ಸೋಮವಾರ, ಮೇ 17, 2021
21 °C

ನಕ್ಸಲರ ನೆತ್ತರದಾಹಕ್ಕೆ ಕೊನೆ ಎಂದು?

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ನಕ್ಸಲರ ನೆತ್ತರದಾಹಕ್ಕೆ ಕೊನೆ ಎಂದು?

ನಕ್ಸಲರ ನೆತ್ತರ ದಾಹ ಇನ್ನೂ ತೀರಿದಂತೆ ಕಾಣುತ್ತಿಲ್ಲ. ಮೂರು ವರ್ಷದ ಹಿಂದಿನ ಸಿಆರ್‌ಪಿಎಫ್ ಪೊಲೀಸರ ನರಮೇಧ ಮರೆಯುವ ಮುನ್ನವೇ ನಕ್ಸಲರು ಛತ್ತೀಸಗಡದಲ್ಲಿ ಮತ್ತೊಂದು `ಭರ್ಜರಿ ಬೇಟೆ' ಆಡಿದ್ದಾರೆ. ಹೆಚ್ಚುಕಡಿಮೆ `ಕಾಂಗ್ರೆಸ್ ಮುಖಂಡರ ಕಾಂದಾನ'ವನ್ನೇ ಮುಗಿಸುವ ಕೆಲಸ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಾದ ನಂದ ಕುಮಾರ್ ಪಟೇಲ್, ಅವರ ಪುತ್ರ ದಿನೇಶ್, ಮಹೇಂದ್ರ ಕರ್ಮ ಸೇರಿ 27 ಜನರನ್ನು ಕೊಂದಿದ್ದಾರೆ. ಮಾಜಿ ಕೇಂದ್ರ ಸಚಿವ ವಿ.ಸಿ.ಶುಕ್ಲ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಛತ್ತೀಸಗಡದಲ್ಲಿ ಎಂಟು ವರ್ಷದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದಿರುವ ಘರ್ಷಣೆಗಳಲ್ಲಿ ಸತ್ತವರು ಸುಮಾರು ಎರಡು ಸಾವಿರ ಮಂದಿ. ಮಾವೋವಾದಿಗಳು ಮತ್ತು ಪೊಲೀಸರಷ್ಟೇ ಅಲ್ಲ, ಅದೆಷ್ಟೋ ಅಮಾಯಕ ಜನ ಪ್ರಾಣ ಕಳೆದುಕೊಂಡಿದ್ದಾರೆ.2010ರಲ್ಲಿ ಬಲಿಯಾದವರ ಸಂಖ್ಯೆ 327. ಇದಾದ ಮರು ವರ್ಷ 176 ಜನ ಸತ್ತಿದ್ದಾರೆ. ಹೋದ ವರ್ಷ ಇಬ್ಬರು ನಕ್ಸಲರು ಮಾತ್ರ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಆದರೆ, ಮೊನ್ನೆಯ ಬೇಟೆ  ಮಾತ್ರ ನಕ್ಸಲರ ಬಹು ದಿನದ ಗುರಿ!ಮೇ 25ರ ಶನಿವಾರದ `ರಕ್ತಪಾತ' ಕಂಡು ಪ್ರಜ್ಞಾವಂತ ಸಮಾಜ ಬೆಚ್ಚಿ ಬಿದ್ದಿದೆ. ಕಾಡು-ಮೇಡು, ಗಿರಿ-ಕಂದರ, ನದಿ-ತೊರೆಗಳಿಂದ ತುಂಬಿ ತುಳುಕುವ ರಾಜ್ಯದಲ್ಲಿ ನಕ್ಸಲರು ಶಾಂತರಾಗಿದ್ದಾರೆಂದು ನಿಟ್ಟುಸಿರು ಬಿಡುವಷ್ಟರಲ್ಲಿ ರಾಜಕಾರಣಿಗಳ ಆತ್ಮಸ್ಥೈರ್ಯ ಕುಗ್ಗಿಸುವ `ಹತ್ಯಾಕಾಂಡ'ವೇ ನಡೆದಿದೆ. ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಅಣಿಯಾಗುತ್ತಿರುವಾಗಲೇ ನಕ್ಸಲರ ಕ್ರೌರ್ಯ ಮೆರೆದಿದೆ. ಈಗಿನ್ನು ಅಂಬೆಗಾಲಿಡಲು ಪ್ರಯತ್ನಿಸುತ್ತಿರುವ ಛತ್ತೀಸಗಡಕ್ಕೆ `ನಕ್ಸಲ್ ಚಳವಳಿ ಭೂತ' ಬೆನ್ನು ಹತ್ತಿದೆ.ಛತ್ತೀಸಗಡ ಅಸ್ತಿತ್ವಕ್ಕೆ ಬಂದಿದ್ದು 13ವರ್ಷದ ಹಿಂದೆ. 2000 ನವೆಂಬರ್ 1ರಂದು. ಮಧ್ಯಪ್ರದೇಶದಿಂದ ಬೇರ್ಪಡಿಸಿದ 16 ಜಿಲ್ಲೆಗಳನ್ನು ಒಟ್ಟುಗೂಡಿಸಿ ಹೊಸ ರಾಜ್ಯ ಘೋಷಿಸಲಾಗಿದೆ. ಒಂದು ಅಂಶವನ್ನು ಇಲ್ಲಿ ಗಮನಿಸಬೇಕು. ಛತ್ತೀಸಗಢ ಹೊಸ ರಾಜ್ಯವಾದರೂ ಪ್ರತ್ಯೇಕ ರಾಜ್ಯದ ಕೂಗಿಗೆ ಸುಮಾರು ಒಂದು ಶತಮಾನದ ಇತಿಹಾಸವಿದೆ. ಆದಿವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಛತ್ತೀಸಗಡ ಇನ್ನೂ ಅಭಿವೃದ್ಧಿ ಕಂಡಿಲ್ಲ. ಆರೋಗ್ಯ-ಶಿಕ್ಷಣ ಮತ್ತು ಉದ್ಯೋಗ `ಗ್ರಾಫ್' ಮೇಲೆದ್ದಿಲ್ಲ. ಬಸ್ತಾರ್, ಸುರಗುಜ, ರಾಯಗಡ ಬಿಲಾಸಪುರ ಮತ್ತು ರಾಜನಂದಗಾಂವ್ ಜಿಲ್ಲೆಗಳಲ್ಲಿ ಆದಿವಾಸಿಗಳ ಪ್ರಾಬಲ್ಯ ಹೆಚ್ಚು. ಒಟ್ಟು ಜನಸಂಖ್ಯೆಯಲ್ಲಿ ಶೇ.33ರಷ್ಟು ಆದಿವಾಸಿಗಳು.ಗೊಂಡಿಯಂಥ ಒಂದೆರಡು ಪ್ರಬಲ ಸಮುದಾಯ ಹೊರತುಪಡಿಸಿದರೆ ಉಳಿದೆಲ್ಲ ಆದಿವಾಸಿ ಸಮಾಜಗಳು ಆಧುನಿಕತೆ ಸ್ಪರ್ಶದಿಂದ ದೂರವೇ ಉಳಿದಿವೆ. ಕಾಡು- ಮೇಡುಗಳಲ್ಲಿ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳು ತಮ್ಮ `ಸಾಂಪ್ರ್ರದಾಯಿಕ ನೆಲೆ' ಕಳೆದುಕೊಂಡಾಗ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಾರೆ. ಅರಮನೆ- ಗುರುಮನೆಗಳ ಹಂಗಿಲ್ಲದೆ ತಮ್ಮ ಪಾಡಿಗೆ ತಾವು ಬದುಕಲು ಇಷ್ಟಪಡುವ ಆದಿವಾಸಿಗಳು ಬದುಕಿಗೆ ಆತಂಕ ಎದುರಾದಾಗ ಬಂಡಾಯವೆದ್ದಿದ್ದಾರೆ. ಇಂಥ ಆದಿವಾಸಿ ಹೋರಾಟಗಳು ಚರಿತ್ರೆಯುದ್ದಕ್ಕೂ ದಾಖಲಾಗಿವೆ.ಹಿಂದೆ ಅಮೆರಿಕಾ ಆಡಳಿತ `ರೆಡ್ ಇಂಡಿಯನ್' ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಹೊರಟಾಗ ಆದಿವಾಸಿ ನಾಯಕ ಸಿಯಾಟಲ್ ಅಧ್ಯಕ್ಷರಿಗೆ ಬರೆದ ಪತ್ರ ಇತಿಹಾಸದಲ್ಲಿ ದಾಖಲಾಗಿದೆ. ಇದು ಪರಿಸರ ಮತ್ತು ಆದಿವಾಸಿ ಹೋರಾಟದ `ಮುನ್ನುಡಿ' ಎಂದೇ ಭಾವಿಸಲಾಗಿದೆ. ತಾವು ನಂಬಿದ್ದ ನೆಲ- ಜಲ ಕುರಿತು ಪತ್ರದಲ್ಲಿ ಅದ್ಭುತವಾಗಿ ಬಣ್ಣಿಸಲಾಗಿದೆ. `ಹಣಕ್ಕಾಗಿ ನಮ್ಮ ಭಾವನೆಗಳನ್ನು ಮಾರುತ್ತಿದ್ದೀರಿ. ನಾವು ಜಾಗ ಖಾಲಿ ಮಾಡದಿದ್ದರೆ ನಮ್ಮ ಎದೆಗಳಿಗೆ ಬಂದೂಕು ಹಿಡಿಯುತ್ತೀರಿ ಎನ್ನುವ ಸತ್ಯದ ಅರಿವೂ ನಮಗಿದೆ' ಎಂದು ಪತ್ರದಲ್ಲಿ ಬರೆಯಲಾಗಿದೆ.ಛತ್ತೀಸಗಡದ ಆದಿವಾಸಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕಲ್ಲಿದ್ದಲು, ಕಬ್ಬಿಣದ ಅದಿರು, ವಜ್ರ ಒಳಗೊಂಡಂತೆ ಭಾರಿ ಪ್ರಮಾಣದ ಖನಿಜ ಸಂಪತ್ತನ್ನು ಈ ರಾಜ್ಯ ತನ್ನ ಒಡಲಲ್ಲಿಟ್ಟುಕೊಂಡಿದೆ. ಶೇ.15 ರಷ್ಟು ಕಲ್ಲಿದ್ದಲು, ಶೇ.10ರಷ್ಟು ಕಬ್ಬಿಣದ ಅದಿರು, ಶೇ.5ರಷ್ಟು ಸುಣ್ಣದಕಲ್ಲಿನ ಸಂಪತ್ತಿದೆ. ದೇಶದ 1/3ರಷ್ಟು ವಜ್ರ ಇರುವುದು ಇದೇ ನೆಲದಲ್ಲಿ. ಆದರೆ, ಇದರ ಲಾಭ ಮಾತ್ರ ಜನರಿಗೆ ಸಿಗುತ್ತಿಲ್ಲ.ಕೇಂದ್ರ ಸರ್ಕಾರ `ಹೊಸ ಗಣಿ ನೀತಿ' ಜಾರಿಗೊಳಿಸಿದ ಬಳಿಕ ಅರಣ್ಯಕ್ಕೆ ಗಣಿ ಕಂಪೆನಿಗಳು ಮುತ್ತಿಗೆ ಹಾಕಿವೆ. ದೊಡ್ಡ ಪ್ರಮಾಣದಲ್ಲಿ `ಭೂಸ್ವಾಧೀನ ಪ್ರಕ್ರಿಯೆ' ನಡೆಯುತ್ತಿದೆ. ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ರಾಯಚೂರಿನಲ್ಲಿ ಆಗಿರುವ ಗಣಿ ಸಂಪತ್ತು ಲೂಟಿಗಿಂತ ಹೆಚ್ಚು ಛತ್ತೀಸಗಡ, ಜಾರ್ಖಂಡ್‌ಗಳಲ್ಲಿ ನಡೆಯುತ್ತಿದೆ. ಪರಿಸರಕ್ಕೂ ವ್ಯಾಪಕವಾಗಿ ಹಾನಿ ಮಾಡಲಾಗಿದೆ. ಪ್ರಾಣಿ- ಪಕ್ಷಿ ಸಂಕುಲಕ್ಕೂ ಅಪಾಯ ತಂದೊಡ್ಡಲಾಗಿದೆ. ನದಿ ನೀರು ಮಲೀನಗೊಂಡಿದೆ.ಪ್ರತಿಷ್ಠಿತ ಕಂಪೆನಿಗಳು ಛತ್ತೀಸಗಡದ ಒಡಲು ಬಗೆದು ಖನಿಜ ಸಂಪತ್ತು ಲೂಟಿ ಮಾಡುತ್ತಿವೆ. ಬಲಾಢ್ಯ ಕಂಪೆನಿಗಳ ಲೂಟಿಗೆ ದಾರಿ ಮಾಡಲು ಜನರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸರ್ಕಾರದ ಅಧಿಕೃತ ಮಾಹಿತಿಯಂತೆ ಹತ್ತು ಸಾವಿರಕ್ಕೂ ಹೆಚ್ಚು ಉದ್ಯಮಗಳು ಕಾಡಿನ ಉತ್ಪನ್ನ ಹಾಗೂ ಖನಿಜ ಸಂಪತ್ತನ್ನು ನೆಚ್ಚಿಕೊಂಡಿವೆ. ಕಾರ್ಪೋರೇಟ್ ಕಂಪೆನಿಗಳು ನಡೆಸುತ್ತಿರುವ ಲೂಟಿ ವಿರುದ್ಧ ಸ್ಥಳೀಯರು ದನಿ ಎತ್ತಿದ್ದಾರೆ. ಮಾವೋವಾದಿಗಳು ಜನರಿಗೆ ಬೆಂಬಲವಾಗಿ ನಿಂತಿದ್ದಾರೆ.ಆದಿವಾಸಿ ಯುವಕರನ್ನೇ ಬಳಸಿಕೊಂಡು ನಕ್ಸಲರನ್ನು ಬಗ್ಗುಬಡಿಯುವ `ಪಿತೂರಿ'ಯಲ್ಲಿ ಛತ್ತೀಸಗಡದ ಆಡಳಿತ ಹಾಗೂ ವಿರೋಧ ಪಕ್ಷಗಳೆರಡೂ ಕೈ ಜೋಡಿಸಿವೆ. ಈ ಉದ್ದೇಶಕ್ಕಾಗಿ `ಸಲ್ವಾ ಜುಡುಂ' ಎನ್ನುವ ಪಡೆ ಕಟ್ಟಿದ್ದು ಆದಿವಾಸಿ ಸಮುದಾಯದ ಕಾಂಗ್ರೆಸ್ ನಾಯಕ ಮಹೇಂದ್ರ ಕರ್ಮ! ಅದನ್ನು ಎಲ್ಲ ರೀತಿಯಲ್ಲೂ ಪೋಷಿಸಿದ್ದು ರಮಣ್‌ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ. ಇವೆರಡರ ನಡುವೆ ಸಿಕ್ಕಿ ಅಮಾಯಕ ಜನ `ಸ್ಯಾಂಡ್‌ವಿಚ್' ಆಗಿದ್ದಾರೆ.ಈ ಮಾತನ್ನು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಕಿಶೋರಚಂದ್ರ ದೇವ್ ಸ್ವತಃ ಹೇಳಿದ್ದಾರೆ. `ಸಲ್ವಾ ಜುಡುಂ' ಪಡೆ ಕಟ್ಟಿದ ಕಾರಣಕ್ಕೆ ನಕ್ಸಲರು ಮಹೇಂದ್ರ ಕರ್ಮ ಅವರನ್ನು `ಟಾರ್ಗೆಟ್' ಮಾಡಿದ್ದು. ಕರ್ಮನ ಮೇಲೆ ನಕ್ಸಲರಿಗೆ ಎಷ್ಟು ಸಿಟ್ಟಿತ್ತು ಎಂಬುದು ಅವರನ್ನು ಹತ್ಯೆ ಮಾಡಿದ ರೀತಿ ಕಂಡ ಯಾರಿಗಾದರೂ ಮನವರಿಕೆ ಆಗುತ್ತದೆಸುಪ್ರೀಂ ಕೋರ್ಟ್ `ಸಲ್ವಾ ಜುಡುಂ ಪಡೆಗೆ ಸಂವಿಧಾನದಡಿ ರಕ್ಷಣೆಯೇ ಇಲ್ಲ. ಇದೊಂದು ಮನಷ್ಯ ವಿರೋಧಿ ಕೆಲಸ' ಎಂದು ಘೋಷಿಸಿ ನಿಷೇಧಿಸಿದೆ. ಸಲ್ವಾ ಜುಡುಂ ಪ್ರಕರಣದಲ್ಲಿ ನ್ಯಾಯಾಲಯ ಸಂವೇದನಾಶೀಲ ತೀರ್ಪು ನೀಡಿದೆ. `ಸ್ವಾತಂತ್ರ್ಯಾ ನಂತರದ ಅಭಿವೃದ್ಧಿ ಫಲ ದುರ್ಬಲರು ಮತ್ತು ಬಡವರಿಗೆ ತಲುಪಿಲ್ಲ. ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳ ಅಸಮಾಧಾನಕ್ಕೆ ಇದು ಪ್ರಮುಖ ಕಾರಣ. ಬಡವರ ಶ್ರಮದ ಫಲವನ್ನು ಉಳ್ಳವರು ಕಬಳಿಸುತ್ತಿದ್ದಾರೆ.ದೊಡ್ಡವರ ಆಸೆಬುರಕತನಕ್ಕೆ ಆದಿವಾಸಿ ಸಮುದಾಯಗಳು ಗುರಿಯಾಗಿವೆ. ತಲತಲಾಂತರದಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಬದುಕು- ನೆಲೆ ನಾಶವಾಗುತ್ತಿದೆ. ಅನನ್ಯ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಅರಣ್ಯ ಸಂಪತ್ತಿನ ಮೇಲಿನ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಸರ್ಕಾರದ ಅಭಿವೃದ್ಧಿ ಮಾದರಿ, ಅನುಷ್ಠಾನ, ಅಧಿಕಾರಿಗಳ ಭ್ರಷ್ಟಾಚಾರ, ಗುತ್ತಿಗೆದಾರರು ಹಾಗೂ ದಲ್ಲಾಳಿಗಳ ಸಂಪತ್ತು ದೋಚುವ ಪ್ರವೃತ್ತಿಯಿಂದ ಬಡವರು ಘನತೆಯಿಂದ ಬದುಕುವ ಅವಕಾಶ ತಪ್ಪಿದೆ' ಎಂದು ತೀರ್ಪಿನಲ್ಲಿ ಹೇಳಲಾಗಿದೆ.`ನಕ್ಸಲ್ ಚಳವಳಿ, ಅದನ್ನು ಹತ್ತಿಕ್ಕಲು ಕಟ್ಟಲಾಗಿರುವ `ಸಲ್ವಾ ಜುಡುಂ' ಪಡೆಯಿಂದ ಅಮಾಯಕ ಆದಿವಾಸಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ವಿರುದ್ಧ ದನಿ ಎತ್ತುವವರನ್ನು ನಕ್ಸಲರು ಅಥವಾ ಅವರ ಮೇಲೆ ಅನುಕಂಪ ಉಳ್ಳವರೆಂದು ಅನುಮಾನದಿಂದ ನೋಡಲಾಗುತ್ತಿದೆ' ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. `ನಕ್ಸಲ್ ಚಳವಳಿ ಕಾನೂನು- ಸುವ್ಯವಸ್ಥೆ ಸಮಸ್ಯೆ ಎನ್ನುವುದಕ್ಕಿಂತ ನಮ್ಮ ಸಾಮಾಜಿಕ- ಆರ್ಥಿಕ ಅಸಮಾನತೆಗೆ ಸಂಬಂಧಿಸಿದ ಪ್ರಶ್ನೆ ಎಂದು ಪರಿಗಣಿಸುವುದೇ ಸೂಕ್ತ' ಎನ್ನುವ ಕಿವಿ ಮಾತನ್ನು ಹೇಳಿದೆ. ಕೋರ್ಟ್‌ಗೆ ಅರ್ಥವಾಗುವ ಸತ್ಯ ನಮ್ಮ ಸರ್ಕಾರಗಳಿಗೆ ಅರ್ಥವಾಗದಿರುವುದು ವಿಪರ್ಯಾಸ.ಆದಿವಾಸಿ ಸಮುದಾಯಗಳ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ `ಅರಣ್ಯ ಕಾಯ್ದೆ'ಗೆ ತಿದ್ದುಪಡಿ ತರಲು ಹೊರಟಿದೆ. ಈ ತಿದ್ದುಪಡಿ ಪ್ರಕಾರ ಯಾವುದೇ ಹೊಸ ಯೋಜನೆಗಳಿಗೆ ಗ್ರಾಮಸಭೆ ಅನುಮತಿ ಕಡ್ಡಾಯ. ಆದರೆ, ಪ್ರಧಾನಿ ಕಚೇರಿ ಉದ್ದೇಶಿತ ಮಸೂದೆಗೆ ವಿರುದ್ಧವಾಗಿದೆ. `ಮಸೂದೆ ಬಂದರೆ ಯಾವುದೇ ಯೋಜನೆಗಳು ಬರುವುದಿಲ್ಲ' ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ.ಏಪ್ರಿಲ್ 18 ರಂದು ಸುಪ್ರೀಂ ಕೋರ್ಟ್ ಒಡಿಶಾದ ನ್ಯಾಮಗಿರಿ ಬೆಟ್ಟದಲ್ಲಿ `ವೇದಾಂತ' ಕಂಪೆನಿಯ ಉದ್ದೇಶಿತ ಬಾಕ್ಸೈಟ್ ಗಣಿಗಾರಿಕೆಯಿಂದ ಪಾರಂಪರಿಕ ಹಾಗೂ ಧಾರ್ಮಿಕ ಹಕ್ಕುಗಳು ಉಲ್ಲಂಘನೆ ಆಗುವುದೇ ಎಂಬ ಅಂಶ ಕುರಿತು ಗ್ರಾಮಸಭೆ ತೀರ್ಮಾನಿಸಬೇಕು ಎನ್ನುವ ಮಹತ್ವದ ತೀರ್ಪು ನೀಡಿದೆ. ಇದರಿಂದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ತಿದ್ದುಪಡಿ ಮಸೂದೆಗೆ ಬಲ ಬಂದಿದೆ. ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಪಡೆದರೆ ಆದಿವಾಸಿಗಳ ಕೈಗೆ `ಪ್ರಬಲ ಅಸ್ತ್ರ'ವೊಂದು ಸಿಕ್ಕಿದಂತಾಗುತ್ತದೆ.ನಕ್ಸಲ್ ಚಳವಳಿ ಹುಟ್ಟು ಪಡೆದು ನಾಲ್ಕೂವರೆ ದಶಕಗಳಾಗಿವೆ. ಪಶ್ಚಿಮ ಬಂಗಾಳದ ನಕ್ಸಲ್‌ಬರಿಯಲ್ಲಿ 1967ರಲ್ಲಿ ಆರಂಭವಾದ ಚಳವಳಿ ಮರು ವರ್ಷ ಆಂಧ್ರದ ಶ್ರೀಕಾಕುಳಂಗೆ ಹರಡಿತು. ಇವೆರಡೂ ಕಡೆ ಆಗಿದ್ದು ರೈತಕೂಲಿಕಾರರ ಬಂಡಾಯ. ಬಳಿಕ ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್ ಮತ್ತು ಕರ್ನಾಟಕ, ಛತ್ತೀಸಗಡಕ್ಕೂ ಕಾಲಿಟ್ಟಿದೆ.45 ವರ್ಷಗಳಲ್ಲಿ ಸಶಸ್ತ್ರ ಹೋರಾಟ ಏನಾದರೂ ಬದಲಾವಣೆ ತಂದಿದೆಯೇ ಎಂದು ಹಿಂತಿರುಗಿ ನೋಡಿದರೆ ಸಿಗುವ ಉತ್ತರ ಶೂನ್ಯ. ಸಶಸ್ತ್ರ ಹೋರಾಟದಿಂದ ಬರೀ ರಕ್ತಪಾತವಾಗಿದೆ. ಒಂದಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಏಳು- ಬೀಳುಗಳ ನಡುವೆ ಸಾಗಿರುವ ನಕ್ಸಲ್ ಚಳವಳಿ ಪರಿಶಿಷ್ಟರು, ದುರ್ಬಲರು ಹಾಗೂ ಆದಿವಾಸಿ ಯುವಕರ ತಲೆ ಕೆಡಿಸಿದೆ. ಹಸಿವು- ಬಡತನ, ಅಸಮಾನತೆ ಕೋವಿಗಳನ್ನು ಹಿಡಿಯುವಂತೆ ಪ್ರೇರೇಪಿಸಿದೆ.`ಈ ಚಳವಳಿಯನ್ನು ಮಾನವೀಯ ನೆಲೆಯಲ್ಲಿ ನೋಡಬೇಕಾದ ಸರ್ಕಾರ ಇದೊಂದು ಕಾನೂನು- ಸುವ್ಯವಸ್ಥೆ ಸಮಸ್ಯೆ ಎಂದೇ ಪ್ರತಿಪಾದಿಸುತ್ತಿದೆ. ಸಶಸ್ತ್ರ ಪಡೆಗಳನ್ನು ಬಳಸಿ ನಕ್ಸಲರನ್ನು ದಮನ ಮಾಡುವ ಪ್ರಯತ್ನ ನಡೆಸುತ್ತಿದೆ. ಛತ್ತೀಸಗಡ ಹತ್ಯಾಕಾಂಡದ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ನಕ್ಸಲರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಖಂಡಿತಾ ನಕ್ಸಲರು ಭಯೋತ್ಪಾದಕರಲ್ಲ. ಅವರಿಗೊಂದು ಒಳ್ಳೆಯ ಗುರಿ ಇದೆ.ಆದರೆ, ತುಳಿದಿರುವುದು ಅವಿವೇಕದ ಹಾದಿ. ಕೇಂದ್ರ ಸರ್ಕಾರ ನಕ್ಸಲರ ನಿಗ್ರಹಕ್ಕೆ ಮಾನವ ರಹಿತ ಹೆಲಿಕಾಪ್ಟರ್ ಕಳುಹಿಸಲು ತೀರ್ಮಾನಿಸಿದೆ. ಬುಡಕಟ್ಟು ವ್ಯವಹಾರ ಖಾತೆ ಸಚಿವರು ನಕ್ಸಲ್ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ನೋಡಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ನಮ್ಮ ಜನರನ್ನು ಕೊಲ್ಲಲು ಸೇನಾ ಪಡೆ ಕಳುಹಿಸುವುದು ಧರ್ಮವೇ ಎಂದು ಪ್ರಶ್ನೆ ಮಾಡಿದ್ದಾರೆ. ಸೂಕ್ಷ್ಮ ಮನಸಿನ ರಾಜಕಾರಣಿ ಮಾತ್ರವೇ ಹೀಗೆ ಮಾತನಾಡಲು ಸಾಧ್ಯ.ಮಾವೋವಾದಿ ಸಂಘಟನೆ ಮತ್ತು ಸರ್ಕಾರ ಎರಡೂ ಅತಿರೇಕದ ದಾರಿಯಲ್ಲಿ ಹೊರಟಿವೆ. ಒಬ್ಬ ರಾಜಕಾರಣಿ, ಅಧಿಕಾರಿ, ಪೊಲೀಸರನ್ನು ಕೊಲ್ಲುವುದರಿಂದ ವ್ಯವಸ್ಥೆ ಬದಲಾವಣೆ ಅಸಾಧ್ಯ ಎಂಬ ಸತ್ಯವನ್ನು ನಕ್ಸಲರು ಅರಿಯಬೇಕಿದೆ. ಬದುಕುವುದಕ್ಕಾಗಿ ಕೋವಿ ಹಿಡಿದ ಕೈಗಳನ್ನೇ ಕತ್ತರಿಸುವ ಅಮಾನವೀಯ ಕೆಲಸಕ್ಕೆ ಸರ್ಕಾರ ಅಂತ್ಯ ಹಾಡಬೇಕಿದೆ. ಸಮಸ್ಯೆಗಳ ಪರಿಹಾರಕ್ಕೆ ನ್ಯಾಯ ಹಾಗೂ ಧರ್ಮದ ಹಾದಿ ತುಳಿಯಬೇಕಿದೆ.ನಮ್ಮದು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ. ಸಂವಿಧಾನವೇ ಪ್ರತಿಭಟನೆ ಹಕ್ಕು ನೀಡಿದೆ. ನಕ್ಸಲರು ಹಿಂಸೆ ತೊರೆದು ಅಹಿಂಸಾತ್ಮಕ ಹೋರಾಟ ಕಟ್ಟಿದರೆ ಯಾರ ಅಭ್ಯಂತರವೂ ಇಲ್ಲ. ಜನ ಬೆಂಬಲ, ಕಾನೂನು ಬೆಂಬಲ ಎಲ್ಲವೂ ಸಿಗುತ್ತದೆ. ಒಂದು ಸಮಾಧಾನವೆಂದರೆ ನಕ್ಸಲ್ ಚಳವಳಿಗೆ ಮಾರುಹೋದ ಅದೆಷ್ಟೋ ಯುವಕರು ಭ್ರಮನಿರಸನಗೊಂಡು ಹೊರ ಬಂದಿದ್ದಾರೆ.ಛತ್ತೀಸಗಡದ ಈಚಿನ ರಕ್ತಪಾತ ನಕ್ಸಲ್ ಚಳವಳಿ ಬಗ್ಗೆ ಅನುಕಂಪ ಉಳ್ಳವರು ತಮ್ಮ ನಿಲುವಿನ ಬಗ್ಗೆ ಮತ್ತೊಮ್ಮೆ ಚಿಂತಿಸುವಂತೆ ಮಾಡಿದ್ದರೆ ಅಚ್ಚರಿ ಪಡಬೇಕಿಲ್ಲ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.