ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆಯ ಪುಟಗಳಲ್ಲಿ ಲಿಂಕನ್ ಚಿರಾಯು

Last Updated 23 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಫೆಬ್ರುವರಿ 11, 1861.
‘ಸ್ನೇಹಿತರೇ, ಈ ಕ್ಷಣದ ನನ್ನ ಸಂಕಟವನ್ನು ವಿವರಿಸಲು ಪದಗಳೇ ಸಿಗುತ್ತಿಲ್ಲ. ನೀವು ನನ್ನನ್ನು ಬೀಳ್ಕೊಡಲು ಇಲ್ಲಿ ನೆರೆದಿದ್ದೀರಿ. ನಿಮ್ಮೊಂದಿಗೆ ಇಪ್ಪತ್ತೈದು ವರ್ಷಗಳ ಒಡನಾಟ ನನ್ನದು. ನನ್ನ ಭಾವಕೋಶದೊಳಗೆ ನೀವೆಲ್ಲರೂ ಬೆರೆತು ಹೋಗಿದ್ದೀರಿ. ನನ್ನ ಬದುಕಿನ ಸಿಹಿ-ಕಹಿ ಕ್ಷಣಗಳಿಗೆ ಸಾಕ್ಷಿಯಾದವರು ನೀವು. ನನ್ನ ಮಕ್ಕಳು ಇಲ್ಲೇ ಜನಿಸಿದರು. ಒಬ್ಬ ಮಗ ಇದೇ ಮಣ್ಣಿಗೆ ಮರಳಿ ಹೋದ. ಈ ಎಲ್ಲಾ ನೆನಪುಗಳ ಭಾರ ಹೊತ್ತು ನಾನಿಂದು ಪಯಣಿಸುತ್ತಿದ್ದೇನೆ. ನನ್ನ ಮುಂದಿರುವ ಸವಾಲುಗಳ ಕಲ್ಪನೆ ನನಗಿದೆ. ಜಾರ್ಜ್ ವಾಷಿಂಗ್ಟನ್ ಅವರು ನಿಭಾಯಿಸಿದ್ದ ಪರಿಸ್ಥಿತಿಗಿಂತ, ದೇಶ ಇಂದು ಎದುರಿಸುತ್ತಿರುವ ಬಿಕ್ಕಟ್ಟು ಕಠಿಣ ಎಂಬುದು ನನಗೆ ಗೊತ್ತು. ಅವರಿಗೆ ಶಕ್ತಿ ನೀಡಿದ ಭಗವಂತ ನನಗೂ ಕೃಪೆ ಮಾಡಿದರಷ್ಟೇ ನಾನು ಗೆಲ್ಲಬಲ್ಲೆ. ಎಷ್ಟು ದಿನ ನಿಮ್ಮಿಂದ ದೂರ ಇದ್ದೇನು ಎಂಬುದು ತಿಳಿದಿಲ್ಲ. ಹೋಗಿಬರುತ್ತೇನೆ’.

ಇದು ಅಧ್ಯಕ್ಷ ಪದವಿಗೇರಲು ವಿಶೇಷ ರೈಲಿನ ಮೂಲಕ ವಾಷಿಂಗ್ಟನ್ ನಗರಕ್ಕೆ ತೆರಳುವ ಮುನ್ನ, ಇಲ್ಲಿನಾಯ್ ರೈಲು ನಿಲ್ದಾಣದಲ್ಲಿ ತಮ್ಮ ಸಾವಿರಾರು ಬೆಂಬಲಿಗರ ಮುಂದೆ ಅಬ್ರಹಾಂ ಲಿಂಕನ್ ಆಡಿದ ಮಾತು. ಅಷ್ಟುದಿನ ಲಿಂಕನ್‌ರ ಆಕರ್ಷಕ ಚುನಾವಣಾ ಭಾಷಣಗಳನ್ನಷ್ಟೇ ಕೇಳಿದ್ದ ಜನ, ಅಂದು ಸುರಿವ ಮಳೆಯನ್ನೂ ಲೆಕ್ಕಿಸದೆ, ಅವರ ಭಾವನಾತ್ಮಕ ಮಾತುಗಳಿಗೆ ಕಿವಿಯಾಗಿದ್ದರು. 
ಲಿಂಕನ್ ಶ್ವೇತಭವನ ಹೊಕ್ಕು, ಅಮೆರಿಕ ಅಧ್ಯಕ್ಷರ ಸ್ಥಾನದಲ್ಲಿ ಕುಳಿತಾಗ ಅವರು ಆ ಕಾಲಘಟ್ಟದ ಪ್ರಸಿದ್ಧ ವ್ಯಕ್ತಿಯಂತೆಯೂ, ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಂತೆಯೂ ಕಾಣುತ್ತಿದ್ದರು. ಪತ್ರಿಕೆಗಳು ಭೂತಗನ್ನಡಿ ಹಿಡಿದು, ಅವರಿಡುವ ಪ್ರತೀ ಹೆಜ್ಜೆಯನ್ನೂ ಗಮನಿಸಲು ಸಜ್ಜಾಗಿದ್ದವು. ‘ಜನಮನ್ನಣೆ ಗಳಿಸಿ ಅಧ್ಯಕ್ಷರಾಗಿರುವ ಲಿಂಕನ್ ಅವರ ಮುಂದೆ ಸವಾಲುಗಳ ಬೆಟ್ಟವೇ ಇದೆ. ಅಮೆರಿಕ ಒಕ್ಕೂಟವನ್ನು ಒಡೆಯುವ ಅಪಶ್ರುತಿ ಈಗಾಗಲೇ ಕೇಳಿಬರುತ್ತಿದೆ. ಉತ್ತರ ಮತ್ತು ದಕ್ಷಿಣದ ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಬೇರಾವ ಅಧ್ಯಕ್ಷರೂ ಎದುರಿಸದ ಕಠಿಣ ಸಂದರ್ಭವನ್ನು ಲಿಂಕನ್ ಎದುರಿಸಬೇಕಿದೆ. ಅವರಿಗೆ ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಸಾಮರ್ಥ್ಯ ಇದೆಯೇ?’ ಎಂದು ಪ್ರಶ್ನಾರ್ಥಕ ಚಿಹ್ನೆಯೊಂದಿಗೇ ಪತ್ರಿಕೆಗಳು ಅಂದು ಸಂಪಾದಕೀಯ ಬರೆದಿದ್ದವು.

ಜನಮನ್ನಣೆಯ ಹೊರತಾಗಿ, ಲಿಂಕನ್ ಚಹರೆ ಅಮೆರಿಕದ ಆ ಮುಂಚಿನ ಅಧ್ಯಕ್ಷರೆಲ್ಲರಿಗಿಂತ ಭಿನ್ನವಾಗಿ ಕಾಣುತ್ತಿತ್ತು. ಅದಕ್ಕೆ ಕಾರಣಗಳಿದ್ದವು. ಲಿಂಕನ್ ಅವರ ಬಹಳಷ್ಟು ಜೀವನ ವೃತ್ತಾಂತಗಳು ಆರಂಭವಾಗುವುದೇ ‘ಲಿಂಕನ್, ಸಾಧಾರಣ ಪೋಷಕರ ಅಸಾಧಾರಣ ಮಗ’ ಎಂಬಂತಹ ವಿಶ್ಲೇಷಣೆಯಿಂದ. ಬಾಲ್ಯದಲ್ಲೇ ದುಡಿಯುವ ಅನಿವಾರ್ಯಕ್ಕೆ ಸಿಲುಕಿದ್ದ ಲಿಂಕನ್, ಔಪಚಾರಿಕ ಶಿಕ್ಷಣ ಪಡೆಯಲು ಸಾಧ್ಯವಾಗದೇ ಒಕ್ಕಲು ಜಮೀನಿನಲ್ಲಿ ದುಡಿಯುತ್ತಲೇ, ತಮ್ಮ ಜ್ಞಾನದ ಹಸಿವನ್ನು ತಣಿಸಿಕೊಳ್ಳಲು ಪ್ರಯತ್ನಿಸಿದವರು. ತನ್ನೆಲ್ಲಾ ಮಿತಿಗಳನ್ನೂ ಅವಕಾಶವನ್ನಾಗಿ ಬದಲಿಸಿಕೊಳ್ಳುವ ಜಾಣ್ಮೆ ಬೆಳೆಸಿಕೊಂಡವರು.

ಬದುಕಿನ ನಿರ್ವಹಣೆಗೆ ಲಿಂಕನ್ ತೊಟ್ಟ ವೇಷಗಳು, ಆಯ್ದುಕೊಂಡ ವೃತ್ತಿಗಳು ಅನೇಕ. 22ನೇ ವಯಸ್ಸಿಗೆ ಮನೆಯಿಂದ ಹೊರಬಿದ್ದು ಆರಂಭಿಸಿದ ಉದ್ಯೋಗ ನಷ್ಟದಲ್ಲಿ ಕೊನೆಯಾದಾಗ, ನಾಗರಿಕ ಸೇನೆಯಲ್ಲಿ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು, ಪೋಸ್ಟ್ ಮಾಸ್ಟರ್ ಹುದ್ದೆಯಲ್ಲಿದ್ದರು, ಕೌಂಟಿ ಸರ್ವೆಯರ್ ಆಗಿ ಕೂಡ ಕೆಲಸ ಮಾಡಿದರು. ಕೊನೆಗೆ ಹಿಡಿದದ್ದು ವಕೀಲರಾಗುವ ಮಾರ್ಗ. ಅವರೊಳಗೆ ಕಾವು ಪಡೆಯುತ್ತಿದ್ದ ಮಹತ್ವಾಕಾಂಕ್ಷೆ, ಅವರನ್ನೆಂದಿಗೂ ದಣಿವಾರಿಸಿಕೊಳ್ಳಲು ಬಿಡಲೇ ಇಲ್ಲ.

ಸಾಮಾನ್ಯವಾಗಿ ಲಿಂಕನ್ ಎಂದಾಕ್ಷಣ ತಟ್ಟನೆ ನೆನಪಾಗುವುದು ಅವರ ಸಂಕೀರ್ಣ ವ್ಯಕ್ತಿತ್ವ, ವಾಕ್ಚಾತುರ್ಯ, ಪ್ರಾಮಾಣಿಕತೆ, ಗುಲಾಮಗಿರಿ ವಿಮೋಚನಾ ಘೋಷಣೆ, ಅಮೆರಿಕ ಸಂಸ್ಥಾನಗಳನ್ನು ಒಗ್ಗೂಡಿಸಿದ ಮತ್ತು ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿದ ಅವರ ದಿಟ್ಟ ಹೆಜ್ಜೆಗಳು. ಆರ್ಥಿಕ ಸದೃಢತೆಯನ್ನಾಗಲೀ, ಪ್ರಭಾವಿ ಕುಟುಂಬದ ಹಿನ್ನೆಲೆಯನ್ನಾಗಲೀ ಹೊಂದಿರದಿದ್ದ ಲಿಂಕನ್, ತಮ್ಮ ಚರ್ಚಾಪಟುತ್ವ ಮತ್ತು ವಾಕ್ಚಾತುರ್ಯವನ್ನು ರಾಜಕೀಯದ ಏಣಿಯನ್ನಾಗಿಸಿಕೊಂಡವರು. ಆದರೆ ಜನಪ್ರಿಯ ನಾಯಕನಾಗಿ ಬೆಳೆಯುವ ದಾರಿ ಅವರಿಗೆ ಸುಲಭವಾಗಲಿಲ್ಲ.

ತಮ್ಮ ಬಗ್ಗೆ ಪೂರ್ವಗ್ರಹ ಹೊಂದಿದ್ದ ಆ ಕಾಲಘಟ್ಟದ ಪತ್ರಿಕೆಗಳನ್ನು ನಿಭಾಯಿಸುವುದು ಕೂಡ ಲಿಂಕನ್ ಪಾಲಿಗೆ ದೊಡ್ಡ ಸವಾಲಾಗಿತ್ತು ಎಂಬುದನ್ನು ‘ಲಿಂಕನ್ ಅಂಡ್ ದಿ ಪ್ರೆಸ್’ ಕೃತಿಯಲ್ಲಿ ಲೇಖಕ ರಾಬರ್ಟ್ ಹಾರ್ಪರ್ ಉಲ್ಲೇಖಿಸುತ್ತಾರೆ.

ಹಣವಂತರ ಅಣತಿಯ ಮೇರೆಗೆ, ರಾಜಕೀಯ ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕೆಲವು ಪತ್ರಿಕೆಗಳು, ಲಿಂಕನ್ ಅವರನ್ನು ಕೇವಲ ಅನುಮಾನಿಸಲಿಲ್ಲ, ಅವಮಾನಿಸಲು ನಿಂತವು. ‘ಅಳು ಮುಖದ ಲಿಂಕನ್, ತನ್ನ ಮಾತುಗಳನ್ನು ಕೇಳಲು ಜನರನ್ನು ಅಂಗಲಾಚುತ್ತಾರೆ. ಜನರನ್ನು ಸೆಳೆಯಲು ಸ್ಟೀಫನ್ ಡಗ್ಲಸ್ ಭಾಷಣ ನಡೆಯುವ ಸ್ಥಳಗಳಿಗೆ ಹೋಗಿ, ಜನ ಹೊರಬರುವುದನ್ನೇ ಕಾದು ನಿಲ್ಲುತ್ತಾರೆ. ಹತಾಶ ವ್ಯಕ್ತಿಯಂತೆ ಕಾಣುವ ಇವರ ಮಾತುಗಳನ್ನು ಜನರಾದರೂ ಯಾಕೆ ಕೇಳಿಯಾರು?’ ಎಂದು ಪ್ರತಿಷ್ಠಿತ ಟೈಮ್ಸ್ ಪತ್ರಿಕೆ ಬರೆದಿತ್ತು!

ಆದರೆ ಡಗ್ಲಸ್ ಮತ್ತು ಲಿಂಕನ್ ನಡುವಣ ವಾಗ್ವಾದಗಳಲ್ಲಿ ಹೂರಣಕ್ಕೆ ಕೊರತೆಯಿರಲಿಲ್ಲ, ಲಿಂಕನ್ ಮಾತಿನಲ್ಲಿ ಹೊಸತನವಿತ್ತು, ಸಾಹಿತ್ಯಪ್ರಿಯರಾಗಿದ್ದ ಲಿಂಕನ್, ಆಕರ್ಷಕ ಮಾತುಗಾರಿಕೆಯನ್ನು ಸಿದ್ಧಿಸಿಕೊಂಡಿದ್ದರು. ಸಾರ್ವಜನಿಕ ಚರ್ಚೆಗಳು ಬಹು ಜನಪ್ರಿಯಗೊಂಡವು. ಸೆನೆಟ್ ಚುನಾವಣೆಗೆ ಸ್ಪರ್ಧಿಸಿ ಲಿಂಕನ್ ಸೋತರೂ, ಈ ಪ್ರಕ್ರಿಯೆಯಲ್ಲಿ ಅವರು ಗಳಿಸಿಕೊಂಡ ಜನಪ್ರಿಯತೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವಲ್ಲಿ ಸಹಾಯಕ್ಕೆ ಬಂತು.

ಆದರೆ ಬಹುಪಾಲು ಪತ್ರಿಕೆಗಳು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡು ವಸ್ತುನಿಷ್ಠ ವರದಿಗಾರಿಕೆಯನ್ನು ಕೈಬಿಟ್ಟಿದ್ದವು. ‘ಲಿಂಕನ್ ವಾಗ್ಮಿಯಲ್ಲ, ಹೆಚ್ಚೆಂದರೆ ಮೂರನೇ ದರ್ಜೆಯ ಚರ್ಚಾಪಟು. ಒಮ್ಮೆ ಭಾಷಣ ಕೇಳಿದವರು ಮತ್ತೊಮ್ಮೆ ಅವರ ಮಾತಿಗೆ ಕಿವಿ ಒಡ್ಡಲಾರರು’ ಎಂದು ಡೆಮಾಕ್ರಟಿಕ್ ಪಕ್ಷದ ಮುಖವಾಣಿ ಪತ್ರಿಕೆಗಳು ಬರೆದವು. ಟೈಮ್ಸ್ ಪತ್ರಿಕೆ ಲಿಂಕನ್ ಮಾತುಗಳನ್ನು ತಿರುಚಿ, ಅಪಹಾಸ್ಯ ಮಾಡಿ ಬರೆದರೆ, ಡಗ್ಲಸ್ ಮಾತುಗಳನ್ನು ಷಿಕಾಗೊ ಪ್ರೆಸ್ ಅಂಡ್ ಟ್ರಿಬ್ಯೂನ್ ತಪ್ಪು ವರದಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದವು.

ಲಿಂಕನ್ ಜನಪ್ರಿಯತೆ ವೃದ್ಧಿಸಿ, ಅಧ್ಯಕ್ಷ ಪದವಿಗೇರುವುದು ಖಾತ್ರಿಯಾದಂತೆ ಪತ್ರಿಕೆಗಳ ವರಸೆ ಕೂಡ ಬದಲಾಗಿತ್ತು. ‘ಲಿಂಕನ್ ಅವರ ಬುದ್ಧಿಮತ್ತೆ, ಪ್ರಾಮಾಣಿಕತೆ, ಸೈದ್ಧಾಂತಿಕ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅಧ್ಯಕ್ಷ ಪದವಿಯಂತಹ ಉನ್ನತ ಹುದ್ದೆಗೇರುವ ಅರ್ಹತೆಗಳು ಅವರಿಗಿವೆ. ಆದರೆ ಕಠಿಣ ನಿಲುವು ತಳೆಯಬಲ್ಲ ಸಂಕಲ್ಪಶಕ್ತಿ ಮತ್ತು ಅನುಭವದ ಕೊರತೆ ಅವರಲ್ಲಿ ಕಾಣುತ್ತದೆ’ ಎಂದು ಟೈಮ್ಸ್ ಷರಾ ಬರೆದಿತ್ತು.

ಲಿಂಕನ್ ಅಧ್ಯಕ್ಷರಾಗುತ್ತಿದ್ದಂತೆ, ಆ ಮುಂಚೆ ಮೂದಲಿಸುತ್ತಿದ್ದ ಅನೇಕ ಪತ್ರಿಕೆಗಳು ಹೊಗಳಿಕೆಯ ತೋರಣ ಕಟ್ಟಿದವು. ಆದರೆ ಅವರ ಶರೀರ ಸೌಂದರ್ಯದ ಬಗ್ಗೆ ಅಪಹಾಸ್ಯ ಮಾಡುವುದನ್ನು ಬಿಟ್ಟುಕೊಡಲಿಲ್ಲ. ಆರು ಅಡಿ ಎತ್ತರದ ಸೊರಗಿದ ದೇಹ, ನೀಳ ತೋಳು, ಗುಳಿಬಿದ್ದ ಕಣ್ಣುಗಳು, ಉದ್ದನೆಯ ಮೂಗು, ಸುಕ್ಕುಗಟ್ಟಿದ ಚರ್ಮ, ಫ್ರೆಂಚ್ ಗಡ್ಡ ಅಪಹಾಸ್ಯಕ್ಕೆ ವಸ್ತುವಾಗುತ್ತಿತ್ತು. ಸಾಮಾಜಿಕವಾಗಿ ವೈಫಲ್ಯ ಹೊಂದಿದ, ಉಡುಪುಗಳ ಬಗ್ಗೆ ಕಾಳಜಿ ತೋರದ, ಸೌಂದರ್ಯ ಪ್ರಜ್ಞೆಯಿರದ ಅಧ್ಯಕ್ಷರೊಂದಿಗೆ ವಾಷಿಂಗ್ಟನ್ ನಗರದ ಪ್ರಥಮ ದರ್ಜೆ ಪ್ರಜೆಗಳು ಹೇಗೆ ಒಡನಾಡುತ್ತಾರೋ ಎಂದು ಪತ್ರಿಕೆಗಳು ಬರೆದಿದ್ದವು.

ಈ ಎಲ್ಲಾ ಅಪಹಾಸ್ಯ, ಕೊಂಕುನುಡಿಗಳ ನಡುವೆ ಜನರ ಮನಸ್ಸಿನಲ್ಲಿ ಲಿಂಕನ್ ಬೆಳೆದದ್ದು ಅವರು ಕೈಗೊಂಡ ಕ್ರಮಗಳಿಂದ. ಅದಾಗಲೇ ಅಭಿವೃದ್ಧಿ ಪರ ಚಿಂತನೆಗಳನ್ನು ಸಾದರಪಡಿಸಿದ್ದ ಲಿಂಕನ್, ಸೇತುವೆ, ಹೆದ್ದಾರಿಗಳ ನಿರ್ಮಾಣ, ಬ್ಯಾಂಕಿಂಗ್ ವ್ಯವಸ್ಥೆಗೆ ಉತ್ತೇಜನ ನೀಡುವ ಮೂಲಕ ಜನಮನ ಗೆದ್ದಿದ್ದರು. ಆರಂಭದಿಂದಲೂ ನೈತಿಕ ನೆಲೆಗಟ್ಟಿನಲ್ಲಿ ಗುಲಾಮಗಿರಿಯನ್ನು ವಿರೋಧಿಸುತ್ತಾ ಬಂದಿದ್ದ ಲಿಂಕನ್, ಆ ಬಗ್ಗೆ ಸ್ಪಷ್ಟ ರಾಜಕೀಯ ನಿಲುವು ತಳೆಯುವ ಜರೂರಿತ್ತು. 1961ರ ಫೆಬ್ರುವರಿ 22ರಂದು, ಜಾರ್ಜ್ ವಾಷಿಂಗ್ಟನ್ ಹುಟ್ಟುಹಬ್ಬದ ದಿನ ಮಾತನಾಡಿದ್ದ ಲಿಂಕನ್ ‘ನಾನು ಪ್ರಾಣಾರ್ಪಣೆಗೆ ಸಿದ್ಧನಾಗುತ್ತೇನೆಯೇ ಹೊರತು, ವ್ಯಕ್ತಿ ಸ್ವಾತಂತ್ರ್ಯದ ಪರವಾದ ನನ್ನ ಚಿಂತನೆಗಳನ್ನು ಬಿಟ್ಟುಕೊಡುವುದಿಲ್ಲ’ ಎಂದಿದ್ದರು.

ಲಿಂಕನ್ ಅವರ ಈ ಧೋರಣೆಯಿಂದ ಕಳವಳಗೊಂಡ ದಕ್ಷಿಣದ ಏಳು ರಾಜ್ಯಗಳು, ಅಮೆರಿಕ ಸಂಯುಕ್ತ ಒಕ್ಕೂಟದಿಂದ ಹೊರಬಂದು ಪ್ರತ್ಯೇಕ ಒಕ್ಕೂಟ ರಚಿಸಿಕೊಳ್ಳುವ ಘೋಷಣೆ ಮಾಡಿದವು. ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವೆ ಅಂತರ್ಯುದ್ಧ ಪ್ರಾರಂಭವಾಯಿತು. ಅದು ಅಮೆರಿಕ ಎದುರಿಸಿದ ಸಂಕಷ್ಟದ ದಿನಗಳು. ಏಳರ ಜೊತೆಗೆ ಮತ್ತೂ ನಾಲ್ಕು ರಾಜ್ಯಗಳು ಸೇರಿ ಪ್ರತ್ಯೇಕತೆಯ ಕೂಗು ಗಟ್ಟಿಯಾಯಿತು. ಅಮೆರಿಕದ ವಿಭಜನೆಯನ್ನು ತಪ್ಪಿಸಿ ರಾಷ್ಟ್ರದ ಏಕತೆಯನ್ನು ಪುನರ್ ಸ್ಥಾಪಿಸುವ ಹೊಣೆಗಾರಿಕೆ ಲಿಂಕನ್ ಮೇಲಿತ್ತು.

ಅಧಿಕಾರದ ಆರಂಭದ ದಿನಗಳಲ್ಲಿ ಗುಲಾಮಗಿರಿ ಇದ್ದ ಪ್ರಾಂತ್ಯಗಳಲ್ಲಿ ಅದನ್ನು ಮುಂದುವರಿಯಲು ಬಿಟ್ಟು, ಇತರ ಪ್ರಾಂತ್ಯಗಳಿಗೆ ಹರಡದಂತೆ ನೋಡಿಕೊಳ್ಳುವ ನಿಲುವನ್ನು ಲಿಂಕನ್ ತಳೆದಿದ್ದರಾದರೂ, 1863ರ ಹೊತ್ತಿಗೆ, ಅಂತರ್ಯುದ್ಧದ ರಣತಂತ್ರದ ಭಾಗವಾಗಿ, ಗುಲಾಮಗಿರಿಯನ್ನು ಸಂಪೂರ್ಣವಾಗಿ ಅಳಿಸಿಹಾಕುವ ಐತಿಹಾಸಿಕ ‘ಗುಲಾಮಗಿರಿ ವಿಮೋಚನಾ ಮಸೂದೆ’ಯನ್ನು ಸಂಸತ್ತಿನಲ್ಲಿ ಮಂಡಿಸಿದರು.

ಮಸೂದೆ ಜಾರಿಗೆ ಅಗತ್ಯವಿದ್ದ, ಎರಡೂ ಸಂಸದೀಯ ಮನೆಗಳ ಒಪ್ಪಿಗೆ ದೊರೆಯದಿದ್ದಾಗ, ಲಿಂಕನ್ ‘ನಾನು ಅಮೆರಿಕದ ಅಧ್ಯಕ್ಷ. ಸಂವಿಧಾನದ ಅನ್ವಯ ಪರಮಾಧಿಕಾರವಿದೆ. ಗುಲಾಮಗಿರಿ ಅಂತ್ಯಗೊಳಿಸುವ ಈ ಮಸೂದೆ ಅಸಂಖ್ಯ ಗುಲಾಮರ ಭವಿಷ್ಯವನ್ನಷ್ಟೇ ಅಲ್ಲ, ಮುಂದಿನ ಪೀಳಿಗೆಯ ಭವಿಷ್ಯವನ್ನೂ ನಿರ್ಧರಿಸುತ್ತದೆ. ಈ ಮಸೂದೆ ಎಲ್ಲರ ಸಹಮತದಿಂದ ಅಂಗೀಕಾರವಾಯಿತು ಎಂದು ಇತಿಹಾಸ ನೆನಪಿಟ್ಟುಕೊಳ್ಳಲಿ ಎಂಬ ಇಚ್ಛೆ ನನ್ನದು. ನೀವೆಲ್ಲರೂ ಸಹಮತದಿಂದ ಇದನ್ನು ಅನುಮೋದಿಸುತ್ತೀರಿ ಎಂದು ನಂಬಿದ್ದೇನೆ’ ಎಂಬ ಮಹತ್ವದ ಭಾಷಣ ಮಾಡಿದರು.

ಸದನ ತಲೆದೂಗಿತು. ಲಿಂಕನ್ ಅವರ ಈ ದಿಟ್ಟ ನಿಲುವಿನಿಂದ ಗುಲಾಮಗಿರಿ ಅಂತ್ಯವಾಯಿತು. ನಾಲ್ಕು ವರ್ಷಗಳು ನಡೆದ ಅಂತರ್ಯುದ್ಧದ ಪರಿಣಾಮ ಸುಮಾರು ಆರು ಲಕ್ಷ ಸೈನಿಕರು ಪ್ರಾಣತೆತ್ತರು. ಸುಮಾರು 40 ಲಕ್ಷ ಮಂದಿ ಗುಲಾಮಗಿರಿಯಿಂದ ಮುಕ್ತರಾದರು. ಅವರೆಲ್ಲರ ಪ್ರೀತಿ ಲಿಂಕನ್ ಪಾಲಾಯಿತು. ಜೊತೆಗೆ ಕೆಲವರ ದ್ವೇಷವನ್ನೂ ಲಿಂಕನ್ ಕಟ್ಟಿಕೊಂಡರು. ಅನಗತ್ಯ ಯುದ್ಧಕ್ಕೆ ಕಾರಣನಾದ ಅಧ್ಯಕ್ಷ ಎಂಬ ಅಪವಾದವೂ ಅಂಟಿಕೊಂಡಿತು. 1865, ಏಪ್ರಿಲ್ 14ರ ಸಂಜೆ ನಾಟಕ ನೋಡಲು ತೆರಳಿದ್ದ ಲಿಂಕನ್ ತಲೆಗೆ ಹಿಂಬದಿಯಿಂದ ಗುಂಡು ಹೊಡೆಯಲಾಯಿತು. ಮರುದಿನ ಲಿಂಕನ್ ಬದುಕಿಗೆ ತೆರೆಬಿತ್ತು.

ಏಪ್ರಿಲ್ 21, 1865.
ಲಿಂಕನ್ ಪಾರ್ಥಿವ ಶರೀರವನ್ನು ಇರಿಸಿಕೊಂಡ ವಿಶೇಷ ರೈಲು ವಾಷಿಂಗ್ಟನ್‌ನಿಂದ ಹೊರಟಿತು. ನಾಲ್ಕು ವರ್ಷಗಳ ಹಿಂದೆ ಭಾವಿ ಅಧ್ಯಕ್ಷರನ್ನು ಕರೆತಂದ ಮಾರ್ಗದಲ್ಲೇ ಸುಮಾರು 20 ದಿನ ಸಂಚರಿಸಿದ ಉಗಿಬಂಡಿ ಇಲ್ಲಿನಾಯ್ ತಲುಪಿತು. ಮೊದಲು ಕೈಬೀಸುತ್ತಾ, ಹರ್ಷೋದ್ಗಾರಗಳೊಂದಿಗೆ ತಮ್ಮ ನಾಯಕನನ್ನು ಕಳುಹಿಸಿಕೊಟ್ಟಿದ್ದ ಜನ, ಸಂಕಟದಲ್ಲಿ ಬಿಕ್ಕಳಿಸುತ್ತಾ ನಿಂತಿದ್ದರು. ‘ವಿದ್ಯಾರ್ಹತೆ, ಮೈಕಟ್ಟು, ನಾಜೂಕುಗಳಷ್ಟೇ ನಾಯಕತ್ವವನ್ನು ಅಳೆಯುವ ಮಾನದಂಡಗಳಲ್ಲ. ಜನರ ಹಿತಕ್ಕಾಗಿ ಕಠಿಣ ನಿರ್ಧಾರಗಳನ್ನು ತಳೆಯಬಲ್ಲವನು ಮಾತ್ರ ಮಹಾನ್ ನಾಯಕನಾಗುತ್ತಾನೆ. ಇತಿಹಾಸದಲ್ಲಿ ಕಾಯಂ ಸ್ಥಾನ ಪಡೆಯುತ್ತಾನೆ’ ಎಂದು ಲಂಡನ್ ಟೈಮ್ಸ್ ಬರೆಯಿತು. ಉಗಿಬಂಡಿಯ ಈ ಎರಡು ಪಯಣಗಳ ನಡುವೆ ಲಿಂಕನ್ ಜನಪ್ರಿಯತೆ ಉತ್ತುಂಗಕ್ಕೇರಿತು. ತೀರಿಕೊಂಡು ಇದೀಗ ನೂರೈವತ್ತು ವರ್ಷಗಳಾದರೂ ದಂತಕತೆಯಾಗಿ ಬೆಳೆಯುತ್ತಲೇ ಇರುವ ಲಿಂಕನ್ ಎತ್ತರವನ್ನು ಅಳೆಯುವವರಾರು?      
-ಲೇಖಕ ಅಮೆರಿಕದ ಸಿನ್ಸಿನಾಟಿಯಲ್ಲಿ ಸಾಫ್ಟ್‌ವೇರ್‌ ಕಂಪೆನಿಯೊಂದರ ಉದ್ಯೋಗಿ
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT