ಮಂಗಳವಾರ, ಮೇ 18, 2021
30 °C

ನಾಟಕ ಶಿರೋಮಣಿ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಕಲಿತದ್ದು ಎಫ್.ಎ ವರೆಗೆ ಮಾತ್ರ. ನಂತರ ಕೆಲಸಕ್ಕೆ ಸೇರಿದ್ದು ಗುಮಾಸ್ತೆಯಾಗಿ. ಆದರೆ ಮನಸ್ಸಿನಲ್ಲಿ ಬೃಹದಾಕಾರವಾಗಿ ಬೆಳೆದ ಆಸೆ ರಂಗಭೂಮಿ. ಗುಮಾಸ್ತೆಗಿರಿ ಮಾಡುತ್ತಲೇ ಅಂದಿನ ಖ್ಯಾತ ನಟರಾದ ಗೌರೀ ನರಸಿಂಹಯ್ಯನವರ ನಾಟಕ ಕಂಪನಿಯಲ್ಲಿ ಅನೇಕ ಪಾತ್ರಗಳನ್ನು ಸಮರ್ಥವಾಗಿ ನಟಿಸಿ ನಂತರ ತಮ್ಮದೇ  ರತ್ನಾವಳಿ ಥಿಯೇಟರ್ಸ್‌ನ್ನು ಕಟ್ಟಿ 24 ವರ್ಷಗಳ ಕಾಲ ತಪಸ್ಸಿನಂತೆ ಬೆಳೆಸಿದರು.ಕಂಪನಿಯ ಜೊತೆಗೆ ತಮ್ಮ ಹೆಸರೂ ಎಲ್ಲರ ಬಾಯಿಯಲ್ಲಿ ಮನದಲ್ಲಿ ಇರುವಂತೆ ಮಾಡಿದರು. ರಂಗಭೂಮಿಯ ಸಕಲ ಸೌಭಾಗ್ಯಕ್ಕೆ ಪ್ರತಿನಿಧಿಯಂತಾದರು. ಅವರೇ ನಾಟಕ ಶಿರೋಮಣಿ ವರದಾಚಾರ್ಯರು.ಯಾವ ಪಾತ್ರ ಮಾಡಿದರೂ ಅದೊಂದು ಅದ್ಭುತ. ಅವರು ಪೌರಾಣಿಕ ಪಾತ್ರಗಳನ್ನು ಮಾಡಿದಾಗ, ಮೂಲ ಪಾತ್ರಗಳೂ ಇವರಷ್ಟು ಚೆನ್ನಾಗಿದ್ದುವೇ ಎಂದು ಕೇಳುವಂತಾಗುತ್ತಿತ್ತಂತೆ.

 

ಮೊದಲು ನಾಟಕಗಳಲ್ಲಿ ವಿಪರೀತ ಎನ್ನುವಷ್ಟು ಸಂಗೀತವಿದ್ದಾಗ ಅದನ್ನು ಒಂದು ಮಟ್ಟಕ್ಕೆ ನಿಲ್ಲಿಸಿ ನಟನೆಗೆ ಪ್ರಾಮುಖ್ಯತೆ ನೀಡಿದವರಲ್ಲಿ ವರದಾಚಾರ್ಯರು ಮೊದಲಿಗರು. ಅವರೇ ಪಾತ್ರ ಮಾಡುವಾಗಲಾಗಲೀ ಅಥವಾ ಕಂಪನಿಯ ಕೆಲಸದಲ್ಲಾಗಲೀ ನಿಜವಾಗಿಯೂ ನಾಯಕರು. ಸಣ್ಣತನ ತಪ್ಪಿಕೂಡ ಅವರ ಹತ್ತಿರ ಸುಳಿಯುತ್ತಿರಲಿಲ್ಲ. ಕಂಪನಿಯಿಂದ ಎಷ್ಟು ಹಣಗಳಿಸಿದರೋ ಎಷ್ಟು ದಾನ ಮಾಡಿದರೋ ಲೆಕ್ಕವಿಟ್ಟವರಾರು? ಅವರ ಬಳಿಗೆ ಕೇಳಲು ಹೋದ ಯಾರೂ ನಿರಾಶರಾಗಿ ಬಂದದ್ದಿಲ್ಲ.ಅ.ನ.ಕೃ ಅವರು ಗುರುದೇವ ರವೀಂದ್ರನಾಥ ಠಾಕೂರರ ಕಡೆಯಿಂದ ಸಾಹಿತ್ಯ, ಸಂಗೀತ, ಕಲೆಗಳನ್ನು ಕಲಿತು ಪದವಿ ಪಡೆಯಲು ಶಾಂತಿನಿಕೇತನಕ್ಕೆ ಹೋದರು. ಅವರಿಗೆ ನಿತ್ಯವೂ ಗುರುದೇವರ ದರ್ಶನವಾಗುತ್ತಿತ್ತು, ಕೆಲವೊಮ್ಮೆ ಉಪನ್ಯಾಸ ಕೇಳುವ ಅವಕಾಶ ದೊರೆಯುತ್ತಿತ್ತು. ಆದರೆ ಅವರೊಂದಿಗೆ ತಾವೊಬ್ಬರೇ ಮಾತನಾಡುವ ಅವಕಾಶ ಸಿಗುವುದು ತುಂಬ ಕಷ್ಟವಾಗಿತ್ತು. ಠಾಕೂರರ ದಿನಚರಿಯೇ ಅಷ್ಟು ಜಟಿಲವಾದದ್ದು. ಅವರಿಗೆ ಒಂದು ನಿಮಿಷದ ಬಿಡುವೂ ಸಿಗುತ್ತಿರಲಿಲ್ಲ.ಒಂದು ದಿನ ಅಲ್ಲಿದ್ದ ಯಾರೋ ಹಿರಿಯರಿಂದಾಗಿ ಅ.ನ.ಕೃ ರವರಿಗೆ ಠಾಕೂರರನ್ನು ಏಕಾಂತದಲ್ಲಿ ಬೆಟ್ಟಿಯಾಗುವ ಅವಕಾಶ ದೊರೆಯಿತು. ಇವರನ್ನು ಕಂಡು ನಗುಮುಖದಿಂದ ಹತ್ತಿರದಲ್ಲೆೀ ಕುಳ್ಳರಿಸಿಕೊಂಡು ರಾಜ್ಯದ ಕೆಲವು ಹಿರಿಯರ ಬಗ್ಗೆ ಕೇಳಿದರು. ನಂತರ,  ನಾಟಕ ಶಿರೋಮಣಿ ವರದಾಚಾರ್ಯರು ಹೇಗಿದ್ದಾರೆ? ಆ ಆಚಾರ್ಯರ ಮಟ್ಟಕ್ಕೆ ನಿಲ್ಲುವ ಕಲಾವಿದನನ್ನು ನಾನು ನೋಡಿಯೇ ಇಲ್ಲ ಎಂದು ಉದ್ಗಾರ ತೆಗೆದರು. ಅ.ನ.ಕೃ ರವರಿಗೆ ಆಶ್ಚರ್ಯ!ರವೀಂದ್ರನಾಥರು ಬೆಂಗಳೂರಿಗೆ ಬಂದಿದ್ದರು. ಎಂದಿಗೋ ಒಮ್ಮೆ ಬರುವ ಈ ಮಹಾನುಭಾವರನ್ನು ಭೆಟ್ಟಿಯಾಗಲು ಬರುವ ಜನಸಾಗರವನ್ನು ನಿಯಂತ್ರಿಸುವುದೇ ಕಷ್ಟ. ಅವರಿಗೆ ಒಂದು ನಿಮಿಷವೂ ಬಿಡುವಿರದ ಕಾರ್ಯಕ್ರಮ. ರವೀಂದ್ರರಿಗೆ ಕನ್ನಡದ ಒಂದು ನಾಟಕ ನೋಡುವ ಆಸೆ.

 

ನಡುವೆ ಕೊಂಚ ಬಿಡುವು ಮಾಡಿಕೊಂಡು ವರದಾಚಾರ್ಯರು ಕಲಾಸಿಪಾಳ್ಯದ ತಮ್ಮ ಸ್ವಂತ ಥಿಯೇಟರ್‌ನಲ್ಲಿ ಆಡುತ್ತಿದ್ದ  ಪ್ರಲ್ಹಾದ ಚರಿತ್ರೆ ಯನ್ನು ನೋಡಲು ಬಂದರು. ನಾಟಕ ಪ್ರಾರಂಭವಾಯಿತು. ಮೊದಲನೇ ದಶ್ಯದಲ್ಲೆೀ ಆಚಾರ್ಯರ ಅಭಿನಯ ಉತ್ತುಂಗಕ್ಕೇರಿತು, ಗುರುದೇವರ ಹೃದಯವನ್ನು ಸೆಳೆದು ಬಿಟ್ಟಿತು.

 

ಕೇವಲ ಅರ್ಧ ತಾಸು ಮಾತ್ರ ಕುಳಿತು ಹೋಗುತ್ತೇನೆಂದು ಬಂದಿದ್ದ ರವೀಂದ್ರರು ಮೂರು ತಾಸು ಕುಳಿತು ನಾಟಕ ನೋಡಿ ನಂತರ ರಂಗಮಂಚವನ್ನೇರಿ, ಇಂದು ಈ ವರನಟನ ಕಲೆಯನ್ನು ನೋಡದೇ ಹೋಗಿದ್ದರೆ ನಾನು ನನ್ನ ಜೀವಮಾನದಲ್ಲಿ ಒಂದು ಅಮೂಲ್ಯವಾದ ಅನುಭವವನ್ನು ಖಂಡಿತವಾಗಿ ಕಳೆದುಕೊಳ್ಳುತ್ತಿದ್ದೆ ಎಂದು ಹೇಳಿದರಂತೆ.ಇನ್ನೊಮ್ಮೆ ಚಿಕ್ಕಮಗಳೂರಿನಲ್ಲಿ ಕಾಫಿ ತೋಟಗಳಲ್ಲಿದ್ದ ಆಂಗ್ಲರ ಸಲುವಾಗಿ ರೋಮಿಯೋ-ಜ್ಯೂಲಿಯಟ್ ನಾಟಕವನ್ನು ಅಭಿನಯಿಸಿದಾಗ ಒಬ್ಬ ಆಂಗ್ಲ ಮಹಿಳೆ ತಾನು ಹಾಕಿಕೊಂಡಿದ್ದ ಚಿನ್ನದ ಸರವನ್ನು ಅವರ ಕೊರಳಿಗೆ ಹಾಕಿ, ರೋಮಿಯೋ ಪಾತ್ರವನ್ನು ಇಷ್ಟು ಅದ್ಭುತವಾಗಿ ಅಭಿನಯಿಸುವ ನಟನನ್ನು ನಾವು ಇಂಗ್ಲೆಂಡಿನಲ್ಲೆೀ ಕಂಡಿಲ್ಲ ಎಂದರಂತೆ.ಹೀಗಿದ್ದರು ವರದಾಚಾರ್ಯರು. ಆ ಸುಂದರ ಕಾಲವನ್ನು, ಆ ಅದ್ಭುತ ರಂಗಭೂಮಿಯ ವಿಸ್ಮಯದ ಪ್ರಪಂಚವನ್ನು, ಆ ಮಹಾನ್ ಕಲಾವಿದರನ್ನು ಕುರಿತು ಚಿಂತಿಸುವಾಗ ಬೇಂದ್ರೆಯವರ, `ಎಲ್ಲಿ ಹೋಗ್ಯಾವೋ ಗೆಳೆಯಾ ಆ ಕಾಲ?~ ಎಂದು ಕೇಳುವಂತಾಗುತ್ತದೆ, ಮನ ಮರುಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.