ಶುಕ್ರವಾರ, ಜೂನ್ 25, 2021
30 °C

ಆಹಾರ ದೇಶದ ಸ್ವತ್ತು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಈ ಸತ್ಯ ಘಟನೆಯನ್ನು ಹೇಳಿದವರು ನನಗೆ ಆತ್ಮೀಯರಾದ ಬೈಲಹೊಂಗಲದ ಬಾಬು ಧಮ್ಮಣಗಿಯವರು.ಘಟನೆ ನಡೆದದ್ದು ಜರ್ಮನಿಯಲ್ಲಿ. ಇಬ್ಬರು ಭಾರತೀಯ ಸ್ನೇಹಿತರು ಬರ್ಲಿನ್‌ನಲ್ಲಿ ಒಂದು ಹೋಟೆಲಿಗೆ ಹೋದರು. ತಮಗೆ ಬೇಕಾದ ತಿಂಡಿಗಳಿಗೆ ಆರ್ಡರ್ ನೀಡಿದರು. ಮತ್ತಾವುದೋ ತಿಂಡಿ ಆಕರ್ಷಕವಾಗಿ ಕಂಡಿತು. ಅದನ್ನು ಆರ್ಡರ್ ಮಾಡಿದರು. ಇಷ್ಟೇ ಸಾಕಾಗುತ್ತದೆಯೇ ಎಂದುಕೊಂಡು ಮತ್ತಷ್ಟು ಆರ್ಡರ್ ಮಾಡಿದರು. ಇವರು ಹೇಳಿದ್ದನ್ನೆಲ್ಲ ಮಾಣಿ ಕೊಟ್ಟ.ಸ್ನೇಹಿತರು ನಿಧಾನವಾಗಿ ಮಾತನಾಡುತ್ತ ಊಟ ಮುಗಿಸಿದರು. ನಂತರ ನೋಡುತ್ತಾರೆ ತರಿಸಿದ ಆಹಾರದಲ್ಲಿ ಬಹುಪಾಲು ಹಾಗೆಯೇ ಉಳಿದುಬಿಟ್ಟಿದೆ. ತಮ್ಮ ಅಂದಾಜು ತಪ್ಪಾಯಿತೆಂದು ಅವರಿಗೆ ಅರಿವಾಯಿತು, ಆದರೇನು ಮಾಡುವುದು? ಅದೆಲ್ಲವನ್ನೂ ತಿನ್ನುವುದು ಸಾಧ್ಯವೇ? ಮಾಣಿ ಬಿಲ್ಲು ತಂದುಕೊಟ್ಟ. ಇವರು ಆತನಿಗೆ ಹಣ ನೀಡಿದರು.ಆತ ಬಿಲ್ಲಿನ ಹಣ ತೆಗೆದುಕೊಂಡು ಬಾಕಿ ಹಣವನ್ನು ನೀಡಿ ಹೇಳಿದ, `ಸರ್, ಈ ಆಹಾರವನ್ನೇನು ಮಾಡುತ್ತೀರಿ?~ `ಅದಕ್ಕೇನು ಮಾಡಲಾಗುತ್ತದೆ? ಬಿಸಾಕಿಬಿಡಬೇಕು ಅಷ್ಟೇ~  ಎಂದರಿವರು `ಹಾಗೆ ಮಾಡಲಾಗುವುದಿಲ್ಲ ಸರ್. ಇಷ್ಟೊಂದು ಒಳ್ಳೆಯ ಆಹಾರವನ್ನು ಬಿಸಾಡುವುದೇ?~ ಎಂದು ವಾದ ತೆಗೆದ ಮಾಣಿ.ನಿಧಾನವಾಗಿ ಮಾತು ಬೆಳೆಯುತ್ತಿತ್ತು. ಹೋಟೆಲ್‌ನ ಮಾಲೀಕ ವಿಷಯ ತಿಳಿದು ಯಾರಿಗೋ ಫೋನ್ ಮಾಡಿದ. ಐದೇ ನಿಮಿಷದಲ್ಲಿ ಅವರು ಬಂದರು. ಅವರನ್ನು ಸಾಮಾಜಿಕ ಪೊಲೀಸರು (ಸೋಶಿಯಲ್ ಪೊಲೀಸ್) ಎನ್ನುತ್ತಾರೆ.ಅವರು ಬಂದು ಈ ಸ್ನೇಹಿತರಿಗೆ ಹೇಳಿದರು, `ನೀವು ನಿಮಗೆ ಬೇಕಾದ್ದಕ್ಕಿಂತ ಹೆಚ್ಚು ಆಹಾರ ಆರ್ಡರ್ ಮಾಡಿ ತಪ್ಪು ಮಾಡಿದ್ದೀರಿ. ಈ ಆಹಾರ ವ್ಯರ್ಥವಾಗುವುದು ಸರಿಯಲ್ಲ. ಆದ್ದರಿಂದ ತಮಗಿಬ್ಬರಿಗೂ ತಲಾ ಐವತ್ತು ಯುರೋಗಳಷ್ಟು ದಂಡ ವಿಧಿಸಿದ್ದೇನೆ.~ಆಗ ಸ್ನೇಹಿತರಿಗೆ ಕೋಪ ಬಂತು. `ನಮಗೆ ದಂಡ ವಿಧಿಸುವುದೇಕೆ? ಇದರಿಂದ ಹೋಟೆಲ್‌ಗೆ ಯಾವ ನಷ್ಟವೂ ಆಗಿಲ್ಲವಲ್ಲ? ನಾವು ಆರ್ಡರ್ ಮಾಡಿದ ಪದಾರ್ಥಗಳಿಗೆ ಬಿಲ್ ಕೊಟ್ಟಿದ್ದೇವೆ. ತಿನ್ನದೇ ಬಿಟ್ಟ ಪದಾರ್ಥಕ್ಕೂ ಹಣ ಕಟ್ಟಿದ್ದೇವಲ್ಲ?~ ಎಂದು ವಾದ ಮಾಡಿದರು.ಆಗ ಸಾರ್ವಜನಿಕ ಪೋಲೀಸರು ಹೇಳಿದರು, `ನೀವು ಬಿಲ್ ನೀಡಿದ್ದು ಹೋಟೆಲ್‌ನವರು ನೀಡಿದ ಸೇವೆಗೆ. ಆದರೆ ಅದಕ್ಕೆ ಬಳಸಿದ, ಎಲ್ಲ ಆಹಾರದ ಪದಾರ್ಥಗಳು ದೇಶದ ಆಸ್ತಿ. ಅವುಗಳನ್ನು ದುರುಪಯೋಗ ಮಾಡುವಂತಿಲ್ಲ. ಇದನ್ನು ಸರಿಯಾಗಿ ಪ್ಯಾಕ್ ಮಾಡಿ ಅವಶ್ಯಕತೆ ಇದ್ದವರಿಗೆ ತಲುಪಿಸುವ ಖರ್ಚು ಈ ದಂಡದಲ್ಲಿ ಸೇರಿದೆ.~ ಸ್ನೇಹಿತರು ದಂಡ ಕಟ್ಟಿ ಬಂದರು.ನಾವು ನಮ್ಮ ಮದುವೆ ಮತ್ತಿತರ ಸಮಾರಂಭಗಳಲ್ಲಿ ಎಷ್ಟೊಂದು ಆಹಾರ ಪೋಲು ಮಾಡುತ್ತೇವಲ್ಲವೇ? ಕೆಲವೊಂದು ಸಂದರ್ಭಗಳಲ್ಲಂತೂ ರಾಶಿ ರಾಶಿ ಆಹಾರ, ಅಷ್ಟು ಚೆನ್ನಾಗಿ ಮಾಡಿದ ಆಹಾರ ಕೆಸರಿನಂತೆ ಬಿದ್ದಿರುತ್ತದೆ. ಹತ್ತಿರದ ಕಸದ ಗುಂಡಿಗಳು ತುಂಬಿ ಹೊರಸೂಸುತ್ತಿರುತ್ತವೆ.

 

ಹೀಗೆ ವ್ಯರ್ಥ ಮಾಡಿದ ಆಹಾರ ಕೇವಲ ಹಣವನ್ನು ದುಂದು ಮಾಡಿದಂತಲ್ಲ, ಅದನ್ನು ಬೆಳೆಸಲು ಶ್ರಮಪಟ್ಟ ರೈತನಿಗೆ ಮಾಡಿದ ಅಪಮಾನವೂ ಹೌದು. ನಮ್ಮ ದೇಶದಲ್ಲಿ ಹಸಿದು ಮುಷ್ಟಿ ಅನ್ನಕ್ಕಾಗಿ ಬಾಯಿ ತೆರೆದುಕೊಂಡಿರುವ ಅಷ್ಟೊಂದು ಜೀವಗಳಿರುವಾಗ ನಮ್ಮಲ್ಲಿ ಹಣವಿದೆಯೆಂದು ಹೀಗೆ ಆಹಾರವನ್ನು ಹಾಳು ಮಾಡುವುದು ಅಹಂಕಾರದ ಪರಮಾವಧಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.