ಗುರುವಾರ , ಫೆಬ್ರವರಿ 25, 2021
19 °C

ಎ.ಬಿ. ಬರ್ಧನ್ ಮತ್ತು ಕಮ್ಯುನಿಸ್ಟ್ ರ ಹೊಸ ದಿಕ್ಕು

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಎ.ಬಿ. ಬರ್ಧನ್ ಮತ್ತು ಕಮ್ಯುನಿಸ್ಟ್ ರ ಹೊಸ ದಿಕ್ಕು

ತಮ್ಮ 15ನೇ ವಯಸ್ಸಿನಲ್ಲೇ ಕಮ್ಯುನಿಸ್ಟ್ ಆಗಿ ಕೊನೆಯವರೆಗೂ ಕಮ್ಯುನಿಸ್ಟ್ ಆಗಿಯೇ ಉಳಿದ ಸಿಪಿಐನ ಚಿಂತಕ-ಕಾರ್ಯಕರ್ತ-ನಾಯಕ ಎ.ಬಿ. ಬರ್ಧನ್ ತಮ್ಮ ತೊಂಬತ್ತೊಂದನೆಯ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ. ಸದಾ ಸುದ್ದಿಯಲ್ಲಿರುವ ನಾಯಕರನ್ನಷ್ಟೇ ಗಮನಿಸುವ ನಾವು ಕಳೆದ ಕೆಲವು ದಶಕಗಳ ಇಂಡಿಯಾದ ರಾಜಕೀಯ ಇತಿಹಾಸದಲ್ಲಿ ಹಲಬಗೆಯ ಪರ್ಯಾಯ ಸರ್ಕಾರಗಳನ್ನು ರೂಪಿಸುವಲ್ಲಿ ಬರ್ಧನ್ ಥರದ ಗಂಭೀರ ಚಿಂತಕರು ಹಿನ್ನೆಲೆಯಲ್ಲಿ ನಿಂತು ಸ್ವಾರ್ಥವಿಲ್ಲದೆ ಕೆಲಸ ಮಾಡಿರುವುದನ್ನು ಸರಿಯಾಗಿ ಗಮನಿಸಿರುವುದಿಲ್ಲ.ವಿ.ಪಿ.ಸಿಂಗ್ ನಾಯಕತ್ವದ ಯುನೈಟೆಡ್ ಫ್ರಂಟ್ ಸರ್ಕಾರವನ್ನು ರೂಪಿಸುವಲ್ಲಿ ಬರ್ಧನ್ ಕೂಡ ಕೆಲಸ ಮಾಡಿದ್ದರು. ದೇವೇಗೌಡರು ಪ್ರಧಾನಿಯಾದ ಕಾಲಕ್ಕೆ ಹಲವು ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಸಿಪಿಎಂನ ಹರಕಿಷನ್ ಸಿಂಗ್ ಸುರ್ಜಿತ್ ಅವರ ಶ್ರಮದ ಜೊತೆಗೇ ಬರ್ಧನ್ ಶ್ರಮವೂ ಇತ್ತು.ಬರ್ಧನ್ ಹುಟ್ಟಿದ್ದು 25 ಸೆಪ್ಟೆಂಬರ್ 1925ರಂದು; ಭಾರತೀಯ ಕಮ್ಯುನಿಸ್ಟ್ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು 26 ಡಿಸೆಂಬರ್ 1925ರಂದು. ವಿದ್ಯಾರ್ಥಿ ದೆಸೆಯಲ್ಲೇ ಕಮ್ಯುನಿಸಮ್ಮಿಗೆ ಒಲಿದ ಬರ್ಧನ್ ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್’ ಸೇರಿದರು. ಆಗ ನಿಷೇಧಕ್ಕೊಳಗಾಗಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ಸದಸ್ಯರಾದ ಬರ್ಧನ್ ಟ್ರೇಡ್ ಯೂನಿಯನ್ ಚಳವಳಿಯಲ್ಲಿ ಭಾಗಿಯಾದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆದ ಬರ್ಧನ್ ತಮ್ಮ ಸುದೀರ್ಘ ಕಮ್ಯುನಿಸ್ಟ್ ಬದುಕಿಗೆ ಶೈಕ್ಷಣಿಕವಾಗಿ ಹಾಗೂ ಬೌದ್ಧಿಕವಾಗಿ ಸಜ್ಜಾಗಿದ್ದರು.ಹೋರಾಟಗಾರ ಬರ್ಧನ್ ಸ್ವಾತಂತ್ರಪೂರ್ವ ಭಾರತದಲ್ಲಿ ಎರಡು ವರ್ಷ ಹಾಗೂ ಸ್ವತಂತ್ರಭಾರತದಲ್ಲಿ ಎರಡು ವರ್ಷ ಜೈಲಿನಲ್ಲಿ ಕಳೆದರು. ಸಿಪಿಐ ಕಾರ್ಯದರ್ಶಿ ಇಂದ್ರಜಿತ್ ಗುಪ್ತ, ವಿ.ಪಿ.ಸಿಂಗ್ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾದ ಮೇಲೆ ಬರ್ಧನ್ 71ನೇ ವಯಸ್ಸಿನಲ್ಲಿ ಪಕ್ಷದ ಕಾರ್ಯದರ್ಶಿಯಾಗಿ 16 ವರ್ಷ ಕೆಲಸ ಮಾಡಿದರು. ತಮ್ಮ ಜೀವಿತದ ಕೊನೆಯ 30 ವರ್ಷಗಳ ಕಾಲ ಒಂದು ಕೊಠಡಿಯ ಮನೆಯಲ್ಲಿ ಸರಳವಾಗಿ ಬದುಕಿದ ಬರ್ಧನ್, ಕಮ್ಯುನಿಸ್ಟ್ ಸಿದ್ಧಾಂತ ಹಾಗೂ ಪಕ್ಷಕ್ಕೆ ಪೂರ್ಣವಾಗಿ ತಮ್ಮನ್ನು ಒಪ್ಪಿಸಿಕೊಂಡ ಬುದ್ಧಿಜೀವಿ ನಾಯಕರಾಗಿದ್ದರು.ಬರ್ಧನ್ ಥರದ ಕಮ್ಯುನಿಸ್ಟ್ ನಾಯಕರನ್ನು ನೆನೆಯುತ್ತಿರುವ ಈ ಸಂದರ್ಭದಲ್ಲಿ ಇಂಡಿಯಾಕ್ಕೆ ಮಾರ್ಕ್ಸ್‌ವಾದ ಹಿಂದಿಗಿಂತಲೂ ಹೆಚ್ಚು ಅಗತ್ಯ ಎಂಬುದನ್ನು ಇಂಡಿಯಾದ ಬುದ್ಧಿಜೀವಿ ವಲಯ, ರಾಜಕೀಯ ವಲಯ ಆಳವಾಗಿ ಚರ್ಚಿಸುವ ಅಗತ್ಯವಿದೆ. ಇವತ್ತು ಕ್ಯಾಪಿಟಲಿಸಂನ ಹೊಸ ರೂಪವಾದ ಕಾರ್ಪೊರೇಟಿಸಂ ತರುವ ಅಪಾಯಗಳನ್ನು ಕಮ್ಯುನಿಸ್ಟರಷ್ಟು ಸಮರ್ಥವಾಗಿ ವಿವರಿಸಬಲ್ಲ ಸಿದ್ಧತೆ ಇನ್ನಿತರ ಬಹುತೇಕ ಬುದ್ಧಿಜೀವಿಗಳಲ್ಲಿಲ್ಲ. ಹಿಂದೆ ಎನ್ರಾನ್ ಕಂಪೆನಿ ಅಮೆರಿಕ ಹಾಗೂ ಅರ್ಜೆಂಟೀನಾದ ಆರ್ಥಿಕತೆಯನ್ನೇ ಬುಡಮೇಲು ಮಾಡಿದ್ದನ್ನು ಬರ್ಧನ್ ವಿವರಗಳ ಸಮೇತ ವಿವರಿಸಿದ್ದರು. ಖಾಸಗಿ ಕಂಪೆನಿಗಳ ಜೊತೆ ಸರ್ಕಾರಗಳು ದೊಡ್ಡ ಮಟ್ಟದಲ್ಲಿ ಶಾಮೀಲಾದ ಮೇಲೆ ಭ್ರಷ್ಟಾಚಾರ ಸಾವಿರಾರು ಕೋಟಿಗಳನ್ನು ಮುಟ್ಟಿರುವುದನ್ನು, ಎನ್ರಾನ್ ಥರದ ಖಾಸಗಿ ಕಂಪೆನಿಗಳ ಭೀಕರ ಹಿಡಿತಗಳಿಂದ ಆಗುತ್ತಿರುವ ಅಪಾಯವನ್ನು ತೋರಿಸಿದ್ದರು. ಇದು ಇಂಥ ಅನೇಕ ಕಂಪೆನಿಗಳ ಪ್ರಾತಿನಿಧಿಕ ಕತೆಯಂತಿತ್ತು.ಈ ಅಂಕಣ ಬರೆಯುವ ವೇಳೆಗೆ ಕಮ್ಯುನಿಸ್ಟ್ ನಾಯಕ ಸಿದ್ಧನಗೌಡ ಪಾಟೀಲರು ಕೊಟ್ಟ ಬರ್ಧನ್ ಅವರ ‘ಕ್ರೈಸಿಸ್ ಆಫ್ ಕಾರ್ಪೊರೇಟ್ ಕ್ಯಾಪಿಟಲಿಸಂ’ ಹಾಗೂ ‘ಕ್ಲಾಸ್, ಕ್ಯಾಸ್ಟ್, ರಿಸರ್ವೇಷನ್ ಅಂಡ್ ಸ್ಟ್ರಗಲ್ ಎಗೈನ್ಸ್ಟ್ ಕ್ಯಾಸ್ಟಿಸಂ’ ಪುಸ್ತಕಗಳನ್ನು ಓದುತ್ತಿರುವಂತೆ ಇಂಡಿಯಾದ ಕಮ್ಯುನಿಸ್ಟ್ ಚಿಂತನೆ ಕಳೆದ ಕೆಲವರ್ಷಗಳಲ್ಲಿ ಪಡೆದಿರುವ ಹೊಸ ತಿರುವುಗಳು ಅರಿವಾಗತೊಡಗಿದವು. ಮೀಸಲಾತಿಯಲ್ಲಿ ಜಾತಿ, ವರ್ಗಗಳನ್ನು ಏಕಕಾಲಕ್ಕೆ ಗಣನೆಗೆ ತೆಗೆದುಕೊಳ್ಳಬೇಕಾದ ಅಗತ್ಯವನ್ನು ಕುರಿತು ಬರ್ಧನ್ ಬರೆಯುತ್ತಾರೆ. ಮಂಡಲ್ ವರದಿಯ ಕಾಲದಲ್ಲೂ ಸಿಪಿಐ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದನ್ನು ಸ್ಪಷ್ಟವಾಗಿ ಸಮರ್ಥಿಸಿತ್ತು. ಈ ಬಗೆಯ ಚಿಂತನೆಯ ತಿರುವುಗಳಿಗೆ ಸಿಪಿಐ ಆಗ ಸರ್ಕಾರದ ಭಾಗವಾಗಿದ್ದುದೂ ಕಾರಣವಿರಬಹುದು. ‘ಇವತ್ತು ಎಡಪಂಥ ಉಳಿಯಬೇಕಾದರೆ ಅದು ತನ್ನನ್ನು ತಾನು ಮರುಶೋಧಿಸಿಕೊಳ್ಳಬೇಕು, ಬದಲಾಗಬೇಕು ಹಾಗೂ ಕಾಲದ ವಾಸ್ತವಗಳಿಗೆ ಒಡ್ಡಿಕೊಳ್ಳಬೇಕು’ ಎನ್ನುತ್ತಿದ್ದ ಬರ್ಧನ್, ಈ ಕಾಲದ ಸಮ್ಮಿಶ್ರ ಸರ್ಕಾರಗಳಲ್ಲಿ ಕಮ್ಯುನಿಸ್ಟರು ಭಾಗಿಯಾಗಲು ತಕ್ಕ ತಾತ್ವಿಕತೆಯನ್ನು ರೂಪಿಸಿದವರಲ್ಲಿ ಮುಖ್ಯರು. ಆದ್ದರಿಂದಲೇ ಈಚಿನ ರಾಜಕೀಯ ಇತಿಹಾಸದಲ್ಲಿ ಕಮ್ಯುನಿಸ್ಟ್ ಪಕ್ಷಗಳು ಎಡವಿದ ಎರಡು ಘಟ್ಟಗಳಲ್ಲಿ ಬರ್ಧನ್ ತಮ್ಮ ಅಸಮಾಧಾನವನ್ನು ಸ್ಪಷ್ಟವಾಗಿ ಹೊರಗೆಡಹಿದ್ದರು.ಇಂಡೊ-ಅಮೆರಿಕನ್ ನ್ಯೂಕ್ಲಿಯರ್ ಡೀಲ್ ಸಂದರ್ಭದಲ್ಲಿ ಎಡಪಕ್ಷಗಳು ಯು.ಪಿ.ಎ. ಸರ್ಕಾರದ ಜೊತೆಗೆ ಸಂಬಂಧ ಕಡಿದುಕೊಂಡದ್ದು ತಪ್ಪು ಎಂದ ಎಡಪಂಥೀಯ ನಾಯಕರಲ್ಲಿ ಬರ್ಧನ್ ಮುಖ್ಯರು. ಆನಂತರ ಕಾಂಗ್ರೆಸ್ ಮತ್ತೆ ಚುನಾವಣೆ ಗೆದ್ದರೂ ಅದಕ್ಕಿದ್ದ ಅಷ್ಟಿಷ್ಟು ಎಡಪಂಥೀಯ ಛಾಯೆಯೂ ಹೊರಟು ಹೋಗಿತ್ತು.  1996ರಲ್ಲಿ ಸಿಪಿಎಂನ ಜ್ಯೋತಿ ಬಸು ಪ್ರಧಾನಮಂತ್ರಿಯಾಗುವುದನ್ನು ತಪ್ಪಿಸಿದ ಕಮ್ಯುನಿಸ್ಟ್ ಪಕ್ಷಗಳ ನಿಲುವನ್ನೂ ಬರ್ಧನ್ ತಪ್ಪು ಎಂದಿದ್ದರು. ‘ಕಮ್ಯುನಿಸ್ಟ್ ಪಕ್ಷಗಳ ರಾಜಕೀಯ ಉಳಿದ ಪಕ್ಷಗಳ ರಾಜಕೀಯಕ್ಕಿಂತ ಭಿನ್ನವೆಂಬುದನ್ನು ತೋರಿಸಲು ಇದ್ದ ಅವಕಾಶ ತಪ್ಪಿಹೋಯಿತು’ ಎಂಬ ಬರ್ಧನ್ ಟೀಕೆಯಲ್ಲಿ ಕಮ್ಯುನಿಸ್ಟ್ ಪಕ್ಷಗಳು ತಮ್ಮ ಪೆಡಸುಧೋರಣೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸೂಚನೆಗಳಿದ್ದವು.ಕಮ್ಯುನಿಸ್ಟ್ ಪಕ್ಷಗಳಲ್ಲಿ ನಾಯಕರ ಅಭಿಪ್ರಾಯ ಯಾವುದು, ಪಕ್ಷದ ನಿಲುವು ಯಾವುದು ಎಂದು ವಿಂಗಡಿಸುವುದು ಕಷ್ಟ. ಆದ್ದರಿಂದ ಬರ್ಧನ್ ನಿಲುವು ಸಿಪಿಐನ ನಿಲುವೂ ಆಗಿರಬಹುದು. ಅದೇನೇ ಇದ್ದರೂ ಬದಲಾಗುತ್ತಿರುವ ಕಮ್ಯುನಿಸ್ಟ್ ಪಕ್ಷಗಳ ಹೊಸ  ಮಾದರಿಯ ಪ್ರತಿನಿಧಿಯಾಗಿ ಕಳೆದ ಕೆಲವು ವರ್ಷಗಳಲ್ಲಿ ಬರ್ಧನ್ ಕಾಣಿಸುತ್ತಿದ್ದರು.  2015ರಲ್ಲಿ ಅವರು ಸಿದ್ಧಪಡಿಸಿದ ‘ಪ್ರೋಗ್ರಾಮ್ ಆಫ್ ದಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ’ ಕಳೆದ ದಶಕಗಳಲ್ಲಿ ಕಮ್ಯುನಿಸ್ಟ್ ಚಿಂತನೆ ಹೊಸ ದಿಕ್ಕಿಗೆ ಹೊರಳಿರುವುದನ್ನು ದಾಖಲಿಸುತ್ತದೆ.21ನೇ ಶತಮಾನದಲ್ಲಿ ಇಂಡಿಯಾದ ಸನ್ನಿವೇಶದ ಸ್ಥಿತಿಗಳು, ಅಗತ್ಯಗಳು, ಸಂಸ್ಕೃತಿ, ಸಾಮಾಜಿಕ ರಚನೆಗಳು ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾರ್ಕ್ಸಿಸ್ಟ್- ಲೆನಿನಿಸ್ಟ್ ಸಿದ್ಧಾಂತ ರೂಪಿಸಿಕೊಳ್ಳಬೇಕಾಗಿದೆ ಎಂದು ಈ ಪ್ರಣಾಳಿಕೆ ಘೋಷಿಸುತ್ತದೆ. ಅಂತರರಾಷ್ಟ್ರೀಯ ವಿದ್ಯಮಾನ, ರೈತರ ಆತ್ಮಹತ್ಯೆ, ಮೀಸಲಾತಿ ಮುಂತಾಗಿ ಈ ಕಾಲದ ಬಿಕ್ಕಟ್ಟುಗಳ ಬಗ್ಗೆ ಹೊಸ ಕಾರ್ಯಕ್ರಮ, ಪರಿಹಾರವನ್ನು ಪ್ರಣಾಳಿಕೆ ಮಂಡಿಸಲೆತ್ನಿಸಿದೆ.ಕಳೆದ 30 ವರ್ಷಗಳಲ್ಲಿ ವರ್ಗದ ಕಲ್ಪನೆಯೇ ಬದಲಾಗಿರುವುದನ್ನು ಈ ಪ್ರಣಾಳಿಕೆ ಗುರುತಿಸಿರುವುದನ್ನು ನೋಡಿದರೆ, ಕಾಲಕಾಲದ ಸ್ಥಳೀಯ ಅನುಭವಗಳ ಆಧಾರದ ಮೇಲೆ ಕಮ್ಯುನಿಸ್ಟ್ ಪಕ್ಷಗಳು ಬದಲಾಗುತ್ತಿರುವ ಸ್ಪಷ್ಟ ಸೂಚನೆಗಳು ಕಾಣುತ್ತವೆ. ಈ ಚಿಂತನೆಗಳ ಹಿಂದೆ ಬರ್ಧನ್ ಅವರ ಅಧ್ಯಯನ ಹಾಗೂ ಕಮ್ಯನಿಸಮ್ಮನ್ನು ಈ ಕಾಲಕ್ಕೆ ಸಜ್ಜುಗೊಳಿಸುವ ತುಡಿತಗಳಿವೆ. ‘ಜಾತಿಪದ್ಧತಿ ಎನ್ನುವುದು ಶ್ರಮದ ವಿಭಜನೆಯಲ್ಲ; ಶ್ರಮಿಕರ ವಿಭಜನೆ; ಜಾತಿ ಪ್ರಜ್ಞೆ ತೊಡೆಯದಿದ್ದರೆ ಬಡ ಶ್ರಮಿಕರು ಒಗ್ಗೂಡಿ ಹೋರಾಡಲಾರರು’ ಎಂದು ಅಂಬೇಡ್ಕರ್ 30ರ ದಶಕದಲ್ಲೇ ಹೇಳಿದ್ದರು. 90ರ ದಶಕದ ಹೊತ್ತಿಗೆ ಜಾತಿವಿನಾಶ ಕುರಿತು ಬರ್ಧನ್ ಇದೇ ನಿಲುವು ತಲುಪಿದ್ದರು.ಸರ್ಕಾರಿರಂಗದಂತೆ  ಖಾಸಗಿರಂಗದಲ್ಲೂ ಮೀಸಲಾತಿಯ ಅಗತ್ಯ ಕುರಿತು ಚಿಂತಿಸಿದ ಆರಂಭದ ಚಿಂತಕರಲ್ಲಿ ಬರ್ಧನ್ ಕೂಡ ಇದ್ದರು. ಬರ್ಧನ್ ಥರದವರಲ್ಲಿ ಬೆಳೆದ ಕಮ್ಯುನಿಸ್ಟ್ ಚಿಂತನೆಯ ಮಹತ್ವ ನೆನೆಯುತ್ತಿರುವಂತೆ, ಕಾರ್ಲ್ ಮಾರ್ಕ್ಸ್ ಸಮಾಜದ ರಚನೆಯ ಸ್ವರೂಪವನ್ನು ವಿವರಿಸಿದ ನಂತರ ಅನೇಕ ಪ್ರಗತಿಪರ ಸಿದ್ಧಾಂತಗಳು ಜಗತ್ತಿನಾದ್ಯಂತ ರೂಪುಗೊಂಡ ಇತಿಹಾಸ ಕೂಡ ಕಣ್ಣ ಮುಂದೆ ಬರುತ್ತದೆ. ಸಮಾಜದ ಆರ್ಥಿಕ ತಳರಚನೆಯು ಸಮಾಜದ ಮೇಲುರಚನೆಯಲ್ಲಿರುವ ಸಂಸ್ಕೃತಿ, ಕಾನೂನು, ಧರ್ಮ, ನೈತಿಕತೆ ಮುಂತಾದ ಅನೇಕ ಅಂಶಗಳನ್ನು ನಿಯಂತ್ರಿಸುವುದನ್ನು ಮಾರ್ಕ್ಸ್ ತೋರಿಸಿದ ಮೇಲೆ ಸಾಮಾಜಿಕ ಸಿದ್ಧಾಂತಗಳ ದಿಕ್ಕು ಬದಲಾಯಿತು.ವರ್ಗಹೋರಾಟ, ಸ್ತ್ರೀವಾದ, ಸಮಾಜವಾದ, ಅಂಬೇಡ್ಕರ್‌ವಾದ, ಆಧುನಿಕ ವಿಚಾರವಾದ, ಜಾತ್ಯತೀತವಾದಗಳಿಂದ ಹಿಡಿದು ಸಾಹಿತ್ಯ ವಿಮರ್ಶೆಯ ಮಾರ್ಗಗಳು, ಸಬಾಲ್ಟರ್ನ್ ಚಿಂತನೆ, ಗ್ರಾಮ್ಷಿ, ಫುಕೋ ಚಿಂತನೆಗಳು… ಇವುಗಳ ಮೂಲಕ ಮಾರ್ಕ್ಸ್‌ವಾದ  ಸದಾ ಬೆಳೆಯುತ್ತಾ ಬಂದಿದೆ. ಮಾರ್ಕ್ಸ್‌ವಾದದ ಜೊತೆಗಿನ ಸೂಕ್ಷ್ಮಭಿನ್ನಮತದಿಂದಲೂ ಹೊಸ ಚಿಂತನಾಮಾರ್ಗಗಳು ಹುಟ್ಟಿವೆ. ಇವತ್ತು ಒಂದಲ್ಲ ಒಂದು ಹಂತದಲ್ಲಿ ಮಾರ್ಕ್ಸ್‌ವಾದಿ ಚಿಂತನೆಗಳನ್ನು ಅರಿಯದವರು ವ್ಯವಸ್ಥೆಯನ್ನು ವಿಮರ್ಶಿಸುವ ದೊಡ್ಡ ಚಿಂತನೆಗಳನ್ನು ರೂಪಿಸಲಾರರು; ಗಂಭೀರ ಬುದ್ಧಿಜೀವಿಗಳಾಗಿ ವಿಕಾಸಗೊಳ್ಳಲಾರರು.ಹಾಗೆಯೇ, ಖಾಸಗೀಕರಣದ ಈ ಕಾಲದಲ್ಲಿ ಕೋಟ್ಯಂತರ ಉದ್ಯೋಗಿಗಳ, ಶ್ರಮಿಕರ ಹಿತಾಸಕ್ತಿಯನ್ನು ಕಮ್ಯುನಿಸ್ಟ್ ಸಂಘಟನೆಗಳಲ್ಲದೆ ಬೇರಾವ ಸಂಘಟನೆಗಳೂ ಕಾಯಲಾರವು. ಟ್ರೇಡ್ ಯೂನಿಯನ್ ಸಂಘಟನೆಗಳಿಲ್ಲದೆ ಖಾಸಗಿವಲಯದ ಉದ್ಯೋಗಿಗಳ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಲಿದೆ. ಇವತ್ತು ಇಂಡಿಯಾದ ಪಾರ್ಲಿಮೆಂಟ್, ವಿಧಾನಸಭೆ ಹಾಗೂ ವಿಧಾನ ಪರಿಷತ್ತುಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿರುವುದಕ್ಕೆ ಕಮ್ಯುನಿಸ್ಟ್ ಚಿಂತನೆಗಳಿಂದ ತರಬೇತಾದವರ, ಪ್ರಭಾವಿತರಾದವರ ಸಂಖ್ಯೆ ಕಡಿಮೆಯಾಗುತ್ತಿರುವುದೂ ಒಂದು ಕಾರಣ. ‘ಪ್ರಗತಿಪರ’ ಎನ್ನಿಸಿಕೊಳ್ಳಲು ಹಾತೊರೆಯುವ ಕಾಂಗ್ರೆಸ್, ಜೆಡಿಎಸ್‌, ಜೆಡಿಯು ಥರದ ಪಕ್ಷಗಳು ಹಾಗೂ ಸರ್ಕಾರಗಳು ಕಮ್ಯುನಿಸ್ಟ್ ಹಿನ್ನೆಲೆಯಿರುವ ನಾಯಕರನ್ನು ವಿಧಾನ ಪರಿಷತ್ತು ಅಥವಾ ಇನ್ನಿತರ ಬಗೆಯ ಯೋಜನೆಗಳನ್ನು ರೂಪಿಸಬಲ್ಲ ವೇದಿಕೆಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು; ಕಮ್ಯುನಿಸ್ಟರ ತಾತ್ವಿಕ ನೋಟಗಳ ಪ್ರಯೋಜನ ನಾಡಿಗೆ ದಕ್ಕುವಂತೆ ಮಾಡಬೇಕು.ಆರ್ಥಿಕ ವಿಚಾರಗಳ ಬಗ್ಗೆ, ಅಮೆರಿಕ ಹಾಗೂ ಇನ್ನಿತರ ಯುರೋಪಿಯನ್ ರಾಷ್ಟ್ರಗಳು ಇಂಡಿಯಾವನ್ನು ನವವಸಾಹತುವನ್ನಾಗಿ ಮಾಡುತ್ತಿರುವುದರ ಬಗ್ಗೆ ಕಮ್ಯುನಿಸ್ಟರಷ್ಟು ಸ್ಪಷ್ಟ ಅರಿವುಳ್ಳವರು ಇಂಡಿಯಾದಲ್ಲಿ ತೀರ ಕಡಿಮೆಯಿದ್ದಾರೆ ಎಂಬುದು ರಾಜಕೀಯ ಪಕ್ಷಗಳಿಗೆ ಅರ್ಥವಾಗಬೇಕು. ಮತೀಯವಾದದ ವಿರುದ್ಧ ಖಚಿತ ಸೈದ್ಧಾಂತಿಕ ನೆಲೆಯಲ್ಲಿ ಯೋಚಿಸುವವರು, ಅದರ ವಿರುದ್ಧ ನಿರಂತರವಾಗಿ ಕಾರ್ಯಕ್ರಮಗಳನ್ನು ಹೆಚ್ಚು ರೂಪಿಸುತ್ತಿರುವವರು ಕೂಡ ಕಮ್ಯುನಿಸ್ಟರೇ ಎಂಬುದನ್ನೂ ನಾವು ಅರಿಯಬೇಕು. ಈ ಕುರಿತು ಯೋಚಿಸುತ್ತಿರುವಾಗ, ತೊಂಬತ್ತರ ದಶಕದಲ್ಲಿ ಮತೀಯವಾದಿಗಳ ಅನೇಕ ಹುಸಿವಾದಗಳನ್ನು ಸೀತಾರಾಂ ಯೆಚೂರಿಯವರ ಒಂದು ಪುಟ್ಟ ಪುಸ್ತಕ ಅಂಕಿಅಂಶಗಳ ಸಮೇತ ಮುಖಾಮುಖಿಯಾಗಿದ್ದುದು ನೆನಪಾಗುತ್ತದೆ.ಹಾಗೆಯೇ, ದೇವೇಗೌಡರು ಪ್ರಧಾನಿಯಾಗಿದ್ದಾಗ ಸಿಪಿಎಂನ ಹರಕಿಷನ್ ಸಿಂಗ್ ಸುರ್ಜಿತ್ ದೇವೇಗೌಡರಿಗೆ ಮಾರ್ಗದರ್ಶಕರಾಗಿದ್ದುದು ಕೂಡ ನೆನಪಾಗುತ್ತದೆ. ಮನಮೋಹನ್‌ ಸಿಂಗರ ಯುಪಿಎ-1 ಕೊಂಚ ಉತ್ತಮವಾಗಿದ್ದಕ್ಕೆ ಕಮ್ಯುನಿಸ್ಟ್ ಸಖ್ಯವೂ  ಒಂದು ಕಾರಣವಾಗಿತ್ತು,  ಯುಪಿಎ-2 ದಾರಿ ತಪ್ಪಿದ್ದಕ್ಕೆ ಕಮ್ಯುನಿಸ್ಟ್ ನಿಯಂತ್ರಣವಿಲ್ಲದ್ದೂ ಕಾರಣವಾಗಿತ್ತು ಎನ್ನಿಸುತ್ತದೆ. ಇಂಡಿಯಾದ ಸರ್ಕಾರಗಳ ಒಳಹೊರಗೆ ಕಮ್ಯುನಿಸ್ಟ್ ಚಿಂತನೆಗಳು ಎಷ್ಟು ಅನಿವಾರ್ಯ, ಬರ್ಧನ್ ರೀತಿ ಖಚಿತ ಚೌಕಟ್ಟಿನಲ್ಲಿ ಚಿಂತಿಸಿ ಕಾಲಕಾಲಕ್ಕೆ ಅವನ್ನು ವ್ಯಾಖ್ಯಾನಿಸುವವರ ಅನುಭವ ಆಡಳಿತಕ್ಕೆ ಎಷ್ಟು ಮುಖ್ಯವೆಂಬುದೂ ಇದರಿಂದ ಸಾಬೀತಾಗುತ್ತದೆ.ಕೊನೆ ಟಿಪ್ಪಣಿ: ಬರ್ಧನ್ ಕಂಡ ಇಬ್ಬರು ಪ್ರಧಾನಿಗಳು ಕಮ್ಯುನಿಸ್ಟರು ಯುಪಿಎ ಸರ್ಕಾರಕ್ಕೆ ಬೆಂಬಲ ವಾಪಸ್ ತೆಗೆದುಕೊಂಡದ್ದಕ್ಕೆ ಮನಮೋಹನ್‌ ಸಿಂಗರಿಗೆ ಅಮೆರಿಕ ಬಗೆಗಿದ್ದ ಅತಿಪ್ರೀತಿಯೂ ಕಾರಣ ಎಂದು ಬರ್ಧನ್ ಹೇಳುತ್ತಿದ್ದರು. ಸಿಂಗ್ ಮತ್ತು ವಾಜಪೇಯಿ ನಡುವಣ ವ್ಯತ್ಯಾಸ ಕುರಿತು ಬರ್ಧನ್ ಹೇಳಿದ್ದನ್ನು ಸಬಾ ನಕ್ವಿ ನೆನಸಿಕೊಂಡಿದ್ದಾರೆ: ವಾಜಪೇಯಿ ಪ್ರಧಾನಿಯಾಗಿದ್ದಾಗ ಬರ್ಧನ್, ಸಿಪಿಎಂನ ಹರಕಿಷನ್ ಸಿಂಗ್ ಸುರ್ಜಿತ್ ಇಬ್ಬರನ್ನೂ ಕರೆದು ‘ಅಮೆರಿಕ ಇರಾಕ್‌ನಲ್ಲಿ ಮಾಡುತ್ತಿರುವ ಆಕ್ರಮಣದ ವಿರುದ್ಧ ಕಮ್ಯುನಿಸ್ಟರ ಪ್ರತಿಭಟನೆ ದುರ್ಬಲವಾಗಿದೆ; ಅದನ್ನು ಇನ್ನಷ್ಟು ತೀವ್ರಗೊಳಿಸಬೇಕು’ ಎಂದರು. ಆ ಘಟ್ಟದಲ್ಲಿ ಅಮೆರಿಕ ತಾನು ನಡೆಸುತ್ತಿದ್ದೇನೆಂದು ಹೇಳಿಕೊಳ್ಳುತ್ತಿದ್ದ ‘ಭಯೋತ್ಪಾದನೆಯ ವಿರುದ್ಧದ ಯುದ್ಧ’ದಲ್ಲಿ ‘ಇಂಡಿಯಾವೂ ಸೇರಿಕೊಳ್ಳಬೇಕು’ ಎಂದು ವಾಜಪೇಯಿಯವರ ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿದ್ದ ಒಂದು ಗುಂಪು ಒತ್ತಾಯಿಸುತ್ತಿತ್ತು. ಆ ಗುಂಪನ್ನು ಸುಮ್ಮನಾಗಿಸಲು ವಾಜಪೇಯಿ ತಮ್ಮೆದುರು ಈ ಕೋರಿಕೆ ಇಟ್ಟಿದ್ದನ್ನು ನೆನೆಸಿಕೊಳ್ಳುತ್ತಾ, ‘ಅಮೆರಿಕ ನಡೆಸುವ ಭಯೋತ್ಪಾದನೆಯ ಬಗ್ಗೆ ವಾಜಪೇಯಿಯವರಿಗೆ ಹೆಚ್ಚಿನ ಸ್ಪಷ್ಟತೆಯಿತ್ತು; ಈ ಸ್ಪಷ್ಟತೆ ಮನಮೋಹನ್‌ ಅವರಿಗಿರಲಿಲ್ಲ’ ಎಂದು ಬರ್ಧನ್ ಹೇಳಿದ್ದರು. ಆ ಸತ್ಯ ಕಾಲದ ಓಟದಲ್ಲಿ ಸ್ಪಷ್ಟವಾಗತೊಡಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.