ಶನಿವಾರ, ಜನವರಿ 18, 2020
22 °C

ಎಎಪಿ ಗೆಲುವಿಗೆ ಆರ್ಥಿಕ ವಿದ್ಯಮಾನಗಳ ಕೊಡುಗೆ

ಡಿ. ಮರಳೀಧರ Updated:

ಅಕ್ಷರ ಗಾತ್ರ : | |

ಎಎಪಿ ಗೆಲುವಿಗೆ ಆರ್ಥಿಕ ವಿದ್ಯಮಾನಗಳ ಕೊಡುಗೆ

ಕಳೆದ ಭಾನುವಾರ (ಡಿ.8) ಪ್ರಕಟವಾದ ದೆಹಲಿ ವಿಧಾನಸಭೆ ಚುನಾವಣಾ ಫಲಿ­ತಾಂಶವು, ಎಲ್ಲ ರಾಜಕೀಯ ವಿಶ್ಲೇಷಕರನ್ನು ತಬ್ಬಿಬ್ಬುಗೊಳಿಸಿ, ಸೂಕ್ತ  ವಿವರಣೆ ನೀಡಲು ಒದ್ದಾ­ಡುವಂತೆ ಮಾಡಿತ್ತು. ಆಮ್ ಆದ್ಮಿ ಪಕ್ಷವು ರಾಜಕೀಯ ರಂಗಪ್ರವೇಶದ ಮೊದಲ ಯತ್ನದ­ಲ್ಲಿಯೇ ಅಭೂತಪೂರ್ವ ಯಶಸ್ಸು ದಾಖಲಿಸಿ­ರುವುದು ಅನೇಕ ರಾಜಕಾರಣಿಗಳು ನಿದ್ದೆಗೆಡು­ವಂತೆ ಮಾಡಿದೆ.ಮುದ್ರಣ, ವಿದ್ಯುನ್ಮಾನ, ಡಿಜಿಟಲ್ ಮಾಧ್ಯ­ಮ­ಗಳೂ ಈ ಅನಿರೀಕ್ಷಿತ ವಿದ್ಯಮಾನವನ್ನು ನಿರ್ಲಕ್ಷಿಸುವಂತಿರಲಿಲ್ಲ. ಚರ್ಚೆಗಳಂತೂ ಕೊನೆ­ಮೊದಲಿಲ್ಲದೇ ನಡೆದವು. ಅಂತರರಾ­ಷ್ಟ್ರೀಯ ಮಾಧ್ಯಮ­ಗಳೂ ಈ ಬೆಳವಣಿಗೆಯನ್ನು ಅಚ್ಚರಿ­ಯಿಂದಲೇ ವರದಿ ಮಾಡಿದವು.  ಒಂದು ವಾರ ಕಳೆದರೂ ಫಲಿತಾಂಶಕ್ಕೆ ಸಂಬಂಧಿ­ಸಿದಂತೆ ಭಾವೋ­ದ್ವೇಗದ ತೀವ್ರತೆ ಮತ್ತು ಅನಿಶ್ಚಿತತೆ ಇನ್ನೂ ಕೊನೆಗೊಂಡಿಲ್ಲ. ದೆಹಲಿ ಬೆಳವಣಿಗೆಗಳು ಮಾಧ್ಯಮ­ಗಳಲ್ಲಿ ಪ್ರತಿದಿನವೂ ವರದಿಯಾ­ಗುತ್ತಲೇ ಇವೆ.ರಾಜಕೀಯಕ್ಕೆ ಹೊಸಬರಾಗಿದ್ದ ಅರವಿಂದ್ ಕೇಜ್ರಿವಾಲ್ ಸ್ಥಾಪಿಸಿದ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿ ವಿಧಾನಸಭೆಯ ಒಟ್ಟು 70 ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಯಶಸ್ಸು ದಾಖಲಿಸಿದೆ. 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ತನ್ನದೇ ಆದ ಭದ್ರ ಕೋಟೆಯಲ್ಲಿ ಕೇವಲ 8 ಸ್ಥಾನಗಳನ್ನು ಗೆಲ್ಲುವ ಮೂಲಕ ದೂಳಿ­ಪಟವಾಗಿದೆ. ಬಿಜೆಪಿಯು 32 ಸ್ಥಾನಗಳನ್ನು ತನ್ನ ಬುಟ್ಟಿಗೆ  ಹಾಕಿಕೊಳ್ಳುವ ಮೂಲಕ ಉತ್ತಮ ಸಾಧನೆ ದಾಖಲಿಸಿದೆ.ಈ ಬೆಳವಣಿಗೆಯು ಚತುರ ರಾಜಕೀಯ ವಿಶ್ಲೇಷಕರು ಎಂದು ತಮ್ಮನ್ನು ತಾವೇ ಕರೆಯಿಸಿ­ಕೊಳ್ಳು­ವವರು ಕೂಡ ತಮ್ಮ ಮಾತುಗಳನ್ನು ತಾವೇ ನುಂಗಿಕೊಳ್ಳುವಂತೆ ಮಾಡಿದೆ. ರಾಜ­ಕೀಯ ಘಟಾನುಘಟಿಗಳನ್ನು ಆತ್ಮಾವ­ಲೋ­ಕನ ಮಾಡಿಕೊಳ್ಳಲು ಪ್ರಚೋದನೆ ನೀಡಿದೆ. ಐದಾರು ತಿಂಗಳಲ್ಲಿ ಬರಲಿರುವ ಲೋಕಸಭೆ ಚುನಾ­ವ­ಣೆಯ ಮೇಲೆ ಈ ಫಲಿತಾಂಶವು ಪರಿಣಾಮ ಬೀರಲಿರುವುದರಿಂದ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ತಳಮಳ ಆರಂಭಗೊಂಡಿದೆ.ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಹೊಸ ಬೆಳವಣಿಗೆಗೆ ಅನೇಕ ಕಾರಣಗಳು ಇರುವುದು ನಿಜವಾದರೂ, ಆಮ್ ಆದ್ಮಿ ಪಕ್ಷದ ಪರ ಜನರು ಹೆಚ್ಚು ಒಲವು ತೋರಿರುವುದಕ್ಕೆ ಆರ್ಥಿಕ ವಿದ್ಯಮಾನಗಳು ಅದರಲ್ಲೂ ವಿಶೇಷ­ವಾಗಿ ಹಣದುಬ್ಬರ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತು ಮಿತಿ ಮೀರಿದ ಭ್ರಷ್ಟಾಚಾರದ ಕೊಡುಗೆ ಹೆಚ್ಚಿಗೆ ಇದೆ.ವ್ಯವಸ್ಥೆಯ ವಿರುದ್ಧ ಜನರ ಆಕ್ರೋಶ ಅದೆಷ್ಟರ ಮಟ್ಟಿಗೆ ಮಡುಗಟ್ಟಿದೆ ಎಂದರೆ, ಸರ್ಕಾರವನ್ನು ದಂಡಿಸಲು ಮತ್ತು ಪ್ರಜಾ­ಪ್ರಭುತ್ವದ ಶಕ್ತಿ -ಸಾಮರ್ಥ್ಯ ಪ್ರದರ್ಶಿಸಲು ಆಮ್ ಆದ್ಮಿ ಪಕ್ಷವನ್ನು ಅವರು ಸೂಕ್ತ ಸಾಧನ­ವನ್ನಾಗಿ ಬಳಸಿ­ಕೊಂಡಿದ್ದಾರೆ. ಇತರ ರಾಜಕೀಯ ಪಕ್ಷಗಳಲ್ಲಿ ತಾವು ವಿಶ್ವಾಸ ಕಳೆದು­ಕೊಂಡಿರು­ವುದನ್ನು ಮತ್ತು ಹೊಸ ಪಕ್ಷದಲ್ಲಿ ವಿಶ್ವಾಸ ಇಟ್ಟಿರುವುದರ ಬಗ್ಗೆ ದೆಹಲಿಯ ಮತದಾರರು ಇಡೀ ದೇಶಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಸಾಕಷ್ಟು ನಿರೀಕ್ಷಿಸಿರುವು­ದಾಗಿಯೂ ಇಂಗಿತ ವ್ಯಕ್ತಪಡಿಸಿದ್ದಾರೆ.ಗರಿಷ್ಠ ಮಟ್ಟದ ಹಣದುಬ್ಬರದಿಂದ ಸಂಕಷ್ಟಕ್ಕೆ  ಒಳಗಾಗಿರುವ ಜನರು, ಬೆಲೆ ಏರಿಕೆ ಬಿಸಿಯಿಂದ ತಕ್ಷಣಕ್ಕೆ ನೆಮ್ಮದಿ ಸಿಗುವ ಸಾಧ್ಯತೆ ಇಲ್ಲದೆ ಭ್ರಮನಿರಸ­ನಗೊಂಡಿದ್ದಾರೆ. ನಾಲ್ಕೈದು ವರ್ಷ­ಗಳಲ್ಲಿ ಚಿಲ್ಲರೆ ಆಹಾರ ಹಣದುಬ್ಬರವು ಎರ­ಡಂಕಿಯಲ್ಲಿಯೇ ಮುಂದುವರೆದಿದೆ. ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮೆಟೊ ಬೆಲೆ­ಗಳು, ಪ್ರತಿಯೊಂದು ಕುಟುಂಬವು ಆಹಾ­ರಕ್ಕೆ ಮಾಡುವ ವೆಚ್ಚವನ್ನು ಹೆಚ್ಚಿಸಿವೆ. ಬೆಲೆಗಳು ಅದೆಷ್ಟರ ಮಟ್ಟಿಗೆ ನಾಗಾಲೋಟದಲ್ಲಿ ಇವೆ ಎಂದರೆ, ಮಧ್ಯಮ ವರ್ಗದ ಕುಟುಂಬಗಳೂ ತಮ್ಮ ತಿಂಗಳ ವೆಚ್ಚಕ್ಕೆ ಕಡಿವಾಣ ಹಾಕು­ವಂತಾಗಿದೆ. ದಿನ ಬಳಕೆಯ ಅವಶ್ಯಕ ಸರಕುಗಳ ಬಳಕೆಗೂ ಮಿತಿ ವಿಧಿಸುವಂತಾಗಿದ್ದು, ಪ್ರತಿ­ಯೊಂದಕ್ಕೂ ಪೈಸೆ ಪೈಸೆ ಲೆಕ್ಕ ಹಾಕು­ವಂತಾಗಿದೆ.  ಬಹುತೇಕ ಕುಟುಂಬಗಳ ಪಾಲಿಗೆ ಕೈಗೆಟುಕುವ ದರದಲ್ಲಿದ್ದ ಹಣ್ಣುಗಳು ಈಗ ದುಬಾರಿಯಾಗಿ ಪರಿಣಮಿಸಿವೆ. ಬೆಲೆ ಏರಿಕೆ ಪರಿಸ್ಥಿತಿ ಸಾಕಷ್ಟು ವಿಷಮಿಸಿದ್ದರೂ ಕೇಂದ್ರ ಸರ್ಕಾರ ಮಾತ್ರ ಪರಿಸ್ಥಿತಿ ಕೈಮೀರಿಲ್ಲ ಎಂದೇ ಸಮರ್ಥಿಸಿಕೊಳ್ಳುತ್ತಿದೆ.ಸೋಲಿನ ನಿಜವಾದ ಕಾರಣಗಳನ್ನು ತಿಳಿದುಕೊಳ್ಳಲು ಆತ್ಮಾವಲೋಕನ ಮಾಡಿಕೊಳ್ಳ­ಬೇಕಾದ ಕಾಂಗ್ರೆಸ್, ಬೆಲೆ ಏರಿಕೆಯ ಕಾರಣ ತಳ್ಳಿಹಾಕಿದ್ದು, ಪಕ್ಷದ ಸೋಲಿಗೆ ಕೆಲವರು ಸಂಚು ರೂಪಿಸಿದ್ದೇ ಕಾರಣ ಎಂದು ಹೇಳುವ ಮೂಲಕ ತನ್ನ ಅಹಂಕಾರ ಪ್ರದರ್ಶಿಸಿದೆ.

ಸರಕುಗಳ ಪೂರೈಕೆ ಪರಿಸ್ಥಿತಿಯನ್ನು ಸಮರ್ಥ­ವಾಗಿ ನಿಭಾಯಿಸದಿರುವುದು ಸರ್ಕಾರವನ್ನು ಕೊನೆಮೊದಲಿಲ್ಲದೇ ನಿರಂತರವಾಗಿ ಕಾಡುತ್ತಲೇ ಇದೆ. ಬೆಲೆ ಏರಿಕೆ ಪರಿಸ್ಥಿತಿಯನ್ನು ಸರ್ಕಾರ ನಿರ್ಲಕ್ಷಿ­ಸುತ್ತಲೇ ಬಂದಿದ್ದರೆ, ಇನ್ನೊಂದೆಡೆ ಭಾರತೀಯ ರಿಸರ್ವ್‌ ಬ್ಯಾಂಕ್ ಬೇಡಿಕೆ ನಿರ್ವಹ­ಣೆಯತ್ತ ಮಾತ್ರ ಗಮನ ಕೇಂದ್ರೀಕರಿಸಿದೆ. ಇದ­ನ್ನೆಲ್ಲ ನೋಡಿದರೆ ನನಗೆ ‘ರೋಂ ಹೊತ್ತಿ ಉರಿ­ಯುವಾಗ ನೀರೊ ದೊರೆ ಪಿಟೀಲು ಬಾರಿ­ಸು­ತ್ತಿದ್ದ..’ ಎನ್ನುವ ಲೋಕೋಕ್ತಿ ನೆನಪಾಗುತ್ತದೆ.ಆಮ್ ಆದ್ಮಿ ಪಕ್ಷವು ತನ್ನ ಚುನಾವಣಾ ಪ್ರಚಾರದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಹೆಚ್ಚು ಆದ್ಯತೆ ನೀಡಿತ್ತು. ಇಡೀ ಸರ್ಕಾರಿ ಆಡಳಿತ ಯಂತ್ರವನ್ನೇ ವ್ಯಾಪಕ­ವಾಗಿ ಆವರಿಸಿಕೊಂಡಿ­ರುವ, ಕ್ಯಾನ್ಸರ್ ನಂತೆ ಹಬ್ಬಿರುವ, ಜನಸಾಮಾ­ನ್ಯರಿಗೆ ಕನಿಷ್ಠ ಸೇವೆ ಒದಗಿಸುವಲ್ಲಿಯೂ ಮುಖ್ಯ ಅಡಚಣೆ­ಯಾಗಿರುವ ಭ್ರಷ್ಟಾ­ಚಾರದ ವಿರುದ್ಧ ಎಎಪಿ ಸಮರವನ್ನೇ ಸಾರಿತ್ತು. ದೆಹಲಿ ಆಡಳಿತ­ದಲ್ಲಿ ಹಾಸು ಹೊಕ್ಕಾಗಿರುವ ಭ್ರಷ್ಟಾಚಾರವೇ  ಕೇಜ್ರಿವಾಲ್ ಅವರು ಸಾರ್ವಜನಿಕ ಬದುಕು ಪ್ರವೇಶಿಸಲು ಮುಖ್ಯ ಪ್ರೇರಣೆಯಾಯಿತು.ಕೇಜ್ರಿವಾಲ್ ನೇತೃತ್ವದ  ಸ್ವಯಂ ಸೇವಾ ಸಂಘಟನೆ ‘ಪರಿವರ್ತನ್’, ಭ್ರಷ್ಟಾಚಾರಕ್ಕೆ ಸಂಬಂಧಿ­ಸಿದ ವಿಷಯಗಳಿಗಾಗಿ ಹೋರಾಟ ನಡೆಸುತ್ತಿತ್ತು. ಕ್ರಮೇಣ ಈ ಹೋರಾ­ಟವು ಅಣ್ಣಾ ಹಜಾರೆ ಅವರ ಜನ ಲೋಕಪಾಲ ಚಳವಳಿ ಜತೆ ತಳಕು ಹಾಕಿಕೊಂಡಿತು. ತಮ್ಮ ಗುರು ಅಣ್ಣಾ ಜತೆ ಗುರುತಿಸಿಕೊಂಡ ನಂತರ ಕೇಜ್ರಿವಾಲ್ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಪ್ರಚಾರ ಪಡೆದರು. ಕೇಜ್ರಿವಾಲ್ ನಡೆಸುತ್ತಿದ್ದ ಹೋರಾ­ಟವು  ರಾಷ್ಟ್ರೀಯ ಮಟ್ಟದಲ್ಲಿ ಲೋಕಪಾಲ ಸ್ಥಾಪನೆಗೆ ನಡೆದ ಚಳವಳಿಯ ಸಂದರ್ಭದಲ್ಲಿ ತನ್ನ ಪರಾಕಾಷ್ಠೆ ತಲುಪಿತು.ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಕೇಜ್ರಿವಾಲ್ ಹೋರಾಟವನ್ನು ನಿರ್ಲ­ಕ್ಷಿಸಿ, ರಾಜ­ಕೀಯ ಪ್ರವೇಶಿಸಲು ಸವಾಲು ಒಡ್ಡಿದವು. ಈ ಸವಾಲನ್ನು ಸ್ವೀಕರಿಸಿದ ಕೇಜ್ರಿವಾಲ್, ವ್ಯವಸ್ಥೆ ಒಳಗೆ ಇದ್ದು­ಕೊಂಡೇ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಲು ಆಮ್ ಆದ್ಮಿ ಪಕ್ಷ ಸ್ಥಾಪಿ­ಸಿದರು. ಅದರ ಪರಿಣಾಮ ಏನಾಯಿತು ಎನ್ನು­­ವುದನ್ನು ನಾವೆಲ್ಲ ಈಗ ಕಣ್ಣಾರೆ ಕಾಣುತ್ತಿದ್ದೇವೆ.ಈ ಚಳವಳಿಯು ರಾಜಕೀಯ ಪಕ್ಷವಾಗಿ ರೂಪುಗೊಂಡದ್ದು ಮತ್ತು ಭ್ರಷ್ಟಾಚಾರದಿಂದ ಕೊಳೆತು ನಾರುತ್ತಿರುವ ವ್ಯವಸ್ಥೆಯನ್ನು ಹೇಗೆ ಸ್ವಚ್ಛಗೊಳಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.ಭ್ರಷ್ಟಾಚಾರದ ನಿಯಂತ್ರಣ ವಿಷಯದಲ್ಲಿ ಭಾರತವು ವಿಶ್ವದ ಇತರ ದೇಶಗಳ ಸಾಲಿನಲ್ಲಿ ಕೊನೆ ಸ್ಥಾನದಲ್ಲಿ ಇದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್ ನ್ಯಾಷನಲ್ ನಡೆಸಿದ ಹೊಸ ಅಧ್ಯ­ಯನವು ತಿಳಿಸಿರುವುದು   ಇಲ್ಲಿ ಉಲ್ಲೇಖ­­ನೀಯ.ಆಮ್ ಆದ್ಮಿ ಪಕ್ಷವು ಎದುರಿಸಿದ ಮೊದಲ ಚುನಾವಣೆಯು ಅನೇಕ ಉತ್ತರಗಳ ಬದಲಿಗೆ ಹಲವಾರು ಪ್ರಶ್ನೆಗಳು ನಮ್ಮೆದುರು ಉದ್ಭವ­ಗೊಳ್ಳಲೂ ಕಾರಣವಾಗಿದೆ. ದೆಹಲಿ­ಯಲ್ಲಿ ಸರ್ಕಾರ ರಚನೆಯೂ ಅಂತಹ ಪ್ರಶ್ನೆಗಳಲ್ಲಿ ಒಂದಾಗಿದೆ.ರಾಜಕೀಯ ವಿಶ್ಲೇಷಕರು, ಪರಿ­ಣತರು ಮಾಮೂ­ಲಿನಂತೆ ಹಲವಾರು ಸಾಧ್ಯತೆಗಳ ಬಗ್ಗೆ ಊಹಾಪೋಹ ಮಾಡು­ತ್ತಿದ್ದಾರೆ. ಪ್ರಲೋಭನೆಗೆ ಒಳಗಾಗಲು ಆಮ್ ಆದ್ಮಿ ಪಕ್ಷ ಹಿಂದೇಟು ಹಾಕುತ್ತಿದೆ. ಅಂತಿಮ ನಿರ್ಧಾರಕ್ಕೆ ಬರದೇ ಗೊಂದ­ಲಕ್ಕೆ ಒಳ­ಗಾಗಿರುವ ಪಕ್ಷವು ಸರ್ಕಾರ ರಚನೆಯ  ಸಾಧ್ಯತೆಗಳಿಗಾಗಿ ಇನ್ನಷ್ಟು ಕಾಲಾವಕಾಶ ಕೋರಿದೆ.ಸಾಂಪ್ರದಾಯಿಕ ರಾಜಕೀಯ ವಿಧಿ ವಿಧಾನ­ಗಳನ್ನು ಉಪೇಕ್ಷಿಸುತ್ತಲೇ, ತನ್ನದೇ ಆದ ನಿಯಮ­ಗಳನ್ನು ಪಾಲಿಸು­ತ್ತಿರುವ ಆಮ್ ಆದ್ಮಿ ಪಕ್ಷದ ಸಾಧನೆಯು, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ­ಯಲ್ಲಿ ಸಾಕಷ್ಟು ಆಸಕ್ತಿದಾಯಕ ಬೆಳವಣಿಗೆ­ಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸರಳ ಮತ್ತು ಸ್ಪಷ್ಟ ತತ್ವಗಳನ್ನು ಅನುಸರಿ­ಸುತ್ತಿರುವ ಪಕ್ಷವು ಸಾಮಾನ್ಯ ನಾಗರಿಕರಲ್ಲಿ ಹೊಸ ಆಶಾಭಾವ ಮೂಡಿಸಿದೆ.ಒಟ್ಟಾರೆ ಈ ಬೆಳವಣಿಗೆಯು ಇಡೀ ದೇಶಕ್ಕೆ ಒಳಿತನ್ನು ಉಂಟು ಮಾಡಲಿ ಮತ್ತು ಉತ್ತಮ ಆಡಳಿತದ ಕಲ್ಪನೆ ಸಾಕಾರಗೊಳ್ಳಲಿ ಎಂದು ನಾವೆಲ್ಲ ಆಶಿಸುತ್ತ, ಆಮ್ ಆದ್ಮಿ ಪಕ್ಷಕ್ಕೆ ಶುಭ ಹಾರೈಸೋಣ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರತಿಕ್ರಿಯಿಸಿ (+)