ಗುರುವಾರ , ಮೇ 6, 2021
25 °C

ಅಧಿಕಾರಶಾಹಿಯ ಹೃದಯ ಪರೀಕ್ಷೆ

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಅಧಿಕಾರಶಾಹಿಯ ಹೃದಯ ಪರೀಕ್ಷೆ

ತಕ್ಕಮಟ್ಟಿನ ಬಂಡಾಯ ಕವಿತೆಗಳನ್ನು ಬರೆಯುತ್ತಿದ್ದ ಮಿತ್ರನೊಬ್ಬ ಕಾಲೇಜು ಅಧ್ಯಾಪಕನ ಕೆಲಸ ಬಿಟ್ಟು ಕೆ.ಎ.ಎಸ್. ಅಧಿಕಾರಿಯಾದ. ಎರಡೇ ವರ್ಷಕ್ಕೆ ಆ ಕೆಲಸದ ರಾಜಕೀಯ ಒತ್ತಡಗಳನ್ನು ತಡೆಯಲಾಗದೆ ಮತ್ತೆ ಅಧ್ಯಾಪಕನ ಕೆಲಸಕ್ಕೆ ವಾಪಸಾಗಿ, ‘ಸದ್ಯ, ಈಗ ನೆಮ್ಮದಿಯಾಗಿದೀನಿ’ ಎಂದ.ಮತ್ತೊಬ್ಬ ಹಿರಿಯ ಮಿತ್ರರು ಬಹುಕಾಲ ಕಾಲೇಜು ಅಧ್ಯಾಪಕನಾಗಿದ್ದವರು, ಕಾಲೇಜಿನ ಕೆಟ್ಟ ಬೆಳವಣಿಗೆಗಳಿಂದ ಬೇಸರಗೊಂಡು, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅಧಿಕಾರಿಯಾದರು.  ಇದೀಗ ವೃತ್ತಿಜೀವನ ಮುಗಿಸಿದ ಮೇಲೆ ‘ಅಧ್ಯಾಪಕನಾಗಿಯೇ ಮುಂದುವರಿದಿದ್ದರೆ ಇನ್ನಷ್ಟು  ಓದಿ, ಬರೆದು ಬದುಕನ್ನು ಮತ್ತಷ್ಟು ಅರ್ಥಪೂರ್ಣ ಮಾಡಿಕೊಳ್ಳಬಹುದಿತ್ತೇನೋ’ ಎಂದು ಅವರಿಗೆ ಅನಿಸುತ್ತಿರುತ್ತದೆ.ಕವಿ ರಾಬರ್ಟ್ ಫ್ರಾಸ್ಟ್‌ನ ‘ದ ರೋಡ್ ನಾಟ್ ಟೇಕನ್’ ಪದ್ಯವನ್ನು ಅನೇಕರು ತಮ್ಮ ಶಾಲಾಪಠ್ಯಗಳಲ್ಲಿ ಓದಿರಬಹುದು. ಪದ್ಯದ ನಿರೂಪಕನ ಎದುರು ಕವಲೊಡೆದ ಎರಡು ರಸ್ತೆಗಳಿವೆ. ಎರಡೂ ರಸ್ತೆಗಳನ್ನು ಎಲೆಗಳು ಮುಚ್ಚಿವೆ. ಈ ರಸ್ತೆಗಳು ಹೇಗಿವೆಯೆಂದು ಅವನಿಗೆ ಗೊತ್ತಿಲ್ಲ. ಇದ್ದುದರಲ್ಲಿ ಇದರಲ್ಲಿ ಹೆಚ್ಚು ಹುಲ್ಲಿದೆ, ಇದು ಕಡಿಮೆ ಜನ ಆರಿಸಿಕೊಂಡಿರಬಹುದಾದ ಹಾದಿ ಎಂದು ಒಂದು ರಸ್ತೆಯನ್ನು ಆರಿಸಿಕೊಂಡು, ಮುಂದೊಮ್ಮೆ ಇನ್ನೊಂದು ರಸ್ತೆಯನ್ನು ಆರಿಸಿಕೊಳ್ಳೋಣ ಎಂದುಕೊಂಡ.ಆದರೂ ಆ ದಾರಿ ಮತ್ತೊಂದು ದಾರಿಗೆ ಒಯ್ಯುತ್ತದೆಂದು ಅವನಿಗೆ ಗೊತ್ತಿತ್ತು. ಆದ್ದರಿಂದಲೇ ಅವನಿಗೆ ಎಷ್ಟೋ ವರ್ಷಗಳ ನಂತರ ತಾನು ನಿಟ್ಟುಸಿರಿಡುತ್ತಾ ಹೀಗೆ ಹೇಳಬಹುದು ಎನ್ನಿಸುತ್ತದೆ: ‘ಅವತ್ತು ನಾನು, ನಾನು, ಹೆಚ್ಚು ಜನ ಬಳಸದ ಹಾದಿಯನ್ನು ಆರಿಸಿಕೊಂಡೆ; ಅದು ಈ ಎಲ್ಲ ಭಿನ್ನತೆಯನ್ನು ತಂದಿತು.’ಆ ಹಾದಿಯ ಆಯ್ಕೆ ತಂದ ಈ ಎಲ್ಲ ಭಿನ್ನತೆಯ ಬಗೆಗಿನ ಅವನ ನಿಟ್ಟುಸಿರು ನೆಮ್ಮದಿಯದೋ ಅಥವಾ ಆರಿಸಿಕೊಳ್ಳದೆ ಬಿಟ್ಟ ಹಾದಿ ಕುರಿತ ವಿಷಾದದ್ದೋ? ಎರಡೂ ಆಗಿರಬಹುದು. ಇದು ಎಲ್ಲ ಸೃಜನಶೀಲ ಮನಸ್ಸುಗಳ ಕಾಯಂ ಚಡಪಡಿಕೆ. ಮೇಲೆ ಹೇಳಿದ ಮಿತ್ರರಿಬ್ಬರು ತಾವು ಮಾಡುವ ಕೆಲಸದಲ್ಲಿ ಧನ್ಯತೆಯ ಹುಡುಕಾಟದಲ್ಲಿದ್ದವರು. ಆದ್ದರಿಂದ ಅವರಿಗೆ ಈ ಸೃಜನಶೀಲ ತಳಮಳ ಹುಟ್ಟಿದ್ದು ಸಹಜ. ಆದರೆ ಆಯ್ಕೆಗಳೇ ಇಲ್ಲದ, ಸೀಮಿತ ಅವಕಾಶಗಳ ದೇಶದಲ್ಲಿ ಈ ಸಮಸ್ಯೆ ಅವರಿಬ್ಬರಷ್ಟು ಸುಲಭವಾಗಿ ಎಲ್ಲರಿಗೂ ಬಗೆಹರಿಯಲಾರದು.ಆದರೆ ಈ ಕಾಲದಲ್ಲಿ ಇಂಥ ಸೃಜನಶೀಲ ಚಡಪಡಿಕೆ ತನ್ನ ಅರ್ಥಪೂರ್ಣತೆಯ ಹುಡುಕಾಟದ ಆಯಾಮವನ್ನು ಕಳೆದುಕೊಳ್ಳುತ್ತಿರುವಂತೆ ಕಾಣತೊಡಗಿದೆ. ಅದರಲ್ಲೂ, ಖಾಸಗಿ ವಲಯದಲ್ಲಿರುವ ಹುಡುಗ, ಹುಡುಗಿಯರು ಬಹುಬೇಗ ತಮ್ಮ ಉದ್ಯೋಗಗಳನ್ನು ಬದಲಾಯಿಸುವುದನ್ನು (ಅದರ ಕಷ್ಟಗಳು ಬೇರೆಯೇ ಇವೆ) ಕಂಡವರಿಗೆ ತಾವು ಒಂದೇ ಥರದ ಕೆಲಸದಲ್ಲಿ ಸಿಕ್ಕಿಕೊಂಡಿದ್ದೇವೆಂಬ ಭಾವನೆ ಮೂಡುತ್ತಿರುವಂತಿದೆ. ಈ ಚಡಪಡಿಕೆ ಈಚೆಗೆ ಸರ್ಕಾರಿ ಅಧಿಕಾರಿಗಳಲ್ಲಿ ಹೆಚ್ಚುತ್ತಿರುವಂತೆ ಕಾಣುತ್ತಿದೆ. ತಾವು ಅಷ್ಟೊಂದು ಕಷ್ಟಪಟ್ಟು, ಕೆಲವೊಮ್ಮೆ ಹಣ ಸುರಿದು, ಹಿಡಿದ ಉದ್ಯೋಗಗಳಲ್ಲಿ ಏನನ್ನೂ ಮಾಡಲಾಗದ ಹತಾಶೆ ಹೆಚ್ಚುತ್ತಿದೆ. ತಮ್ಮಿಂದ ತಪ್ಪು ಮಾಡಿಸುವ ರಾಜಕಾರಣಿಗಳು ಬಚಾವಾಗುತ್ತಾರೆ, ತಾವು ಸಿಕ್ಕಿಬೀಳುತ್ತೇವೆ ಎಂದು ವ್ಯಗ್ರರಾಗುವವರ ಸಂಖ್ಯೆಯೂ, ಅದರ ವಿರುದ್ಧ ದನಿ ಎತ್ತುವವರ ಸಂಖ್ಯೆಯೂ ಹೆಚ್ಚುತ್ತಿದೆ.ಯಾಕಾದರೂ ಈ ಕೆಲಸಕ್ಕೆ ಬಂದೆವೋ ಎಂದು ಕೊರಗುವವರೂ ಹೆಚ್ಚುತ್ತಿರುವಂತಿದೆ. ಆದರೆ ಇದರಿಂದ ಬಿಡುಗಡೆಯಿಲ್ಲ. ಇದೇ ‘ಕ್ಯಾಚ್ 22 ಸಿಚುಯೇಷನ್’! ‘ಕ್ಯಾಚ್ 22’ ಎಂಬುದು ಜೋಸೆಫ್ ಹೆಲ್ಲರ್‌ನ ‘ಕ್ಯಾಚ್ 22’ ಕಾದಂಬರಿಯಿಂದ ಜನಪ್ರಿಯವಾದ ಒಂದು ನುಡಿಗಟ್ಟು: ಒಂದು ಸ್ಥಿತಿಯಲ್ಲಿ ನೀವು ಸಿಕ್ಕಿಕೊಂಡಿದ್ದೀರಿ. ಅದರಿಂದ ನೀವು ಬಿಡಿಸಿಕೊಳ್ಳುವುದು ನೀವು ಆ ಸ್ಥಿತಿಯಿಂದ ಹೊರ ಬಂದಾಗ ಮಾತ್ರ; ಆದರೆ ನೀವು ಆ ಸ್ಥಿತಿಯಲ್ಲೇ ಇರಬೇಕಾದ ಅನಿವಾರ್ಯತೆಯೂ ನಿಮಗಿದೆ. ಇದು ಕ್ಯಾಚ್ 22 ಸ್ಥಿತಿಯ ಒಂದು ಅರ್ಥ.ಈ ಸ್ಥಿತಿ ಹಲವರಿಗೆ ಎದುರಾಗುತ್ತಲೇ ಇರುತ್ತದೆ. ಆದ್ದರಿಂದಲೇ ಅನೇಕರು ತಾವು ಇರುವ ಸ್ಥಿತಿಯಲ್ಲಿಯೇ ಅರ್ಥಪೂರ್ಣವಾದದ್ದನ್ನು ಹುಡುಕಿಕೊಂಡು, ಅದರೊಡನೆಯೇ ಬದುಕಿ, ತಮ್ಮ ಕೆಲಸದಲ್ಲಿ ಅರ್ಥಪೂರ್ಣತೆ ಕಂಡುಕೊಳ್ಳುತ್ತಾರಲ್ಲವೆ? ಆದರೆ, ಹೇಳಿಕೇಳಿ ಇಂಡಿಯಾದ ಅಕ್ಷರಸ್ಥ ವರ್ಗ ಅತ್ಯಂತ ಸ್ವಕೇಂದ್ರಿತವಾದದ್ದರಿಂದ ಅಂಥ ಸಾಧ್ಯತೆಗಳತ್ತ ಈ ವರ್ಗದ ಗಮನ ಹೆಚ್ಚು ಹರಿಯುವುದಿಲ್ಲ. ಇನ್ನು ಅನೇಕರಿಗೆ, ತಮ್ಮ ಕೆಲಸ ಬರಬರುತ್ತಾ ತಾವೆಂದೂ ಬಿಡಿಸಿಕೊಳ್ಳಲಾಗದ ಜೀತದಂತೆ ಕಾಣತೊಡಗಿ ಅವರು ಹತಾಶರಾಗತೊಡಗುತ್ತಾರೆ.ಈ ಬಗೆಯ ಹತಾಶೆ ಸೃಷ್ಟಿಯಾಗಲು ಇಂಡಿಯಾದಲ್ಲಿ ಡೆಮಾಕ್ರಸಿಯ ತತ್ವ ಕಚೇರಿ ವಲಯಗಳಲ್ಲಿ ಆಳವಾಗಿ ಬೇರೂರದಿರುವುದು ಕೂಡ ಒಂದು ಕಾರಣ. ಇಲ್ಲಿ ಎಲ್ಲರಿಗೂ ಅನ್ವಯಿಸಬಲ್ಲ ನಿಯಮಗಳಿವೆ ಹಾಗೂ ಅವುಗಳಿಗೆ ಅನುಸಾರವಾಗಿ ನಾವು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬ ಸರಳ ಅರಿವು ಈ ಅನಾಗರಿಕ ವಾತಾವರಣದಲ್ಲಿ ಇಲ್ಲ. ಖಾಸಗಿಯಿರಲಿ, ಸರ್ಕಾರಿಯಿರಲಿ ನಮ್ಮ ಸಾರ್ವಜನಿಕ ವಾತಾವರಣ ಇನ್ನೂ ಜಾತಿಪದ್ಧತಿಯ ಶ್ರೇಣೀಕರಣದ ಮನಸ್ಥಿತಿಯಿಂದ, ಜಮೀನ್ದಾರಿ ದರ್ಪದಿಂದ ಬಿಡಿಸಿಕೊಂಡಂತಿಲ್ಲ.ನಮ್ಮ ಸಾರ್ವಜನಿಕ ಕಚೇರಿಗಳಲ್ಲಿರುವ ಜಾತಿಪದ್ಧತಿಯ ಎಳೆಗಳನ್ನು ಗಮನಿಸಿ: ಇಲ್ಲಿರುವ ಆಫೀಸರ್- ಗುಮಾಸ್ತ- ಅಟೆಂಡರ್ ಈ ವರ್ಗೀಕರಣಗಳು ವೇತನಶ್ರೇಣಿಗಳಿಗೆ ಅಥವಾ ಮಾಡುವ ಕೆಲಸಗಳಿಗೆ ಸಂಬಂಧಿಸಿಲ್ಲ; ಬದಲಿಗೆ, ಇಲ್ಲಿ ಮೇಲಿಂದ ಕೆಳಗೆ ಹರಿಯುವ ಧೋರಣೆಗಳು ಮೇಲುಜಾತಿಗಳು ಕೆಳಜಾತಿಗಳ ಬಗೆಗೆ ವರ್ತಿಸುವ ರೀತಿಯೇ ಇರುತ್ತವೆ! ಇವರ ವೇತನಶ್ರೇಣಿಗಳಲ್ಲೂ ಈ ಜಾತಿಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿಕೊಂಡು ಬರಲಾಗುತ್ತದೆ! ಸರ್ಕಾರಗಳು ವೇತನ ಪರಿಷ್ಕರಣೆ ಮಾಡಿದಾಗ ವೇತನವನ್ನು ಕೆಳದರ್ಜೆಯ ನೌಕರರಿಂದ ಏರಿಸಿಕೊಂಡು ಬರದೆ, ಮೇಲಿನಿಂದ ಏರಿಸಿಕೊಂಡು ಬರುವ ಅಸಂಬದ್ಧ ಪದ್ಧತಿ ಇವತ್ತಿಗೂ ಇದೆ; ಇದು ಕೂಡ ಜಾತಿಪದ್ಧತಿಯ ಮುಂದುವರಿಕೆಯಂತೆಯೇ ಇದೆ.ಪೊಲೀಸ್ ಇಲಾಖೆಯಲ್ಲಂತೂ ಜಾತಿಪದ್ಧತಿಯ ಮೇಲುಕೀಳಿನ ಫ್ಯೂಡಲ್ ಮನೋಭಾವ ಎದ್ದು ಕಾಣುತ್ತದೆ. ಅಂದರೆ, ಪ್ರಜಾಪ್ರಭುತ್ವ ಎನ್ನುವುದು ಎಲ್ಲರೂ ಪಾಲ್ಗೊಳ್ಳುವ, ಯಾರು ಯಾವ ಬಗೆ ವೃತ್ತಿಯಲ್ಲಿದ್ದರೂ ಅವರ ಘನತೆಯನ್ನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುವ ವ್ಯವಸ್ಥೆ ಎಂಬುದನ್ನು ಈ ವ್ಯವಸ್ಥೆಯ ಪಾಲುದಾರರು ಇನ್ನೂ ತಿಳಿದಂತಿಲ್ಲ.ಆದ್ದರಿಂದಲೇ ಇಲ್ಲಿ ರಾಜಕಾರಣಿಗಳು ಅಧಿಕಾರಿಗಳ ಮೇಲೆ; ಅಧಿಕಾರಿಗಳು ಕೆಳಗಿನವರ ಮೇಲೆ; ಈ ಎಲ್ಲರೂ ಸೇರಿ ಅಸಹಾಯಕ ಜನರ ಮೇಲೆ ದಬ್ಬಾಳಿಕೆ ಮಾಡತೊಡಗುತ್ತಾರೆ. ಸರ್ಕಾರಿ ಕೆಲಸದಲ್ಲಿರುವ ಬಹುತೇಕರು ತಾವು ಸಾಮಾನ್ಯ ಜನರ ಎದುರು  ಪ್ರಶ್ನಾತೀತರು ಎಂಬ ಠೇಂಕಾರದಲ್ಲಿರುತ್ತಾರೆ. ಸಾಮಾನ್ಯ ಜನರು ಬಂದರೆ ಹೇಗೆ ನಡೆಸಿಕೊಳ್ಳುತ್ತಾರೆ ಎಂದರೆ, ತಮಗೆ ಬರುವ ಸಂಬಳ ಜನರ ತೆರಿಗೆಯಿಂದ ಬರುತ್ತಿದೆ ಎಂಬ ಪ್ರಾಥಮಿಕ ಸತ್ಯವನ್ನೇ ಇವರೆಲ್ಲ ಮರೆತಂತಿದೆ. ಮತ್ತೊಬ್ಬರ ಅಭಿಪ್ರಾಯ ಕೇಳಿಸಿಕೊಳ್ಳದ ದುರಹಂಕಾರ, ಠೇಂಕಾರಗಳು ಇಲ್ಲಿ ಮಾಮೂಲಾಗಿಬಿಟ್ಟಿವೆ.ಆದ್ದರಿಂದಲೇ ಇದಕ್ಕೆಲ್ಲ ಮದ್ದು ಖಾಸಗೀಕರಣ ಎಂದು ಸಲೀಸಾಗಿ ಹೇಳುವವರಿದ್ದಾರೆ. ಅಂಥ ಮೂರ್ಖರು ವಿಕ್ಟೋರಿಯಾ ಆಸ್ಪತ್ರೆಯಂಥ ಸರ್ಕಾರಿ ಆಸ್ಪತ್ರೆಗಳ ಕಡೆಗೆ ಒಮ್ಮೆ ಹೋಗಿ ನೋಡಿದರೆ ಸಾಕು, ಸಹಸ್ರಾರು ಬಡ, ಕೆಳ ಮಧ್ಯಮವರ್ಗದ ಜನರಿಗೆ ಇನ್ನೂ ಸರ್ಕಾರಿ ವ್ಯವಸ್ಥೆಯಲ್ಲಿಯೇ ಅಷ್ಟಿಷ್ಟು ಜೀವನದ ಭರವಸೆ ಇರುವುದು ಎಂಬ ಸತ್ಯ ಗೋಚರವಾಗುತ್ತದೆ.ನಮ್ಮ ಸರ್ಕಾರಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಇವೆಲ್ಲ ಇರದಿದ್ದರೆ ಗ್ರಾಮೀಣ ಜನರಾಗಲೀ, ನಗರಗಳ ಬಡವರಾಗಲೀ ಯಾವ ಅವಕಾಶಗಳನ್ನೂ ಪಡೆಯಲು ಸಾಧ್ಯವಿರುತ್ತಿರಲ್ಲ. ಈ ಸತ್ಯ ಇಂಥದೇ ಹಿನ್ನೆಲೆಗಳಿಂದ ಬಂದು, ಈ ವ್ಯವಸ್ಥೆಗಳಲ್ಲಿ ನೌಕರಿ ಮಾಡುತ್ತಿರುವವರಿಗಾದರೂ ಅರ್ಥವಾಗಬೇಕು. ತಮ್ಮ ಭ್ರಷ್ಟಾಚಾರ, ಜಡತೆ, ನಿಯಮಗಳ ತಿರುಚುವಿಕೆ, ಜನವಿರೋಧಿ ಮನಸ್ಥಿತಿಯಿಂದ ಎಲ್ಲ ಜನಕಲ್ಯಾಣ ವ್ಯವಸ್ಥೆಗಳನ್ನು ತಾವೇ ನಾಶ ಮಾಡುತ್ತಿದ್ದೇವೆ ಎಂಬುದನ್ನು ಈ ವ್ಯವಸ್ಥೆಯಲ್ಲಿರುವವರು ಅರಿಯಬೇಕು. ಇದೆಲ್ಲದರ ನಡುವೆ, ಅಳುತ್ತಿರುವ ಮಗುವೊಂದು ಎಷ್ಟೋ ಹೊತ್ತಿನ ನಂತರ ತಾನು ಯಾಕೆ ಅಳುತ್ತಿದ್ದೇನೆ ಎಂಬುದನ್ನೇ ಮರೆಯುವಂತೆ, ತಾವು ಈ ವ್ಯವಸ್ಥೆಯ ಉದ್ಯೋಗಗಳಲ್ಲಿ ಯಾಕೆ ಇದ್ದೇವೆ ಎಂಬುದನ್ನೇ ಅನೇಕರು ಮರೆತಿರುವಂತಿದೆ! ತಂತಮ್ಮ ಕೆಲಸಗಳಲ್ಲಿ ‘ವೃತ್ತಿಸಂತೋಷ’ ಪಡೆಯುವ ಬಗೆಯನ್ನೇ ಮರೆತ ಇವರು ಜಡರೂ ಕ್ರೂರಿಗಳೂ ಆಗತೊಡಗುತ್ತಾರೆ.ದಿನಕ್ಕೆ ಐವತ್ತು ಫೈಲುಗಳನ್ನು ಕ್ಲಿಯರ್ ಮಾಡುವ ಅಧಿಕಾರಿಯೊಬ್ಬ ಎಷ್ಟೊಂದು ಜನರಿಗೆ ರಿಲೀಫ್ ಕೊಟ್ಟೆ ಎಂದು ಕೂತು ಧನ್ಯತೆಯನ್ನು ಅನುಭವಿಸುವುದನ್ನೇ ಮರೆತಂತಿದೆ. ಅಸಹಾಯಕ ಮಹಿಳೆಯೊಬ್ಬಳಿಗೆ ನೆರವಾದ ಪೊಲೀಸ್ ಅಧಿಕಾರಿಯೊಬ್ಬ ಆಕೆಯ ಕಣ್ಣಲ್ಲಿ ವ್ಯಕ್ತವಾಗುವ ಕೃತಜ್ಞತೆಯ ಮಿಂಚಿನಿಂದ ಸ್ಫೂರ್ತಿ ಪಡೆಯುವುದನ್ನು, ಅದು ನಾಳೆ ಇಂಥ ಹತ್ತಾರು ಒಳ್ಳೆಯ ಕೆಲಸ ಮಾಡಲು ಪ್ರೇರಕವಾಗಬಹುದು ಎಂಬುದನ್ನು ಕಡೆಗಣಿಸಿದಂತಿದೆ.   

   

ಸರ್ಕಾರಿ ಉದ್ಯೋಗಗಳು ಕೆಲವೇ ಕೆಲವರಿಗೆ ಸಿಕ್ಕುತ್ತಿರುವ ನಮ್ಮಂಥ ದೇಶದಲ್ಲಿ ನೌಕರಶಾಹಿಯ ಸ್ವಕೇಂದ್ರಿತ ಸಿನಿಕತೆಗೆ ಯಾವ ಅರ್ಥವೂ ಇಲ್ಲ. ಗಾಂಧೀಜಿಯನ್ನು ಭೇಟಿ ಮಾಡಲು ಬಂದ ಯಾರೋ ಒಬ್ಬರು ಸಾರ್ವಜನಿಕ ನಡೆಯೊಂದರ ಬಗ್ಗೆ  ಗೊಂದಲದಲ್ಲಿದ್ದಾಗ ಗಾಂಧೀಜಿ ಹೇಳಿದ ಮಾತು: ‘ನಾನು ನಿನಗೊಂದು ‘ತಾಯಿತ’ ಕೊಡುತ್ತೇನೆ: ಯಾವಾಗಲಾದರೂ ನಿನಗೆ ಇಂಥ ಅನುಮಾನ ಬಂದಾಗ, ಅಥವಾ ನಿನ್ನೊಳಗೆ ನೀನೇ ಹೂತುಹೋಗುವ ಸ್ಥಿತಿಯಲ್ಲಿದ್ದಾಗ, ನಿನಗೆ ನೀನೇ ಈ ಪರೀಕ್ಷೆ ಮಾಡಿಕೋ: ನೀನು ಕಂಡಿರುವ ಅತ್ಯಂತ ಬಡವನಾದ, ದುರ್ಬಲನಾದ ಮನುಷ್ಯನ ಮುಖ ನೆನೆಸಿಕೋ.ನೀನು ಈಗ ಇಡಲಿರುವ ಹೆಜ್ಜೆಯಿಂದ ಆ ಮನುಷ್ಯನಿಗೆ ಏನಾದರೂ ಉಪಯೋಗವಿದೆಯೇ ಎಂಬುದನ್ನು ಕುರಿತು ಆಳವಾಗಿ ಯೋಚಿಸು. ಇದರಿಂದ ಅವನಿಗೆ ಏನಾದರೂ ಲಾಭವಾಗಲಿದೆಯೇ?  ಅದು ಅವನು ತನ್ನ ಜೀವನ ಹಾಗೂ ವಿಧಿಯ ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆಯೆ? ಅಂದರೆ, ಹಸಿದ ಜನರಿಗೆ ಅದು ಸ್ವರಾಜ್ಯವನ್ನು ತಂದುಕೊಡುತ್ತದೆಯೆ? ಈ ಪ್ರಶ್ನೆಗಳನ್ನು ಹಾಕಿಕೊಂಡರೆ ಸಾಕು, ನಿನ್ನ ಅನುಮಾನಗಳೆಲ್ಲ ಕರಗಿ ಹೋಗುವುದನ್ನು ನೀನೇ ನೋಡಬಲ್ಲೆ.’   ಗಾಂಧೀಜಿ ಹೇಳಿಕೊಟ್ಟ ಈ ಸ್ವಪರೀಕ್ಷೆ ಈ ವ್ಯವಸ್ಥೆಯಲ್ಲಿ ಬದುಕಿರುವ ಅಧಿಕಾರಿಗಳಿಗೆ, ಬದುಕಿಯೂ ಸತ್ತಂತಿರುವವರಿಗೆ, ಆತ್ಮಹತ್ಯೆ ಮಾಡಿಕೊಳ್ಳಬಯಸುವವರಿಗೆ ಎಲ್ಲರಿಗೂ ಅನ್ವಯಿಸುತ್ತದೆ. ಹಾಗೆಯೇ ಒಬ್ಬ ಅಧಿಕಾರಿಯ ದುರದೃಷ್ಟಕರ ಆತ್ಮಹತ್ಯೆ ನೆಪದಲ್ಲಿ ಸಾರ್ವಜನಿಕರ ಹಣ ಹಾಗೂ ಸಮಯ ಪೋಲುಮಾಡುತ್ತಿರುವ ಎಲ್ಲ ಪಕ್ಷಗಳ ನಾಯಕಮಣಿಗಳಿಗೂ ಅನ್ವಯಿಸುತ್ತದೆ. ಕೈತುಂಬ ಸಂಬಳ, ಹೊಟ್ಟೆ ಬಿರಿಯುವಷ್ಟು ಊಟ ಪಡೆದವರ ನಿತ್ಯದ ಚೀರಾಟಗಳನ್ನು ಜನ ಮೆಚ್ಚುತ್ತಾರೆ ಎಂದು ಈ ರಾಜಕಾರಣಿಗಳು, ಅಧಿಕಾರಿಗಳು ಭ್ರಮಿಸಿದ್ದರೆ ಅವರಂಥ ಮೂರ್ಖರು ಇನ್ನೊಬ್ಬರಿಲ್ಲ.ಕೊನೆ ಟಿಪ್ಪಣಿ: ‘ತಬರಿಸಂ’ ಎಂಬ ಸರ್ಕಾರಿ ಸಿದ್ಧಾಂತ!

‘ನಮ್ಮ ಸರ್ಕಾರಿ ಕಚೇರಿಗಳಲ್ಲಿರುವುದು ಒಂದೇ ಇಸಂ- ಅದೇ ತಬರಿಸಂ’ ಎನ್ನುತ್ತಿದ್ದರು ಪ್ರೊ.ಕಿ.ರಂ.ನಾಗರಾಜ್. ಇದು ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕತೆ’ ಆಧರಿಸಿ ಕೀರಂ ರೂಪಿಸಿದ ಒಂದು ಶಬ್ದ! ‘ತಬರನ ಕತೆ’ಯ ತಬರ ತನ್ನ ಪೆನ್ಷನ್‌ಗಾಗಿ ಎಷ್ಟೋ ವರ್ಷ ಕಾಲ ಅಲೆಯುವ ದಾರುಣ ಸ್ಥಿತಿಯನ್ನು ಹೇಳುವ ಈ ಕತೆಯಲ್ಲಿ ಅಧಿಕಾರಶಾಹಿ ಯಾಂತ್ರಿಕವೂ ಅಮಾನವೀಯವೂ ಆಗಿದೆ. ಈ ಸರ್ಕಾರಿ ವ್ಯವಸ್ಥೆಯಲ್ಲಿ ಗುಮಾಸ್ತನೊಬ್ಬ ‘ಬರ್ತ್ ಸರ್ಟಿಫಿಕೇಟ್ ಬೇಕೋ, ಡೆತ್ ಸರ್ಟಿಫಿಕೇಟ್ ಬೇಕೋ’ ಎಂದು ತನ್ನೆದುರಿಗೆ ನಿಂತ ಜೀವಂತ ವ್ಯಕ್ತಿಯನ್ನೇ ಕೇಳುತ್ತಾನೆ.ತಂತ್ರ್ಯೋತ್ಸವ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಜನ ಇಂಡಿಯಾದ ಸ್ವಾತಂತ್ರ್ಯದ ಬಗ್ಗೆ ಹೆಮ್ಮೆ ಪಡುತ್ತಿದ್ದರೆ, ತಬರ ಬ್ರಿಟಿಷರ ಕಾಲವೇ ಚೆನ್ನಾಗಿತ್ತೆಂದು ಹಳಹಳಿಸುತ್ತಿರುತ್ತಾನೆ. ಆದರೆ ಬ್ರಿಟಿಷರಿಗೆ ಈ ಬ್ಯೂರೋಕ್ರಸಿ ಎಂಬ ವ್ಯವಸ್ಥೆ ರೂಪಿಸಿಕೊಂಡ, ಜನರಿಗೆ ಅರ್ಥವಾಗದ ‘ನಿಗೂಢ ಪರಿಭಾಷೆ’ ಎಷ್ಟು ಯಶಸ್ವಿಯಾಗಿ ಜನರನ್ನು ಆಡಳಿತದಿಂದ ದೂರ ಇಡಬಲ್ಲದು ಎಂಬುದು ಗೊತ್ತಾದದ್ದೇ ಇಂಡಿಯಾದಲ್ಲಂತೆ! ವಸಾಹತುಶಾಹಿ ಕಾಲದ ದುರ್ಮಾರ್ಗಗಳನ್ನು ಇಂಡಿಯಾದ ಅಧಿಕಾರಶಾಹಿ ತನ್ನ ಕಚೇರಿಗಳಲ್ಲಿ ಎಷ್ಟು ಕಟ್ಟುನಿಟ್ಟಾಗಿ ಜಾರಿಯಲ್ಲಿಟ್ಟಿದೆಯೆಂಬುದು ಗೊತ್ತಾದರೆ ಬ್ರಿಟಿಷ್ ದೇಶಭಕ್ತರು  ಇನ್ನಷ್ಟು ಉಬ್ಬಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.