ಶುಕ್ರವಾರ, ಮೇ 14, 2021
31 °C

ಕಳಚಿ ಬಿದ್ದಿರುವ ಕಿರೀಟ ಮತ್ತು ಯಾರಿಗೂ ಬೇಡದ ಕುರ್ಚಿ

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಕಳಚಿ ಬಿದ್ದಿರುವ ಕಿರೀಟ ಮತ್ತು ಯಾರಿಗೂ ಬೇಡದ ಕುರ್ಚಿ

ದು ಯಾರಿಗೂ ಬೇಡದ ಕುರ್ಚಿಯಾಗಿತ್ತು. ಅದರ ಮೇಲೆ ಕುಳಿತುಕೊಳ್ಳಲು ನಾನು ಒಲ್ಲೆ, ತಾನು ಒಲ್ಲೆ ಎನ್ನುವವರೇ ಜಾಸ್ತಿ ಇದ್ದರು. ಈಗ ಅದರ ಮೇಲೆ ಕುಳಿತಿರುವ ಹಿರಿಯ ಸದಸ್ಯ ಕಾಗೋಡು ತಿಮ್ಮಪ್ಪ ಅವರಿಗಾದರೂ ಎಷ್ಟು ಇಷ್ಟ ಇತ್ತೋ ಇಲ್ಲವೋ ಗೊತ್ತಿಲ್ಲ. ಮಂತ್ರಿ ಆಗುವುದಕ್ಕೆ ಪೈಪೋಟಿ ಮಾಡುವವರು ವಿಧಾನಸಭೆಯ ಅಧ್ಯಕ್ಷರಾಗಲು ಏಕೆ ಒಲ್ಲೆ ಎನ್ನುತ್ತಾರೆ? ಮಂತ್ರಿ ಪದವಿಯಲ್ಲಿ ಇರುವ ಆಕರ್ಷಣೆಗಳು ಏನು? ಸಭಾಧ್ಯಕ್ಷ ಪದವಿಯಲ್ಲಿ ಇರುವ ಅಡಚಣೆಗಳು ಏನು? ಒಂದು ಸಾರಿ ಸಭಾಧ್ಯಕ್ಷರಾಗಿ ಹೆಸರು ಮಾಡಿದ ರಮೇಶಕುಮಾರ್ ಅವರೂ ಇದು ಮುಳ್ಳಿನ ಕುರ್ಚಿ ಎನ್ನುವಂತೆಯೇ ಮಾತನಾಡಿದ್ದಾರೆ.

ಅಲ್ಲಿ ಕುಳಿತವರ ಕಷ್ಟಗಳು ಅದರ ಮೇಲೆ ಕುಳಿತವರಿಗೇ ಗೊತ್ತಿರಬೇಕು. ಆದರೆ, ಕರ್ನಾಟಕ ಈಗ ಹೊಸ ಅಧ್ಯಾಯಕ್ಕೆ ಮತ್ತೆ ತೆರೆದುಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಸಂಸದೀಯ ವ್ಯವಸ್ಥೆಯಲ್ಲಿ ಏನೇನು ಅನಾಹುತ ಆಗಬೇಕೋ ಅದೆಲ್ಲ ಆಗಿ ಹೋಗಿದೆ. ಈಗ ಸಭಾಧ್ಯಕ್ಷರಾಗಿ ಚುನಾಯಿತರಾಗಿರುವ, ಅತ್ಯಂತ ಹಿರಿಯರಾದ, ಎಲ್ಲರ ಗೌರವ ಗಳಿಸಿರುವ ಕಾಗೋಡು ತಿಮ್ಮಪ್ಪನವರು ಕರ್ನಾಟದ ವಿಧಾನಸಭೆಯ ಗೌರವವನ್ನು ಮತ್ತೆ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ.ಅದು ಸುಲಭದ ಹಾದಿಯೇನೂ ಅಲ್ಲ. ತಿಮ್ಮಪ್ಪನವರು ವಿಧಾನಸಭೆ ಪ್ರವೇಶಿಸಿದ ಕಾಲಕ್ಕೂ ಈಗಿನ ಕಾಲಕ್ಕೂ ಇರುವ ವ್ಯತ್ಯಾಸ ಭೂಮಿ ಆಕಾಶದಷ್ಟು. ವೈಕುಂಠ ಬಾಳಿಗಾ ಸಭಾಧ್ಯಕ್ಷರಾಗಿ ಹೆಸರು ಮಾಡಿರಲು ಆಗ ಇದ್ದ ಸದಸ್ಯರ ಮಟ್ಟ ಕೂಡ ಕಾರಣ. ಎಲ್ಲ ಕುರ್ಚಿಗಳು, ಅಧಿಕಾರಗಳು ಮರ್ಯಾದೆ ಕಳೆದುಕೊಂಡಿರುವ ಹಾಗೆ ಸಭಾಧ್ಯಕ್ಷರ ಕುರ್ಚಿಯೂ ಮರ್ಯಾದೆ ಕಳೆದುಕೊಂಡಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸಭಾಧ್ಯಕ್ಷರು ಸದನದ ಬಲಬದಿಯ ಅಧಿಕಾರ ಕೇಂದ್ರದ ಸನ್ನೆಗಳನ್ನು ಅರಿತುಕೊಂಡು ನಡೆಯಬೇಕಾಗಿ ಬಂದಿರುವುದರಿಂದ ಒಟ್ಟು ಸಂಸದೀಯ ವ್ಯವಸ್ಥೆಯೇ ದುರ್ಬಲಗೊಂಡಿರಬಹುದು.

ನಿಜ, ಯಾವ ಪಕ್ಷದವರೇ ಅಧಿಕಾರಕ್ಕೆ ಬರಲಿ ವಿಧಾನಸಭಾಧ್ಯಕ್ಷರು ತಮ್ಮ ಪಕ್ಷದಿಂದ ಆಯ್ಕೆಯಾದವರೇ ಇರಲಿ ಎಂದು ಬಯಸುತ್ತಾರೆ. ಏಕೆಂದರೆ ಬೇರೆ ಪಕ್ಷದವರು ಅಲ್ಲಿ ಕುಳಿತರೆ ಎಡವಟ್ಟು ಮಾಡಿಬಿಡಬಹುದು ಎಂಬ ಭಯ! ಒಂದು ಸಾರಿ ಆ ಕುರ್ಚಿಯಲ್ಲಿ ಕುಳಿತ ಮೇಲೆ ಅವರು ಪಕ್ಷದ ಹಂಗು ಕಳೆದುಕೊಳ್ಳುತ್ತಾರೆ ಎಂಬುದು ನಿಜವಾದರೂ ಆಂತರಿಕವಾಗಿ ಪಕ್ಷದ ನಿಷ್ಠೆ ಇದ್ದೇ ಇರುತ್ತದೆ. ಹಾಗೆಂದು ಸಭಾಧ್ಯಕ್ಷರು ಸರ್ಕಾರಕ್ಕೆ ಇರಿಸು ಮುರಿಸೂ ಮಾಡಬಾರದು; ವಿರೋಧ ಪಕ್ಷವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಸಂಸದೀಯ ವ್ಯವಸ್ಥೆಯಲ್ಲಿನ ಸಮತೋಲ ಮುರಿದು ಬೀಳುತ್ತದೆ.ಅನುಭವಿ ತಿಮ್ಮಪ್ಪನವರು ಈ ಸಮತೋಲನವನ್ನು ಸಾಧಿಸುತ್ತಾರೆ ಎಂದು ಅನಿಸುತ್ತದೆ. ಆದರೆ, ಅವರು ಸದನದ ಕಲಾಪ ಮಟ್ಟವನ್ನು ಹೇಗೆ ಎತ್ತರಿಸುತ್ತಾರೆ? ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ವಿರೋಧ ಪಕ್ಷದಲ್ಲಿ ಇದ್ದ ಕಾಗೋಡು ತಿಮ್ಪಪ್ಪ, ಕೋಣಂದೂರು ಲಿಂಗಪ್ಪ, ಎಸ್.ಬಂಗಾರಪ್ಪ ಬೆಂಕಿಯ ಉಂಡೆಗಳಂತೆ ಇದ್ದವರು. ಸಮಾಜವಾದಿ ಪಕ್ಷದ ಹಿನ್ನೆಲೆಯಿಂದ ಬಂದಿದ್ದ ಈ ಮೂವರ ಮಾತುಗಳಲ್ಲಿ ಆಳವಾದ ಕಾಳಜಿ ಇತ್ತು, ಸಿದ್ಧಾಂತದ ಶಕ್ತಿಯಿತ್ತು; ಓದಿನ ಬಲವಿತ್ತು. ತುರ್ತುಸ್ಥಿತಿ ಕಾಲದ ಪದ್ಯಗಳನ್ನು ಓದಿ ಹೇಳುತ್ತಿದ್ದ ಕಾಗೋಡು, ಕೋಣಂದೂರು ಸರ್ಕಾರ ಬೆಚ್ಚಿ ಬೀಳುವಂತೆ ಮಾಡುತ್ತಿದ್ದರು. ಈಗಲೂ ಹಾಗೆ ಮಾತನಾಡುವವರು ಇಲ್ಲ ಎಂದು ಅಲ್ಲ.

ಈ ವಿಧಾನಸಭೆಯಲ್ಲಿ ಮುಂದಿನ ಬೆಂಚಿನಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಇದ್ದಾರೆ. ವ್ಯಂಗ್ಯ, ಹರಿತ ಮಾತುಗಳಿಗೆ ಹೆಸರಾದ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಆಗುವುದಕ್ಕಿಂತ ವಿರೋಧ ಪಕ್ಷದ ನಾಯಕ ಆಗುವುದಕ್ಕೇ ಹೆಚ್ಚು ಲಾಯಕ್ಕಾದ ಬಿ.ಎಸ್.ಯಡಿಯೂರಪ್ಪ, ಸಮಾಧಾನಿ ಜಗದೀಶ್ ಶೆಟ್ಟರ್‌ಮುಂತಾದವರು ಸರ್ಕಾರ ತಪ್ಪು ಹೆಜ್ಜೆ ಇಟ್ಟರೆ ಅದನ್ನು ಅಡ್ಡಡ್ಡ ಸೀಳಿ ಹಾಕುವಂಥ ಸಮರ್ಥ ಮಾತುಗಾರರು. ಆದರೆ, ಈಗಿನ ಕಲಾಪದ ಸಮಸ್ಯೆ ಏನಾಗಿದೆ ಎಂದರೆ ಮುಂದಿನ ಸಾಲಿನ ನಾಯಕರ ರಾಜಕೀಯದ ಮಾತುಗಳಲ್ಲಿ ಹಿಂದಿನ ಸಾಲಿನ ಶಾಸಕರು ಕಳೆದು ಹೋಗಿದ್ದಾರೆ. ಈಗ ಮುಂದಿನ ಸಾಲಿನಲ್ಲಿ ಇರುವವರೆಲ್ಲ ಒಂದೇ ಸಾರಿ ಅಲ್ಲಿಗೆ ಜಿಗಿದು ಬಂದು ಕುಳಿತವರೇನು ಅಲ್ಲ. ಅದೆಲ್ಲ ಹಿರಿತನದಿಂದ ಬರುವ ಸ್ಥಾನಮಾನ. ಆದರೆ, ಅವರು ಕೂಡ ಹಿಂದಿನ ಸಾಲಿನಲ್ಲಿ ಇದ್ದಾಗ ಅನುಭವಿಸಿದ ಕಷ್ಟಗಳನ್ನು ಮರೆತು ಬಿಡುತ್ತಾರೆ.ಒಬ್ಬ ವ್ಯಕ್ತಿ ಶಾಸಕನಾಗುವುದು ಏಕೆ? ವಿಧಾನಸಭೆಯಲ್ಲಿ ಎಲ್ಲರೂ ಬಂದು ಕುಳಿತುಕೊಳ್ಳಲು ಸಾಧ್ಯವೇ? ವಿಧಾನಸಭೆ ಚುನಾವಣೆಯಲ್ಲಿ ಎಷ್ಟೆಲ್ಲ ಜನ ಸ್ಪರ್ಧಿಸಲಿ, ಆದರೆ ಆಯ್ಕೆಯಾಗಿ ಬರುವವರು 224 ಮಂದಿ ಮಾತ್ರ! ಅದು ಅವರ ಗೌರವ, ಹೆಮ್ಮೆ. ಯಾರಾದರೂ ಒಬ್ಬರು ಎಂಟು ಸಾರಿ ಗೆದ್ದು ಇದೊಂದು ಸಾರಿ ಸೋತಿದ್ದಾರೆ, ಅವರನ್ನು ಒಳಗೆ ಬಿಡಿ ಎನ್ನಲು ಆಗುತ್ತದೆಯೇ? ಗೆದ್ದು ಬಂದು ಈ ಗೌರವಾನ್ವಿತ ಶಾಸನಸಭೆಯ ಸದಸ್ಯರಾದವರು ಕಲಾಪದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ತಮ್ಮ ಹೆಮ್ಮೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು. ರಾಜಕೀಯ ಮಾಡಲು ಶಾಸಕತ್ವ ಒಂದು ಲೈಸೆನ್ಸ್ ಎಂದು ಅಂದುಕೊಳ್ಳಬಾರದು.

ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ, ಎ.ಕೆ.ಸುಬ್ಬಯ್ಯ ಅವರೆಲ್ಲ ನನ್ನ ಮನಸ್ಸಿನಲ್ಲಿ ಈಗಲೂ ನೆನಪು ಇರುವುದು ಅವರು ಎಪ್ಪತ್ತರ ದಶಕದಲ್ಲಿ ಸದನದಲ್ಲಿ ಆಡಿದ ಮಾತುಗಳಿಂದ. ಒಬ್ಬ ಸದಸ್ಯ ತನ್ನ ಮಾತುಗಾರಿಕೆಯಿಂದ ಇಡೀ ರಾಜ್ಯದ ನೆನಪಿನಲ್ಲಿ ಅನೇಕ ವರ್ಷಗಳ ಕಾಲ ಉಳಿಯಬಲ್ಲ. ಆತ ಮಾಡಿದ ಕೆಲಸಗಳು ಆತನ ಕ್ಷೇತ್ರದಲ್ಲಿಯೂ ನೆನಪು ಇರದ ಕಾಲ ಇದು! ಆದರೆ, ಸದನದ ಕಲಾಪದಲ್ಲಿ ಭಾಗವಹಿಸುವುದು ಈಗ ಆಕರ್ಷಕ ಅನಿಸುತ್ತಿಲ್ಲ. ಅದಕ್ಕೆ ಅನೇಕ ಕಾರಣಗಳು ಇರಬಹುದು.

ಮುಖ್ಯವಾಗಿ ಸದನ ಸೇರುವುದಕ್ಕೆ ಒಂದು ನಿರ್ದಿಷ್ಟ ವೇಳಾಪಟ್ಟಿ ಇಲ್ಲ. ಸೇರಿದರೂ ಅದು ಸರಿಯಾಗಿ ಕಲಾಪ ನಡೆಸುತ್ತದೆ ಎಂಬ ಖಾತ್ರಿ ಇಲ್ಲ. ವಿರೋಧ ಪಕ್ಷಕ್ಕೆ ಮಾತಿನ ಶಕ್ತಿಗಿಂತ ಗಂಟಲ ಶಕ್ತಿಯಲ್ಲಿ ಹೆಚ್ಚು ನಂಬಿಕೆ! ಒಂದು ಸಾರಿ ಕಲಾಪ ಸರಿಯಾಗಿ ನಡೆಯದೇ ಹೋದಾಗ ಸರ್ಕಾರಕ್ಕೆ ಅಧಿವೇಶನದಲ್ಲಿ ಆಸಕ್ತಿ ಹೊರಟು ಹೋಗುತ್ತದೆ. ಇದು ಬರೀ ಅಧಿವೇಶನದಲ್ಲಿ ಹೊರಟು ಹೋಗುವ ಆಸಕ್ತಿಯಲ್ಲ, ಇಡೀ ಸಂಸದೀಯ ವ್ಯವಸ್ಥೆಯಲ್ಲಿಯೇ ಎಂದು ತಿಳಿಯುವ ವೇಳೆಗೆ ತೀರಾ ತಡವಾಗಿರುತ್ತದೆ.ಈಗಲೇ ಬೇಕಾದಷ್ಟು ತಡವಾಗಿದೆ. ಸರ್ಕಾರ ಮತ್ತು ವಿರೋಧ ಪಕ್ಷಗಳೆರಡೂ ಕೂಡಿಯೇ ಮತ್ತೆ ಅದನ್ನು ಹಳಿಯ ಮೇಲೆ ತರುವ ಕೆಲಸ ಮಾಡಬೇಕು. ರಾಜಕೀಯದ ಮಾತುಗಳನ್ನು ಮುಂದಿನ ಬೆಂಚಿನ ನಾಯಕರೇ ಇಟ್ಟುಕೊಳ್ಳಲಿ. ಎರಡೂ ಕಡೆಯವರಿಗೆ `ಬಾಕಿ ಚುಕ್ತಾ' ಮಾಡಿಕೊಳ್ಳುವುದು ಬೇಕಾದಷ್ಟು ಇರುತ್ತದೆ. ಆದರೆ, ಹಿಂದಿನ ಬೆಂಚಿನವರಿಗೆ ಬರೀ ಗದ್ದಲ ಮಾಡಲು ಹಚ್ಚುವ ಬದಲು ಇಲಾಖೆಗಳನ್ನು ಹಂಚಿಕೊಟ್ಟು, ಆಳವಾಗಿ ಅಭ್ಯಾಸ ಮಾಡಿ ಮಾತನಾಡಲು ಅವಕಾಶ ಕೊಡಬೇಕು. ವಿರೋಧ ಪಕ್ಷದ ನಾಯಕರಿಗೆ ಯಾವಾಗಲೂ ಸದನದಲ್ಲಿ ಸಮಯದ ಮಿತಿ ಇರುವುದಿಲ್ಲ.

ಯಾವ ವಿರೋಧ ಪಕ್ಷದ ನಾಯಕರೂ ಅದನ್ನು ಪಾಲಿಸಿದ ನೆನಪು ನನಗೆ ಇಲ್ಲ. ನಾಲ್ಕು ಗಂಟೆ ಮಾತನಾಡಿ ಹೇಳುವುದನ್ನೇ ಒಂದು ಗಂಟೆಯಲ್ಲಿ ಹೇಳಲು ಸಾಧ್ಯವಿದೆ. ಉಳಿದ ಅವಧಿಯನ್ನು ಇತರ ಶಾಸಕರಿಗೂ ಹಂಚಿದರೆ ಅವರಿಗೂ ಮಾತನಾಡಲು ಅವಕಾಶ ಸಿಗುತ್ತದೆ. ಹಿಂದಿನ ಬೆಂಚಿನಲ್ಲಿ ಯಾರು ಚೆನ್ನಾಗಿ ಮಾತನಾಡುತ್ತಾರೆ ಎಂದು ತಿಳಿಯಬೇಕಾದರೆ ಅವರಿಗೆ ಮಾತನಾಡಲು ಮೊದಲು ಅವಕಾಶ ಸಿಗಬೇಕು. ನಾಯಕರನ್ನು ಬೆಳೆಸುವ ರೀತಿ ಅದು. ಅಧಿವೇಶನ ಸೇರುವುದಕ್ಕಿಂತ ಮುಂಚೆ ನಡೆಯುವ ಶಾಸಕಾಂಗ ಪಕ್ಷದ ಸಭೆಗಳಲ್ಲಿ ಯಾವ ಪಕ್ಷವಾದರೂ ಶಾಸನಸಭೆಯಲ್ಲಿ ಏನೇನು ಮಾತನಾಡಬೇಕು ಎಂದು ಚರ್ಚಿಸಿದ ನಿದರ್ಶನಗಳು ಬಹಳ ಕಡಿಮೆ.

ಅಲ್ಲಿ ಚರ್ಚೆ ಆಗುವುದು ಕೇವಲ ಕುಂದು ಕೊರತೆ. ಅಧಿವೇಶನ ನಡೆಯುವುದಕ್ಕಿಂತ ಮುಂಚೆ ಶಾಸಕಾಂಗ ಸಭೆ ಸೇರಬೇಕು ಎಂಬ ಶಾಸ್ತ್ರಕ್ಕೆ ಮಾತ್ರ ಆ ಸಭೆ ಸೇರುತ್ತದೆ. ಕಿರಿಯ ವಕೀಲರಿಗೆ ಹಿರಿಯ ವಕೀಲರು ಹೇಳಿಕೊಟ್ಟ ಹಾಗೆ ಹಿರಿಯ ಶಾಸಕರು ಕಿರಿಯ ಶಾಸಕರಿಗೆ ಹೇಳಿಕೊಡಬೇಕು, ಪೂರಕ ಸಾಮಗ್ರಿಯನ್ನು ಒದಗಿಸಬೇಕು; ಅಧ್ಯಯನ ಮಾಡಿಕೊಂಡು ಬರಲು ಹೇಳಬೇಕು. ಹಿರಿಯರು ಅದನ್ನು ಹೇಳಿಕೊಡದೇ ಇದ್ದರೆ ಸದನದ ಮೇಜಿನ ಮೇಲೆ ನಿಂತು ಅಂಗಿ ಹರಿದುಕೊಳ್ಳುವುದೇ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸುವ ರೀತಿ ಎಂದು ಅನಿಸಿಬಿಡುತ್ತದೆ!ಅಧಿವೇಶನದ ಅವಧಿಯಲ್ಲಿ ಕಲಾಪ ಸಲಹಾ ಸಮಿತಿ ಮತ್ತೆಮತ್ತೆ ಸಭೆ ಸೇರುತ್ತದೆ. ಅಲ್ಲಿ ವಿವಿಧ ಪಕ್ಷಗಳಿಗೆ ವೇಳೆ ಮಾತ್ರ ನಿಗದಿ ಆಗುತ್ತದೆ. ಅಲ್ಲಿ ಯಾರು ಏನು ಚರ್ಚೆ ಮಾಡಬೇಕು, ವಿಷಯಗಳು ಏನೇನು ಎಂದೆಲ್ಲ ಚರ್ಚೆ ನಡೆಯುವುದಿಲ್ಲ. ಈ ಸಭೆಯಲ್ಲಿ ಎಲ್ಲ ಪಕ್ಷಗಳ ಹಿರಿಯ ಸದಸ್ಯರೇ ಭಾಗವಹಿಸುತ್ತಾರೆ. ಅವರೆಲ್ಲ ಉಪ್ಪಿಟ್ಟು ತಿಂದು ಹೊರಟು ಹೋಗುತ್ತಾರೆ. ನಂತರ ಕಲಾಪದಲ್ಲಿ ಏನು ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇರುತ್ತದೆ. ಒಂದು ಸೂತ್ರವಿಲ್ಲದ ಕಲಾಪವನ್ನು ಹದ್ದುಬಸ್ತಿಗೆ ತರುವುದು ಸಭಾಧ್ಯಕ್ಷರಿಗೆ ಕಷ್ಟವಾಗುತ್ತದೆ.

ಬಹುಶಃ ಅದಕ್ಕೇ ಮೊದಲ ಒಂದು ಗಂಟೆಯ ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆಯೇ ಶಾಸಕರ ಕೈಯಲ್ಲಿ ಪತ್ರಗಳು ಹುಟ್ಟಿಕೊಳ್ಳುತ್ತವೆ. ಅವು ಸಚಿವರ ಬಳಿ ಹೋಗುತ್ತವೆ. ಅದಕ್ಕೆ ಅವರು ಒತ್ತಾಯಕ್ಕೆ ಮಣಿದೋ, ಮುಲಾಜಿಗೆ ಬಿದ್ದೋ `ಮಿನಿಟು' ಹಾಕುತ್ತಾರೆ. ಅಧಿವೇಶನದ ಅವಧಿಯಲ್ಲಿ ಎಲ್ಲ ಸಚಿವರು ಒಂದೇ ಕಡೆ ಸಿಗಲೇಬೇಕಲ್ಲ? ಒಂದೋ ಕೆಳಮನೆಯಲ್ಲಿ ಇರುತ್ತಾರೆ. ಇಲ್ಲವೇ ಮೇಲ್ಮನೆಯಲ್ಲಿ ಸಿಗುತ್ತಾರೆ! ಹಳೆಯ ಶಾಸಕರಿಗೆ ಕಲಾಪದಲ್ಲಿ ಇನ್ನೂ ಆಸಕ್ತಿ ಹೋಗಿಲ್ಲ. ಆದರೆ, ಹೊಸಬರಿಗೆ, ವಿಧಾನಸಭೆಯಲ್ಲಿ ತಾನು ಮಾತನಾಡಿ ಸಾಧಿಸುವುದು ಏನು ಎಂಬ ಪ್ರಶ್ನೆ ಇದೆ!ಕಲಾಪದಲ್ಲಿ ಭಾಗವಹಿಸದೇ ಗೆಲ್ಲಲು ಸಾಧ್ಯವಿದೆಯಲ್ಲ? ಬಹಳಷ್ಟು ಶಾಸಕರಿಗೆ ತಾವು ಶಾಸನ ರಚಿಸುವವರು ಎಂದೇ ಗೊತ್ತಿಲ್ಲ. ಏನಿದ್ದರೂ ಕ್ಷೇತ್ರದಲ್ಲಿ ಒಂದಿಷ್ಟು ಕೆಲಸ ಮಾಡಬೇಕು, ಸ್ವಂತಕ್ಕೆ ಏನಾದರೂ ಮಾಡಿಕೊಳ್ಳಬೇಕು, ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಬೇಕು ಎಂದು ಅವರಿಗೆ ಅನಿಸುತ್ತಿದೆಯೇ ಹೊರತು ರಾಜ್ಯದ ಆಡಳಿತಕ್ಕೆ ಅಗತ್ಯವಾದ ಶಾಸನಗಳ ರಚನೆ, ನೀತಿ ನಿರೂಪಣೆಯಲ್ಲಿ ತನ್ನ ಪಾಲೂ ಇದೆ ಎಂದು ಅವರಿಗೆ ಮನವರಿಕೆ ಆಗುತ್ತಿಲ್ಲ.ಇದಕ್ಕೆಲ್ಲ ಆ ಶಾಸಕರನ್ನು ದೂರಿ ಫಲವಿಲ್ಲ. ಇದು ವ್ಯವಸ್ಥೆಯ ವೈಫಲ್ಯ ಮತ್ತು ಎಲ್ಲ ಪಕ್ಷಗಳ ನಾಯಕರ ಸಾಮೂಹಿಕ ವೈಫಲ್ಯ. ಸದನದ ಕಲಾಪಕ್ಕೆ ಮೊದಲು ಹಳೆಯ ಗಾಂಭೀರ್ಯವನ್ನು ತರಬೇಕಿದೆ. ಅದು ಸಂಸತ್ತಿನ ಹಾಗೆ ಮುಂಗಾರು, ಚಳಿಗಾಲ ಮತ್ತು ಬೇಸಿಗೆಕಾಲ ಎಂದು ನಿರ್ದಿಷ್ಟ ಅವಧಿಯಲ್ಲಿ ಸೇರುವಂತೆ ಆಗಬೇಕು. ವರ್ಷದಲ್ಲಿ ಕನಿಷ್ಠ ಅರುವತ್ತು ದಿನ ಕಲಾಪ ನಡೆಯಬೇಕು. ವಿರೋಧ ಪಕ್ಷಗಳು ಸಭಾತ್ಯಾಗ, ಧರಣಿಗಳಿಗಿಂತ ಮಾತಿನ ಮೂಲಕ ಸರ್ಕಾರವನ್ನು ಕೊಲ್ಲುವುದು ಸಾಧ್ಯ ಎಂದು ನಂಬಬೇಕು.

ಅಧಿವೇಶನ ನಡೆದಾಗಲೆಲ್ಲ ಬರೀ ಗಲಾಟೆ ಮಾಡುತ್ತ ಇದ್ದರೆ ಕಿರಿಯರಿಗೆ ಅದರಲ್ಲಿ ಯಾವ ಆಸಕ್ತಿಯೂ ಉಳಿಯುವುದಿಲ್ಲ. ಈಗಿನ ಲೋಕಸಭೆ ಅದಕ್ಕೆ ದೊಡ್ಡ ಉದಾಹರಣೆ. ಅಧಿವೇಶನ ಎಂಬುದು ಸಾರ್ವಜನಿಕ ಜೀವನದ ಸಮಸ್ಯೆಗಳ ಕಡೆಗೆ ಗಮನ ಹರಿಸಲು ಮತ್ತು ಪರಿಹರಿಸಲು ಕೂಡ ಬಹುಮುಖ್ಯ ವೇದಿಕೆ. ಅದರ ಬಳಕೆಯಾಗಿದ್ದು ಬಹಳ ಕಡಿಮೆ. ರಾಜಕೀಯವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದರ ಜತೆಗೆ ಜನರ ಸಮಸ್ಯೆಗಳನ್ನು ಪರಿಹರಿಸಲೂ ಈ ವೇದಿಕೆಯನ್ನು ಬಳಸಿಕೊಂಡರೆ ಹೊಸ ಶಾಸಕರಿಗೆ ಅಧಿವೇಶನದ ಮಹತ್ವ ತಿಳಿಯುತ್ತ ಹೋಗುತ್ತದೆ.ಕಲಾಪದ ಮಟ್ಟ ಇಷ್ಟು ಕುಲಗೆಟ್ಟು ಹೋಗಲು ಮಾಧ್ಯಮಗಳ ನಕಾರಾತ್ಮಕ ಸ್ವಭಾವವೂ ಬಹುಮಟ್ಟಿಗೆ ಕಾರಣ.ಹೊಡೆದಾಟ, ಬಡಿದಾಟ, ಗದ್ದಲ, ಸಭಾತ್ಯಾಗ, ಧರಣಿ, ಬಹಿಷ್ಕಾರವನ್ನು ವೈಭವಿಸುವ ಮಾಧ್ಯಮಗಳು, ಸೊಗಸಾದ ಮಾತುಗಾರಿಕೆಯನ್ನು ವೈಭವಿಸುವುದು ಹೋಗಲಿ ಬರೆಯುವುದೂ ಇಲ್ಲ. ಅದು ಅವರಿಗೆ ಸುದ್ದಿ ಎನಿಸುವುದಿಲ್ಲ. ಒಬ್ಬ ಶಾಸಕ ತನ್ನ ಕ್ಷೇತ್ರದ ಸಮಸ್ಯೆ ಕುರಿತು ಮಾತನಾಡಿದರೆ ಮಾಧ್ಯಮಗಳಿಗೆ ಅದು `ಗೋಳು' ಎಂದು ಅನಿಸುತ್ತದೆ. ರೋಚಕತೆಯ ಹಿಂದೆ ಬಿದ್ದಿರುವ, `ಬೈಟು'ಗಳ ಬೆನ್ನು ಹತ್ತಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳ ಪೈಪೋಟಿ ಶಾಸಕರನ್ನು ಬೇರೆ ರೀತಿಯಲ್ಲಿ `ಪ್ರಭಾವಿಸುತ್ತಿದ್ದರೆ, ಪ್ರಚೋದಿಸುತ್ತಿದ್ದರೆ' ಅದನ್ನು ತಪ್ಪು ಎಂದು ಹೇಳುವುದು ಕಷ್ಟ.ವ್ಯವಸ್ಥೆಯ ವೈಫಲ್ಯದಲ್ಲಿ ನಮ್ಮ ಪಾಲೂ ಇದೆ, ಸ್ವಲ್ಪ ಜಾಸ್ತಿಯೇ ಇದ್ದೀತು. ಒಂದು ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡದೇ ಇರುವಾಗ, ಅದು ನಿಧಾನವಾಗಿ ಅರ್ಥ ಮತ್ತು ಆಕರ್ಷಣೆ ಎರಡನ್ನೂ ಕಳೆದುಕೊಳ್ಳುತ್ತ ಹೋಗುವಾಗ ಅಲ್ಲಿ ಹೋಗಿ ಕುಳಿತುಕೊಳ್ಳುವುದು ಏಕೆ ಎಂದು ಅನೇಕರಿಗೆ ಅನಿಸುತ್ತಿರಬಹುದು. ಅಥವಾ ಅದು ನಿಭಾಯಿಸಲು ಕಷ್ಟದ ಕೆಲಸ ಎಂದೂ ಅವರಿಗೆ ಭಾಸವಾಗುತ್ತಿರಬಹುದು. ಈಗ ಯಾರೂ ಒಲ್ಲದ ಕುರ್ಚಿಯ ಮೆಲೆ ಹೋಗಿ ಕಾಗೋಡು ತಿಮ್ಮಪ್ಪ ಕುಳಿತಿದ್ದಾರೆ. ಅವರ ಅನುಭವ, ವಿವೇಕ ಎರಡೂ ದೊಡ್ಡವು. ಅವರು ಸಂಸದೀಯ ವ್ಯವಸ್ಥೆಯ ಕಳಚಿ ಬಿದ್ದಿರುವ ಕಿರೀಟವನ್ನು ಅದರ ಜಾಗದಲ್ಲಿ ಮತ್ತೆ ಸ್ಥಾಪಿಸಲಿ; ಸಮಾಜಕ್ಕೆ ಒಳಿತನ್ನು ಬಯಸುವ ಎಲ್ಲರ ಹಾರೈಕೆ ಅವರ ಜತೆಗೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.