ಶನಿವಾರ, ಜೂಲೈ 11, 2020
28 °C

ಈ ವಿನಾಯಕ ನಮ್ಮ ಕಾಲದ ವಿಭೀಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮಾಯಣದಲ್ಲಿ ರಾವಣನ ತಮ್ಮನಾದ ವಿಭೀಷಣ ಅಣ್ಣನ ವೈರಿಯ ಪರವಾಗಿ ಹೋರಾಡುತ್ತಾನೆ. ಇವತ್ತಿನ ಈ ಕಾಲದ ಒಂದು ಕೋರ್ಟ್ ಅವನು ಮಾಡಿದ ರಾಷ್ಟ್ರದ್ರೋಹಕ್ಕಾಗಿ ಮರಣದಂಡನೆಯನ್ನು ವಿಧಿಸಬಹುದಲ್ಲವೇ? ಆದರೆ ನಮಗೆ ವಿಭೀಷಣ ಒಬ್ಬ ಹೀರೋ.

ಸರ್ವಶಕ್ತನೆನ್ನಿಸಿಕೊಂಡ ತನ್ನ ಒಡಹುಟ್ಟಿದವನನ್ನೇ ತೊರೆದು ಸತ್ಯಕ್ಕಾಗಿ ನಿಂತ ಧೀರ. ಮಹಾಭಾರತದಲ್ಲಿನ ದುರ್ಯೋಧನ ಕಪಟಿ, ಕ್ರೂರಿ. ಅಸೂಯೆಯಿಂದ ತನ್ನ ದಾಯಾದಿಗಳನ್ನೇ ಕಾಡಿಗಟ್ಟಿದವನು. ಅವನ ತಮ್ಮ ದುಶ್ಯಾಸನ ದ್ರೌಪದಿಯ ಸೀರೆಯನ್ನೆಳೆದು ಮಾನಭಂಗ ಮಾಡಿದವನು. ಹೀಗಾಗುವಾಗ ಇಡೀ ಕುಟುಂಬದ ಹಿರಿಯನಾದ ಭೀಷ್ಮನಂಥ ಭೀಷ್ಮನೇ ಏನೂ ಮಾಡದೇ ಎಲ್ಲವನ್ನೂ ನೋಡುತ್ತ ಕೂತಿದ್ದ. ಸತ್ಯದ ಪರವಾಗಿ ಹೋರಾಡದೇ ಪಾಂಡವರ ವಿರುದ್ಧ ಮನಸ್ಸಿಲ್ಲದ ಮನಸ್ಸಿನಲ್ಲಿ ಹೋರಾಡಿದ. ಯಾವುದೋ ನೆವಕ್ಕಾಗಿ ಮುಳ್ಳಿನ ಮೇಲೆ ಮಲಗಿ ಯುದ್ಧ ಮುಂದುವರೆಸದೇ ಕೊನೆಯುಸಿರೆಳೆದ.

ಒಬ್ಬ ವ್ಯವಸ್ಥೆಯ ವಿರುದ್ಧ ಹೋರಾಡಿದವನು. ಸಾತ್ವಿಕ ಮನುಷ್ಯನಾದವನು. ಇನ್ನೊಬ್ಬ ಪರಮ ಸಾತ್ವಿಕ, ಆದರೆ ಆಗಿನ ವ್ಯವಸ್ಥೆಯ ಕಾನೂನಿನ ಪ್ರಕಾರ ಬಾಯಿಮುಚ್ಚಿ ಕೂತವನು. ಭಾರತದ ಪ್ರತಿಹಳ್ಳಿಯಲ್ಲಿಯೂ ಈ ಕಥೆಗಳು ಎತ್ತುವ ಸಮಸ್ಯೆಯನ್ನು ತಮ್ಮದೇ ರೀತಿಯಲ್ಲಿ ಸಾಮಾನ್ಯ ಜನ ವಿಶ್ಲೇಷಿಸುತ್ತಾರೆ.

ಇರುವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೆಲಸವೂ ಕಾಯುವ ಕೆಲಸವೂ ಎಷ್ಟೇ ಕಾಯ್ದುಕೊಂಡರೂ ಒಂದು ಅನೀತಿಯುತ ವ್ಯವಸ್ಥೆ ನಾಶವಾಗಬಹುದೆಂಬ ಅರಿವು ನಮ್ಮ ಎಲ್ಲ ಪುರಾಣ ಕಥೆಗಳಲ್ಲೂ ಇವೆ. ಸರ್ವರನ್ನೂ ಸಲಹುವ ಶ್ರೀಕೃಷ್ಣ ಯಾದವೀ ಕಲಹದ ನಂತರ ತಾಗಿದ ಒಂದು ಬಾಣದಿಂದ ಒಬ್ಬ ಸಾಮಾನ್ಯ ಮನುಷ್ಯನಂತೆ ಸಾಯುತ್ತಾನೆ. ಕಾಳಿದಾಸನ ರಘುವಂಶ ಕಾವ್ಯ ಆದರ್ಶ ರಾಜ್ಯವೊಂದನ್ನು ಕಟ್ಟುತ್ತ ಹೋದವರ ಕಥೆಯಾಗಿ ಮುಂದುವರೆದದ್ದು ಕೊನೆಯಲ್ಲಿ ತನ್ನ ಮುಖವನ್ನು ಜನರಿಗೆ ತೋರಲಾರದ ತೊನ್ನು ಹಿಡಿದ ಒಬ್ಬ ಅಗ್ನಿವರ್ಮ ರಾಜನಲ್ಲಿ ಕೊನೆಯಾಗುತ್ತದೆ. ಜನರಿಗೆ ಅವನು ತೋರುವುದು ಒಂದು ಮಹಡಿಯ ಮೇಲೆ ಕೂತು ಇನ್ನೂ ತೊನ್ನು ಹಿಡಿಯದ ತನ್ನ ಪಾದವನ್ನು ಮಾತ್ರ. ಎಲ್ಲ ರಾಜ್ಯಗಳೂ ಬೆಳೆಯುತ್ತವೆ. ಹಾಗೇ ನಾಶವಾಗುತ್ತವೆ. ಇದು ಪ್ರಪಂಚದ ಚರಿತ್ರೆ. ರವೀಂದ್ರನಾಥ ಟ್ಯಾಗೋರರು ರಚಿಸಿದ ರಾಷ್ಟ್ರಗೀತೆಯಲ್ಲಿ ನಾವು ಹಾಡದ ಸಾಲೊಂದಿದೆ. ‘ಪತನ ಅಭ್ಯುದಯ ಬಂಧುರ ಪಂಥ’ (ಏಳು ಬೀಳಿನಲ್ಲಿ ಸುಂದರವಾಗಿ ಇರುವ ಪಥದವಳೇ). ಭಾರತದ ಚರಿತೆಯನ್ನು ಗುರುದೇವರು ಪರಿಭಾವಿಸುವುದು ಹೀಗೆ.

ಮೇಲಿನೆಲ್ಲವನ್ನೂ ಒಟ್ಟಾಗಿ ಗ್ರಹಿಸಿದಾಗ ನಮಗನ್ನಿಸುವುದು ಆರ್ಥಿಕವಾಗಿ ಬೆಳೆಯುತ್ತಿರುವ ಇಂದಿನ ಭಾರತ ತನ್ನ ಅವಸಾನದ ಸ್ಥಿತಿಯನ್ನು ತಲುಪಿದೆ ಎಂದು. ಈ ಡೆವಲಪ್‌ಮೆಂಟ್‌ನಲ್ಲಿ ಬೆಳೆದು ನಿಂತ ಅಪಾರವಾದ ಮಧ್ಯಮ ವರ್ಗ ಭ್ರಷ್ಟಾಚಾರವನ್ನು ಭೀಷ್ಮನ ಸಂಕಟವಿಲ್ಲದೇ ಸಹಿಸಿಕೊಂಡಿದೆ. ಇಂಗಾಲಾಮ್ಲವನ್ನು ಇನ್ನೂ ಕುಡಿದು ಬದುಕಬಲ್ಲವೆಂಬ ಭರವಸೆಯಲ್ಲಿ ನಾವಿದ್ದೇವೆ. ಈ ಭೂಮಿ ನಾಶವಾಗುವುದು ನಮ್ಮ ಕಾಲದಲ್ಲಿ ಅಲ್ಲ ಎಂದು ನಾವೆಲ್ಲಾ ತಿಳಿದಂತಿದೆ. ಭ್ರಷ್ಟಾಚಾರವನ್ನಂತೂ ಯಾವುದೋ ಒಂದು ಪಕ್ಷಕ್ಕೆ ಹಿಡಿದ ಪಿಡುಗು ಎಂದು ತಿಳಿಯುವಂತೆಯೇ ಇಲ್ಲ. ದೆಹಲಿಯ ಸರ್ಕಾರದಲ್ಲಿ ನಾವು ಬರೆದು ತೋರಿಸಲಾರದಷ್ಟು ಸಂಖ್ಯೆಯ ಭ್ರಷ್ಟಾಚಾರದ ರಾಜ ಇದ್ದ. ಮಹಾಮಾತಿನ ಮಲ್ಲಿಯಾಗಿದ್ದ ಟೆಲಿವಿಷನ್ ತಾರೆಯೊಬ್ಬಳು ಈ ವ್ಯವಹಾರದಲ್ಲಿ ಭಾಗಿಯಾಗಿದ್ದಳು. ಅವಳೊಬ್ಬಳೇ ಅಲ್ಲ, ಎಷ್ಟು ಜನ ಮಾಧ್ಯಮದವರು ಇದರಲ್ಲಿ ಪಾಲುದಾರರಾಗಿದ್ದರೋ ನಮಗೆ ಗೊತ್ತಿಲ್ಲ. ಸತ್ಯದಂತೆ ಕಾಣುವ ಉಗ್ರ ಮಾತುಗಳ ಹಿಂದೆ ಭ್ರಷ್ಟಾಚಾರದ ರಾಜಕೀಯವೂ ನಮಗೆ ಅಹ್ಲಾದಕರವಾಗುವಂತೆ ಪ್ರತಿನಿತ್ಯ ಬಿತ್ತರವಾಗುತ್ತದೆ. ನಡುನಡುವೆ ನಮ್ಮ ಸಿನೆಮಾ ಲೋಕದ ಒಬ್ಬ ದೊಡ್ಡ ಹೀರೋ ಸಿಮೆಂಟ್ ಮಾರುತ್ತಾನೆ. ಅಥವಾ ಬಟ್ಟೆ ಮಾರುತ್ತಾನೆ.

ಇಂಥ ಲೋಕದಲ್ಲಿ ನಮ್ಮ ದೇಶದ ಅಧಃಪತನವನ್ನು ಸಹಿಸಲಾರದವರೂ ಇದ್ದಾರೆ. ಆಸೆಪಟ್ಟು ಟ್ರಾಕ್ಟರ್ ಕೊಂಡು ಸಾಲ ತೀರಿಸಲಾಗದೇ ವ್ಯವಸಾಯಕ್ಕೆಂದೇ ಕೊಂಡ ವಿಷವನ್ನು ಕುಡಿದು ಸಾಯುವ ರೈತರಿದ್ದಾರೆ. ಗುಡ್ಡಗಾಡಿನಲ್ಲಿ ವ್ಯವಸಾಯ ಗೊತ್ತಿಲ್ಲದ, ಕಾಡಿನಲ್ಲಿ ಬಿದ್ದದ್ದನ್ನೋ ಮಿಕ್ಕಿದ್ದನ್ನೋ ಆಯ್ದು ಬದುಕುವ ಗಿರಿಜನ ಆದಿವಾಸಿಗಳಿದ್ದಾರೆ. ಆರೋಗ್ಯಕರವಾದ ಗಾಳಿ ಮತ್ತು ನೀರು ಸೇವಿಸಿ ಬದುಕುವ ಇವರು ತಮ್ಮಷ್ಟಕ್ಕೆ ತಾವು ಬದುಕುವುದು ನಮ್ಮ ಡೆವಲಪ್‌ಮೆಂಟ್ ಎಕಾನಮಿಗೆ ಅಸಹನೀಯ. ಅವರು ತಮ್ಮ ದೇವರೆಂದುಕೊಂಡ ಗುಡ್ಡಬೆಟ್ಟಗಳಲ್ಲಿರುವ ಬಾಕ್ಸೈಟ್ ಅನ್ನು ಅಗೆದು ತೆಗೆಯುವ ವೇದಾಂತಿಗಳೂ ಇದ್ದಾರೆ. ತಮ್ಮ ಜೀವನದ ಕ್ರಮವನ್ನೇ ನಾಶಮಾಡುವ ಈ ಇಂಡಿಯಾ ತಮ್ಮ ದೇಶವೆಂದು ಇವರು ತಿಳಿಯುವುದಾದರೂ ಹೇಗೆ? ಇವರು ಬದುಕಲು ಹೋರಾಡುವುದು ರಾಷ್ಟ್ರದ್ರೋಹವಾಗಿ ಪರಿಣಮಿಸುತ್ತದೆ.

ಇಂಥವರನ್ನು ಕರೆಯಲು ನಾವೊಂದು ಶಬ್ದವನ್ನೂ ಹುಡುಕಿದ್ದೇವೆ. ಅದು ‘ನಕ್ಸಲೈಟ್’ ಎಂಬ ಶಬ್ದ. ರಾಕ್ಷಸ, ದಾನವ ಇತ್ಯಾದಿ ಶಬ್ದಗಳಂತೇ ಇದೊಂದು ಶಬ್ದ. ಇವರನ್ನು ಸಂಘಟಿಸಲು ಮಾವೋವಾದಿಗಳಾದ ನಕ್ಸಲೈಟ್ ನಾಯಕರೂ ಇದ್ದಾರೆ. ನಮ್ಮ ಮಧ್ಯಮವರ್ಗದಿಂದ ಬಂದವರೇ ಇವರು. ಇವರಲ್ಲೂ ಹಲವು ಉಪಜಾತಿಗಳಿವೆ. ಯಾವ ಹಿಂಸೆಯನ್ನು ಮಾಡಿಯಾದರೂ ಹೋರಾಡುವುದು ಸರಿ ಎನ್ನುವವರು ಕೆಲವರು. ಅನಗತ್ಯ ಹಿಂಸೆಯನ್ನು ಮಾಡಬಾರದು ಎನ್ನುವವರು ಕೆಲವರು. ಆದರೆ ದುಃಖದ ಸಂಗತಿ ಎಂದರೆ ಇವರು ನಂಬುವ ಮಾವೋ ಚೀನಾದಲ್ಲಿ ಸೃಷ್ಟಿಸಿದ್ದು ಅಮೆರಿಕದ ಕೋಕಾಕೋಲಾ ಸಂಸ್ಕೃತಿಯನ್ನೇ.

ಜನರು ತಮ್ಮ ಇಷ್ಟದಂತೆ ಬದುಕುವ ವಿಕೇಂದ್ರೀಕೃತವಾದ ವಿಭಿನ್ನತೆಯ ನಾಗರಿಕತೆ ಮಾವೋ ತತ್ವಕ್ಕೆ ಬೇಕಿಲ್ಲ. ಬೌದ್ಧ ಧರ್ಮದಲ್ಲಿ ನಂಬುವ ಟಿಬೆಟ್‌ನ ಸ್ವಾಯತ್ತತೆಯನ್ನು ಮಾವೋವಾದದ ಡೆವಲಪ್‌ಮೆಂಟ್ ಉಗ್ರತೆ ಸಹಿಸಲಾರದು. ಆದರೆ ಇವರ ವಿರುದ್ಧ ನಾವು ಮಾತಾಡುವುದು ಕಷ್ಟವಾಗುತ್ತಿದೆ. ಯಾಕೆಂದರೆ ಇವರ ವಿರೋಧಿಗಳಾದ ನಮ್ಮ ವ್ಯವಸ್ಥೆಯ ಮಹಾಪುರುಷರು ದೆಹಲಿಯಲ್ಲೂ ಜನರನ್ನು ದೋಚುತ್ತಿದ್ದಾರೆ. ಕಾಮನ್‌ವೆಲ್ತ್ ಆಟದಿಂದ ದುಡ್ಡು ಮಾಡುತ್ತಾರೆ. ಇದನ್ನು ಟೀಕಿಸುವ ವಿರೋಧ ಪಕ್ಷದವರು ಎಲ್ಲೆಲ್ಲೂ ಭ್ರಷ್ಟಾಚಾರವನ್ನೂ ಹಿಂದೂ ಸಂಸ್ಕೃತಿಯ ಹಿರಿಮೆಯನ್ನೂ ಬೆರೆಸಿದ ಕಾಕ್‌ಟೈಲ್ ಮಾಡಿ ಜನರಿಗೆ ಕುಡಿಸುತ್ತಿದ್ದಾರೆ.

ಈ ನಡುವೆ ಸಿಟಿಗಳಲ್ಲಿ ಬದುಕಿ ಧನ ಸಂಪಾದನೆ ಮಾಡುವ ಆಸೆಯಿಲ್ಲದ ಒಬ್ಬ ಮಕ್ಕಳ ವೈದ್ಯ ಈ ಆದಿವಾಸಿಗಳ ಮಧ್ಯೆ ಗಾಂಧಿ ನೆಚ್ಚಿದ ಬದುಕನ್ನು ಎತ್ತಿ ಹಿಡಿಯುತ್ತಲೇ ನಕ್ಸಲೈಟರ ಬಗ್ಗೆಯೂ ವಿಶ್ವಾಸವಿಟ್ಟುಕೊಂಡವನಂತೆ ಕಾಣುತ್ತಾನೆ. ಅದು ಸರಿಯೋ ತಪ್ಪೋ ಎನ್ನುವ ಪ್ರಶ್ನೆಗಿಂತ ಮುಖ್ಯವಾಗಿ ಈ ಎಲ್ಲ ಭ್ರಷ್ಟಾಚಾರವನ್ನೂ ಇಂಗಾಲಾಮ್ಲದ ಉತ್ಪನ್ನವನ್ನೂ ಬೆಂಬಲಿಸುವ ನಾವು ಅವನ ಪರವಾಗಿ ಮಾತನಾಡದಿದ್ದರೆ ನಾವೇ ಅಪರಾಧಿಗಳು ಎನ್ನುವುದನ್ನು ಮರೆಯುತ್ತೇವೆ. ಇದೊಂದು ರಾಜಕೀಯ ಪ್ರಶ್ನೆ ಮಾತ್ರವಲ್ಲ, ಬಹಳ ದೊಡ್ಡ ಅರ್ಥದಲ್ಲಿ ನೈತಿಕತೆ ಮತ್ತು ಧಾರ್ಮಿಕತೆಯ ಪ್ರಶ್ನೆಯೂ ಹೌದು.

ಮಾನವ ಹಕ್ಕುಗಳ ಹೋರಾಟಗಾರನಾಗಿಯೂ ಕರುಣಾಮಯಿಯಾಗಿಯೂ ಇರುವ ಒಬ್ಬ ವೈದ್ಯ ಜೈಲಿನಲ್ಲಿರುವ ನಕ್ಸಲ್ ನಾಯಕರನ್ನು ಭೇಟಿಯಾಗಿ ಅವರಿಗೆ ವೈಯಕ್ತಿಕವಾಗಿ ನೆರವಾಗುವುದು ಅಪರಾಧವೇ? ವಾಲ್ಟೇರ್ ಎಂಬ ಕ್ರಾಂತಿಕಾರ ಒಮ್ಮೆ ಹೇಳಿದ್ದ: ‘ನೀನು ಹೇಳುವುದನ್ನು ನಾನು ಒಪ್ಪುವುದಿಲ್ಲ. ಆದರೆ ನಿನಗೆ ಇರುವ ಏನನ್ನಾದರೂ ಹೇಳುವ ಹಕ್ಕನ್ನು ನಾನು ಬೆಂಬಲಿಸುತ್ತೇನೆ’.

ಹೀಗೆ ನೋಡಿದಾಗ ಡಾ. ವಿನಾಯಕ್ ಸೇನ್ ಮಾಡಿದ್ದು ಶಿಕ್ಷಾರ್ಹವೇ? ಇವತ್ತಿನ ಹೊಲಸಿನ ಮಧ್ಯೆ ವ್ಯವಸ್ಥೆಯನ್ನು ಬದಲಿಸುವ ಹಕ್ಕನ್ನೂ ಮತ್ತು ಉಪಾಯವನ್ನೂ ನಮ್ಮ ರಾಜ್ಯಾಂಗ ನಮಗೆ ಕೊಟ್ಟಿದೆ. ಆದರೆ ಈ ಚುನಾವಣೆಯ ಹಕ್ಕನ್ನು ನಮ್ಮ ಆಳುವ ವ್ಯವಸ್ಥೆ ಕುರೂಪಗೊಳಿಸಿದೆ. ಕೋಟ್ಯಂತರ ಹಣವನ್ನು ಖರ್ಚು ಮಾಡಿ ಓಟನ್ನು ಕೊಳ್ಳುವುದು ಶುರುವಾಗಿದೆ. ನಾವು ಹೆಮ್ಮೆ ಪಡುವ ನಮ್ಮ ನಜೀರ್ ಸಾಹೇಬರು ಸೃಷ್ಟಿ ಮಾಡಿದ ಪಂಚಾಯತ್ ರಾಜ್ ವ್ಯವಸ್ಥೆಯೂ ನಮ್ಮ ಕಣ್ಣೆದುರೇ ಭ್ರಷ್ಟಾಚಾರದಲ್ಲಿ ಕೊಳೆತು ಹೋಗುತ್ತಿದೆ. ಚುನಾವಣೆಯ ಮೂಲಕ ವ್ಯವಸ್ಥೆಯನ್ನು ಬದಲಾಯಿಸುವ ಸಾಧ್ಯತೆ ಉಳ್ಳ ಪ್ರಜಾತಂತ್ರ ವ್ಯವಸ್ಥೆ ನಿಷ್ಪ್ರಯೋಜಕ ಎನ್ನಿಸಿದಾಗ ಹಲವು ಬಗೆಯ ಹಿಂಸಾತ್ಮಕ ಕ್ರಾಂತಿ ಅನಿವಾರ್ಯವಾಗಿ ಹುಟ್ಟಿಕೊಳ್ಳುತ್ತದೆ ಎಂಬುದನ್ನು ತಿಳಿಯದವರಂತೆ ವರ್ತಿಸುವ ನಾವು ಒಂದೋ ಮೂರ್ಖರು ಅಥವಾ ಇರುವ ಎಲ್ಲ ಕೊಳಕನ್ನೂ ಪ್ರಜಾತಂತ್ರದ ನಾಟಕದ ಮುಖಾಂತರವೇ ಉಳಿಸಿಕೊಳ್ಳುವ ನಿಸ್ಸೀಮರು.

ನಮಗೆಲ್ಲ ಗೊತ್ತಿರುವ ಪ್ರಕಾರ ಡಾ.ಸೇನ್ ಪರಮ ಸಾತ್ವಿಕರೇ ಇರಬಹುದು. ಆದರವರು ಅಷ್ಟು ದೊಡ್ಡವರಲ್ಲ ಎಂದುಕೊಳ್ಳೋಣ. ನಮ್ಮಂತೆಯೇ ಸಾಮಾನ್ಯ ಸಂಸಾರಿ ಎಂದೂ ತಿಳಿಯೋಣ. ಆಗ ಕೂಡ ಅವರು ಜೈಲಿನಲ್ಲಿರುವ ನಕ್ಸಲ್ ನಾಯಕರ ಮಾನವ ಸಹಜ ಹಕ್ಕುಗಳಿಗೆ ಮಿಡಿಯುವುದು ತಪ್ಪೆಂದು ತಿಳಿಯುವುದು ನಾವು ನಮಗೇ ಮಾಡಿಕೊಳ್ಳುವ ಮೋಸವಾಗುತ್ತದೆ. ಸೇನ್ ಬಹಳ ದೊಡ್ಡವರು ಎನ್ನುವ ಕಾರಣಕ್ಕಾಗಿ ಮಾತ್ರ ಅವರ ಮೇಲಿನ ಆರೋಪ ಜೀವಾವಧಿ ಶಿಕ್ಷೆ ನೀಡುವಷ್ಟು ದೊಡ್ಡದಲ್ಲ ಎಂದು ತಿಳಿಯುವುದರಲ್ಲೇ ಒಂದು ವಿರೋಧಾಭಾಸ ಇದೆ. ಒಂದು ಸಾಮಾನ್ಯ ಸತ್ಯವನ್ನು ನಮಗೆ ಮನದಟ್ಟು ಮಾಡಲು ಬರುವಾತ ದೇವರ ಅವತಾರವೇ ಆಗಿರಬೇಕೆ? ನಮ್ಮ ನಿತ್ಯದ ಸಾಂಸಾರಿಕ ಜಗತ್ತಿನಲ್ಲೇ ಈಗಿನ ವ್ಯವಸ್ಥೆ ನೀತಿಬಾಹಿರವೆಂದು ನಮಗೆ ಅನ್ನಿಸಬೇಕಿತ್ತು.

ಆದರೆ ಇದು ನಮಗೆ ಮನದಟ್ಟಾಗದಂತೆ ನಮ್ಮ ಎಲ್ಲ ದೃಶ್ಯ ಮಾಧ್ಯಮಗಳೂ ಮಾಡಿವೆ. ರೈತರ ಆತ್ಮಹತ್ಯೆಯಿಂದ ಸೋಪಿನ ಮಾರಾಟಕ್ಕೆ ಜಿಗಿಯುತ್ತ ತಮ್ಮ ಮಾರಾಟ ಯಶಸ್ವಿಯಾಗಲು ಇನ್ನಷ್ಟು ಆಕರ್ಷಕ ಸುದ್ದಿಗಳಿಗೆ ಜಿಗಿಯುತ್ತ ಟೆಲಿವಿಷನ್‌ನಲ್ಲಿ ಕಾಣದ ದೃಶ್ಯಗಳಲ್ಲಿ ಮಲ್ಟಿ ನ್ಯಾಷನಲ್‌ಗಳನ್ನು ಬೆಂಬಲಿಸುವ ಹುನ್ನಾರದಲ್ಲಿರುವ ಮಾಧ್ಯಮಗಳಿಂದಾಗಿ ನಮ್ಮ ಮನೋಲೋಕ ಛಿದ್ರಛಿದ್ರವಾಗಿದೆ. ಅಯ್ಯೋ ಪಾಪ! ಛೇ! ಎಂದುಕೊಳ್ಳುವಷ್ಟರಲ್ಲಿ ತೃಪ್ತಿ ಪಡುವಂತಾಗಿದೆ.

ರಾವಣ ರಾಜ್ಯದಲ್ಲಿ ಅವನ ತಮ್ಮನೇ ಆದ ವಿಭೀಷಣ ಮಾಡಿದ್ದು ಸರಿ ಎಂದು ತಿಳಿಯುವ ನಮ್ಮ ಭಾರತದ ಜನ ವ್ಯವಸ್ಥೆಯನ್ನು ಬುಡಮೇಲು ಮಾಡುವುದೆಂದರೆ ರಾಷ್ಟ್ರದ್ರೋಹ ಎಂದು ತಿಳಿಯಬೇಕಾಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.