಸಿದಿದೆ.

ಸೆನ್ಸೆಕ್ಸ್–500ರಲ್ಲಿರುವ ಸುಮಾರು 33 ಕಂಪನಿಗಳ ಷೇರುಗಳು ಶೇ 10ರಷ್ಟರಿಂದ ಶೇ 30ರಷ್ಟು ಜಿಗಿದಿವೆ. ಟೈಡೆಂಟ್, ಫೆಡರಲ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಐಷರ್ ಮೋಟರ್ಸ್, ಗ್ರ್ಯಾನೂಯಲ್ಸ್ ಇಂಡಿಯಾ, ಎಂಫಸಿಸ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಮುಖ ಕಂಪನಿಗಳಾಗಿವೆ. ಯೆಸ್ ಬ್ಯಾಂಕ್ ಶೇ 31, ಫ್ಯೂಚರ್ ರಿಟೇಲ್ ಶೇ 31, ಸ್ಟೆರಿಲೈಟ್ ಟೆಕ್ ಶೇ 12ರಷ್ಟು ಕುಸಿದಿವೆ. ನಿಫ್ಟಿಯಲ್ಲಿ ರಿಲಯನ್ಸ್ ಶೇ 12, ಪವರ್ ಗ್ರಿಡ್ ಶೇ 11, ಐಷರ್ ಮೋಟರ್ಸ್ ಶೇ 10.5, ಎಚ್‌ಸಿಎಲ್ ಶೇ 9, ಟೆಕ್ ಮಹೀಂದ್ರ ಶೇ 9 ಮತ್ತು ಐಸಿಐಸಿಐ ಬ್ಯಾಂಕ್ ಶೇ 8ರಷ್ಟು ಹೆಚ್ಚಳ ಕಂಡಿವೆ.

ಹಿಂದೂಸ್ಥಾನ್ ಯುನಿಲಿವರ್ ಶೇ 5, ಶ್ರೀ ಸಿಮೆಂಟ್ ಶೇ 4 , ಜೀ ಎಂಟರ್‌ಟೇನ್ಮೆಂಟ್ ಶೇ 3.7, ಸಿಪ್ಲಾ ಶೇ 3.7, ಹಿಂಡಾಲ್ಕೋ ಶೇ 3.7ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ರಿಲಯನ್ಸ್ ಇಂಡಸ್ಟ್ರೀಸ್, ಎಸ್‌ಬಿಐ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ನೆಸ್ಲೆ, ಏರ್‌ಟೆಲ್‌, ಕೋಟಕ್ ಬ್ಯಾಂಕ್, ಟೆಕ್ ಮಹೀಂದ್ರ, ಅಲ್ಟ್ರಾಟೆಕ್ ಸಿಮೆಂಟ್, ಡಾ ರೆಡ್ಡಿಸ್, ಎಚ್‌ಡಿಎಫ್‌ಸಿ, ಮಾರುತಿ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಹಾಗಾಗಿ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಿರಲಿದೆ. ಕೋವಿಡ್–19 ಪ್ರಕರಣಗಳ ಸ್ಥಿತಿಗತಿ, ಅಮೆರಿಕ – ಚೀನಾ ಬಿಕ್ಕಟ್ಟು ಕೂಡ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT