ಶನಿವಾರ, ಏಪ್ರಿಲ್ 17, 2021
32 °C

ಅಶಾಂತ ಜಗತ್ತಿನಲ್ಲಿ ಶಾಂತಿಯುತ ಬಾಳನ್ನರಸುತ್ತಾ...

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಅಶಾಂತ ಜಗತ್ತಿನಲ್ಲಿ ಶಾಂತಿಯುತ ಬಾಳನ್ನರಸುತ್ತಾ...

ಯಾವುದೇ ಮಹಾನಗರದ ಯಾವುದಾದರೂ ಗಡಿಬಿಡಿಯಾದ ರಸ್ತೆಯಲ್ಲಿ ನಿಂತು ನೋಡಿ. ಅಲ್ಲಿ ನಡೆಯುವ ಯಾವುದೂ ನಮಗೆ ಸಂಬಂಧಪಟ್ಟದ್ದಲ್ಲ ಎಂದು ಕಲ್ಪಿಸಿಕೊಳ್ಳಿ. ರಸ್ತೆ ಬದಿಯಲ್ಲಿ ಕಾಲುನಡಿಗೆಯಲ್ಲಿ ದೌಡಿಕ್ಕುತ್ತಿರುವ ಮಂದಿ ಕಾಣುತ್ತಾರೆ.

 

ರಸ್ತೆಯಲ್ಲಿ ವಿವಿಧ ಗಾಡಿಗಳನ್ನೇರಿ ಅತ್ತಿತ್ತ ವೇಗವಾಗಿ ಚಲಿಸುತ್ತಿರುವವರನ್ನು ನೋಡಿ. ಎಲ್ಲರೂ ಎಲ್ಲಿಗೋ ಓಡುತ್ತಿದ್ದಾರೆ ಅನ್ನುವುದಕ್ಕಿಂತಲೂ ಯಾವುದರಿಂದಲೋ ಓಡಿಹೋಗುತ್ತಿರುವಂತೆ ಕಾಣುತ್ತದೆ.ಒಂದು ಅಮೆರಿಕನ್ ನಾಟಕದಲ್ಲಿ ಕಥಾನಾಯಕ ಬ್ಯಾಂಕಿನಿಂದ ಸಾಲ ಪಡೆದು ಮನೆ ಕೊಳ್ಳುತ್ತಾನೆ. ಆದರೆ ಸಾಲ ತೀರಿಸುವ ಮೊದಲು ಅವನೇ ಗೋತಾ ಹೊಡೆದುಬಿಡುತ್ತಾನೆ.ಹಟ ಮಾಡಿ ಪ್ರೀತಿಸಿ ಮನೆಯವರಿಗೆ ಸೆಡ್ಡುಹೊಡೆದು ಪ್ರೇಮವಿವಾಹ ಮಾಡಿಕೊಂಡ ಹುಡುಗ ಹುಡುಗಿ ಆರು ತಿಂಗಳು ಕಳೆಯುವುದರಲ್ಲಿ ಕೋರ್ಟಿನ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ.ಹಗಲಿರುಳೂ ಕಾಸು ಕೂಡಿಡಬೇಕೆಂದು ಪಣತೊಟ್ಟ ವ್ಯಕ್ತಿ ಕಾಸು ಕೂಡುತ್ತಾ ಹೋದ ಹಾಗೆ ಹೆಚ್ಚುಹೆಚ್ಚು ರೋಗಿಯೂ ಅಶಾಂತನೂ ಆಗುತ್ತಾ ಹೋಗುತ್ತಾನೆ.

ಅಶಾಂತಿಯಿಂದ ಮುಕ್ತಿ ಪಡೆಯಲೆಂದು ಪ್ರಶಾಂತ ಜಾಗಕ್ಕೆ ಹೋದವರ ಮನಸಿನಲ್ಲಿ ಆ ಪ್ರಶಾಂತ ಜಾಗದಲ್ಲೂ ಒಂದು ಜ್ವಾಲಾಮುಖಿ ಏಳುತ್ತದೆ.ಬಯಸಿ ಬಂದದ್ದು ತನಗೇ ಕುತ್ತಾಗುವ ಅನೇಕ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಆದರೆ ಯಾಕೆ ಹೀಗಾಗುತ್ತದೆ? ಎಲ್ಲರೂ ಮುಂದೊಮ್ಮೆ ಶಾಂತಿ ಸಿಗಬಹುದೆಂಬ ಭರವಸೆಯಿಂದ ದಿನಾ ಗಾಣ ಸುತ್ತುತ್ತಿರುತ್ತಾರೆ. ಇದು ಮಗುವೊಂದು ಚಂದ್ರನನ್ನು ಹಿಡಿಯಲು ಹೋದ ಹಾಗೆ. ನಾವು ಹಿಂಬಾಲಿಸಿದಷ್ಟೂ ಅದು ದೂರ ಹೋಗುತ್ತಿರುತ್ತದೆ.ಮುಂದಿನ ಬೆನ್ನಿಗೆ ಬಿದ್ದು ಇಂದು ಅಸಹನೀಯವಾದಾಗ ಮನಸ್ಸು ಹಿಂದನ್ನು ಬಯಸತೊಡಗುತ್ತದೆ. ಆದರೆ ಕಾಲದ ಎಂಜಿನ್ನು ನಮ್ಮನ್ನು ಮುಂದೆ ಮುಂದೆ ತಳ್ಳುತ್ತಿರುತ್ತದೆ.ಹಿಂದುಮುಂದುಗಳ ದಂದುಗದಿಂದ ಪಾರಾಗಿ ಇಂದು ಸಿಕ್ಕಿದ್ದರಲ್ಲಿ ತೃಪ್ತಿ ಪಡೆದು ಕೊಳ್ಳಲಾದೀತೆ? ಆದರೆ ಇಂದಿನಲ್ಲಿ ಬದುಕುವವರು ಬೆರಳೆಣಿಕೆಗೂ ಕಡಿಮೆ.

ಜಗತ್ತಿನಲ್ಲೇ ಅತ್ಯಂತ ಸುಖಿಯಾಗಿರುವ ಮನುಷ್ಯನ ಕತೆ ನೆನಪಾಗುತ್ತದೆ:ಒಬ್ಬನಿದ್ದ.

ಬಡವನಾಗಿದ್ದ. ಹಣ ಸಂಪಾದಿಸಿದ. ಒಂಟಿಯಾಗಿದ್ದ. ಪ್ರೇಮಿಸಿ ಮದುವೆಯಾದ.ಬಾಡಿಗೆ ಮನೆಯಿಂದ ಸ್ವಂತಮನೆಗೆ ಬಂದ. ಅದು ಸಾಲದೆಂದು ಇನ್ನೆಷ್ಟೋ ಮನೆ ಕಟ್ಟಿಸಿ ಬಾಡಿಗೆ ಕೊಟ್ಟ. ಮಕ್ಕಳನ್ನು ಓದಿಸಿ ಮದುವೆ ಮಾಡಿಸಿದ. ಅವರೂ ಕೈತುಂಬ ದುಡಿಯತೊಡಗಿದರು. ಪತಿವ್ರತೆಯಾದ ಹೆಂಡತಿ ಸದಾ ಅವನ ಸೇವೆಗೆ ಸಿದ್ಧಳಾಗಿದ್ದರೂ ಹೊರಗಡೆಯೂ ಹೋಗಿ ಮಜಾ ಮಾಡುತ್ತಿದ್ದ.ಆರೋಗ್ಯ ತುಸು ಕೆಟ್ಟರೂ ಅದನ್ನು ಕೂಡಲೇ ರಿಪೇರಿ ಮಾಡುವ ಡಾಕ್ಟರುಗಳ ಸೇನಾಪಡೆಯನ್ನೇ ಕೊಂಡುಕೊಂಡಿದ್ದ. ಆದರೆ ಸ್ವಾಸ್ಥ್ಯವಾಗಲಿ, ಸಂಭೋಗವಾಗಲಿ, ಧನ-ಸಂಪತ್ತಾಗಲಿ ಅವನಿಗೆ ತೃಪ್ತಿ ಕೊಡಲಿಲ್ಲವಾಗಿ ಬಾಬಗಳ ಬಾಲ ಹಿಡಿದ. ಅಲ್ಲೂ ಕಾಸು ಕಕ್ಕಿದ. ಅವರು ಹೇಳಿದ್ದನ್ನು ಮಾಡಿದ.ಅದೇ ಸಮಯದಲ್ಲಿ ಜ್ಯೋತಿಷದ ಗೀಳು ಹತ್ತಿಸಿಕೊಂಡ. ನಾಡಿಗ್ರಂಥಗಳನ್ನೋದಿಸಲು ವೈದೀಶ್ವರನ್‌ಗೂ ಹೋಗಿ ಬಂದ. ಅವರು ಹೇಳಿದ ಎಲ್ಲ ಪರಿಹಾರವನ್ನೂ ಮಾಡಿದ. ಆದರೂ ಶಾಂತಿ ಸಿಗಲಿಲ್ಲ. ಆಗ ಅವನನ್ನು ಅಪೂರ್ವ ತೇಜಸ್ವಿಯಾದ ಜ್ಞಾನಿ ಭೆಟ್ಟಿ ಮಾಡಿದ. `ಯಾಕಿಷ್ಟು ಸೋತಿದ್ದೀಯ~ ಎಂದು ಕೇಳಿದ. ತಾನು ಏನೇನು ಮಾಡಿದೆ ಎಂದವನಿಗೆ ವಿವರಿಸಿ ತಾನು ಇನ್ನೂ ಅಸುಖಿಯಾಗಿರುವುದರಿಂದ `ಸುಖದ ಹಾದಿಯನ್ನು ತೋರು~ ಎಂದು ಬೇಡಿಕೊಂಡ. ಮನ ಕರಗಿದ ಜ್ಞಾನಿ ಹೇಳಿದ:  `ನಾನು ಆ ಸುಖದ ಹುಡುಕಾಟ ಬಿಟ್ಟಿದ್ದೇನೆ. ಯಾಕೆಂದರೆ ಜಗತ್ತಿನ ಅತ್ಯಂತ ಸುಖಿಯಾದ ಮನುಷ್ಯನನ್ನು ಕಂಡು ಬಂದಿದ್ದೇನೆ~ ಎಂದು ಹೇಳಿದ. ಆಗ ನಮ್ಮ ಕಥಾನಾಯಕ ಆ ವ್ಯಕ್ತಿಯನ್ನು ತನಗೂ ತೋರಿಸೆಂದು ಕೇಳಿದ. `ಅವನನ್ನು ಯಾರು ಬೇಕಾದರೂ ಭೆಟ್ಟಿ ಮಾಡಬಹುದು. ಇಗೋ ಈ ವಿಳಾಸದಲ್ಲಿದ್ದಾನೆ. ಹೋಗಿ ನೋಡು~ ಎಂದ.

 

ಆ ವಿಳಾಸವನ್ನು ಈಸಿಕೊಂಡು ಈತ ಕೂಡಲೇ ಆ ಊರಿನ ಆ ಬೀದಿಯ ಆ ಮನೆಯನ್ನು ಸೇರಿದಾಗ ತಾನು ಕಾಣಬಂದ ವ್ಯಕ್ತಿ ಎರಡು ದಿನ ಹಿಂದೆ ಇನ್ನೊದು ಊರಿಗೆ ಹೋದ ಎಂದು ತಿಳಿದುಬಂತು. ಆ ವಿಳಾಸಕ್ಕೆ ಹೋದರೆ ಅವನು ಇನ್ನೊಂದು ಕಡೆ ಹೋಗಿದ್ದಾನೆಂದು ತಿಳಿದುಬಂತು. ಆ ವಿಳಾಸಕ್ಕೆ ಹೋದರೂ ಅವನು ಇನ್ನೆಲ್ಲಿಗೋ ಹೋಗಿಬಿಟ್ಟಿರುತ್ತಿದ್ದ.ಹೀಗೆ ಎಷ್ಟೋ ವಿಳಾಸಗಳಲ್ಲಿ ಅವನನ್ನು ಕಾಣದೆ ನಿರಾಶನಾಗುತ್ತಿರುವಾಗ ಇದೇ ಕಡೆಯ ಪ್ರಯತ್ನ ಎಂದುಕೊಂಡು ಒಂದೂರಿಗೆ ಹೋಗಿ ಮಹಾಪುರುಷನ ಬಗೆಗೆ ವಿಚಾರಿಸಿದಾಗ `ಅಗೋ ಆ ಜೋಪಡಿಯಲ್ಲಿ ಅವನಿದ್ದಾನೆ~ ಎಂದು ತಿಳಿಸಲು ,ಕೊನೆಗಾದರೂ ಸಿಕ್ಕಿದನಲ್ಲ ಅನ್ನೋ ಸಮಾಧಾನದಿಂದ ಅಲ್ಲಿಗೆ ಹೋಗಿ ನೋಡಿದಾಗ ಆಶ್ಚರ್ಯವಾಯಿತು. ಅಲ್ಲಿ ಕೂತಿದ್ದ ಹರುಕಂಗಿಯ ವ್ಯಕ್ತಿ ಇವನನ್ನು ನೋಡಿ ಗಹಗಹಿಸಿ ನಗತೊಡಗಿದ.ಸಿಟ್ಟು ಬಂದರೂ ಈತ ಕೇಳಿದ:  `ನಾನಿಲ್ಲಿ ಬಂದದ್ದು ನಿನ್ನ ಹುಚ್ಚು ನಗೆಕೇಳಿಸಿಕೊಳ್ಳುವುದಕ್ಕಲ್ಲ, ಅತ್ಯಂತ ಸುಖಿಯಾದ ಮಹಾಪುರುಷನನ್ನು ನೋಡಲು~ ಎಂದ. ಆಗ ಆ ವ್ಯಕ್ತಿ ಹೇಳಿದ: `ನಾನೇ ಆ ಮಹಾಸುಖಿಯಾದ ಮಹಾಪುರುಷ.~  ನಮ್ಮ ಕಥಾ ನಾಯಕನಿಗೆ ಕಥೆಯ ನೀತಿ ಗೊತ್ತಾಗಲಿಲ್ಲ. ಅವಾಕ್ಕಾದ.ನಾವಾದರೂ ಅರ್ಥಮಾಡಿಕೊಳ್ಳಬಲ್ಲೆವೆ? ನಾವು ಯಾಕೆ ಒಂದರ ಕಡೆಯಿಂದ ಇನ್ನೊಂದರ ಕಡೆಗೆ ಸದಾ ಓಡುತ್ತಿದ್ದೇವೆ?ಎರಡು ಕಾರಣಗಳಿರುವಂತೆ ತೋರುತ್ತದೆ. ಮೊದಲನೆಯದು ಇಂದಿನ ಮನೋಧರ್ಮ. ತಂದೆ-ತಾಯಿಗಳಿಂದ, ಸುತ್ತಲ ಸಮಾಜದಿಂದ ಮಕ್ಕಳು ಅದನ್ನು ತಮ್ಮದಾಗಿಸಿಕೊಳ್ಳುತ್ತಾ ಹೋಗುತ್ತಾರೆ.ಅದು ಸ್ಪರ್ಧೆಯ ಮನೋಧರ್ಮ. `ನೋಡು ಅವನೆಷ್ಟು ಬುದ್ಧಿವಂತ, ಆದರೆ ನೀನು?~-ಎಂದು ಮೂದಲಿಸುತ್ತಾರೆ ತಂದೆ-ತಾಯಿಗಳು. ಶಾಲೆಗಳಲ್ಲಿ ಮಕ್ಕಳ ಯೋಗ್ಯತೆಯನ್ನು ಅವರು ಪಡೆಯುವ ಅಂಕಗಳಿಂದ ಅಳೆಯುತ್ತಾರೆ ಉಪಾಧ್ಯಾಯರು. ವಿದ್ಯೆಯಲ್ಲಿ, ಆಟಗಳಲ್ಲಿ, ಬಟ್ಟೆಬರೆ ತೊಡುವುದರಲ್ಲಿ ಎಲ್ಲದರಲ್ಲೂ ಪೈಪೋಟಿ.ಶಿಕ್ಷಣ ಪಡೆದು ನೌಕರಿ ಸಿಕ್ಕಿ ಮದುವೆಯಾದಮೇಲೆ `ಅವನೆಷ್ಟು ಸಂಪಾದಿಸುತ್ತಿದ್ದಾನೆ, ನೀನು ಮಾತ್ರ ಯಾಕೆ ಹೀಗೆ~ ಎಂದು ಕೊರಗುತ್ತಾರೆ ಮಡದಿಯರು. ಈಚೆಗೆ ಬಹುತೇಕ ಮಡದಿಯರೂ ಸಂಪಾದನೆಗಿಳಿದಿರುವುದರಿಂದ ಅವರೂ ಪೈಪೋಟಿಯ ಕಣದಲ್ಲಿ ಸೇರಿದ್ದಾರೆ. ದುಡಿಯುವುದಕ್ಕೋಸುಗ ಇನ್ನೂ ದುಡಿಯತೊಡಗುತ್ತಾರೆ; ಪಡೆದುದರಿಂದ ತೃಪ್ತಿಯಾಗದೆ ಇನ್ನೂ ಪಡೆಯತೊಡಗುತ್ತಾರೆ. ಕಡಿಮೆ ಕೌಟುಂಬಿಕ ಹೊಣೆಗಳಿರುವವರ ಕಥೆಯೇ ಹೀಗಾದಾಗ ಇನ್ನು ಗುರುತರವಾದ ಸಾಂಸಾರಿಕ ಜವಾಬ್ದಾರಿಗಳುಳ್ಳವರ ಕತೆ ಇನ್ನೂ ಕರುಣಾಜನಕ.ಈ ಅಶಾಂತಿಯ ನಡುವೆ ಅವರಿಗೆ ಕ್ಷಣಿಕ ಶಾಂತಿ ನೀಡುವ ಸಾಧನಗಳನ್ನು ಸಮಕಾಲೀನ ಜಗತ್ತು ಸೃಷ್ಟಿಸಿದೆ. ಸಿನಿಮಾ. ಟಿವಿ ಮುಂತಾದವು ಅವರ ವಿರಾಮರಹಿತ ಬದುಕಿನೊಳಗೆ ಆಗಾಗ ಅಲ್ಪವಿರಾಮ ನೀಡುತ್ತವೆ. ಸರಕು ಸಂಸ್ಕೃತಿಯ ಬೆಳವಣಿಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಅವರ ಅಗತ್ಯಗಳನ್ನು ಪೂರೈಸುವ ಹೊಸಹೊಸ ಭರವಸೆಗಳನ್ನು ನೀಡುತ್ತಿದೆ.

 

ಜಾಹಿರಾತುಗಳು ಈ ಥರದ ಕಾರು ಕೊಂಡವನಿಗೆ, ಈ ಥರದ ಕಾಚಾ ತೊಟ್ಟವನಿಗೆ ಇಂಥಾ ಸುರಸುಂದರಿ ಬೇಸ್ತುಬೀಳುತ್ತಾಳೆಂದು; ಈ ಥರದ ಒಡವೆ ತೊಟ್ಟವಳಿಗೆ ಸಾಕ್ಷಾತ್ ಶಾರೂಕ್ ಖಾನ್‌ನೇ ಪ್ರತ್ಯಕ್ಷನಾಗುತ್ತಾನೆಂದು ಆಸೆ ತೋರಿಸುತ್ತವೆ. ಇವನ್ನು ಕೊಳ್ಳಲು ನಿಮ್ಮ ಸಂಪಾದನೆ ಸಾಲದೆ? ಬನ್ನಿ.ಬೇಕಾದಷ್ಟು ಸಾಲ ಕೊಡುತ್ತೇವೆಂದು ಹುರಿದುಂಬಿಸುವ ಬ್ಯಾಂಕುಗಳಿವೆ. ಹಿಂದೆ ಸಾಲಗಾರರು ಸಾಲ ಕೊಡುವವರ ಬೇಟೆಯಲ್ಲಿದ್ದರು; ಇಂದು ಸಾಲಿಗರು ಸಾಲಗಾರರ ಬೇಟೆಯಲ್ಲಿದ್ದಾರೆ. ಮನಸೋ ಇಚ್ಛೆ ಸಾಲ ತೆಗೆದುಕೊಳ್ಳಿ, ಆದರೆ ಬಡ್ಡಿಯ ಹೊರೆಯ ಬಗ್ಗೆ ಈಗ ಯೋಚಿಸಬೇಡಿ - ಇದು ಸಾಲ ನೀಡಿಕೆ ಬ್ಯಾಂಕುಗಳ ಮಹಾವಾಕ್ಯ.ಹೀಗೆ ಚಡಪಡಿಕೆಯನ್ನೇ ಚಟ ಮಾಡಿಸುವ ಕ್ಷುದ್ರಶಕ್ತಿಗಳು ಎಲ್ಲೆಲ್ಲೂ ತಾಂಡವವಾಡುತ್ತಿವೆ. ಲಾಭವನ್ನೇ ಪರಮಾದರ್ಶವಾಗಿಸಿರುವ ಮಾರುಕಟ್ಟೆ ಸಂಸ್ಕೃತಿ ಇವೆಲ್ಲಕ್ಕೂ ಅದ್ಭುತ ಭಿತ್ತಿ ಮಾಡಿಕೊಟ್ಟಿದೆ.ಎರಡನೇ ಕಾರಣ ನಮ್ಮ ಪಾರಂಪರಿಕ ಧರ್ಮಗಳು ನಮ್ಮಲ್ಲಿ ಬಿತ್ತಿರುವ ಸುಳ್ಳುಗಳು. ಜಗತ್ತು ಮಾಯೆಯೆಂದು, ಅಪಾಯಗಳ ಆಗರವೆಂದು ಅವು ನಮ್ಮನ್ನು ಆಳದಲ್ಲಿ ನಂಬಿಸಿವೆ. ಹೀಗೆ ಜಗತ್ತಿನ ಬಗೆಗೆ ಸ್ವಾಭಾವಿಕವಾದ ಅಪನಂಬಿಕೆಯನ್ನು ಹುಟ್ಟಿಸಿವೆ. ಜಗತ್ತನ್ನು ನಂಬದವರು ಜನಗಳನ್ನೂ ನಂಬುವುದಿಲ್ಲ.

 

ಮಾಯಾತತ್ತ್ವವನ್ನು ಬೋಧಿಸಿ ನಶ್ವರತೆಯನ್ನು ಅನುಭವಿಸುವಂತೆ ಮಾಡುವ ಆಚಾರ-ವಿಚಾರಗಳನ್ನು ಇತರರಿಗೆ ಕಲಿಸಿ ಭಕ್ತರ ದೇಣಿಗೆಗಳಿಂದ ಅಪಾರ ಸಂಪತ್ತು ಗಳಿಸುತ್ತಾ ಎಲ್ಲಾ ಸುಖ-ವೈಭವಗಳ ಸಾಮ್ರೋಜ್ಯ ಕಟ್ಟಿಕೊಂಡಿರುವ ಗುರುಗಳು ಈ ಸಂದರ್ಭದಲ್ಲಿ ಅನಿವಾರ್ಯವಾಗಿದ್ದಾರೆ.ಇನ್ನೊಬ್ಬರ ಕತ್ತು ಕೊಯ್ಯದೆ ನಮಗೆ ಉಳಿಗಾಲವಿಲ್ಲವೆನ್ನುವ ಇಂದಿನ ಧೋರಣೆ, ಈ ಜಗತ್ತಿಗೇ ಉಳಿಗಾಲವಿಲ್ಲವೆನ್ನುವ ಧರ್ಮ ಎರಡೂ ಇಂದಿನ ಸುತ್ತುನೆಲೆಯಲ್ಲಿ ಹೊಯ್ಕಯ್ಯೊಗಿ ಎಲ್ಲರ ಬದುಕನ್ನೂ ನರಕಗೊಳಿಸುತ್ತಿವೆ. ಅರ್ಥಹೀನವಾಗಿ ಕಾಣುವ ಜಗತ್ತಲ್ಲಿ ಅರ್ಥಗಳನ್ನು ಹುಡುಕಿ, ಸಣ್ಣಸಣ್ಣ ಸೋಜಿಗಗಳನ್ನು ತೋರಿ ನೆಲದ ಬದುಕನ್ನು ಹದಗೊಳಿಸಬೇಕಾದ ಕಲೆ-ಸಂಸ್ಕೃತಿಗಳು ಲಾಭಕೋರತನದ ಹುಚ್ಚುಕುದುರೆಯನ್ನೇರಿಸಿ ಜನರನ್ನು ಕೊರಕಲಿನಲ್ಲಿ ಕೆಡವುತ್ತಿವೆ.ಅಶಾಂತಿಯ ತವರಾಗಿರುವ ನಮ್ಮ ಜಗತ್ತು ಭವಿಷ್ಯದ ಸ್ವರ್ಗಕ್ಕೆ ಮುನ್ನುಡಿಗಳೆಂದು ಸಾರಿದ ಸಿದ್ಧಾಂತಗಳು ಹಳಸು ಹಳಸಾಗಿವೆ. ಯಾಕೆಂದರೆ ಆ ಉಜ್ವಲ ಭವಿಷ್ಯದ ಮೇಲೆ ಕಣ್ಣು ನೆಟ್ಟು ಸಮುದಾಯಗಳು ಕೊರಕಲಿಗೆ ಎಷ್ಟೋ ಸಲ ಬಿದ್ದಿವೆ. ಸತ್ತಮೇಲೆ ಸುಖವುಂಟೆಂದು ಹೇಳಿದ ಧರ್ಮಗಳಂತೆ ಅವೂ ಬೇಕಾರಾಗಿವೆ.ಈ ಮಧ್ಯೆ ಒಂದು ಕರೆಯನ್ನು ಕೊಟ್ಟು ಎಲ್ಲವನ್ನು ಸ್ವಚ್ಛಗೊಳಿಸುವೆಂದು ಭರವಸೆ ಕೊಡುವ ಸ್ವಯಂಘೋಷಿತ ನಾಯಕರು ಪ್ರತ್ಯಕ್ಷವಾಗುತ್ತಾರೆ. ಕಂಗೆಟ್ಟ ಜನ ಅವರನ್ನೇ ಅವತಾರ ಪುರುಷನೆಂದು ನಂಬಿ ಹಿಂಬಾಲಿಸಲೂ ತೊಡಗುತ್ತಾರೆ. ಆದರೆ ಆ ನಾಯಕಮಣಿಗಳು ಮತ್ತವರ ಅನುಯಾಯಿಗಳು ನಾವಂದುಕೊಂಡದ್ದಕ್ಕಿಂತ ಮೊದಲೇ ಹಾಸ್ಯಾಸ್ಪದವಾಗಿ ದಬಾರೆಂದು ಕೆಳಗೆಬೀಳುತ್ತಾರೆ.

 

ಈ ಜಗತ್ತು ಹೀಗೇ ಇರುವುದೆಂಬ ತತ್ವಕ್ಕೆ ಮತ್ತೆ ಶರಣಾಗಿ ಅದೇ ಚಕ್ರ ಅದೇ ರೀತಿ ತಿರುಗತೊಡಗುತ್ತದೆ.ನಮ್ಮ ಮುಂದಿನ ಸವಾಲು ಇವೊತ್ತು ಇದನ್ನು ಬದಲಾಯಿಸಬೇಕೆಂಬುದಲ್ಲ. ಇದರ ಒಂದು ಭಾಗವಾಗದೆ ಹೇಗೆ ಬದುಕಬೇಕೆಂಬುದು. ಈ ಓಟದಿಂದ ನಾವು ಹೊರಬರಬೇಕು. ತುಸು ಶಾಂತವಾಗಿ ಸುತ್ತಲೂ ನೋಡಬೇಕು. ಅದಕ್ಕಾಗಿ ಸುಮ್ಮನಾಗಬೇಕು. ನಮ್ಮ ದೇಹಮನಸ್ಸುಗಳಲ್ಲಿ ಒಂದು ತಂಗುದಾಣವನ್ನು ಹುಡುಕಿಕೊಳ್ಳಬೇಕು.ಪಾಂಡವಪುರದ ಶಿವಾನಂದಾವಧೂತರು ನನಗೊಂದು ಕತೆ ಹೇಳಿದ್ದರು:

ಒಮ್ಮೆ ಸಂತ ಕನಕದಾಸರು ಸಂಚಾರದಲ್ಲಿದ್ದರಂತೆ. ಒಂದು ಹಳ್ಳಿಗೆ ಬಂದಾಗ ಸುಡುಸುಡು ಹಗಲು. ಒಂದು ಮನೆಯ ನೆರಳಿದ್ದ ಜಗುಲಿಯ ಮೇಲೆ ಸ್ವಲ್ಪ ಕೂತು ವಿಶ್ರಾಂತಿ ಪಡೆದು ಆಮೇಲೆ ಮುಂದೆ ಹೋಗೋಣವೆಂದುಕೊಂಡರು. ಅಂತಹ ಒಂದು ಆರಾಮಾದ ಜಗುಲಿ ಸಿಕ್ಕಿತು.

 

ಆ ಜಗುಲಿ ಮೇಲೆ ಚಾಪೆ ಹಾಕಿಕೊಂಡು ಒಂದು ಅಜ್ಜಿ ರಾಗಿ ಬೀಸುತ್ತಿತ್ತು. ಕನಕದಾಸರಿಗೆ ನೀರು-ಬೆಲ್ಲಗಳನ್ನು ದಣಿವಾರಿಸಲು ತಂದುಕೊಟ್ಟು ಅಜ್ಜಿ ತನ್ನ ಕಾಯಕ ಮುಂದುವರಿಸಿತು. ಆ ರಾಗಿಬೀಸುವಿಕೆಯನ್ನು ಕನಕದಾಸರು ತದೇಕಚಿತ್ತರಾಗಿ ನೋಡತೊಡಗಿದರು. ಅವರಿಗೆ ಅಳು ಬಂದು ಬಿಕ್ಕಿಬಿಕ್ಕಿ ಅಳತೊಡಗಿದರು. ಅಜ್ಜಿಗೆ ಅಯ್ಯೋ ಅನಿಸಿ ಏನಾಯಿತೆಂದು ಕೇಳಿತು.ಕನಕದಾಸರು ಹೇಳಿದರು: `ಈ ರಾಗಿಕಲ್ಲು ಇಡೀ ಸಂಸಾರದ ಹಾಗೆ ಕಾಣುತ್ತಿದೆ. ರಾಗಿಕಾಳುಗಳು ಅದರ ನಡುವೆ ಸಿಕ್ಕಿ ನುಚ್ಚುನೂರಾಗುತ್ತಿವೆ. ಇದೇ ರೀತಿ ಈ ಲೋಕದ ಜೀವಿಗಳು ಪಾಪ ಸಂಸಾರಚಕ್ರಕ್ಕೆ ಸಿಕ್ಕಿ ನುಚ್ಚುನೂರಾಗುತ್ತಿದ್ದಾರಲ್ಲ. ಅದನ್ನು ನೆನೆದು ದುಃಖ ತಡೆಯಲಾಗಲಿಲ್ಲ~ ಅಂದರು. ಅಜ್ಜಿ ಹೇಳಿತು: `ನೀವು ಹೇಳಿದ್ದೇನೋ ನಿಜ. ಎಷ್ಟೋ ಜೀವಗಳು ಹೀಗೆ ನಾಶವಾಗುತ್ತಾ ಇವೆ. ಆದರೆ ಇಲ್ಲಿ ನೋಡಿ. ಈ ರಾಗಿ ಗೂಟದ ಬಳಿ ಇರುವ ಕಾಳುಗಳು ಸುರಕ್ಷಿತವಾಗಿಯೇ ಇವೆ.~ಸುತ್ತುತ್ತಿರುವ ರಾಗಿ ಕಲ್ಲಿನ ನಡುವೆ ಸ್ಥಿರವಾಗಿರುವ ಗೂಟದ ಕೆಳಗಿನ ಕಾಳುಗಳಂತೆ ನಾವಿಂದು ಅಶಾಂತ ಜಗತ್ತಿನಲ್ಲಿ ಶಾಂತಿಯುತವಾಗಿ ಬಾಳಲು ಸಾಧ್ಯವೆ?

(ನಿಮ್ಮ ಅನಿಸಿಕೆ ತಿಳಿಸಿ: .editpagefeedback@prajavani.co.in)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.