ಬುಧವಾರ, ಮೇ 18, 2022
25 °C

ಅಣೆಕಟ್ಟುಗಳು ಸೃಷ್ಟಿಸುತ್ತಿರುವ ಅಸಮಾಧಾನದ ಅಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಶಾನ್ಯ ರಾಜ್ಯಗಳಲ್ಲಿ ಭಾರಿ ಜಲವಿದ್ಯುತ್ ಯೋಜನೆಗಳಿಂದಾಗುವ ಪರಿಣಾಮಗಳನ್ನು ಚರ್ಚಿಸಲು ಗುವಾಹಟಿಯಲ್ಲಿ 2010ರ ಸೆಪ್ಟೆಂಬರ್‌ನಲ್ಲಿ ಬೃಹತ್ ಸಭೆಯೊಂದನ್ನು ಏರ್ಪಡಿಸಲಾಗಿತ್ತು. ಆ ಸಭೆಯಲ್ಲಿ ಕೇಂದ್ರ ಸರ್ಕಾರದ ಆಗಿನ ಪರಿಸರ ಹಾಗೂ ಅರಣ್ಯ ಸಚಿವ ಜೈರಾಮ್ ರಮೇಶ್ ಅವರೂ ಇದ್ದರು.

 

ಅರುಣಾಚಲ ಪ್ರದೇಶದಲ್ಲಿ ಯೋಜಿಸಲಾಗುತ್ತಿರುವ ನೂರಕ್ಕೂ ಹೆಚ್ಚಿನ ಅಣೆಕಟ್ಟುಗಳು ನೀರಿನ ಹರಿವನ್ನು ಕಡಿಮೆ ಮಾಡುತ್ತವೆ. ಪ್ರವಾಹದ ಸಾಧ್ಯತೆ ಹೆಚ್ಚಿಸುತ್ತವೆ. ಅಲ್ಲದೆ ಮೀನುಗಳ ಸಂತತಿಯನ್ನೂ ನಾಶ ಮಾಡುತ್ತವೆ ಎಂಬ ಬಗ್ಗೆ ಆತಂಕಗೊಂಡಿದ್ದ  ಅಸ್ಸಾಂ ಜನರ ಮಾತುಗಳನ್ನು ಆ ಸಭೆಯಲ್ಲಿ ರಮೇಶ್ ಕೇಳಿಸಿಕೊಂಡಿದ್ದರು.ಅರುಣಾಚಲದ ಪ್ರತಿನಿಧಿಗಳಿಗೆ ಅವರದೇ ಕಾಳಜಿಗಳಿತ್ತು. ತಮ್ಮ ರಾಜ್ಯದಲ್ಲಿ ಕಟ್ಟಲಾಗುವ ಅಣೆಕಟ್ಟುಗಳು ಸ್ಥಳೀಯ ಸಮುದಾಯಗಳನ್ನು ಸ್ಥಳಾಂತರಿಸುತ್ತವೆ, ಅಮೂಲ್ಯ ಕಾಡುಗಳನ್ನು ಮುಳುಗಡೆ ಮಾಡುತ್ತವೆ ಹಾಗೂ ಭೂಕಂಪಗಳ ಅಪಾಯಗಳಿಗೆ ತಮ್ಮನ್ನು ಒಡ್ಡುತ್ತವೆ ಎಂಬ ಆತಂಕ ಅವರದಾಗಿತ್ತು. ಭಾರತ ಹಾಗೂ ಚೀನಾದ ಸ್ಪರ್ಧೆಯಲ್ಲಿ ಅರುಣಾಚಲದ ಜನತೆಯನ್ನು ದಾಳವಾಗಿಸಿಕೊಳ್ಳಲು ಕೇಂದ್ರ ಸರ್ಕಾರ ಸನ್ನದ್ಧವಾಗಿರುವಂತಿದೆ ಎಂದು ಕಾರ್ಯಕರ್ತರು ಸಚಿವರಿಗೆ ಹೇಳಿದ್ದರು.ಈ ಸಭೆಯ ನಂತರ, `ಗುವಾಹಟಿ ಸಭೆಯಲ್ಲಿ ವ್ಯಕ್ತವಾದ ಕೆಲವು ಕಾಳಜಿಗಳನ್ನು ಹಗುರವಾಗಿ ತಳ್ಳಿಹಾಕಲಾಗದು~ ಎಂದು ಪರಿಸರ ಸಚಿವರು ಪ್ರಧಾನಿಗೆ ಪತ್ರ ಬರೆದರು. `ಈ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸಿ ವಿಶೇಷವಾಗಿ ಅಸ್ಸಾಂನಲ್ಲಿ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿ ಸಮಾಜದ ವಿವಿಧ ವರ್ಗದವರನ್ನು ಈ ವಿಚಾರದಲ್ಲಿ ತೊಡಗಿಸಿಕೊಳ್ಳಬೇಕು.

 

ಸದ್ಯಕ್ಕೆ ಭಾರತದ ಪ್ರಧಾನ ಭೂಭಾಗ ಈಶಾನ್ಯದ ಜಲ ಸಂಪನ್ಮೂಲಗಳನ್ನು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಆದರೆ ಈ ಶೋಷಣೆಯ ವೆಚ್ಚವನ್ನು ಈಶಾನ್ಯ ಭಾಗದ ಜನರು ಭರಿಸುತ್ತಿದ್ದಾರೆ~ಎಂದು ಸಚಿವರು ವಿವರಿಸಿದ್ದರು.ಜೈರಾಂ ರಮೇಶ್ ಅವರ ಈ ವಿವೇಚನಾಪೂರ್ಣ, ಯುಕ್ತಾಯುಕ್ತ ಪರಿಜ್ಞಾನದ ಶಿಫಾರಸುಗಳು ದೆಹಲಿಯ ವೃತ್ತಪತ್ರಿಕೆಯೊಂದರಿಂದ ಭಾವೋದ್ರೇಕದ ಖಂಡನೆಗಳಿಗೆ ಕಾರಣವಾಗಿತ್ತು. `ಏನಾದರಾಗಲಿ ಅಭಿವೃದ್ಧಿ~ ಎಂಬಂತಹ ತತ್ವ ಈ ಪತ್ರಿಕೆಯದಾಗಿತ್ತು.`ಷೋಕಿಯ ಕಾಳಜಿಗಳ ಪ್ರಾಯೋಜನೆಗಳನ್ನು ಹುಡುಕುತ್ತ ಅಲೆಯುವವರು~ ಎಂದು ದೂಷಿಸಿದಂತಹ ಸಂಪಾದಕೀಯವನ್ನು ಭಾರತದ ಈ ಉತ್ಕೃಷ್ಟ ಹಾಗೂ  ಸಮರ್ಥ ಪರಿಸರ ಸಚಿವರ ವಿರುದ್ಧ ಆ ಪತ್ರಿಕೆ ಬರೆಯಿತು. `ಇಡೀ ಪ್ರದೇಶದ ಅಭಿವೃದ್ಧಿಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ~ ಎಂಬಂತಹ ಆರೋಪವನ್ನೂ ಸಚಿವರ ವಿರುದ್ಧ ಮಾಡಲಾಯಿತು. ಕೆಲವು ದಿನಗಳ ನಂತರ ಮತ್ತೊಂದು ಸಂಪಾದಕೀಯ ಬರೆದ ಆ ಪತ್ರಿಕೆ ಅರುಣಾಚಲ ಪ್ರದೇಶದಲ್ಲಿ ಎಲ್ಲಾ ಅಣೆಕಟ್ಟು ಯೋಜನೆಗಳಿಗೆ ತಕ್ಷಣದ ಅನುಮೋದನೆ ನೀಡಬೇಕೆಂದು ಆಗ್ರಹಪಡಿಸಿತು.ರಾಷ್ಟ್ರದ ಆರ್ಥಿಕತೆ ಜೊತೆ ಮಿಳಿತವಾಗಲು ಹಾಗೂ ಈ ಪ್ರದೇಶದ ಸಮೃದ್ಧಿ ಹೆಚ್ಚಿಸುವ ಯತ್ನವಾಗಿ ಅರುಣಾಚಲ ಪ್ರದೇಶಕ್ಕೆ ಯೋಜಿಸಲಾಗಿದ್ದ ಸಣ್ಣ ಯೋಜನೆಗಳಿಗೆ ಸಂಬಂಧಿಸಿದಂತೆ ಪರಿಸರ ಸಚಿವಾಲಯದ ಧೋರಣೆ ಉಪೇಕ್ಷೆ ಹಾಗೂ ಅವಿವೇಕತನದ್ದಾಗಿದೆ ಎಂದು  ಅದು ಪ್ರತಿಪಾದಿಸಿತ್ತು.ಅರುಣಾಚಲವನ್ನು `ಹಿಂದುಳಿದ~ ಪಟ್ಟಿಯಲ್ಲೇ ಉಳಿಸಲು ಯತ್ನಿಸುವ ಮೂಲಕ ರಮೇಶ್ ಅವರು ಚೀನೀಯರ ಕೈಗೊಂಬೆಯಾಗುತ್ತಿದ್ದಾರೆ ಅಷ್ಟೆ ಎಂದೂ ಈ ಸಂಪಾದಕೀಯ ಹೇಳಿತ್ತು. ನಿಜ ಹೇಳಬೇಕೆಂದರೆ, ಅಣೆಕಟ್ಟುಗಳೇ ಆ ಪ್ರದೇಶದ ಸುಭದ್ರತೆಯನ್ನು ಅಲುಗಾಡಿಸುವಂತಹದ್ದಾಗಿದ್ದವು. 1950 ಹಾಗೂ 60ರ ದಶಕಗಳಲ್ಲಿ ಮಾನವಶಾಸ್ತ್ರಜ್ಞ ವೆರ‌್ರಿಯರ್ ಎಲ್ವಿನ್ ಅವರು ರೂಪಿಸಿದ ವಿವೇಕಯುತ ನೀತಿಗಳಿಂದಾಗಿ ಈಶಾನ್ಯ ರಾಜ್ಯಗಳ ಪೈಕಿ ಕೇವಲ ಅರುಣಾಚಲದಲ್ಲಿ ಮಾತ್ರ ಈವರೆಗೆ ಯಾವುದೇ ದಂಗೆಯ ಅಲೆಗಳಿಲ್ಲ.ಏಕೆಂದರೆ ಈ ನೀತಿಗಳು ಭೂಮಿ ಹಾಗೂ ಅರಣ್ಯಗಳಲ್ಲಿನ ಆದಿವಾಸಿ ಹಕ್ಕುಗಳನ್ನು ರಕ್ಷಿಸಿದ್ದವಲ್ಲದೆ ಎಲ್ಲಾ ಧರ್ಮಗಳ ಧರ್ಮಪ್ರಚಾರಕರನ್ನೂ ರಾಜ್ಯದಿಂದ ದೂರ ಇರಿಸಿತ್ತು. ರಮೇಶ್ ಅವರ ಪ್ರಸ್ತಾವಗಳೂ ಆರೋಗ್ಯಕರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವಿವೇಕವನ್ನು ಪ್ರದರ್ಶಿಸಿದ್ದವು. ಅಣೆಕಟ್ಟುಗಳು ಸ್ಥಳೀಯ ರೈತರು,ದನಗಾಹಿಗಳು ಹಾಗೂ ಮೀನುಗಾರರನ್ನು ಸ್ಥಳಾಂತರಗೊಳಿಸುವುದಲ್ಲದೆ ಬಯಲುಸೀಮೆಯ ನಗರಗಳಿಗಷ್ಟೇ ಲಾಭವಾಗುವಂತಹದ್ದಾಗಿತ್ತು.ಅಲ್ಲದೆ, ಭಾರತದ ಅತ್ಯಂತ ಶ್ರೀಮಂತ ಜೀವವೈವಿಧ್ಯ ಪೂರ್ವ ಹಿಮಾಲಯದಲ್ಲಿದೆ; ವಿಚಿತ್ರವೆಂದರೆ ಅವು ಭೂಕಂಪಗಳಿಗೂ ಪಕ್ಕಾಗುವಂತಿವೆ. ಬೃಹತ್ ಅಣೆಕಟ್ಟುಗಳನ್ನು ಕಟ್ಟುವ ಪ್ರಸ್ತಾವಗಳನ್ನು ಬಹಳ ಎಚ್ಚರದಿಂದ ಪಾಲಿಸಬೇಕೆಂಬುದನ್ನು ನಿಸರ್ಗ ಹಾಗೂ ಇಲ್ಲಿನ ಸಂಸ್ಕೃತಿಗಳು ಪ್ರತಿಪಾದಿಸಿವೆ. ಈಗಾಗಲೇ ಈ ವಿಚಾರದ ಬಗ್ಗೆ ಜನರ ಅಸಹನೆ ಬೆಳೆಯುತ್ತಿದೆ.ಪಾರದರ್ಶಕವಾದ ಸಾರ್ವಜನಿಕ ವಿಚಾರಣೆಗಳು ತುರ್ತಿನ ಅಗತ್ಯವಾಗಿದೆ. ಆ ಮೂಲಕ, ತಮಗೆ ಸಮೃದ್ಧಿ ಹಾಗೂ ಸಮನ್ವಯತೆಯನ್ನು ತಂದುಕೊಡುವಂತಹದ್ದು ಯಾವುದು ಎಂಬುದನ್ನು ನವದೆಹಲಿಯ ಯಾವುದೋ ಉದ್ಯಮ ಸ್ನೇಹಿ ವೃತ್ತಪತ್ರಿಕೆ ನಿರ್ಧರಿಸುವುದರ ಬದಲು ಅರುಣಾಚಲದ ಜನರೇ ನಿರ್ಧರಿಸಬಹುದು.ಈಶಾನ್ಯ ರಾಜ್ಯಗಳ ಬಗ್ಗೆ ಹೆಚ್ಚಿನ ತಿಳಿವಳಿಕೆಯುಳ್ಳ ಇಬ್ಬರು ಪತ್ರಕರ್ತರ ಇತ್ತೀಚಿನ ಎರಡು ವರದಿಗಳು ರಮೇಶ್ ಅವರ ಎಚ್ಚರಿಕೆಯ ಮಾತುಗಳಿಗೆ ಸಾಕ್ಷಿ ಒದಗಿಸಿವೆ. ಕಳೆದ ತಿಂಗಳು `ದಿ ಹಿಂದೂ~ ಪತ್ರಿಕೆಯಲ್ಲಿ  ಬರೆಯುತ್ತಾ ಸುಶಾಂತ ತಾಲೂಕ್‌ದಾರ್ ಅವರು `ಪರಿಸರ ದೃಷ್ಟಿಯಿಂದ ಸೂಕ್ಷ್ಮವಾಗಿರುವ ಅರುಣಾಚಲ ಪ್ರದೇಶ(ರಾಜ್ಯ)ವನ್ನು ರಾಷ್ಟ್ರದ ಶಕ್ತಿಕೇಂದ್ರವೆಂದು ಕೇಂದ್ರ ಸರ್ಕಾರ ಗುರುತಿಸಿದೆ~ ಎಂದಿದ್ದಾರೆ.`ಈವರೆಗೆ 133 ಅಣೆಕಟ್ಟು ಯೋಜನೆಗಳನ್ನು ರಾಜ್ಯಕ್ಕೆ ಮಂಜೂರು ಮಾಡಲಾಗಿದೆ. ಇವುಗಳಲ್ಲಿ 125 ಯೋಜನೆಗಳು ಖಾಸಗಿ ವಲಯದಲ್ಲಿವೆ. ಈಶಾನ್ಯ ರಾಜ್ಯಗಳಲ್ಲಿ 57,672 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ವಿದ್ಯುತ್ ಸಚಿವಾಲಯ ಉದ್ದೇಶಿಸಿದೆ.

ಇವುಗಳಲ್ಲಿ 45,977 ಮೆಗಾವಾಟ್ ವಿದ್ಯುತ್ ಅನ್ನು ಅರುಣಾಚಲಪ್ರದೇಶ ಒಂದರಲ್ಲಿಯೇ ಉತ್ಪಾದಿಸಲಾಗುವುದು ಎಂದು ವಿದ್ಯುತ್ ಸಚಿವಾಲಯದ 2011-12ರ ವಾರ್ಷಿಕ ವರದಿ ಪ್ರಸ್ತಾಪಿಸಿದೆ. ಇದರಿಂದ ಉಂಟಾಗುವ ಸಾಮಾಜಿಕ ಹಾಗೂ ಪರಿಸರ ಪಲ್ಲಟಗಳ ಕಾರಣಗಳಿಂದಾಗಿ ಅರುಣಾಚಲಿಗಳಲ್ಲಿ  ಆಳವಾದ ಅಸಹನೆ ಸೃಷ್ಟಿಯಾಗಿದೆ~ ಎಂದು ಈ ಪತ್ರಕರ್ತ ಬರೆದಿದ್ದರು.

 

ಹೀಗಾಗಿ `ಫೋರಮ್ ಫಾರ್ ಸಿಯಾಂಗ್ ಡಯಲಾಗ್~ ಎಂಬಂತಹ ಗುಂಪು, ಸುಂದರವಾದ ಸಿಯಾಂಗ್ ನದಿಯ ಮೇಲೆ ಅಣೆಕಟ್ಟುಗಳನ್ನು ಕಟ್ಟುವುದಕ್ಕೆ ವಿರೋಧ ತೋರುತ್ತಿದೆ.

 

ಜನರಿಗೆ ಸರಿಯಾಗಿ ಮಾಹಿತಿ ನೀಡದೆ ಹಾಗೂ ಪೊಲೀಸರು ಮತ್ತು ಅರೆ ಮಿಲಿಟರಿ ಪಡೆಗಳ ಸಮ್ಮುಖದಲ್ಲಿ ಸಾರ್ವಜನಿಕ ವಿಚಾರಣೆಗಳನ್ನು ನಡೆಸಲಾಗುತ್ತಿದೆ ಎಂದು  ರಾಜ್ಯದ ವಿದ್ಯಾರ್ಥಿ ಹಾಗೂ ಯುವ ಸಂಘಟನೆಗಳು ಆರೋಪಿಸುತ್ತಿವೆ ಎಂದು ತಾಲೂಕ್‌ದಾರ್ ಬರೆದಿದ್ದಾರೆ.  ಅರುಣಾಚಲ ಪ್ರದೇಶದಲ್ಲಿ ಅನಿಯಂತ್ರಿತ ಅಣೆಕಟ್ಟು  ನಿರ್ಮಾಣದಿಂದ ಉಂಟಾಗುವ ಅಪಾಯಗಳ ಬಗ್ಗೆ  2012ರ ಮೇ ತಿಂಗಳಲ್ಲಿ `ಮಿಂಟ್~ ಪತ್ರಿಕೆಯಲ್ಲಿ  ಸುದೀಪ್ ಚಕ್ರವರ್ತಿಯವರೂ ಲೇಖನವೊಂದನ್ನು ಬರೆದರು. ಈ ಪ್ರದೇಶವನ್ನು ಚೆನ್ನಾಗಿ ಬಲ್ಲ ಚಕ್ರವರ್ತಿ ಅವರು, `ಯೋಜನೆಗಳಿಗೆ ಭೂ ಹಂಚಿಕೆ ವಿಚಾರದಲ್ಲಿ ಭಾರತದಿಂದ ಕೆಟ್ಟ ಆಚರಣೆಗಳನ್ನು ಅರುಣಾಚಲ ಆಮದು ಮಾಡಿಕೊಂಡಿದೆ~ ಎಂದಿದ್ದರು.

 

`ಇತ್ತೀಚಿನ ಪ್ರಕರಣ: ಏಪ್ರಿಲ್ ಮಧ್ಯಭಾಗದಲ್ಲಿ ಖಾಸಗಿ ವಲಯಕ್ಕೆ ಸೇರಿದ 2700 ಮೆಗಾವಾಟ್ ಲೋವರ್ ಸಿಯಾಂಗ್ ಜಲ ವಿದ್ಯುತ್ ಯೋಜನೆ ವಿರುದ್ಧ ಸೇರಿದ್ದ ಪ್ರತಿಭಟನಾಕಾರರನ್ನು ಸರ್ಕಾರ ಹಿಂಸೆ ಪ್ರಯೋಗಿಸಿ ಚದುರಿಸಿತ್ತು. ಇನ್ನೂ ಕೆಟ್ಟದ್ದು ಮುಂದಿನ ದಿನಗಳಲ್ಲಿ ಆಗಲಿದೆ~ ಎಂದಿದ್ದರು ಅವರು.

 

ಅದು ಆಗುತ್ತಲೂ ಇದೆ.  ಜೂನ್ ಆರಂಭದಲ್ಲಿ `ದಿ ಟೆಲಿಗ್ರಾಫ್~ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ, ಸ್ಥಳೀಯರ ಪ್ರತಿಭಟನೆಗಳಿಂದಾಗಿ 2000 ಮೆಗಾವಾಟ್ ಲೋವರ್ ಸುಬನ್‌ಸಿರಿ ಯೋಜನೆಯ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.    

  

ಇಪ್ಪತ್ತು ವರ್ಷಗಳ ಹಿಂದೆ, `ದಿಸ್ ಫಿಷರ್ಡ್ ಲ್ಯಾಂಡ್~ ಎಂಬ ಪುಸ್ತಕದಲ್ಲಿ ಮಾಧವ ಗಾಡ್ಗೀಳ್ ಮತ್ತು ನಾನು  `ಯೂರೋಪ್ ಹಾಗೂ ಉತ್ತರ ಅಮೆರಿಕಗಳಿಗೆ ತಮ್ಮ ಕೈಗಾರಿಕೀಕರಣದ ಸಂದರ್ಭದಲ್ಲಿ  ಇದ್ದಂತಹ ವಸಾಹತುಗಳನ್ನು ಗೆದ್ದು ನೆಲೆಯಾಗುವಂತಹ ಅವಕಾಶ  ಭಾರತಕ್ಕೆ ಇಲ್ಲ. ಹೀಗಾಗಿ ರಾಷ್ಟ್ರದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ಹೆಚ್ಚಿನ ವಿವೇಕ, ವಿವೇಚನೆ ಹಾಗೂ ದಕ್ಷತೆ ಅಗತ್ಯವಾಗುತ್ತದೆ~ ಎಂದಿದ್ದೆವು.ದುರಂತವೆಂದರೆ, ಆರ್ಥಿಕ ಉದಾರೀಕರಣದ ನಂತರ, ಸಂಪನ್ಮೂಲ ಬಳಕೆಯಲ್ಲಿ ಹೆಚ್ಚು ದುಂದುಗಾರಿಕೆಯ ರೂಪುರೇಷೆಯನ್ನು ನಾವು ಅಳವಡಿಸಿಕೊಂಡಿದ್ದೇವೆ. ಪರಿಸರ ಚಳವಳಿಯಿಂದಾಗಿ 1980ರ ದಶಕದಲ್ಲಿ ಅಳವಡಿಸಲಾದ ಹೊಸ ಶಾಸನಾತ್ಮಕ ರಕ್ಷಣೆಗಳನ್ನು ಕಡೆಗಣಿಸಲಾಗಿದೆ ಅಥವಾ ಕೈಬಿಡಲಾಗಿದೆ.ಜಲ ಸಂರಕ್ಷಣೆ, ಸುಸ್ಥಿರ ಇಂಧನಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ ಅಥವಾ ಅಂಚಿಗೆ ಒತ್ತರಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿರಂತರ ಬೇಡಿಕೆ ಸೃಷ್ಟಿಸುವ ಅಮೆರಿಕನ್ ಜೀವನ ಶೈಲಿಯ ಆಕರ್ಷಣೆ, ಸೆಳೆತ ಹೆಚ್ಚಾಗಿದೆ.

 

ಒಂದು ಕಾಲಕ್ಕೆ ಹೆಚ್ಚಿನ ಗೌರವ ಹೊಂದಿದ್ದ ಆದರೂ ಎಲ್ಲೋ ಕೆಲವರು ಮಾತ್ರ ಅನುಸರಿಸುತ್ತಿದ್ದ  ಬುದ್ಧ, ಗಾಂಧಿ ಪ್ರತಿಪಾದಿಸಿದ ಸರಳತೆ ಹಾಗೂ ಮಿತವ್ಯಯದ ಮೌಲ್ಯಗಳು ಈಗ ಪೂರ್ಣವಾಗಿ ಮಾಯವಾಗಿವೆ. ಈಗ ಎಲ್ಲೆಲ್ಲೂ ಗಟ್ಟಿಯಾಗಿ ಕೇಳಿಸುವುದು `ದಿಲ್ ಮಾಂಗೇ ಮಾರೋ~.ಕಾರ್ಪೊರೆಟ್ ವಲಯ ಹಾಗೂ ಗ್ರಾಹಕ ವರ್ಗಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಭಾರತದ ಮಧ್ಯ ಭಾಗ ಹಾಗೂ ಈಶಾನ್ಯ ಪ್ರದೇಶಗಳ ಆದಿವಾಸಿ ಪ್ರದೇಶಗಳಲ್ಲಿನ ಸಂಪನ್ಮೂಲಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡಿದೆ.

 

ಗಣಿಗಾರಿಕೆ ಹಾಗೂ ಜಲವಿದ್ಯುತ್ ಯೋಜನೆಗಳ ಅಲೆ, ಸ್ಥಳೀಯ ಪರಿಸರವನ್ನು ಕಡೆಗಣಿಸಿ ಸ್ಥಳೀಯ ಸಮುದಾಯಗಳನ್ನು ಸ್ಥಳಾಂತರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ವಲಯಗಳು `ಆಂತರಿಕ ವಸಾಹತು~ಗಳಾಗುವ ಹಾದಿಯಲ್ಲಿದ್ದು ವ್ಯಾಪಕ ಅಸಾಮಾಧಾನ ಸೃಷ್ಟಿಯಾಗಿದೆ.

 

ಒರಿಸ್ಸಾದಂತಹ ರಾಜ್ಯದಲ್ಲಿ ಹದಿನೈದು ವರ್ಷಗಳ ಹಿಂದೆ ನಕ್ಸಲೀಯರೇ ಇರಲಿಲ್ಲ; ಹೀಗಿದ್ದೂ ಆದಿವಾಸಿ ಭೂಮಿಗಳನ್ನು ಗಣಿ ಕಂಪೆನಿಗಳಿಗೆ ಹಸ್ತಾಂತರಿಸಿದ ಪರಿಣಾಮವಾಗಿ ಎಡ ಧೋರಣೆಯ ಬಂಡಾಯಗಾರರು ಅರ್ಧ ಡಜನ್‌ಗಳಷ್ಟು ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ.

 

ಈ ಮಧ್ಯೆ ಈಶಾನ್ಯ ರಾಜ್ಯಗಳಲ್ಲಿ ಅಣೆಕಟ್ಟು ಕಟ್ಟುವ ವೇಗ ಆ ಅಲಕ್ಷಿತ, ಶೋಷಿತ ವಲಯದ ಜನರಲ್ಲಿ ಅಸಮಾಧಾನದ ಅಲೆಯನ್ನು ಎಬ್ಬಿಸುತ್ತಿದೆ. ಏನೇ ಆಗಲಿ ಅಭಿವೃದ್ಧಿ ಎಂಬಂತಹ ತತ್ವಕ್ಕೆ ಬದ್ಧರಾದವರು ಪರಿಸರ ಹಾಗೂ ಅಭಿವೃದ್ಧಿ ಮಧ್ಯೆ ಇಲ್ಲದ ವಿರೋಧ ಸೃಷ್ಟಿಸಿದ್ದಾರೆ.ನಿಜ ಹೇಳಬೇಕೆಂದರೆ, ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಅಥವಾ ಬಡತನ ಕಡಿಮೆ ಮಾಡಲು ಅನೇಕ ಮಾರ್ಗಗಳಿವೆ. ಭಾರತದಲ್ಲಿ ಈಗ ಅನುಸರಿಸಲಾಗುತ್ತಿರುವ ಅಭಿವೃದ್ಧಿಯ ಪಥ ದೂರದೃಷ್ಟಿ  ಇಲ್ಲದ್ದು, ವಿನಾಶಕಾರಿ ಹಾಗೂ ಸಾಮಾಜಿಕವಾಗಿ ಧ್ರುವೀಕರಣ ಮಾಡುವಂತಹದ್ದು.

 

ಆದರೆ ದಿವಂಗತ ಎ.ಕೆ.ಎನ್. ರೆಡ್ಡಿ (www.amuly-areddy.org.in)  ಹಾಗೂ ಪ್ರಯಾಸ್ ಗ್ರೂಪ್‌ನಂತಹ (www.prayas-pune.org ) ತಜ್ಞರು  ನಮ್ಮ ಇಂಧನ ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಲು ದೊಡ್ಡ ಅಣೆಕಟ್ಟುಗಳು ಮಾತ್ರವೇ ಏಕೈಕ ಅಥವಾ ಉತ್ತಮ ಮಾರ್ಗ ಆಗಿರಬೇಕಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಭಾರತೀಯ ಸಂದರ್ಭಗಳಿಗೆ ಹೆಚ್ಚು ಸೂಕ್ತವಾದದ್ದು ಕಡಿಮೆ ಇಂಧನ ಬಳಸುವ ತಂತ್ರಜ್ಞಾನಗಳು ಹಾಗೂ ಇಂಧನ ಪೂರೈಕೆ ನಷ್ಟಗಳನ್ನು ಕಡಿಮೆ ಮಾಡುವಂತಹವು.ಕಿರು ಜಲ ವಿದ್ಯುತ್ ಯೋಜನೆಗಳು ಆರ್ಥಿಕವಾಗಿ ಕಾರ್ಯಸಾಧು, ಪರಿಸರ ದೃಷ್ಟಿಯಲ್ಲಿ ಸುಸ್ಥಿರ ಹಾಗೂ ದೊಡ್ಡ ಯೋಜನೆಗಳಿಗೆ  ಸಾಮಾಜಿಕವಾಗಿ ಒಳಗೊಳ್ಳುವ ಪರ್ಯಾಯಗಳಾಗಬಹುದು.ಈ ಪರ್ಯಾಯಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿಲ್ಲ. ಕಾರಣ- ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿರುವ ಗುತ್ತಿಗೆದಾರ -ಪ್ರವರ್ತಕ- ರಾಜಕಾರಣಿ ನಡುವಿನ  ಸಂಬಂಧಗಳ ಪ್ರಭಾವ.

 

ಈ ಹಿತಾಸಕ್ತಿಗಳನ್ನು ಬಯಲುಗೊಳಿಸುವ ಬದಲು ಅವನ್ನೇ ಅನುಮೋದಿಸುವ ಅಥವಾ ಅವರಿಗೆ ಸಮರ್ಥನೆ ನೀಡುವ ಮೂಲಕ ರಾಷ್ಟ್ರದ ಇತರ ಭಾಗಗಳ ಆಶಯಗಳಿಗೆ ನವದೆಹಲಿಯಲ್ಲಿನ ಸಂಪಾದಕರು ಪರಕೀಯರಾಗಿದ್ದಾರೆ ಎಂಬುದಕ್ಕೆ ಇದು ದ್ಯೋತಕ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.